ರಕ್ಷಾ ಬಂಧನ ಉಡುಗೊರೆ: ಕಳೆದುಹೋದ ತಂಗಿ ವಾಪಸ್ ಬಂದು ರಾಖಿ ಕಟ್ಟಿದಳು!

ಕಳೆದು ಹೋಗಿದ್ದ ಸಹೋದರಿ ಐದು ವರ್ಷಗಳ ಬಳಿಕ ಬಂದು ರಾಖಿ ಕಟ್ಟಿದಾಗ ಅಣ್ಣನಿಗೆ ಆಗುವ ಖುಷಿ, ಸಂಭ್ರಮ ಅಷ್ಟಿಟ್ಟಲ್ಲ. ಇಂತ ಅದ್ಭುತ ಘಟನೆ ಜೈಪುರದಲ್ಲಿ ನಡೆದಿದೆ...
ರಕ್ಷಾ ಬಂಧನ
ರಕ್ಷಾ ಬಂಧನ

ಜೈಪುರ: ಕಳೆದು ಹೋಗಿದ್ದ ಸಹೋದರಿ ಐದು ವರ್ಷಗಳ ಬಳಿಕ ಬಂದು ರಾಖಿ ಕಟ್ಟಿದಾಗ ಅಣ್ಣನಿಗೆ ಆಗುವ ಖುಷಿ, ಸಂಭ್ರಮ ಅಷ್ಟಿಟ್ಟಲ್ಲ. ಇಂತ ಅದ್ಭುತ ಘಟನೆ ಜೈಪುರದಲ್ಲಿ ನಡೆದಿದೆ.

ಅಣ್ಣ ಮಹೇಶ್ ನಿಗೆ ಐದು ವರ್ಷಗಳ ಹಿಂದೆ ಕಳೆದು ಹೋಗಿದ್ದ ಸಹೋದರಿ ಮಮತಾ ಪವಿತ್ರ ರಕ್ಷಾ ಬಂಧನದ ಈ ದಿನದಂದೆ ಅತ್ಯಾಶ್ಚರ್ಯದ ಉಡುಗೊರೆ ಎಂಬಂತೆ ಕಳೆದುಹೋದ ಸಹೋದರಿ ಸಿಕ್ಕಿದ್ದಾಳೆ. ಆತನಿಗೆ ರಕ್ಷಾಬಂಧನ ಕಟ್ಟಿ ಸಂಭ್ರಮಿಸಿದ್ದಾಳೆ. ಅಂತೆಯೇ ಆತನಿಗೆ ಪಾಲಿಗೆ ಇಂದು ಸುದಿನವಾಗಿದೆ.

ಐದು ವರ್ಷಗಳ ಹಿಂದೆ ಬಾಲಕಿ ಮಮತಾಳನ್ನು ಯಾರೋ ಅಪಹರಿಸಿ ಬಲವಂತದಿಂದ ಆಕೆಯನ್ನು ಭಿಕ್ಷಾಟನೆಗೆ ಬಳಸಿಕೊಂಡಿದ್ದರು. ಈ ತಿಂಗಳ ಆದಿಯಲ್ಲಿ ಮಮತಾಳನ್ನು ಇತರ ಮೂರು ಮಕ್ಕಳೊಂದಿಗೆ ಪಾರುಗೊಳಿಸಲಾಗಿತ್ತು ಮತ್ತು ಅವರಿಗೆ ಅಜ್‌ಮೇರ್‌ನ ಬಾಲನಿಕೇತನದಲ್ಲಿ ಆಸರೆ ಕಲ್ಪಿಸಲಾಗಿತ್ತು. ಮನೆಯವರು ಕೊಟ್ಟ ಗುರುತು, ವಿವರ ಇತ್ಯಾದಿಗಳನ್ನು ಪರಾಮರ್ಶಿಸಿ ಶಿಶು ಕಲ್ಯಾಣ ಸಮಿತಿ ಸದಸ್ಯರು ಮಮತಾಳನ್ನು ಆಕೆಯ ಮನೆಯವರಿಗೆ ಹಸ್ತಾಂತರಿಸಿದರು.

2010ರ ಮಾರ್ಚ್‌ 30ರಂದು ನಾಗೋರ್‌ ಜಿಲ್ಲೆಯ ನವನಗರದಲ್ಲಿ ನಡೆದಿದ್ದ ಜಾತ್ರೆಯ ಸಂದರ್ಭದಲ್ಲಿ ಮಮತಾ ಅಪಹರಣವಾಗಿತ್ತು. ಮಮತಾಳ ತಂದೆ ವೃತ್ತಿಯಲ್ಲಿ ಚಮಗಾರ. ಈಗ ಆತ ಜೀವಂತವಿಲ್ಲ. ಮಮತಾ ಕಳೆದು ಹೋದ ಬಳಿಕ ಆಕೆಯ ಮನೆಯವರೆಲ್ಲ ಬಹಳವಾಗಿ ಆಕೆಯನ್ನು ಹುಡುಕಾಡಿದರೂ ಪ್ರಯೋಜನವಾಗಿರಲಿಲ್ಲ. ಹಾಗಾಗಿ ಅವರು 2010ರ ಮಾರ್ಚ್‌ 30ರಂದು ಮಮತಾ ಕಳೆದು ಹೋದಳೆಂದು ಪೊಲೀಸರಿಗೆ ದೂರು ನೀಡಿದರು.

ಆದರೆ ಒಂದು ತಿಂಗಳ ಬಳಿಕ ಮಮತಾ ಬಲೂನು ಮಾರುವವನೊಬ್ಬನ ವಶದಲ್ಲಿ ಇರುವುದನ್ನು ಯಾರೋ ಕಂಡು ಮಾಹಿತಿ ನೀಡಿದರು. ಆದರೆ ಆ ಬಲೂನು ಮಾರುವವನೇ ಅನಂತರ ನಾಪತ್ತೆಯಾದ. ಇದನ್ನು ಅನುಸರಿಸಿ 2010ರ ಏಪ್ರಿಲ್‌ 11ರಂದು ಮಮತಾ ಅಪಹರಣವಾಗಿರುವ ಬಗ್ಗೆ ದೂರು ದಾಖಲಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com