ಸೆರ್ಬೆರಸ್ ಅಥವಾ ಕೆರ್ಬೆರಸ್ ಎನ್ನುವ ಮೂರು ಮುಖದ ಶ್ವಾನವು ಗ್ರೀಕ್ ಪುರಾಣದ ಇನ್ನೊಂದು ಪ್ರಸಿದ್ಧ ಪ್ರಾಣಿ. ಅದು ಹೇಡ್ಸ್ ದೇವತೆಯ ನರಕದ ಬಾಗಿಲನ್ನು ಕಾಯುತ್ತದೆ. ಪ್ರಾಚೀನ ಗ್ರೀಕರ ನಂಬುಗೆಯಂತೆ. ವ್ಯಕ್ತಿಯು ಸತ್ತ ನಂತರ ಅವನ ಆತ್ಮ ಕೆಳಗಿನ ಲೋಕಕ್ಕೆ ಹೋಗುತ್ತದೆ. ಆತ್ಮವು ತಾನು ಮಾಡಿದ ಪುಣ್ಯ ಪಾಪಗಳಿಗನುಗುಣವಾಗಿ ಅಲ್ಲಿ ಹೇಡ್ಸ್ ದಂಪತಿ ನೀಡುವ ಶಿಕ್ಷೆಯನ್ನವಲಂಬಿಸಿ ಅಲ್ಲಿ ವಾಸವಾಗಿರುತ್ತದೆ.
ಅಪೋಲೊಡೋರಸ್ ಪ್ರಕಾರ ಸೆರ್ಬೆರಸ್ ಒಂದು ವಿಲಕ್ಷಣ ಹಾಗೂ ಭಯಾನಕ ಪ್ರಾಣಿ. ಅದು ಹಲುವಾರು ಪ್ರಾಣಿಗಳ ಮಿಶ್ರಣ. ಕಾಡು ನಾಯಿಯ 3 ಮೂರು ಮುಖಗಳು, ಸರ್ಪದ ಅಥವಾ ಡ್ರ್ಯಾಗನ್ನಿನ ಬಾಲ, ಬೆನ್ನ ತುಂಬ ಬುಸುಗುಡುವ ವಿಷಕಾರಿ ಸರ್ಪಗಳ ತಲೆಗಳು, ಕೆಲವು ವಿವರಣೆಗಳಲ್ಲಿ ಅದಕ್ಕೆ ಐವತ್ತು ಮುಖಗಳೂ ಇವೆ.
ತನ್ನ ಎಲ್ಲ ಮುಖಗಳಿಂದ ಹಸಿ ಮಾಂಸವನ್ನು ಭಕ್ಷಿಸುವಂತಹ ಕ್ರೂರಿ. ಎಸಿಂಡಾ ಎನ್ನುವ ಅರ್ಧ ಮಾನವ, ಅರ್ಧ ಸರ್ಪದ ರೂಪದ ತಾಯಿ ಹಾಗೂ ಡ್ರ್ಯಾಗನ್, ಸರ್ಪಗಳ ಮಿಶ್ರಣದ ಬೆಂಕಿಯನ್ನೇ ಉಸಿರಾಡುವ, ದೇವತೆಗಳೂ ಹೆದರುವ, ಟೈಪೂನ್ ಸೆರ್ಬೆರಸ್ನ ತಂದೆ. ಆರ್ಥಸ್, ಹೈಡ್ರಾ ಹಾಗೂ ಶಿಮೇರಾ ಇದರ ಒಡಹುಟ್ಟಿದವರು. ಅರ್ಥಸ್ ಹಾಗೂ ಶಿಮೇರಾರಿಗೆ ಹುಟ್ಟಿದ್ದೇ ಈಜಿಪ್ಟ್ನ ಮುಂದಿರುವ ಸ್ಪಿಂಕ್ಸ್ ಎನ್ನುವ ಸಿಂಹ ಮಾನವ ಪ್ರಾಣಿ.
ಹರ್ಕ್ಯುಲಿಸ್ ಎಂಬ ದೇವಮಾನವ ಆರ್ಥಸ್ ಹಾಗೂ ಸಿಂಹವನ್ನು ಕೊಂದು ಹಾಕುತ್ತಾನೆ. ಸೆರ್ಬೆರಸ್ ಸ್ವಲ್ಪ ಅದೃಷ್ಟವಂತನೆಂದೇ ಹೇಳಬೇಕು. ಯುರೆಸ್ಟೆಸ್ ಎಂಬ ದೇವತೆ ಹರ್ಕ್ಯುಲಿಸ್ಸನಿಗೆ ಅನೇಕ ಅಸಾಧ್ಯ ಕೆಲಸ ಮಾಡಲು ಹೇಳುತ್ತಾನೆ. ಅವುಗಳಲ್ಲಿ ಅತ್ಯಂತ ಕಠಿಣವಾದುದೆಂದರೆ ಕೆಳಲೋಕದಲ್ಲಿ ಹೇಡ್ಸ್ ದೇವತೆಯ ಬಾಗಿಲು ಕಾಯುತ್ತಿರುವ ಸೆರ್ಬೆರಸ್ ನಾಯಿಯನ್ನು ತರುವುದೂ ಆಗಿತ್ತು.
ಲೆಕೋನಿಯಾದ ತಿಯಾನರಮ್ ಪ್ರದೇಶದ ಕಿರಿದಾದ ಹಾಗೂ ಅಪಾಯಕಾರಿಯಾದ ಪರ್ವತಗಳಲ್ಲಿನ ಗುಹೆಯೊಳಗಿಳಿದು ಹರ್ಕ್ಯುಲಿಸ್ ಹೇಡ್ಸ್ನ ಮುಂದೆ ನಿಂತು ಸೆರ್ಬೆರಸ್ನನ್ನು ಕೊಡುವಂತೆ ಕೇಳುತ್ತಾನೆ. ಅಷ್ಟೆಲ್ಲಾ ಸಾಹಸಮಾಡಿ ತನ್ನ ಲೋಕ ಪ್ರವೇಶಿಸಿದ ಅವನ ಮೇಲೆ ಹೇಡ್ಸ್ಗೆ ಅಭಿಮಾನ ಉಂಟಾದರೂ, ಬರಿಗೈಯಿಂದ ಸೆರ್ಬೆರಸ್ನನ್ನು ಸೋಲಿಸಿದರೆ ಕೊಂಡೊಯ್ಯ ಬಹುದೆನ್ನುತ್ತಾನೆ.
ಪಂಥವನ್ನು ಸ್ವೀಕರಿದ ಹರ್ಕ್ಯುಲಿಸ್ ಅದರ ಮೇಲೆ ಬಿದ್ದು ಅದರ ಮೂರೂ ಮುಖಗಳನ್ನು ತನ್ನ ತೋಳುಗಳಲ್ಲಿ ಒತ್ತಿಡಿದುಕೊಳ್ಳುತ್ತಾನೆ. ತನ್ನ ಬಾಲದಲ್ಲಿರುವ ಸರ್ಪಗಳಿಂದ ಅವನನ್ನು ಕಚ್ಚಿದರೂ ಹರ್ಕ್ಯುಲಿಸ್ಗೆ ಏನೂ ಆಗುವುದಿಲ್ಲ. ಕೊನೆಗೆ ಅವನ ಶಕ್ತಿಗೆ ಸೆರ್ಬೆರಸ್ ಶರಣಾಗುತ್ತದೆ. ಅದನ್ನು ಯುರೆಸ್ಟೆಸ್ಗೆ ತೋರಿಸಿ ಮತ್ತೆ ಅದನ್ನು ಹೇಡ್ಸ್ ದೇವತೆಗೆ ಕಳಿಸುತ್ತಾನೆ. ಹರ್ಕ್ಯುಲಿಸ್. ಸೆರ್ಬೆರಸ್ ನಮ್ಮ ನರಕಾಧಿಪತಿ ಯಮರಾಜನ ಹತ್ತಿರ ಇರುವ ಸರ್ವರಾ ಎಂಬ ಶ್ವಾನವನ್ನೂ ಹೋಲುತ್ತದೆ. ಅಲ್ಲದೇ ಹೇಡ್ಸ್ನ ಕೆಳಗಿನ ಲೋಕವು ನರಕದಂತೆಯೇ ವರ್ಣಿತವಾಗಿದ್ದು ಕೂಡಾ ವಿಶೇಷ.
- ಎಚ್.ಜಿ.ಮಳಗಿ
Advertisement