ಸಾಮಾನ್ಯವಾಗಿ ದೇವಾಲಯಗಳಿಗೆ ಭೇಟಿಯಿತ್ತಾಗ ಮಂಗಳಾರತಿ ಮತ್ತು ತೀರ್ಥ ತೆಗೆದುಕೊಳ್ಳದೆ ಬರುವವರು ವಿರಳ. ದೇವಸ್ಥಾನಕ್ಕೆ ಹೋದ ಮೇಲೆ ಮಂಗಳಾರತಿ, ತೀರ್ಥ, ಪ್ರಸಾದಕೊಳ್ಳದೇ ಯಾರೂ ವಾಪಸ್ ಬರಲ್ಲ.
ದೇವಸ್ಥಾನದಲ್ಲಿ ದೇವರಿಗೆ ಮಹಾಮಂಗಳಾರತಿ ನಡೆಯುತ್ತಿದೆ ಎಂಬ ಕಲ್ಪನೆಯೇ ಒಂದುಕ್ಷಣದ ರೋಮಾಂಚನವನ್ನು, ಕ್ಷಣಿಕವಾದರೂ ಭಕ್ತಿಪರವಶಭಾವದ ಪುಳಕವನ್ನು ಕೊಡುತ್ತದೆ. ಶಂಖ-ಜಾಗಟೆ-ಘಂಟೆಗಳ ಧ್ವನಿ, ಮಂತ್ರಘೋಷಗಳು ಒಂದೊಮ್ಮೆ ನಮ್ಮ ಕಿವಿತುಂಬಿ ಮೈದುಂಬಿ ವಿದ್ಯುತ್‌ಸಂಚಾರ ಮಾಡಿಸುತ್ತದೆ. ನಿಜವಾಗಿಯೂ ಅದೊಂದು ದಿವ್ಯವಾದ ಅದ್ಭುತವಾದ ಹಿತಾನುಭವ; ಮಂಗಳಾರತಿಯದು ಅದೊಂದು ಅಗೋಚರ ಅಮೋಘವಾದ ಶಕ್ತಿ.
ಭಗವಂತನ ಮೂರ್ತಿಗೆ ಬೆಳಗಿದ ಈ ಜ್ಯೋತಿಯು ನಮ್ಮ ಬುದ್ಧಿಯನ್ನೂ ಬೆಳಗಲಿ, ದೃಷ್ಟಿಯು ದಿವ್ಯತೆಯ ಕಡೆ ನೋಡುವಂತಾಗಲಿ ಮತ್ತು ನಮ್ಮ ವೃತ್ತಿಗೊ ನೈತಿಕ ಹಾಗೂ ಅಧ್ಯಾತ್ಮಿಕತೆಂದ ಕೂಡಿರಲಿ ಎಂಬ ಉದ್ದೇಶದಿಂದ ಮಂಗಳಾರತಿ ತೆಗೆದುಕೊಳ್ಳಲಾಗುತ್ತದೆ.
ದೇವರಿಗೆ ಮಾಡಿದ ಮಂಗಳಾರತಿಯನ್ನು ತೆಗೆದುಕೊಳ್ಳುವಾಗ ಎರಡೂ ಕೈಗಳಿಂದ ತೆಗೆದುಕೊಳ್ಳಬಾರದು ಒಂದೇ ಕೈಯಿಂದ ತೆಗೆದುಕೊಳ್ಳಬೇಕು.ಮಂಗಳಾರತಿಯನ್ನು ಎರಡು ಕೈಗಳಿಂದ ಸ್ವೀಕಾರ ಮಾಡಬಾರದು. ಆರತಿಯನ್ನು ಬಲ ಕೈಯಿಂದ ಮಾತ್ರ ತೆಗೆದು ಕೊಳ್ಳಬೇಕು ಎಂಬ ವಿಷಯವನ್ನು ವರಾಹದೇವರು ತನ್ನ ಪತ್ನಿಗೆ ತಿಳಿಸುತ್ತಾನೆ.
ಆರತಿಯನ್ನು ಮೊದಲು ತಲೆಗೆ ತೆಗೆದುಕೊಂಡು, ಆಮೇಲೆ ಹೃದಯ, ಆಮೇಲೆ ನಾಭಿಯ ಎಡಭಾಗದಲ್ಲಿ ತೆಗೆದುಕೊಳ್ಳಬೇಕು. ಶಿರದಲ್ಲಿ ಇರುವ ಅಮೃತವನ್ನು ಹೃದಯಕ್ಕೆ ತಂದು, ಹೃದಯದಲ್ಲಿ ಇರುವ ಅಗ್ನಿಯನ್ನು ನಾಭಿಯ ಎಡಭಾಗದಲ್ಲಿ ಇರುವ ಪಾಪಪುರುಷನಲ್ಲಿ ಸುಡಬೇಕು. ಅಲ್ಲಿಗೆ ನಮ್ಮ ದೇಹ ಶುದ್ಧವಾಗುತ್ತದೆ ಎಂಬ ನಂಬಿಕೆ.
ಆರತಿ ಮಾಡುವುದನ್ನು ನೋಡುವುದರಿಂದ ಏಕಾಗ್ರತೆ ಸಿಧ್ದಿಸುವುದಲ್ಲದೆ ಅಂತಹ ಆರತಿಯ ಮೇಲೆ ನಮ್ಮ ಬಲ ಅಂಗೈಯನ್ನು ಸ್ವಲ್ಪಹೊತ್ತು ಹಿಡಿದರೆ ಶಾಖ ಅಂಗೈ ಮೂಲಕ ಪ್ರವೇಶವಾಗಿ ’ನರವ್ಯೂಹ’ ಹೆಚ್ಚು ಕ್ರಿಯಾಶೀಲವಾಗುತ್ತದೆ. ಜೊತೆಗೆ ಅಂಗೈನಲ್ಲಿ ಇರಬಹುದಾದ ಎಲ್ಲಾ ಕ್ರಿಮಿಕೀಟಗಳು ನಾಶವಾಗುತ್ತದೆ.
Advertisement