
ಭಾರತೀಯರಿಗೆ ಕಾರು ಚಾಲನೆ ಕಲಿಸಿದ ಮಾರುತಿ 800 ಈಗ ಮಾರುಕಟ್ಟೆಯಲ್ಲಿಲ್ಲ. ಅದರ ತಯಾರಿಕೆಯೂ ನಿಂತಿದೆ. ಆದರೆ ಎಲ್ಲ ಮಧ್ಯಮವರ್ಗದ ಭಾರತೀಯರಿಗೂ ಮಾರುತಿ 800 ಜೊತೆಗೊಂದು ತಮಗೆ ಗತ್ತು ತಂದುಕೊಟ್ಟ ಸ್ವತ್ತಾಗಿ ಭಾವನಾತ್ಮಕ ನಂಟಿದೆ. ಮಾರುತಿ ಸುಜುಕಿ ಇಂದು ಈ ಮಟ್ಟದಲ್ಲಿ ಬೆಳೆಯಲು ಬುನಾದಿ ಹಾಕಿದ ಕಾರದು. ಈಗ ಈ 800 ಸುದ್ದಿಯಲ್ಲಿರುವುದು ದೇಶದ ಮೊದಲ ಮಾರುತಿ 800 ಅನ್ನು ಜನಪ್ರಿಯ ಮಲೆಯಾಳಂ ನಟ ಮಮ್ಮೂಟ್ಟಿ ಕೊಂಡುಕೊಳ್ಳಲು ಮುಂದೆ ಬಂದಿದ್ದರಿಂದ.
32 ವರ್ಷಗಳ ಹಿಂದೆ ದೆಹಲಿವಾಸಿ ಹರ್ಪಾಲ್ ಸಿಂಗ್‍ಗೆ ಲಾಟರಿಯಲ್ಲಿ ಒಲಿದದ್ದು ದೇಶದ ಮೊದಲ ಮಾರುತಿ 800. 1983ರ ಡಿ.16ರಂದು ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರಿಂದ ಕಾರ್ ನ ಕೀಯನ್ನು ಪಡೆದಿದ್ದ ಸಿಂಗ್, ಕಾರಿನ ಬಗ್ಗೆ ಅತ್ಯಂತ ಹೆಮ್ಮೆ ಉಳ್ಳವರಾಗಿದ್ದರು. ಸಿಂಗ್‍ನ ಕುಟುಂಬ ಸದಸ್ಯನಂತಾಗಿದ್ದ ಈ ಕಾರು, ಅವರ ಎಲ್ಲ ಖುಷಿಯ ಪ್ರವಾಸಗಳಿಗೆ ಕಾರಣವಾಗಿತ್ತು. ಈ ಮಾದರಿಯ ಮೊದಲ ಕಾರಾಗಿದ್ದ ಕಾರಣ, ಹೋದಲೆಲ್ಲ ಎಲ್ಲರ ಗಮನ ಸೆಳೆಯುತ್ತಿದ್ದ ಈ ಬಿಳಿ ಕಾರು, ಸಿಂಗ್ ದಂಪತಿಯ ಅಗಲಿಕೆಯ ನಂತರ ಅವರ ಮನೆ ಮುಂದೆ ಅನಾಥವಾಗಿ ನಿಂತುಕೊಂಡಿದೆ.
ಹರ್ಪಾಲ್ ಅವರ ಇಬ್ಬರು ಹೆಣ್ಣುಮಕ್ಕಳೂ ಮದುವೆಯಾಗಿ ಹೋಗಿದ್ದಾರೆ. ಹಾಗಾಗಿ ಈ ಕಾರನ್ನು ನೋಡಿಕೊಳ್ಳುವವರು ಯಾರೂ ಇಲ್ಲವಾಗಿದ್ದಾರೆ. ಆದರೆ ಸಿಂಗ್ ಅವರ ಮಕ್ಕಳಿಗೆ ಕಾರಿನ ವಿಷಯದಲ್ಲಿ ವಿಶೇಷ ಮಾನಸಿಕ ನಂಟಿರುವುದರಿಂದ ಕಾರನ್ನು ಯಾವುದಾದರೂ ಮ್ಯೂಸಿಯಂಗೆ ಕೊಡಬೇಕೆಂಬ ಆಸೆಯಿತ್ತು. ಹೀಗಾಗಿ ಮಾರುತಿ ಸುಜುಕಿ ಕಂಪನಿಗೆ ಕಾರನ್ನು ವಾಪಸ್ ಪಡೆದು ನಿರ್ವಹಣೆ ಮಾಡುವುದಾದರೆ ಉಚಿತವಾಗಿ ಕೊಡುತ್ತೇವೆಂದು ಪತ್ರ ಬರೆದರು. ಆದರೆ ಸುಜುಕಿಗೆ ತನ್ನ ಚೊಚ್ಚಲ ಬಸಿರ ಮೇಲೆ ಅಷ್ಟೇನು ಪ್ರೀತಿ ಇದ್ದಂತಿರಲಿಲ್ಲ.
ಅವರಿಂದ ಯಾವುದೇ ಪ್ರತಿಕ್ರಿಯೆಯೂ ಬಾರದಿದ್ದಾಗ ಕುಟುಂಬ ಮಾಧ್ಯಮದ ಮೊರೆ ಹೋಯಿತು. ಮಾಧ್ಯಮದಲ್ಲಿ ಕಾರಿನ ಸ್ಥಿತಿಯನ್ನು ನೋಡಿದ ಮಲೆಯಾಳಂ ನಟ ಮಮ್ಮೂಟ್ಟಿ, ಅದನ್ನು ಪಡೆದು ಚಿಕಿತ್ಸೆ ನೀಡಿ ತಮ್ಮೊಂದಿಗಿಟ್ಟುಕೊಳ್ಳಲು ಬಯಸಿದ್ದಾರೆ. ತನ್ನದೂ ಮೊದಲ ಕಾರು ಮಾರುತಿ 800 ಆಗಿತ್ತು ಎಂದು ನೆನೆವ ಮಮ್ಮೂಟ್ಟಿಯ ಬಳಿ ಈಗಾಗಲೇ ಬಿಎಂಡಬ್ಲೂ, ಜಾಗ್ವಾರ್ ಸೇರಿದಂತೆ ಹಲವಾರು ಕಾರುಗಳಿವೆ. ಆದರೆ ಈಗ ಧಿಡೀರ್ ಎಂದು ಮಮ್ಮೂಟ್ಟಿಯ ಬೇಡಿಕೆಗೆ ಸ್ಪರ್ಧೆ ಹುಟ್ಟಿಕೊಂಡಿದೆ. ಗುರ್ ಗಾಂವ್‍ನ ಹೆರಿಟೇಜ್ ಟ್ರಾನ್ಸ್ ಪೋರ್ಟ್ ಮ್ಯೂಸಿಯಂ ಕೂಡಾ ಈ ಕಾರನ್ನುಕೊಳ್ಳಲು ಮುಂದೆ ಬಂದಿದೆ. ಅಷ್ಟೇ ಅಲ್ಲ, ಕಂಪನಿಯೂ ಎಚ್ಚೆತ್ತಿದ್ದು, ತನ್ನ ಮೊದಲ ಮಗುವನ್ನು ತನಗೇ ಕೊಡಬೇಕೆಂದು ಕೇಳಿಕೊಂಡಿದೆ. ಸಿಂಗ್‍ನ ಸಂಗ ತೊರೆದ ಕಾರು ಯಾರ ಪಾಲಾಗುವುದೋ ಕಾದು ನೋಡಬೇಕಿದೆ.
Advertisement