ಮಕ್ಕಳಾಟದ ಆ ದಿನಗಳು...

ಬಾಲ್ಯದ ದಿನಗಳೆಂದರೆ ನಮ್ಮ ಜೀವನದ ಅತ್ಯಮೂಲ್ಯ ಕ್ಷಣಗಳು. ಸವಿ ಸವಿ ನೆನಪುಗಳ ಸರಮಾಲೆ ಬಿಚ್ಚುತ್ತಾ ...
ಮಳೆಯಲ್ಲಿ ಆಟವಾಡುತ್ತಿರುವ ಮಕ್ಕಳು
ಮಳೆಯಲ್ಲಿ ಆಟವಾಡುತ್ತಿರುವ ಮಕ್ಕಳು

ಬಾಲ್ಯದ ದಿನಗಳೆಂದರೆ ನಮ್ಮ ಜೀವನದ ಅತ್ಯಮೂಲ್ಯ ಕ್ಷಣಗಳು. ಸವಿ ಸವಿ ನೆನಪುಗಳ ಸರಮಾಲೆ ಬಿಚ್ಚುತ್ತಾ ಹೋದಂತೆ 'ಆ ಕಾಲವೊಂದಿತ್ತು ದಿವ್ಯ ತಾನಾಗಿತ್ತು' ಎಂಬ ಮಧುರಾನುಭೂತಿ ಮನಸ್ಸಲ್ಲಿ ಚಿಮ್ಮುತ್ತದೆ. ನಮ್ಮ ಕಾಲದಲ್ಲಿ ಹೀಗಿರಲಿಲ್ಲ...ಆ ಶಾಲಾ ದಿನಗಳು, ಮಕ್ಕಳಾಟಗಳು...ಎಷ್ಟೊಂದು ಖುಷಿಯ ದಿನಗಳಾಗಿದ್ದವು ಎನ್ನುತ್ತಾ ನಾಸ್ಟಾಲ್ಜಿಕ್ ಹಳಹಳಿಕೆಗಳೊಂದಿಗೆ ಹೊಸ ಪೀಳಿಗೆಯೊಂದಿಗೆ ಬೆರೆಯುವಾಗ 'ಬಾಲ್ಯವೇ ಮರುಕಳಿಸಿ ಬಾ...' ಎಂದು ಮನಸ್ಸು ಪಿಸುಗುಡುತ್ತದೆ. ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ನಮ್ಮ ಪುಟ್ಟ ಮಕ್ಕಳು ಸಂಭ್ರಮಿಸುವಾಗ ನಮ್ಮ ಸುಮಧುರ ಬಾಲ್ಯದ ನೆನಪು ಕಾಡುತ್ತದೆ. ಅಂಥಾ ನೆನಪುಗಳನ್ನು ಮೆಲಕು ಹಾಕುತ್ತಾ ಬಾಲ್ಯಕ್ಕೆ ಮರಳುವಾಗ ನಮ್ಮ ಮಕ್ಕಳು ಎಷ್ಟೊಂದು ಅನುಭವಗಳನ್ನು ಮಿಸ್ ಮಾಡಿಕೊಂಡಿದ್ದಾರಲ್ವಾ? ಎಂದು ಅನಿಸಬಹುದು. ಬನ್ನಿ...ಆ ಬಾಲ್ಯದ ಅನುಭವಗಳನ್ನು ಮತ್ತೆ ನೆನಪಿಸಿಕೊಳ್ಳೋಣ...

ಶಾಲೆಗೆ ಹೋಗುವ ಸಂಭ್ರಮ
ಶಾಲೆಗೆ ಹೋಗುವುದೆಂದರೆ ಸಂಭ್ರಮದ ದಿನಗಳಾಗಿದ್ದವು. ಮಣ ಭಾರದ ಬ್ಯಾಗ್‌ಗಳು ಬೆನ್ನಲ್ಲಿರುತ್ತಿರಲಿಲ್ಲ. ಕುತ್ತಿಗೆಯಲ್ಲಿ ವಾಟರ್ ಕ್ಯಾನ್, ಕೈಯಲ್ಲಿ ಲಂಚ್ ಕ್ಯಾರಿಯರ್ ಯಾವುದೂ ಇರುತ್ತಿರಲಿಲ್ಲ. ಮಧ್ಯಾಹ್ನ ಮರದ ಕೆಳಗೆ ಊಟದ ಬುತ್ತಿಯನ್ನು ಹಂಚಿ ಕೊಂಡು ತಿಂದದ್ದು, ಮರಗಳನ್ನು ಹತ್ತಿ ಕೋತಿಯಾಟ ಆಡಿದ್ದು. ಆವಾಗ ಇದ್ದದ್ದು ಒಂದೇ ಯುನಿಫಾರ್ಮ್, ಅದನ್ನೇ ಒಗೆದು ಒಣಗಿಸಿ ಹಾಕಿಕೊಂಡು ಹೋಗುತ್ತಿದ್ದೆವು. ಊರಿನ ಎಲ್ಲ ಮಕ್ಕಳು ಗುಂಪು ಗುಂಪಾಗಿಯೇ ಮೈಲಿಗಟ್ಟಲೆ ದೂರ ನಡೆದು ಶಾಲೆ ಸೇರುತ್ತಿದ್ದೆವು. ನಮ್ಮ ಅಣ್ಣ, ಅಕ್ಕ ಬಳಸಿದ ಪಠ್ಯ ಪುಸ್ತಕಗಳನ್ನೇ ನಾವು ಬಳಸುತ್ತಿದ್ದೆವು. ಹಳೇ ನೋಟ್ ಪುಸ್ತಕಗಳಲ್ಲಿ ಖಾಲಿಯಿರುವ ಪುಟಗಳನ್ನು ಮಾತ್ರ ಕಿತ್ತು 'ರಫ್ ಬುಕ್‌' ಮಾಡುತ್ತಿದ್ದೆವು.


ನಮ್ಮ ಶಾಲಾ ಗೆಳೆಯರು
ಶಾಲೆಯಲ್ಲಿ ನಮ್ಮದೇ ಒಂದು ಗೆಳೆಯರ ಗುಂಪು ಇರುತ್ತಿತ್ತು. ಮರ ಹತ್ತಲು, ಗೋಡೆ ಹಾರಲು, ಹೂ ಕೊಯ್ಯಲು ಎಲ್ಲದಕ್ಕೂ ಈ ಗುಂಪು ನಮ್ಮೊಂದಿಗೆ ಇರುತ್ತಿತ್ತು. ಪಠ್ಯ ವಿಷಯಗಳನ್ನು ಕಲಿಯುವುದರೊಂದಿಗೆ ಕಿತಾಪತಿ ಮಾಡಲೂ ಇವರು ನಮ್ಮ  ಸಾಥ್ ನೀಡುತ್ತಿದ್ದರು.


ಪುಟ್ಟ ಪುಟ್ಟ ಖುಷಿಯ ಕ್ಷಣಗಳು
ಕ್ಲಾಸಿಗೆ ಬಂಕ್ ಹೊಡೆದು ಸುತ್ತಾಡಲು ಹೋದ ದಿನಗಳು. ಯಾವುದೋ ಹಕ್ಕಿಯ ಗೂಡನ್ನು ಅರಸಿ ಅಲೆದಾಡಿದ್ದು. ಗುಡ್ಡಗಳನ್ನು ಹತ್ತಿ ಕಾಡು ಹಣ್ಣುಗಳ ರುಚಿ ನೋಡಿದ್ದು.

ಸಿಟ್ಟು -ಜಗಳ ಖುಷಿಯ ಜುಗಲ್‌ಬಂದಿ

ಗೆಳೆಯರೊಂದಿಗೆ ಸಿಟ್ಟು ಮಾಡಿ ಹೊಡೆದಾಡಿದ್ದು. ಜಗಳ ಮಾಡಿಕೊಂಡು ಮಾತು ಬಿಟ್ಟದ್ದು. ಆಮೇಲೆ ಎಲ್ಲವನ್ನೂ ಮರೆತು ಮತ್ತೆ ಗೆಳೆಯರಾಗಿದ್ದು. ಇನ್ನು ಸಿಟ್ಟು ಮಾಡುವುದು ಬೇಡ ಎಂದು ಇಬ್ಬರೂ ಅಳುತ್ತಾ ಪ್ರಾಮಿಸ್ ಮಾಡಿಕೊಂಡಿದ್ದು.

ನಮ್ಮ ಫೇವರಿಟ್ ಟೀಚರ್
ಎಲ್ಲರಿಗೂ ಅವರ ಶಾಲೆಯಲ್ಲಿ ಫೇವರಿಟ್ ಟೀಚರ್ ಅಂಥ ಹೇಳುವ ಟೀಚರ್‌ಗಳು ಇದ್ದೇ ಇರುತ್ತಾರೆ. ಆ ಟೀಚರ್‌ಗಳೊಂದಿಗೆ ಕಳೆದ ಆತ್ಮೀಯ ಕ್ಷಣಗಳು, ಟೀಚರ್ ಕ್ಲಾಸಿಗೆ ಬರದೇ ಇರುವಾಗ ಆತಂಕಗೊಂಡ ದಿನಗಳು. ಉತ್ತಮ ಮಾರ್ಕ್ ತೆಗೆದು ಕೊಂಡಾಗ ಸಿಕ್ಕ ಪ್ರಶಂಸೆ, ಕಡಿಮೆ ಮಾರ್ಕ್ಸ್ ಬಂದಾಗ ಸಿಕ್ಕ ಬೈಗುಳ.

ದೂರವಾಗಲ್ಲ...ಪ್ರಾಮಿಸ್
ನಾನು ಬೇರೆ ಶಾಲೆಗೆ ಹೋದರು ನಾ ನಿನ್ನನ್ನು ಮರೆಯಲ್ಲ ಎಂದು ಪ್ರಾಮಿಸ್ ನೀಡುತ್ತಿದ್ದೆವು. ಮರೆಯಬೇಡ ಎಂದು ಆಟೋಗ್ರಾಫ್‌ಗಳಲ್ಲಿ ಬರೆದ ಮುದ್ದಾದ ಅಕ್ಷರಗಳು ಇಂದಿಗೂ ಕಾಡುತ್ತಿರುತ್ತವೆ.

ಕ್ಲಾಸಿಗೆ ಚಕ್ಕರ್ ಹೊಡೆದ ದಿನ

ಕ್ಲಾಸಿಗೆ ಚಕ್ಕರ್ ಹೊಡೆದು ಗೆಳೆಯರೊಂದಿಗೆ ಸಿನಿಮಾ ನೋಡಿದ ದಿನ. ಸಿನಿಮಾ ಥಿಯೇಟರ್‌ನಲ್ಲಿ ಮಕ್ಕಳ ಗುಂಪನ್ನು ನೋಡಿ ಯಾರೋ ಟೀಚರ್‌ಗೆ ಸುದ್ದಿ ಮುಟ್ಟಿಸಿದ್ದು. ಆಮೇಲೆ ಶಾಲೆಯ ಹೆಡ್‌ಮಾಸ್ಟರ್ ಮುಂದೆ ತಲೆ ತಗ್ಗಿಸಿ ನಿಂತು ಕ್ಷಮೆ ಯಾಚಿಸಿದ್ದು.


ನಮ್ಮ ಫಸ್ಟ್ ಕ್ರಶ್
ಬಾಲ್ಯದಲ್ಲಿ ಯಾವುದೋ ಒಬ್ಬ ಹುಡುಗ/ಹುಡುಗಿ ನಮಗೆ ತುಂಬಾ ಇಷ್ಟವಾಗಿರುತ್ತಾನೆ/ಳೆ. ಅವಳ(ನ) ಮುದ್ದು ಮುಖ, ಚಾಕ್ಲೇಟ್ ಹಂಚಿ ತಿಂದ ಗಳಿಗೆ ನೆನಪಿಸಿಕೊಳ್ಳುವುದೂ ಖುಷಿ ಕೊಡುತ್ತದೆ.

ಬೇಸಿಗೆ ರಜಾ ದಿನಗಳು
ಆವಾಗ ಬೇಸಿಗೆ ರಜಾದಿನಗಳೆಂದರೆ ಮೋಜಿನ ದಿನಗಳಾಗಿದ್ದವು. ಸಮ್ಮರ್ ಕ್ಲಾಸ್, ಟ್ಯೂಷನ್ ಅಂಥಾ ನಾವೆಲ್ಲೂ ಹೋಗುತ್ತಿರಲಿಲ್ಲ. ಬೇಸಿಗೆ ರಜೆ ಎಂದರೆ ಬರೀ ಆಟ, ಅಜ್ಜಿ ಮನೆಗೆ ಹೋಗಿ ರಜಾದ ಮಜಾ ಅನುಭವಿಸುತ್ತಿದ್ದೆವು. ಕೆರೆಯಲ್ಲಿ ಈಜು ಕಲಿಯುವುದು, ಮೀನು ಹಿಡಿಯುವುದು ಎಲ್ಲವನ್ನೂ ಕಲಿತದ್ದು ಈ ರಜಾದಿನಗಳಲ್ಲೇ.

ನಮ್ಮ ಅಜ್ಜ ಅಜ್ಜಿ
ನಮ್ಮ ಬಾಲ್ಯವನ್ನು ಇನ್ನಷ್ಟು ಸಂಭ್ರಮಿಸುವಂತೆ ಮಾಡಿದವರು ಇವರು. ಅಜ್ಜ ಅಜ್ಜಿ ಹೇಳಿದ ಕತೆ, ಅವರೊಂದಿಗೆ ಕಳೆದ ಕ್ಷಣಗಳು ಅಮೂಲ್ಯವಾದದ್ದು. ಕಿತಾಪತಿ ಮಾಡಿದಾಗ ಅಪ್ಪ ಅಮ್ಮ ಬೈದರೆ ನಮ್ಮ ಸಹಾಯಕ್ಕೆ ನಿಲ್ಲುವವರು ಈ ಹಿರಿ ಜೀವಗಳೇ.

ನಾನು ಅಪ್ಪನ ಮಗಳು, ನಾನು ಅಮ್ಮನ ಮಗ

ನಾನು ಅಪ್ಪನ ಮಗಳು, ನಾನು ನನ್ನಮ್ಮನ ಮುದ್ದಿನ ಮಗ ಎಂದು ಹೇಳಿಕೊಳ್ಳುತ್ತೇವಲ್ಲಾ...ಬಾಲ್ಯದಲ್ಲಿ ನಮ್ಮ ಅಪ್ಪ ಅಮ್ಮ ನಮ್ಮ ನೆರಳಿನಂತೆ ಇರುತ್ತಿದ್ದರು. ಅವರ ಕಿರುಬೆರಳು ಹಿಡಿದು ನಡೆಯುವಾಗ ಸಿಗುವ ಧೈರ್ಯ ಬೇರೆಲ್ಲೂ ಸಿಗಲ್ಲ. ಅಪ್ಪನ ದೊಡ್ಡ ಚಪ್ಪಲಿಯಲ್ಲಿ ಪುಟ್ಟ ಪಾದಗಳನ್ನು ತೂರಿಸಿ ನಡೆದಾಡಿದ್ದು, ಅಮ್ಮನಂತೆ ಸೀರೆಯುಟ್ಟು ಕನ್ನಡಿ ಮುಂದೆ ಸಂಭ್ರಮಿಸಿದ ಕ್ಷಣಗಳು ಮರೆಯುವಂತಿಲ್ಲ. ಆವಾಗ ಅಪ್ಪ ಅಮ್ಮ ತಮ್ಮ ಹೆಚ್ಚಿನ ಸಮಯಗಳನ್ನು ನಮ್ಮೊಂದಿಗೆ ಕಳೆಯುತ್ತಿದ್ದರು.

ನಮ್ಮ ಆಟಿಕೆಗಳೇ ನಮ್ಮ ಸಂಪತ್ತು
ಮನೆಯಲ್ಲಿ ಎಷ್ಟೇ ಆಟದ ಸಾಮಾನುಗಳಿರಲಿ ನಮಗೆ ಅದು ಸಾಲುತ್ತಿರಲಿಲ್ಲ. ಬೇರೆ ಬೇರೆ ರೀತಿಯ ಆಟಿಕೆಗಳೊಂದಿಗೆ ಆಟವಾಡುತ್ತಾ ನಾವು ನಮ್ಮದೇ ಲೋಕದಲ್ಲಿ ಕಳೆದು ಹೋಗುತ್ತಿದ್ದೆವು. ಆಗ ನಮ್ಮ ಕೈಯಲ್ಲಿ ಮೊಬೈಲ್, ಮನೆಯಲ್ಲಿ ಕಂಪ್ಯೂಟರ್ ಯಾವುದೂ ಇರುತ್ತಿರಲಿಲ್ಲ. ಮರದಿಂದ ಮಾಡಿದ ಗಾಡಿ, ಪೇಪರ್‌ನಿಂದ ನಾವೇ ತಯಾರಿಸಿದ ಗಾಳಿಪಟ, ತೆಂಗಿನ ಗರಿಯಿಂದ ಮಾಡಿದ ಗಿರಿಗಿಟ್ಲೆ, ಬುಗರಿ, ಜೋಕಾಲಿ ಆಡುತ್ತಾ ಸಮಯ ಕಳೆಯುತ್ತಿದ್ದೆವು.

-ರಶ್ಮಿ ಕಾಸರಗೋಡು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com