ಕಲ್ಲರಳಿ ಹೂವಾಗಿ

ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಗೊಟಗೋಡಿಯಲ್ಲಿರುವ ಉತ್ಸವ ರಾಕ್ ಗಾರ್ಡನ್ ಬಗ್ಗೆ ಬರೆಯಲು ಸೀಮೆಯ...
ಉತ್ಸವ ರಾಕ್ ಗಾರ್ಡನ್
ಉತ್ಸವ ರಾಕ್ ಗಾರ್ಡನ್

ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಗೊಟಗೋಡಿಯಲ್ಲಿರುವ ಉತ್ಸವ ರಾಕ್ ಗಾರ್ಡನ್ ಬಗ್ಗೆ ಬರೆಯಲು ಸೀಮೆಯ ಸ್ನೇಹಿತರು, ಸಂಬಂಧಿಕರಿಂದ ಕೇಳಿ ತಿಳಿದುಕೊಂಡಿದ್ದೆ. ಮೈಸೂರಿನಿಂದ ಗಾರ್ಡನ್ ದೂರ ಎಂದು ಗೊತ್ತಿದ್ದರೂ ಮನೆಮಂದಿಯೊಂದಿಗೆ ಪ್ರಯಾಣ ಬೆಳೆಸಿದೆ.

ಗಾರ್ಡನ್ ಪ್ರವೇಶಿಸಿದ ತಕ್ಷಣ ಡಾ.ರಾಜ್‌ಕುಮಾರ್ ಅಭಿನಯದ ಬೇಡರ ಕಣ್ಣಪ್ಪ  ಚಿತ್ರದ ಶಿವನಿಗೆ ಕಣ್ಣು ಕೊಡುವ ದೃಶ್ಯ ನೋಡಿ ರೋಮಾಂಚನ. ಸುತ್ತ ಕಣ್ಣು ಹಾಯಿಸಿದರೆ ಎಲ್ಲೆಡೆ ಅಣ್ಣಾವ್ರ ಅಭಿನಯದ ಚಿತ್ರಗಳ ದೃಶ್ಯಗಳು ಶಿಲ್ಪಗಳ ರೂಪದಲ್ಲಿ. ಅಲ್ಲಿದ್ದ ಒಬ್ಬ ಗೈಡ್ ಇದು ರಾಜ್ ಕುಮಾರ್ ಸರ್ಕಲ್ ಎಂದಾಗ, ಕಣ್ಣುಗಳು ತುಂಬಿ ಬಂದವು. ನಮ್ಮೊಂದಿಗೆ ಬಂದ ಎಲ್ಲರೂ ತಮ್ಮ ಮೊಬೈಲ್ ಕ್ಯಾಮೆರಾಗಳಿಗೆ ಕೆಲಸ ಕೊಟ್ಟಿದ್ದರು.

ರಾಜ್‌ಕುಮಾರ್ ಸರ್ಕಲ್ ದಾಟಿ ಮುಂದೆ ಹೋದಾಗ ಹೊಸ ಗ್ಯಾಲರಿಯಾಗಿ ರೂಪುಗೊಳ್ಳುತ್ತಿರು 'ಆಲದ ಮರ', ಅದರಲ್ಲಿರುವ ಜೀವರಾಶಿಗಳು ನಮಗೆ ಯಾವುದೋ ಕಥೆ ಹೇಳುತ್ತಿವೆ ಎನಿಸಿತು. ಕಲಾವಿದರು ಅದಕ್ಕೆ ಜೀವ ತುಂಬುತ್ತಿದ್ದರು. ಆಲದ ಮರದ ಪಕ್ಕದಲ್ಲಿರುವ ಕಾರಂಜಿ ವೃತ್ತದಲ್ಲಿ ಪುಟ್ಟ ಮಕ್ಕಳು ಸಂತಸದಿಂದ ಆಟವಾಡುತ್ತಿರುವಂತೆ ಭಾಸವಾಗುವ ಬಾಹುಬಲಿ ರೂಪದ ಶಿಲ್ಪಗಳು ಬೆರಳು ಕಚ್ಚಿಕೊಳ್ಳುವಂತೆ ಮಾಡಿದವು.

ಮದುವೆ ಪ್ರದರ್ಶನಾಲಯದ ಒಳಗೆ ಹೋದರೆ ನಿಜವಾಗಿಯೂ ಮದುವೆಯೊಂದರ ಔತಣಕೂಟಕ್ಕೆ ಹೋದಂತೆ ಭಾಸವಾಯಿತು. ಪ್ರದರ್ಶನಾಲಯದ ಎದುರಿನ ಕಲಾಕೃತಿಗಳು ಇದೊಂದು ಅಪೂರ್ವ  ಲೋಕ ಎಂದು ಸಾರಿ ಹೇಳುತ್ತಿದ್ದವು. ನಂತರ  ಕಣ್ಣಿಗೆ ಕಂಡದ್ದು ಚಿಣ್ಣರ ಕ್ರಿಕೆಟ್ ಮೈದಾನ. ಅಲ್ಲಿ ನಮ್ಮದೇ ಬಾಲ್ಯದ ದಿನಗಳು ನೆವಪಾದವು. ನನ್ನಾಕೆ  'ಇಲ್ಲಿ  ನೋಡ್ರೀ ಜ್ಯೋತಿಷ್ಯರ ಮನೆ' ಎಂದು ಕರೆದಳು. ಜ್ಯೋತಿಷ್ಯ ಕೇಳಲು ಬಂದವರಿಗೆ, ಭಟ್ಟರ ಪತ್ನಿ ಆತಿಥ್ಯ ನೀಡುತ್ತಿದ್ದರು. ಜ್ಯೋತಿಷಿ ಮನೆ ಪಕ್ಕದಲ್ಲಿನ ಶೆಟ್ಟರ ಅಂಗಡಿ ನಮ್ಮೆಲ್ಲರನ್ನೂ ಸ್ವಂತ ಊರಿಗೆ ಕರೆದುಕೊಂಡು ಹೋಯಿತು. ಅಂಗಡಿಯಲ್ಲಿನ ಸಾಮಾಗ್ರಿಗಳಂತೂ ಹೊಟ್ಟೆ ಹುಣ್ಣಾಗುವಂತೆ ನಗಿಸಿದವು. ಶೆಟ್ಟರ ನಗು ಮುಖ ನಮ್ಮ ಊರಿನ ವ್ಯಾಪಾರಿಗಳಿಗೆ ಮಾದರಿಯಾಗಿತ್ತು.

ಶೆಟ್ಟರ ಅಂಗಡಿ ಪಕ್ಕದ ಮನೆಯ ಮಹಡಿಯ ಮೇಲೆ ಅಣ್ಣ ತಂಗಿಯರು ಶಿಲ್ಪಗಳ ರೂಪದಲ್ಲಿ ನಿಂತಿದ್ದಾರೆ. ತಂಗಿ ತಮ್ಮನ್ನು ನೋಡಿದವರಿಗೆ ಹೋಗಿ ಬನ್ನಿ ಎಂದು ಟಾಟಾ ಮಾಡುತ್ತಿರುವ ದೃಶ್ಯವಂತೂ ಮಕ್ಕಳಿಗೆ ಹುಚ್ಚು ಹಿಡಿಸಿತು. ಹಳೆಯ ಗೌಡರ ಮನೆಯ ಚಾವಡಿಯಲ್ಲಿ ಗೌಡರು ಕಾರಕೂನನೊಂದಿಗೆ ಸಂಭಾಷಣೆಯಲ್ಲಿ ತೊಡಗಿದ್ದಾರೆ. ಪಕ್ಕದಲ್ಲಿ ಬಡವನೊಬ್ಬ ಗೌಡರ ಬಳಿ ಏನೋ ಕೇಳಬೇಕು ಎಂದು ಕಾತುರದಿಂದ ಕಾಯುತ್ತಿದ್ದಾನೆ. ತನ್ನ ಅನ್ನದಾತನ ರಕ್ಷಣೆಗೆ ಬಾಡಿ ಗಾರ್ಡ್ ರೂಪದಲ್ಲಿ ನಾಯಿಯೊಂದು ನಿಂತಿದೆ. ಒಳಗೆ ಹೋದರೆ ಗೌಡರ ಹೆಂಡತಿ ಮಗುವನ್ನು ತೊಟ್ಟಿಲ್ಲಲಿ ಮಲಗಿಸುತ್ತಿರುವುಗು, ಅಡುಗೆ ಮನೆಯಲ್ಲಿ ಬೆಕ್ಕೊಂದು ಮೈ ಬಿಸಿ ಮಾಡಿಕೊಳ್ಳಲು ಒಲೆ ಪಕ್ಕ ಕುಳಿತಿರುವುದು, ಗೌಡರ ತಾಯಿ ಮೊಮ್ಮಕ್ಕಳೊಂದಿಗೆ ಕುಳಿತಿರುವ, ಅಡುಗೆ ಮಾಡುತ್ತಿರುವ ದೃಶ್ಯಗಳು. ದನಗಳ ಕೊಟ್ಟಿಗೆಯಂತೂ ಕೈ ಮುಗಿದು ಒಳಗೆ ಬನ್ನಿ ಎಂದು ಬಿಂಬಿಸುತ್ತಿತ್ತು. ವಿಭಿನ್ನ ತಳಿಗಳ ಹಸು, ಎಮ್ಮೆಗಳನ್ನು ನೋಡುತ್ತಿದ್ದಂತೆ ಇವುಗಳನ್ನು ಮಾಡಿದ ಕಲಾವಿದರಿಗೆ ನಮಸ್ಕರಿಸಬೇಕು ಎನಿಸಿತು.

ಈ ಶಿಲ್ಪಗಳು ಎಂಥ ಲೋಕವಯ್ಯಾ ಇದು! ಎಂದು ಅವಾಕ್ಕಾಗುವಂತೆ ಮಾಡುತ್ತವೆ. ಶತಮಾನಗಳ ಹಿಂದಿನ ಜೀವನ ಶೈಲಿ ನೆನಪಿಗೆ ತರುತ್ತವೆ. ಇಲ್ಲಿರುವ ಒಂದೊಂದು ಗ್ಯಾಲರಿಯೂ ವಿಭಿನ್ನ ಕಥೆ ಹೇಳುತ್ತಿದ್ದವು. 42 ಎಕರೆ ವಿಶಾಲವಾದ ಪ್ರದೇಶದಲ್ಲಿ ಮೈ  ತಳೆದಿರುವ ಉತ್ಸವ ರಾಕ್ ಗಾರ್ಡನ್‌ನಲ್ಲಿರುವ ಶಿಲ್ಪಗಳು ಪ್ರವಾಸಿಗರಿಗೆ ಉತ್ಸವ ಎಂದರೆ ಹೀಗಿರಬೇಕು ಎಂದು ಸಾರಿ ಸಾರಿ ಹೇಳುತ್ತಿರುವಂತೆ ಭಾಸವಾಗುತ್ತದೆ. ನೀವೂ ಹೋಗುವುದಾದರೆ ವಿಳಾಸ: ಉತ್ಸವ ರಾಕ್ ಗಾರ್ಡನ್
ಗೊಟಗೋಡಿ, ಶಿಗ್ಗಾಂವಿ ತಾಲೂಕು,
ಹಾವೇರಿ ಜಿಲ್ಲೆ , ದೂ: 9886051239

ಎಚ್.ಎಸ್. ಸತೀಶ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com