ಮಿಲಿಯನ್ ಡಾಲರ್ ಬೇಬಿ ಮರ್ಲಿನ್ ಮನ್ರೋ

ಇಂಗ್ಲೆಂಡಿನ ಗತಿಸಿದ ರಾಜಕುಮಾರಿ ಡಯಾನಾ ಥರವೇ ನಟಿ ಮರ್ಲಿನ್ ಮನ್ರೋ ಕೂಡ ಅಗಣಿತ ಸುದ್ದಿಯ ಗಣಿ. ಇವರಿದ್ದರೂ ಸುದ್ದಿ, ಸತ್ತರೂ ಸುದ್ದಿ,...
ಮರ್ಲಿನ್ ಮನ್ರೋ
ಮರ್ಲಿನ್ ಮನ್ರೋ

ಇಂಗ್ಲೆಂಡಿನ ಗತಿಸಿದ ರಾಜಕುಮಾರಿ ಡಯಾನಾ ಥರವೇ ನಟಿ ಮರ್ಲಿನ್ ಮನ್ರೋ ಕೂಡ ಅಗಣಿತ ಸುದ್ದಿಯ ಗಣಿ. ಇವರಿದ್ದರೂ ಸುದ್ದಿ, ಸತ್ತರೂ ಸುದ್ದಿ, ಈಗ ಲೇಟೆಸ್ಟ್ ವಿಚಾರ. ಮನ್ರೋ ಧರಿಸಿದ್ದ ಕಪ್ಪು ಫ್ಲಾಪ್ಪಿ ಹ್ಯಾಟ್ ಹರಾಜಿಗಿದೆ. ಹರಾಜು ಕಟ್ಟೆಯ ಕೂಗು 22 ಸಾವಿರ ಡಾಲರ್ ಗಳಿಂದ ಶುರು.

ಮನ್ರೋ ಆಗಾಗ ಸುದ್ದಿ ಮಾಡುತ್ತಲೇ ಇರುತ್ತಾಳೆ. ಕಳೆದ ಜೂನ್ ನಲ್ಲಿ ಆಕೆ ತನ್ನ ಕೊನೆಯ ಚಿತ್ರಕ್ಕೆ ಧರಿಸಿದ್ದ ದಿರಿಸು ಮತ್ತು ಆಕೆಯ ಸಮಾಧಿಯ ಮಾರ್ಕರ್ ಹರಾಜಿಗೆ ಬಂದಿತ್ತು. ಆಕೆಯ ಹೆಸರು ಬರೆದಿದ್ದ ಪುಟ್ಟ ತಾಮ್ರದ ಫಲಕ ಅಷ್ಟೆ ಅದು. ಧೂರ್ತರು ಆಕೆಯ ಸಮಾಧಿಯನ್ನೂ ಬಿಟ್ಟಿರಲಿಲ್ಲ. ತಮಾಷೆ ಅಂದರೆ ಅದನ್ನೊಬ್ಬ 2,12,500 ಡಾಲರ್ ಗಳಿಗೆ ಕೊಂಡ. ಹರಾಜಿಗಿಟ್ಟ ಇನ್ನೊಂದು ವಿಚಿತ್ರ ವಸ್ತು ಆಕೆಯ ದೇಹದ ಎಕ್ಸ್ ರೇ, ಸತ್ತ ಮೇಲೆ ಎಲುಬು ಕೂಡ ಮಣ್ಣಾಗಿ ಹೋಗುತ್ತದೆ ಎಂಬುದು ನಮನಿಮಗಷ್ಟೇ ಸಂಬಂಧಿಸಿದ ಫಿಲಾಸಫಿ. ಸೆಲೆಬ್ರೆಟಿಗಳಿಗಲ್ಲ. ದೇಹಕ್ಕಂಟಿಕೊಂಡಂತೆ ಆಕೆ ಧರಿಸಿದ್ದ ಆ ಸಿಲ್ಕ್ ಬಟ್ಟೆ ಹರಾಜುದಾರನಿಗೆ 4 ಲಕ್ಷ ಡಾಲರ್ ತಂದುಕೊಟ್ಟಿತ್ತು.  ವಿಸಂಗತಿ ಎಂದರೆ, ಆ ಕೊನೆಯ ಚಿತ್ರದ ಶೂಟಿಂಗ್ ಗೆ ಆಕೆ ಸರಿಯಾಗಿ ಹೋಗಿಲ್ಲವಾದ ಕಾರಣ ಆಕೆಯನ್ನು ಟೀಂ ನಿಂದ ಕಿತ್ತೆಸಯಲಾಗಿತ್ತು. ಅದಾಗಿ ಒಂದು ತಿಂಗಳಲ್ಲಿ ಆಕೆ ನಿದ್ರೆ ಮಾತ್ರೆ ಸೇವಿಸಿ ಮರಣಿಸಿದ್ದಳು.
ಮನ್ರೋ ತನ್ನ ಪ್ರಿಯತಮರಿಗೆ ಬರೆದ, ಮನ್ರೋಳ ಪ್ರಿಯತಮರು ಆಕೆಗೆ ಬರೆದ ಲವ್ ಲೆಟರ್ ಗಳಿಗೆ ಒಳ್ಳೆಯ ಬೇಡಿಕೆಯಿದೆ. ಅವು ಆಗಾಗ ಹರಾಜು ಕಟ್ಟೆಯಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಮನ್ರೋ ಕೈ ಬರಹ ಇರುವ ಪತ್ರ ನಾಲ್ಕೆಂಟೇ ಸಾಲಿನದ್ದಾದರೂ ಸರಿ, 4 ಸಾವಿರ ಡಾಲರ್ ಬೆಲೆಬಾಳುತ್ತದೆ. ಇವುಗಳಲ್ಲಿ ಆಕಯ ಬದುಕಿನ  ಚರಿತ್ರೆಯೂ ಇವುಗಳಲ್ಲಿ ಆಕೆಯ ಬದುಕಿನ ಚರಿತ್ರೆಯೂ ಇಣುಕುತ್ತದೆ ಎನ್ನಿ. ಆಕೆಯ ಮಾಜಿ ಗಂಡ ಡಿಮ್ಯಾಗ್ಗಿಯೋ ಎದೆಯೊಡೆದುಕೊಂಡು ಆಕೆಗೆ ಬರೆದ ಪ್ರೇಮ ಪತ್ರ ಕಳೆದ ವರ್ಷ ಇದೇ ಮೌಲ್ಯಕ್ಕೆ ಮಾರಾಟವಾಗಿತ್ತು. ಅದನ್ನಾತ ಬರೆಯುವ ಒಂದು ದಿನ ಮೊದಲು ಆಕೆ ಸಾರ್ವಜನಿಕವಾಗಿ ಅವರ ದಾಂಪತ್ಯಕ್ಕೆ ಡೈವೋರ್ಸ್ ಘೋಷಿಸಿದ್ದಳು.

ಆಕೆ ಆಗಾಗ ಧರಿಸುತ್ತಿದ್ದ ಸಿಲ್ಕ್ ಓವರ್ ಕೋಟ್ 1.2 ಲಕ್ಷ ಡಾಲರ್, ಕಪ್ಪು ವೆಲ್ವೆಟ್ ಉಡುಪು 60 ಸಾವಿರ ಡಾಲರ್ ಗೆ ಹೋಗಿದೆ. ಆಕೆ ನಟಿಸಿದ ಟಿತ್ರದ ಸ್ಕ್ರಿಪ್ಟ್ಗಳು ಮಾರಾಟಕ್ಕಿವೆ. ಆಕೆ ಸಿಗರೇಟಿ ಸೇದಿ ಬಟ್ ಚುಚ್ಚಿ ಇಡುತ್ತಿದ್ದ ಆಶ್ ಟ್ರೇಗಳಂತೂ ದುಬಾರಿ ದರಕ್ಕೆ ಬಿಕರಿಯಾಗಿವೆ. ಬಡ ಅಭಿಮಾನಿ ಆಕೆಯ ಫೋಟೋಗಳನ್ನು ನೋಡುತ್ತಾ ತೃಪ್ತಿ ಪಟ್ಟು ಕೊಂಡರೇ, ಶ್ರೀಮಂತ ಅಭಿಮಾನಿಗಳು ಈ ವಸ್ತುಗಳನ್ನು ಖರೀದಿಸಿ ಪ್ರತಿಷ್ಠೆಯನ್ನು ತೋರಿಸಿಕೊಳ್ಳುತ್ತಾರೆ.

ಹರಾಜುದಾರರು ಆಗಾಗ ಮನ್ರೋಸ್ ಲಾಸ್ಟ್ ಕಲೆಕ್ಷನ್ ಎಂದು ಕೆಲ ವಸ್ತುಗಳನ್ನು ಹೊರಬಿಡುತ್ತಾ ಇರುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಮನ್ರೋ ವಸ್ತುಗಳಿಗೆ ಶ್ರೀಮಂತರು ಮುಗಿಬೀಳುವುದು ಹೆಚ್ಚಾಗಿದೆಯಂತೆ. ಇವರಲ್ಲಿ ಏಷ್ಯಾ ಮತ್ತು ಯೂರೋಪಿನವರೇ ಹೆಚ್ಚಂತೆ.

9 ವರ್ಷಗಳ ಹಿಂದೆ ಮನ್ರೋ ಚಿತ್ರಿಸಿದ ಜಲವರ್ಣ ಚಿತ್ರವೊಂದು 80 ಸಾವಿರ ಡಾಲರ್ ಗೆ ಹರಜಾಗಿತ್ತು. (ಮನ್ರೋ ಚಿತ್ರ ಕಲಾವಿದೆಯೂ ಆಗಿದ್ದಳು). ಅದನ್ನಾಕೆ ಪ್ರೆಸಿಡೆಂಟ್ ಜಾನ್.ಎಫ್.ಕೆನಡಿಗೆ ಗಿಫ್ಟ್ ಕೊಡಲು ಬಯಸಿದ್ದಳು.

ತನ್ನ 3ನೇ ಹಾಗೂ ಕೊನೆಯ ಗಂಡ ಆರ್ಥರ್ ಮಿಲ್ಲರ್ ಗೆ ಬರೆದ ಒಂದು ಪತ್ರದಲ್ಲಿ ಆಕೆ (ತನ್ನ ಬಾಲ್ಯದ ಕರಾಳ ದಿನಗಳನ್ನು ನೆನಪಿಸಿಕೊಳ್ಳುತ್ತಾ) ಹೀಗೆ ಬರೆದಿದ್ದಳು.  ನನಗೆ ಬೇರೆ ಆಯ್ಕೆಗಳೇ ಇರಲಿಲ್ಲ. ಯಾವಾಗಲೂ ಒಂದೇ ಹಾದಿ ನನ್ನ ಮುಂದೆ ಇರುತ್ತಿತ್ತು. ಹಾಗಾಗಿ ನನ್ನ ವಿವೇಕದ ಬಗ್ಗೆ ನಾನು ಮಾತಾಡಿದಾಗ ಅದು ಅಷ್ಟೊಂದು ವಿವೇಕದ ಮಾತೆನಿಸುವುದಿಲ್ಲ. ಹಾಗೆ ನಿನ್ನಂಥ ವಿಭಿನ್ನ ತುಂಬಾ ಸುಂದರ ಮನುಷ್ಯ ನನ್ನನ್ನು ಪ್ರೀತಿಸಲು ಆಯ್ಕೆ ಮಾಡಿಕೊಂಡದ್ದು ಕೂಡ ಅರ್ಥ ಮಾಡಿಕೊಳ್ಳಲು ನನಗೆ ತ್ರಾಸದಾಯಕವಾಗಿದೆ.....

ಅದೂ ಮಾರಾಟಕ್ಕಿದೆ!
ಮನ್ರೋ ಗೆ ಸಂಬಂಧಿಸಿದ ಏನನ್ನೂ ಈ ಮಂದಿ ಬಿಡುವುದಿಲ್ಲ. 1962ರಲ್ಲಿ ನಡೆದ ಆಕೆಯ ಶವಸಂಸ್ಕಾರದ ಕಾರ್ಡ್ ಕೂಡ ಮಾರಾಟವಾಗಿತ್ತು. ಮನ್ರೋ ಧರಿಸಿದ ಒಳ ಉಡುಪುಗಳ ಸಂಗತಿ ಹೇಳಬೇಕೆ? ಇವುಗಳಿಗೂ ಸಕತ್ ಬೇಡಿಕೆ ಇದೆ ಎಂಬುದು ನಿಮ್ಮ ಗಮನಕ್ಕಿರಲಿ. ಕಳೆದ ವರ್ಷ ಆಕೆಯ ಮೈ ಚರ್ಮದ ಬಣ್ಣದ ಬ್ರಾ 8 ಸಾವಿರ ಡಾಲರ್ ಗೆ ಹರಾಜಾಗಿತ್ತು. ಆಕೆಯ ಬ್ರಾವನ್ನು ಯಾರೂ ಖರೀದಿಸಿದರೂ, ಯಾರೂ ಧರಿಸಿದರು, ಅಥವಾ ಯಾರು ಖಾಸಗಿ ಸಂಗ್ರಹಾಲಯದಲ್ಲಿಟ್ಟುಕೊಂಡರು, ಸುಖಿಸಿದರು ಎಂಬಿತ್ಯಾದಿ ವಿವರಗಳೆಲ್ಲಾ ಸಿಕ್ಕುವುದೇ ಇಲ್ಲ. ದುಡ್ಡುಳ್ಳವರು ಇವುಗಳ ಮೇಲೆ ಹಕ್ಕು ಸ್ವಾಮ್ಯ ಸಾಧಿಸಿಕೊಳ್ಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com