ಕಾಗದ ಬಂತು ಕಾಗದವು!

ವಾಟ್ಸ್ ಅಪ್, ಹೈಕ್, ಟ್ವೀಟರ್, ಫೇಸ್‌ಬುಕ್ ಎಲ್ಲಿ ನೋಡಿದರೂ ಪ್ರಧಾನಿ ನರೇಂದ್ರ ಮೋದಿಯದ್ದೇ ಅಲೆ. ಏಷಿಯನ್ ಶೃಂಗ...
ಮೋದಿಯವರಿಗೆ ಬಂದ ಪತ್ರಗಳು
ಮೋದಿಯವರಿಗೆ ಬಂದ ಪತ್ರಗಳು

ವಾಟ್ಸ್ ಅಪ್, ಹೈಕ್, ಟ್ವೀಟರ್, ಫೇಸ್‌ಬುಕ್ ಎಲ್ಲಿ ನೋಡಿದರೂ ಪ್ರಧಾನಿ ನರೇಂದ್ರ ಮೋದಿಯದ್ದೇ ಅಲೆ. ಏಷಿಯನ್ ಶೃಂಗಸಭೆಯಲ್ಲಿ ಭಾಗವಹಿಸಿದ ಮೋದಿ ಅಲ್ಲಿಯದೊಂದು ಫೋಟೋವನ್ನು ಶೇರ್ ಮಾಡುವ ಮೂಲಕ ಫೋಟೋ ಸೋಷಿಯಲ್ ನೆಟ್‌ವರ್ಕ್ ಇನ್‌ಸ್ಟಾಗ್ರಾಂಗೂ ಗ್ರ್ಯಾಂಡ್ ಎಂಟ್ರಿ ಕೊಟ್ಟು, ತಮ್ಮ ಮ್ಯಾಚಿಕ್ ತೋರಲು ಆರಂಭಿಸಿದ್ದಾರೆ. ಇಷ್ಟೆಲ್ಲಾ  ಸೋಷಿಯಲ್ ನೆಟ್‌ವರ್ಕ್‌ಗಳ ಭರಾಟೆಯಲ್ಲಿಯೂ ಕೈಯಿಂದ ಬರೆಯುವ ಪತ್ರಗಳಿಗೂ ಮೋದಿ ಜೀವ ತುಂಬುತ್ತಿದ್ದಾರೆ,

ಮೊಬೈಲ್ ಇದ್ದರೆ ಸಾಕು ವಿಶ್ವವನ್ನೇ ಕ್ಷಣ ಮಾತ್ರದಲಿ ಮುಟ್ಟಬಲ್ಲ ಈ ಜಮಾನದಲ್ಲಿ ಪತ್ರಗಳೇನು ಕಾರುಬಾರು ಮಾಡುತ್ತೆ ಎನಿಸೋದು ಸಹಜ. ಆದರೆ ಇತ್ತೀಚೆಗೊಂದಿನ ನವದೆಹಲಿಯ ಪೋಸ್ಟ್ ಆಫೀಸ್‌ವೊಂದರಲ್ಲಿ ಇಬ್ಬರು ಪೋಸ್ಟ್ ಮಾಸ್ಟರ್ ಗಳು ಭಾರತದ ವಿವಿಧ ಭಾಗಗಳಿಂದ ಬಂದಿದ್ದ ಬರೋಬ್ಬರಿ 5,000 ಪತ್ರಗಳನ್ನು  ಬೇರ್ಪಡಿಸಿದ್ದರು. ಎಲ್ಲವೂ ತಲುಪಬೇಕಾದ ವಿಳಾಸ ಒಂದೇ. ನರೇಂದ್ರ ಭಾಯಿ ಮೋದಿ, ಭಾರತದ ಪ್ರಧಾನ ಮಂತ್ರಿ!

ರೇಡಿಯೋ ಕಾರ್ಯಕ್ರಮವೊಂದರಲ್ಲಿ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಇಂಟರ್ನೆಟ್ ಇಲ್ಲದ ನಾಗರಿಕರಿಂದಲೂ ಸಲಹೆ, ಸಹಕಾರ ಕೋರುವ ಮೂಲಕ ಪೆನ್ನಿಗೂ ಬರೆಯುವಂತೆ ಪ್ರೇರೇಪಿಸಿದ್ದರೂ ಮೋದಿ. ಬಂದ ಪತ್ರಗಳೆಲ್ಲವನ್ನೂ ಗಮನಿಸುವ ಭರವಸೆಯನ್ನೂ ನೀಡಿದ್ದರು. ಪ್ರಧಾನಿ ಕರೆಗೆ ಓಗೊಟ್ಟ ಶ್ರೋತೃಗಳ ಪ್ರತಿಕ್ರಿಯೆ ಅದ್ಭುತವಾಗಿದೆ.

ಪ್ರಧಾನಿಯೊಬ್ಬರಿಗೆ  ಇಷ್ಟೊಂದು ಸಂಖ್ಯೆಯಲ್ಲಿ ಪತ್ರ ಬರುತ್ತಿರುವುದು ಇದೇ ಮೊದಲಂತೆ. ನವದೆಹಲಿಯ ನಿರ್ಮಾಣ್ ಭವನ್ ಪೋಸ್ಟ್  ಆಫೀಸ್‌ನ ಪೋಸ್ಟ್ ಮಾಸ್ಟರ್ ದಾಲ್‌ಚಂದ್ ಹೇಳುವ ಪ್ರಕಾರ , ದಿನಕ್ಕೆ ಕಮ್ಮಿ ಎಂದ್ರೆ 3,000 ಪತ್ರಗಳು ಮೋದಿಗೆ ಬರುತ್ತಿವೆ. ಕೇಂದ್ರ ದಿಲ್ಲಿಯ ನಿರ್ಮಾಣ್ ಭವನ್‌ನಲ್ಲಿರುವ ಈ ಅಂಚೆ ಕಚೇರಿ, ಹಲವಾರು ಸರ್ಕಾರಿ ಕಚೇರಿಗಳಿಗೆ ಅಂಚೆಯನ್ನು ತಲುಪಿಸುತ್ತದೆ.

ಚಾಂದ್‌ನ ಸಹೋದ್ಯೋಗಿ ರಾಜೇಂದ್ರ ಸಿಂಗ್ ರಾಣಾ, ದೇಶದ ಯಾವುದೇ ಅಧಿಕಾರಿಗೂ ಇಷ್ಟೊಂದು ಪ್ರಮಾಣದಲ್ಲಿ ಪತ್ರಗಳು ಬಂದಿದ್ದೇ  ಇಲ್ಲ ಎನ್ನುವುದನ್ನು ಸಮರ್ಥಿಸುತ್ತಾರೆ. ಅವರಿಗೀಗ 56 ವರ್ಷ. ಅವರು 1989ರಿಂದಲೂ ಪ್ರಧಾನಿ ಕಚೇರಿಗೆ ಪತ್ರವನ್ನು ತಲುಪಿಸುತ್ತ ಬಂದಿದ್ದಾರೆ. ಪ್ರಧಾನಿಯಾಗಿ ಮೋದಿಯವರು ಪ್ರಮಾಣ ಸ್ವೀಕರಿಸಿದಂದಿನಿಂದ ಈ ಪೋಸ್ಟ್ ಆಫೀಸ್‌ನ ಕೆಲಸ ಹೆಚ್ಚಾಗಿದೆ. ಪತ್ರಗಳ ಸಂಖ್ಯೆ ದಿನೆ ದಿನೇ ಹೆಚ್ಚಾಗುತ್ತಿರುವ ಕಾರಣ ಈ ಪೋಸ್ಟ್ ಆಫೀಸ್ ಸಿಬ್ಬಂದಿ ಸಂಖ್ಯೆಯನ್ನೂ ಹೆಚ್ಚಿಸಲಾಗಿದೆ. ಹಬ್ಬಗಳಲ್ಲಂತೂ ಪ್ರಧಾನಿಗೆ ಕಳುಹಿಸುವ ಶುಭಾಶಯ ಪತ್ರಗಳಿಂದ ಇಲ್ಲಿನ ಸಿಬ್ಬಂದಿ  ಹೆಚ್ಚು ಕಾಲವೇ ಕೆಲಸ ಮಾಡಬೇಕಾಗುತ್ತದೆ.

ಬಹುತೇಕ ನೀಲಿ ಇನ್‌ಲ್ಯಾಂಡ್ ಲೆಟರ್‌ನಲ್ಲಿ ಬರುವ ಪತ್ರಗಳ ವಿಳಾಸದಲ್ಲಿಯೂ ವಿಭಿನ್ನತೆ ಇರುತ್ತಂತೆ. ಘನತೆವೆತ್ತ ಪ್ರಧಾನಿ 'ಶ್ರೀ ನರೇಂದ್ರ ಮೋದಿಗೆ', 'ಭಾರತೀಯರ ಹೆಮ್ಮೆ ನರೇಂದ್ರ ಮೋದಿಗೆ' ಎಂದೆಲ್ಲ ವಿಳಾಸದಲ್ಲಿ ನಮೂದಿಸುವುದಲ್ಲದೆ ಪ್ರೀತಿಯಿಂದ ಅಕ್ಕರೆಯಿಂದ 'ಮೋದಿಜಿ' ಎಂದಷ್ಟೇ ಸಂಬೋಧಿಸುವವರೂ ಇದ್ದಾರಂತೆ. ಅಷ್ಟೇ ಅಲ್ಲ ಸರಳತೆಯನ್ನೇ ಮೈಗೂಡಿಸಿಕೊಂಡ ಪ್ರಧಾನಿಯೊಬ್ಬರೊಂದಿಗೆ ಭಾರತೀಯ ನಾಗರಿಕರು ಅದೆಷ್ಟು ಆತ್ಮೀಯತೆ ತೋರುತ್ತಾರೆಂದರೆ ಹಳದಿ ಕಾರ್ಡ್‌ನಲ್ಲಿಯೇ ರಂಗೋಲಿ ಹಾಗೂ ದೀಪಗಳ ಚಿತ್ರಗಳನ್ನು ಕೈಯಲ್ಲಿಯೇ ಬಿಡಿಸಿ ದೀಪಾವಳಿಗೆ ಶುಭಾಶಯ ಹೇಳಿದ್ದೂ ಉಂಟಂತೆ. ತುರ್ತು ಕೆಲಸವಿದ್ದಲ್ಲಿ  'ಅರ್ಜೆಂಟ್‌' ಎಂಬ ಒಕ್ಕಣಿಕೆ ಇದ್ದರೆ ಮತ್ತೆ ಕೆಲವೊಮ್ಮೆ ಮೋದಿಯ ಪ್ರಭಾವ ಮೇಳೈಸುವ ' ನಮೋ, ನಮೋ, ವಿಜಯಿ...'ಯಂಥ ಸಾಲು ಗಳನ್ನೊಳಗೊಂಡ ಚುಟುಕು, ಪದ್ಯಗಳೂ ಕಾಣಿಸುತ್ತವಂತೆ.

ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದನೂ ಪತ್ರಗಳ ಹರಿವು ಹೆಚ್ಚಾಗಿದೆಯಂತೆ. ಮೋದಿ ಹುಟ್ಟುಹಬ್ಬದಲ್ಲಂತೂ ಈ ಸಂಖ್ಯೆ ಹತ್ತು ಸಾವಿರವನ್ನೂ ದಾಟಿದ್ದಿದೆಯಂತೆ. ಕೆಲವೊಮ್ಮೆ ದಿನಕ್ಕೆ ಎರಡು ಬಾರಿ, ಮೂರು ಬಾರಿ ಪತ್ರಗಳನ್ನು ಸಾಗಿಸಬೇಕಾಗುತ್ತದೆ ಎನ್ನುತ್ತಾರೆ ಪ್ರತಿದಿನ ಪತ್ರಗಳನ್ನು ಪ್ರಧಾನಿ ಕಚೇರಿಗೆ ಒಯ್ಯುವ ಸುಕಬೇರ್ ಸಿಂಗ್ ಮತ್ತು ಜಸ್ಪಾಲ್ . ಇದಕ್ಕೆ ಕಾರಣವೇನಿರಬಹುದು ಎಂಬುದಕ್ಕೆ ಅವರು ಉತ್ತರಿಸುವುದು ಹೀಗೆ: ಶ್ರೀಸಾಮಾನ್ಯನ ಸಾಮಾನ್ಯ ಸಮಸ್ಯೆಯನ್ನೂ ಮೋದಿ ಬಗೆ ಹರಿಸುತ್ತಾರೆ ಎಂಬ ಅಪಾರ ವಿಶ್ವಾಸ ಜನತೆಗಿರುವುಪದರಿಂದ ಈ ರೀತಿ ಪತ್ರ ಬರೆಯುತ್ತಾರೆ.

ಮೋದಿಗೆ ಬಂದ ಪತ್ರಗಳು, ಪಾರ್ಸೆಲ್ಸ್...ಎಲ್ಲ ನೋಡಿದರೆ ಎಂಥವರಿಗಾದರೂ ಆಶ್ಚರ್ಯವಾಗುತ್ತದೆ. ಇವಕ್ಕೆಲ್ಲ ಕಾರಣವೊಂದೇ, ಸ್ನೇಹಮಯಿ ಪ್ರಧಾನಿ. ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬೆಳೆದ ಮೋದಿಗೆ ಮಾತ್ರ ಇಷ್ಟು ಪ್ರೀತಿ ಆದರಗಳು ಸಿಗಲು ಸಾಧ್ಯ. ಕೊರಿಯರ್‌ಗಳ ಭರಾಟೆ, ಸಂವಹನ ಮಾಧ್ಯಮಗಳ ಉಬ್ಬರ, ಸಾಮಾಜಿಕ ಜಾಲತಾಣಗಳ ಭರಪೂರ- ಇವೆಲ್ಲವುಗಳ ನಡುವೆಯೂ ಸಾಂಪ್ರದಾಯಿಕ ಪತ್ರ ಸಂಸ್ಕೃತಿಗೆ ಜೀವ ತುಂಬಿದ ಮೋದಿ ಅವರಿಗೆ ಉಘೇ ಎನ್ನಲೇಬೇಕು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com