
ಶಿರಸಿಯ ಸ್ವರ್ಣವಲ್ಲಿ ಮಠದಲ್ಲಿ ದಕ್ಷಯಜ್ಞ ಪ್ರಸಂಗದ ಯಕ್ಷಗಾನ ಕಾರ್ಯಕ್ರಮವಿತ್ತು. ಆ ಕಾರ್ಯಕ್ರಮಕ್ಕೆ 'ಕಲಾಭಾಸ್ಕರ' ತಂಡದ ಕಲಾವಿದರು ಜೊತೆಯಲ್ಲಿ ಬೆರೆತು, ಅವರು ಬಣ್ಣ ಬಳಿದುಕೊಳ್ಳುವುದರಿಂದ ಮೊದಲು ಮಾಡಿ ಇಡೀ ಕಾರ್ಯಕ್ರಮ ಮುಗಿಯುವವರೆಗೆ ಅವರೊಡನಿರಲು ಅವಕಾಶ ದೊರೆಯಿತು. ಬಯಲು ಸೀಮೆಯಲ್ಲಿ ಹುಟ್ಟಿ ಬೆಳೆದ ನನಗೆ, ಯಕ್ಷಗಾನದ ಪರಿಚಯ ಕಡಿಮೆಯೇ. ಹದಿನೈದು ದಿನಗಳ ಮುಂಚೆಯೇ ಕಲಾಭಾಸ್ಕರ ತಂಡದ, ಇಟಗಿ ಮಹಾಬಲ ಹಾಗೂ ರಾಮಚಂದ್ರ ಅವರಿಗೆ ದೂರವಾಣಿ ಸಂಪರ್ಕದಲ್ಲಿ ಕಾರ್ಯಕ್ರಮದ ಫೋಟೋಗಳನ್ನು ತೆಗೆಯಲು ಅನುಮತಿ ಕೇಳಿದ್ದೆ. ಅವರಿಂದ ಬಂದ ಉತ್ತರ ' ಅಡಿಲ್ಲೆ, ಅಡ್ಡಿಲ್ಲೆ'.
ಸಂಜೆ 5ಕ್ಕೆ ಶುರುವಾಗಬೇಕಿದ್ದ 'ಆಟ'ಕ್ಕೆ, ಮಧ್ಯಾಹ್ನ 2ಕ್ಕೇ ಎಲ್ಲ ಕಲಾವಿದರು ಸೇರಿದರು. ಮೊದಲು ಊಟ, ನಂತರ ತಾಂಬೂಲಗಳು ಆದವು. 3 ಗಂಟೆಗೆ ಚಾ. ಕೆಲವರಿಗೆ ಚಪ್ಪೆ ಚಾ. ಮಠದ ಶಾಲಾ ಭವನದ ಪಕ್ಕದ ಓಣಿಯೇ ಗ್ರೀನ್ ರೂಂ. ಸುಮಾರು 3.30ರ ವೇಳೆಗೆ, ಭಾಗವತರು ಪ್ರಾರ್ಥನೆ ಹಾಡಿದರು. ಬಣ್ಣ ಬಳಿದುಕೊಳ್ಳುವ ಕಾಯಕ ಶುರು. ಇನ್ನು ಕೆಲವೇ ನಿಮಿಷಗಳಲ್ಲಿ ಆಡಬೇಕಿದ್ದ ದಕ್ಷಯಜ್ಞ ಪ್ರಸಂಗದ ಬಗ್ಗೆ ಯಾವ ಕಲಾವಿದನಿಂದಲೂ ಮಾತಿಲ್ಲ, ಚರ್ಚೆಯಿಲ್ಲ! ಬಣ್ಣ ಬಳಿದುಕೊಳ್ಳುತ್ತಾ, ರಾಜಕೀಯ, ಸಿನಿಮಾ, ಊರಿನ ಕೆಲವು ವ್ಯಕ್ತಿಗಳ ನೆನಪುಗಳು, ಲೇವಡಿ ಇವುಗಳಲ್ಲೇ ತಲ್ಲೀನರಾಗಿದ್ದರು. ನನಗೇ ನನ್ನದೇ ಅನುಮಾನಗಳು-ಈ ಕಲಾವಿದರಿಗೆ ತಾಲೀಮು ಬೇಕಿಲ್ಲವೇ? ಸಂಭಾಷಣೆ ಮತ್ತು ಹಾಡುಗಳನ್ನು ಒಮ್ಮೆಯೂ ಹೇಳಿಕೊಳ್ಳಬೇಡವೇ? ಸಂಭಾಷಣೆ, ಬರಹ ಎಲ್ಲಿ? ಹುಡುಕಾಡುತ್ತಿದ್ದೆ.
ಈಗಾಗಲೇ ಸ್ವಲ್ಪ ಆತ್ಮೀಯರಾಗಿದ್ದ, ಯಕ್ಷಗಾನ ಕಾರ್ಯಕ್ರಮ ಶುರುವಾಗಿ ಬಹಳ ಹೊತ್ತಾಗಿದ್ದರೂ, ಅಡ್ಡಾಡಿಕೊಂಡಿದ್ದ ನಾರದ ಪಾತ್ರದ ಇಟಗಿ ಮಹಾಬಲರೊಂದಿಗೆ ಮಾತಿಗಿಳಿದೆ. ಇನ್ನೂ ಸಿದ್ಧವಾಗಿಲ್ಲ? ಎಂದೆ. 'ಯೇ ನನ್ನದು ಕೊನೆಯಲ್ಲಿ ಬರುವ ಪಾತ್ರ, ನಿಧಾನವಾಗಿ ಸಿದ್ಧವಾಗುತ್ತೇನೆ' ಎಂದರು. ನಾನೆಂದೆ, ನನಗೆ ತುಂಬಾ ಆಶ್ಚರ್ಯವಾಗಿದೆ. ನೀವು ಕಲಾವಿದರಾರೂ, ಸಂಭಾಷಣೆ- ಹಾಡುಗಳ ಬರಹ ಇಟ್ಟುಕೊಂಡಿಲ್ಲ, ತಾಲೀಮು ಮಾಡಲಿಲ್ಲ. ಆದರೆ ರಂಗದಲಿ ಇಷ್ಟು ಸಲೀಸಾಗಿ ಪಾತ್ರಗಳನ್ನು ನಿಭಾಯಿಸುತ್ತಿದ್ದೀರಲ್ಲ, ಹೇಗೆ ಸಾಧ್ಯ?
ಅವರು ನಕ್ಕು ಹೇಳಿದರು. 'ನಾವು, ಅಂದರೆ ಯಕ್ಷಗಾನದ ಕಲಾವಿದರು ಪ್ರಸಂಗದ ಕಥೆಯನ್ನು ಆಳವಾಗಿ ಓದಿಕೊಂಡಿರುತ್ತೇವೆ. ನಮ್ಮ ನಮ್ಮ ಪಾತ್ರಗಳ ಬಗ್ಗೆ ಸೂಕ್ಷ್ಮವಾಗಿ ತಿಳಿದುಕೊಂಡಿರುತ್ತೇವೆ. ಹಾಗಾಗಿ, ಕಥೆ ಅಥವಾ ಪ್ರಸಂಗಕ್ಕೆ ತಕ್ಕಂತೆ ರಂಗದ ಮೇಲೆ ಸಂಭಾಷಿಸುತ್ತೇವೆ. ಹಾಡಿಗೆ- ಚೆಂಡೆಯ ತಾಳಕ್ಕೆ ತಕ್ಕಂತೆ ಕುಣಿಯುತ್ತೇವೆ. ನಮಗೆ ನಿರಂತರವಾದ ತಾಲೀಮಿನ ಅವಶ್ಯವಿಲ್ಲ. ಇದಕ್ಕೆ ಬೇಕಾಗಿರುವುದು ಮುಖ್ಯವಾಗಿ ಪಾತ್ರ ವಿಲೀನತೆ. ಅದನ್ನು ಸಾಧಿಸಿದರೆ ಬೇರೆಲ್ಲವೂ ಸುಸೂತ್ರವಾಗಿ ನಡೆದುಹೋಗುತ್ತದೆ. ಅವರು ಮುಂದುವರಿದು, ಯಕ್ಷಗಾನವೆಂಬುದು ಒಂದು ತಪಸ್ಸು. ಮನೆ -ಕೆಲಸ- ಸಂಬಂಧಗಳು ಇವೆಲ್ಲವನ್ನೂ ತೊರೆದು, ಸಂಪೂರ್ಣವಾಗಿ ತೊಡಗಿಸಿಕೊಂಡು, ಪುರಾಣ ಕಥೆಗಳ ಆಳವಾದ ಓದು, ಪಾತ್ರಗಳ ಸೂಕ್ಷ್ಮ ಗ್ರಹಿಕೆ, ಸಂಗೀತ , ಕುಣಿತ ಇವೆಲ್ಲವನ್ನೂ ಹೃದಯಪೂರ್ವಕವಾಗಿ ಸಾಧನೆ ಮಾಡಬೇಕು. ಆನಂತರ ಯಾವುದೇ ಪಾತ್ರವಾಗಿದ್ದರೂ ನಾವೇ ಸಂಭಾಷಣೆಯನ್ನು ಸರಿದೂಗಿಸಿಕೊಂಡು ನಿಭಾಯಿಸುವುದು ಸುಲಭ.
ಮಹಾಬಲರ ಉತ್ತರಗಳು ಅರ್ಥವಾದರೂ, ನನ್ನೊಳಗೆ ಅವುಗಳ ಸಾಧ್ಯಾಸಾಧ್ಯತೆಗಳ ಅನುಮಾನಗಳು ಒಂದೇ ಸಮನೆ ಚಂಡೆ ಬಡಿಯುತ್ತಿದ್ದವು.
ಶಿರಸಿಯಿಂದ 20 ಕಿ.ಮೀ ದೂರದ, ಕಾಡಿನ ಮಧ್ಯದಲ್ಲಿರುವ ಸ್ವರ್ಣವಲ್ಲಿ ಮಠ, ಜನಸಂದಣಿಯಿಂದ ದೂರವಿರುವ ಜಾಗ. ಇಂತಹ ಜಾಗಕ್ಕೆ ಯಕ್ಷಗಾನ ಶುರುವಾಗುವ 10-15 ನಿಮಿಷಗಳ ಮುಂಚೆ, ಹೆಚ್ಚು ಕಡಿಮೆ ಪ್ರತ್ಯಕ್ಷರಾದರು! ಇವರಲ್ಲಿ ಮಕ್ಕಳು, ವಯಸ್ಕರು, ವಯಸ್ಸಾದವರೂ ಇದ್ದರು. ಯಕ್ಷಗಾನದ ಸರಳ ಸಂಭಾಷಣೆ, ಆಕರ್ಷಕ ವೇಷ ವಿನ್ಯಾಸ, ದೈಹಿಕ ಸಾಮರ್ಥ್ಯ ನಿರೂಪಿಸುವ ಕುಣಿತ , ಪರವಶಗೊಳಿಸುವ ಭಾವಾಭಿನಯ, ನಕ್ಕು ನಲಿಸುವ ಹಾಸ್ಯ, ಸುಮಧುರ ಹಿಮ್ಮೇಳ- ಓಹ್, ಯಕ್ಷಗಾನ ನಿಜಕ್ಕೂ ಒಂದು ಜೀವಂತ ಕಲೆ
ಬರಹ: ಎಸ್.ಎಲ್.ರವಿಶಂಕರ್
Advertisement