ಅಂಧರ ಕ್ರಿಕೆಟ್ ವಿಶ್ವಕಪ್ ಗೆದ್ದ ಕನ್ನಡಿಗ ಶೇಖರ್ 'ನಾಯಕ'ನ ಬಗ್ಗೆ ಗೊತ್ತಾ?

12 ವರ್ಷದ ಕ್ರಿಕೆಟ್ ಜೀವನದಲ್ಲಿ 58 ಮ್ಯಾಚ್‌ಗಳನ್ನು ಆಡಿರುವ ಶೇಖರ್‌ಗೆ ಸರಿಯಾಗಿ ಪ್ರಾಯೋಜಕರು ಸಿಗುವುದಿಲ್ಲ ಎಂಬ ಕೊರಗು ಇದೆ. ಅಂಧರ ಕ್ರಿಕೆಟ್ ತಂಡ ಇಷ್ಟೊಂದು ಸಾಧನೆ ಮಾಡಿದ್ದರೂ...
ಶೇಖರ್ ನಾಯ್ಕ್
ಶೇಖರ್ ನಾಯ್ಕ್
Updated on

ವಿಶ್ವಕಪ್ ಸೆಮಿಫೈನಲ್‌ನಲ್ಲಿ ಟೀಂ ಇಂಡಿಯಾ ಸೋತಾಗ ಇಡೀ ಭಾರತಕ್ಕೆ ಭಾರತವೇ ಕಣ್ಣೀರಿಟ್ಟಿತ್ತು. ಈ ಬಾರಿ ವಿಶ್ವಕಪ್ ಗೆದ್ದೇ ಗೆಲ್ಲುತ್ತೇವೆ ಎಂಬ ನಿರೀಕ್ಷೆ ಈ ಸೋಲಿನೊಂದಿಗೆ ಅಂತ್ಯಗೊಂಡಿತ್ತು. ಕ್ರಿಕೆಟ್ ಅಂದರೆ ಭಾರತೀಯರಿಗೆ ಎಲ್ಲಿಲ್ಲದ ಜೋಶ್. ಕಪಿಲ್ ದೇವ್‌ನ ಬೌಲಿಂಗ್, ಸಚಿನ್ ದಾಖಲೆ,  ಕೊಹ್ಲಿಯ ಸೆಂಚುರಿ, ಧೋನಿಯ ಹೆಲಿಕಾಪ್ಟರ್ ಶಾಟ್ ಎಲ್ಲದರ ಬಗ್ಗೆಯೂ ನಾವು ಕಾಮೆಂಟರಿ ನೀಡಬಲ್ಲೆವು. 1983ರಲ್ಲಿ ಕಪಿಲ್ ದೇವ್, 2011ರಲ್ಲಿ ಮಹೇಂದ್ರ ಸಿಂಗ್ ಧೋನಿ ವಿಶ್ವಕಪ್ ಗೆದ್ದ ನಾಯಕರು ಎಂಬುದು ನಮಗೆ ಗೊತ್ತು. ಆದರೆ ಶೇಖರ್ ನಾಯ್ಕ್ ಎಂಬ ಈ ಕ್ರಿಕೆಟಿಗನ ಬಗ್ಗೆ ಎಷ್ಟು ಜನರಿಗೆ ಗೊತ್ತಿದೆ?

2012 ಅಂಧರ ಕ್ರಿಕೆಟ್ ವಿಶ್ವಕಪ್ ಗೆದ್ದ ಭಾರತ ತಂಡದ ನಾಯಕನೇ ಶೇಖರ್ ನಾಯ್ಕ್. ಕರ್ನಾಟಕದ ಶಿವಮೊಗ್ಗ  ಜಿಲ್ಲೆಯಲ್ಲಿ ಜನಿಸಿದ ಶೇಖರ್ ವಿಶ್ವಕಪ್ ಗೆದ್ದ ನಾಯಕನಾಗಿದ್ದರೂ ಟೀಂ ಇಂಡಿಯಾದ ಆಟಗಾರರಿಗೆ ಸಿಕ್ಕಷ್ಟು ಮನ್ನಣೆ ಈ ತಂಡಕ್ಕಾಗಲೀ ನಾಯಕನಿಗಾಗಲೀ ಸಿಕ್ಕಿಲ್ಲ. 2012ರಲ್ಲಿ ಬೆಂಗಳೂರಲ್ಲಿ ನಡೆದ ಟಿ20 ಅಂಧರ ವಿಶ್ವಕಪ್ ಪಂದ್ಯದಲ್ಲಿ ಭಾರತ ಇಂಗ್ಲೆಂಡ್‌ನ್ನು ಪರಾಭವಗೊಳಿಸಿ ಚಾಂಪಿಯನ್ ಆಗಿತ್ತು. ಆದರೆ ಈ ವಿಶ್ವಕಪ್ ವಿಜಯ ಒಮ್ಮೆ ಸುದ್ದಿಯಾಗಿ ಮರೆತುಹೋಗಿದೆ.

ಕರ್ನಾಟಕದ ಹುಡುಗ
ಶಿವಮೊಗ್ಗದಲ್ಲಿ 1986 ಏಪ್ರಿಲ್ 7ರಂದು ಜನಿಸಿದ ಶೇಖರ್ ಹುಟ್ಟಿದ್ದು ದೃಷ್ಟಿಹೀನನಾಗಿ. ತನ್ನಂತೆಯೇ ಯಾರಿಗೂ ಕಣ್ಣು ಕಾಣಿಸುವುದೇ ಇಲ್ಲ ಎಂದು ಅಂದುಕೊಂಡಿದ್ದ ಬಾಲ್ಯವದು. 8 ವರ್ಷದವನಿದ್ದಾಗ ಸ್ವಲ್ಪ ಸ್ವಲ್ಪ ಕಾಣಿಸತೊಡಗಿತು. ಇಷ್ಟಾದರೂ ಕಾಣಿಸುತ್ತಿದೆಯಲ್ಲಾ ಎಂಬ ಖುಷಿ. ಶಾಲೆಗೆ ಹೋದಾಗ ಅಲ್ಲಿ ಆಟೋಟಗಳಲ್ಲಿ ಭಾಗಿಯಾಗಿದ್ದ. ಶೇಖರ್‌ನ ಅಮ್ಮನಿಗೂ ದೃಷ್ಟಿ ದೋಷವಿತ್ತು. ನೀನು ಬದುಕಲ್ಲಿ ಏನಾದರೂ ಸಾಧನೆ ಮಾಡಬೇಕೆಂದು ಅಮ್ಮ ಹೇಳುತ್ತಿದ್ದಳು. ಅವಳೇ ನನಗೆ ಸ್ಪೂರ್ತಿ ಅಂತಾರೆ ಶೇಖರ್.

1997ರಲ್ಲಿ ಶಾಲೆಯಲ್ಲಿ ಕ್ರಿಕೆಟ್ ಆಡುತ್ತಾ ಯಶಸ್ಸು ಸಾಧಿಸತೊಡಗಿದ್ದರು. ನಾನೊಂದು ದಿನ ಕ್ರಿಕೆಟ್‌ನಲ್ಲಿ ಯಶಸ್ಸು ಸಾಧಿಸಿಯೇ ಸಾಧಿಸುತ್ತೇನೆ ಎಂದು ಶೇಖರ್ ಅಮ್ಮನಿಗ ಪ್ರಾಮಿಸ್ ಮಾಡಿದ್ದರು. ಆಗ ಆತನ ವಯಸ್ಸು 12! ಅಷ್ಟರಲ್ಲಿ ಅಮ್ಮ ವಿಧಿವಶವಾದಳು. ಅಮ್ಮನ ಅಗಲಿಕೆಯ ನೋವನ್ನು ಮರೆಯಯುವುದಕ್ಕಾಗಿಯೇ ಶೇಖರ್ ಮತ್ತಷ್ಟು ಕ್ರಿಕೆಟ್ ಆಡಿದರು. ಅಮ್ಮನಿಗೆ ಕೊಟ್ಟ ಮಾತು, ಆಕೆಯ ಸ್ಪೂರ್ತಿ ತುಂಬಿದ ನುಡಿಗಳು ಶೇಖರ್‌ನ್ನು ಉತ್ತೇಜಿಸಿದವು.

ಕ್ರಿಕೆಟ್ ಲೋಕಕ್ಕೆ ಹೆಜ್ಜೆ
2000 ಇಸ್ವಿಯಲ್ಲಿ ಶಾಲಾಮಟ್ಟದಲ್ಲಿನ ಪಂದ್ಯವೊಂದರಲ್ಲಿ ಶೇಖರ್ 46 ಎಸೆತಗಳಲ್ಲಿ 136 ರನ್ ಬಾರಿಸಿದ್ದರು. ಇದನ್ನು ಗುರುತಿಸಿದ ಕ್ರಿಕೆಟ್ ಆಯ್ಕೆಗಾರರು ಕರ್ನಾಟಕ ರಾಜ್ಯ ಅಂಧರ ಕ್ರಿಕೆಟ್ ಟೀಂಗೆ ಆಯ್ಕೆ ಮಾಡಿದರು. ನಂತರದ ವರ್ಷದಲ್ಲಿ ಹೈದ್ರಾಬಾದ್‌ನಲ್ಲಿ ನಡೆದ ಅಂಡರ್ 18 ಪಂದ್ಯದಲ್ಲಿ  ಶೇಖರ್ ಮ್ಯಾನ್ ಆಫ್ ದ ಸೀರೀಸ್ ಆಗಿ ಆಯ್ಕೆಯಾದರು. ಈ ಯಶಸ್ಸು ಅವರನ್ನು 2002 ಅಂಧರ ವಿಶ್ವಕಪ್ ತಂಡದಲ್ಲಿ ಸ್ಥಾನ ಗಿಟ್ಟಿಸುವಂತೆ ಮಾಡಿತು. ಪ್ರಸ್ತುತ ವಿಶ್ವಕಪ್‌ನಲ್ಲಿ ಭಾರತ ತಂಡ ಸೆಮಿಫೈನಲ್‌ವರೆಗೆ ಮಾತ್ರ ತಲುಪಿದ್ದರೂ ಆಲ್ ರೌಂಡರ್ ಆಗಿರುವ ಶೇಖರ್ ಎರಡು ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಗಳಿಸಿಕೊಳ್ಳುವ ಮೂಲಕ ಗಮನ ಸೆಳೆದರು. 2004ರಲ್ಲಿ ಪಾಕಿಸ್ತಾನದಲ್ಲಿನ ಮೊದಲ ಅಂತಾರಾಷ್ಟ್ರೀಯ ಪ್ರವಾಸ ಪಂದ್ಯದಲ್ಲಿ ಶೇಖರ್ 198 (ಅಜೇಯ) ರನ್ ಗಳಿಸಿ ಮೆಚ್ಚುಗೆಗೆ ಪಾತ್ರರಾದರು. ಅನಂತರದ ಎರಡು ವರ್ಷಗಳಲ್ಲಿ ಶೇಖರ್ ಬಾಚಿದ ಮ್ಯಾನ್ ಆಫ್ ಮ್ಯಾಚ್ ಪ್ರಶಸ್ತಿಗಳ ಸಂಖ್ಯೆ ಎಷ್ಟು ಗೊತ್ತಾ? 7!
2006ರ ವಿಶ್ವಕಪ್ ಪಂದ್ಯದಲ್ಲಿ ಭಾರತ ಪಾಕಿಸ್ತಾನ ವಿರುದ್ಧ ಸೋತರೂ ಶೇಖರ್ ಮ್ಯಾನ್ ಆಫ್ ದ ಟೂರ್ನಮೆಂಟ್  ಪ್ರಶಸ್ತಿ ಗೆಲ್ಲುವ ಜತೆಗೆ ಬೆಸ್ಟ್ ಬ್ಯಾಟ್ಸ್‌ಮೆನ್ ಇನ್ ದ ಟೂರ್ನಿ ಎಂಬ ಹೆಗ್ಗಳಿಕೆಗ ಪಾತ್ರವಾದರು. 2010ರಲ್ಲಿ ಭಾರತದ ನಾಯಕನಾದ ಶೇಖರ್ 2012ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ 58 ಎಸೆತಗಳಲ್ಲಿ  134 ರನ್ ಬಾರಿಸಿ ವಿಶ್ವಕಪ್ ಗೆದ್ದು ಬಿಟ್ಟರು.

ಬೆಂಬಲದ ಕೊರತೆ ಇದೆ

12 ವರ್ಷದ ಕ್ರಿಕೆಟ್ ಜೀವನದಲ್ಲಿ 58 ಮ್ಯಾಚ್‌ಗಳನ್ನು ಆಡಿರುವ ಶೇಖರ್‌ಗೆ ಸರಿಯಾಗಿ ಪ್ರಾಯೋಜಕರು ಸಿಗುವುದಿಲ್ಲ ಎಂಬ ಕೊರಗು ಇದೆ. ಅಂಧರ ಕ್ರಿಕೆಟ್ ತಂಡ ಇಷ್ಟೊಂದು ಸಾಧನೆ ಮಾಡಿದ್ದರೂ  ಕ್ರಿಕೆಟ್ ಅಸೋಸಿಯೇಷನ್ ಫಾರ್ ದ ಬ್ಲೈಂಡ್  ಇನ್ ಇಂಡಿಯಾ (ಸಿಎಬಿಐ)ಗೆ  ಬಿಸಿಸಿಐ ಯಿಂದ ಇಲ್ಲಿಯವರೆಗೆ ಅಂಗೀಕಾರ ಸಿಕ್ಕಿಲ್ಲ. ವಿಶ್ವದಲ್ಲೇ ಅತೀ ಹೆಚ್ಚು ಸಂಪಾದನೆಯಿರುವ ಬಿಸಿಸಿಐ ನಮಗೆ ಶೇ. 3ರಷ್ಟಾದರೂ ಧನ ಸಹಾಯ ನೀಡಿದರೆ ನಾವು ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡಬಲ್ಲೆವು ಅಂತಾರೆ ಭಾರತದ ನಾಯಕ ಶೇಖರ್.

ಇವತ್ತು ಶೇಖರ್ ನಾಯ್ಕ್ ಜನ್ಮದಿನ. ಅಂಧರ ಕ್ರಿಕೆಟ್ ಲೋಕದಲ್ಲಿ ಇಷ್ಟೊಂದು ಸಾಧನೆ ಮಾಡಿರುವ ಕನ್ನಡಿಗ ಇನ್ನಷ್ಟು ಯಶಸ್ಸು ಸಾಧಿಸಲಿ. ನಿಮ್ಮೆಲ್ಲರ ಶುಭ ಹಾರೈಕೆಗಳು ಈತನಿಗಿರಲಿ..
ಹ್ಯಾಪಿ ಬರ್ತ್ ಡೇ ಶೇಖರ್ ನಾಯ್ಕ್

-ಅಂಜಲಿ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com