ಸಲ್ಲು ಭಾಯ್...ಆ ರವೀಂದ್ರ ಪಾಟಿಲ್‌ನ ಸಾವು ನಿಮ್ಮನ್ನು ಕಾಡುವುದಿಲ್ಲವೆ?

ಭಾಯಿಜಾನ್...ನೀವೊಬ್ಬ ಸಿನಿಮಾ ಹೀರೋ ಅಷ್ಟೇ. ರಿಯಲ್ ಲೈಫ್ ನಲ್ಲಿ ನೀವು ವಿಲನ್ ಎಂದು ರವೀಂದ್ರ ಪಾಟಿಲ್ ಆತ್ಮ ಹೇಳುತ್ತಿರಬಹುದು...
ರವೀಂದ್ರ ಪಾಟಿಲ್ - ಸಲ್ಮಾನ್ ಖಾನ್
ರವೀಂದ್ರ ಪಾಟಿಲ್ - ಸಲ್ಮಾನ್ ಖಾನ್
ನ್ಯಾಯಾಲಯ ಸಲ್ಮಾನ್ ಖಾನ್ ತಾನು ನಿರ್ದೋಷಿ ಎಂದು ತೀರ್ಪು ನೀಡಿದೆ. 13 ವರ್ಷಗಳಿಂದ ಸಲ್ಮಾನ್‌ಗೆ ಕಂಟಕವಾಗಿದ್ದ ಗುದ್ದೋಡು ಪ್ರಕರಣದ ತೀರ್ಪನ್ನು ಬಾಂಬೆ ಹೈಕೋರ್ಟ್ ಪ್ರಕಟಿಸಿದ್ದು, ಸಲ್ಲು ಭಾಯಿ ನಿರಾಳವಾಗಿದ್ದಾರೆ. 2002 ರಲ್ಲಿ ನಡೆದ ಸಲ್ಮಾನ್ ಖಾನ್‌ನ ಗುದ್ದೋಡು ಪ್ರಕರಣದಲ್ಲಿ ಸಲ್ಮಾನ್ ಖಾನ್‌ನ ಬಾಡಿಗಾರ್ಡ್ ರವೀಂದ್ರ ಪಾಟಿಲ್‌ರ ಸಾಕ್ಷಿಯನ್ನು ಸಂಪೂರ್ಣವಾಗಿ ಪರಿಗಣಿಸುವಂತಿಲ್ಲ, ಅದರಲ್ಲಿ ಕೆಲವೇ ಕೆಲವು ಹೇಳಿಕೆಗಳನ್ನು ಮಾತ್ರ ಸಾಕ್ಷಿಯಾಗಿ ಪರಿಗಣಿಸಬಹುದೆಂದು ನ್ಯಾಯಾಲಯ ಹೇಳಿತ್ತು. ಹೀಗೆ ರವೀಂದ್ರ ಪಾಟಿಲ್ ಸಾಕ್ಷಿಯನ್ನು ಪರಿಗಣಿಸದೇ ಇರುವ ಕಾರಣ ಸಲ್ಮಾನ್ ಖುಲಾಸೆ ಆಯ್ತು!
ಈಗ ಸಲ್ಮಾನ್ ನಿರ್ದೋಷಿಯಾಗಿದ್ದಾನೆ. ಆದರೆ ಆತನ ಬಾಡಿಗಾರ್ಡ್ ಆಗಿ ಇದ್ದನಲ್ಲಾ ರವೀಂದ್ರ ಪಾಟಿಲ್, ಅವನ ಸಾವು ಸಲ್ಮಾನ್‌ನ್ನು ಕಾಡದೇ ಇರಲಾರದು. ಯಾರಿದು ರವೀಂದ್ರ ಪಾಟಿಲ್? ಎಂಬುದು ನಿಮ್ಮ ಪ್ರಶ್ನೆಯಾದರೆ ಇಲ್ಲಿದೆ ಆ ಬಾಡಿಗಾರ್ಡ್‌ನ ರಿಯಲ್ ಸ್ಟೋರಿ
2002 ಫೆಬ್ರವರಿ
ಮುಂಬೈ ಭೂಗತ ಲೋಕದಿಂದ ನನಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಸಲ್ಮಾನ್ ಮುಂಬೈ ಪೊಲೀಸರಿಗೆ ದೂರು ನೀಡಿದ್ದನು. ಬಾಲಿವುಡ್ ತಾರೆಗೆ ಈ ರೀತಿ ಕರೆಗಳು ಬರುತ್ತಿರುವುದರಿಂದ ಆತನಿಗೆ ಬಾಡಿಗಾರ್ಡ್ ನ್ನು ನೇಮಿಸಲು ಪೊಲೀಸರು ತೀರ್ಮಾನಿಸಿದರು. ಹಾಗೆ 24ರ ಹರೆಯದ  ರವೀಂದ್ರ ಪಾಟಿಲ್ ಎಂಬ ಕಾನ್‌ಸ್ಟೇಬಲ್‌ನ್ನು ಸಲ್ಮಾನ್ ಖಾನ್‌ನ ಅಂಗ ರಕ್ಷಕನಾಗಿ ನೇಮಕ ಮಾಡಲಾಯಿತು. ಹಾಗೆ ರವೀಂದ್ರ ಪಾಟಿಲ್ ಸಲ್ಮಾನ್ ಖಾನ್‌ನ ನೆರಳಿನಂತೆ ಅಂಗರಕ್ಷಕನಾಗಿ ತನ್ನ ಕಾರ್ಯ ನಿರ್ವಹಿಸತೊಡಗಿದನು.
2001 ಸೆಪ್ಟೆಂಬರ್ 28
ಆ ರಾತ್ರಿ ಸಲ್ಮಾನ್ ಜುಹುವಿನಲ್ಲಿರುವ ಮಾರಿಯಟ್ ಹೋಟೆಲ್ ನಲ್ಲಿ ಮದ್ಯದ ಸೇವನೆ ಮಾಡುತ್ತಿದ್ದರೆ, ರವೀಂದ್ರ ಸಲ್ಮಾನ್‌ನ ಕಾರಿನಲ್ಲಿ ಕುಳಿತು ಅವರಿಗಾಗಿ ಕಾಯುತ್ತಿದ್ದ. ಮದ್ಯದ ಅಮಲಿನಲ್ಲಿ ಹೊರಬಂದ ಸಲ್ಮಾನ್ ಮನೆಗೆ ಹೋಗುವಾಗ ಅತೀ ವೇಗದಲ್ಲಿ ಕಾರು ಚಲಾಯಿಸುತ್ತಿದ್ದನು. ಆವಾಗ ಇಷ್ಟೊಂದು ವೇಗದಲ್ಲಿ ಕಾರು ಚಲಾಯಿಸಬೇಡಿ ಎಂದು ರವೀಂದ್ರ ಪರಿ ಪರಿಯಾಗಿ ಕೇಳಿಕೊಂಡರೂ, ಸಲ್ಲುಗೆ ಇದ್ಯಾವುದೂ ಕೇಳಿಸಲೇ ಇಲ್ಲ. ಹಾಗೆ ಹೋಗುತ್ತಿದ್ದಾಗ ಕಾರು ಜನರ ಮೇಲೆ ಹರಿದು ಅಪಘಾತ ಸಂಭವಿಸಿತು.
ಅಪಘಾತ ಸಂಭವಿಸಿದ ಕೂಡಲೇ ಅಲ್ಲಿ ಪ್ರಾಣಾಪಾಯದಲ್ಲಿ ಸಿಲುಕಿರುವ ಜನರನ್ನು ರಕ್ಷಿಸುವ ಬದಲು ತಾನು ಅಲ್ಲಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂದು ಸಲ್ಮಾನ್ ಖಾನ್ ಚಿಂತಿತರಾಗಿದ್ದರು ಎಂದು ರವೀಂದ್ರ ಸಾಕ್ಷ್ಯ ನುಡಿದಿದ್ದನು. ಈ ಘಟನೆ ನಡೆದು 8 ಗಂಟೆಗಳ ನಂತರ ಸಲ್ಲುವನ್ನು ಬಂಧಿಸಲಾಯಿತು. ಆಗ ಆತನ ರಕ್ತದಲ್ಲಿ 65 ಮಿ. ಗ್ರಾಂನಷ್ಟು ಮದ್ಯದ ಅಂಶವಿತ್ತು ಎಂದು ಪೊಲೀಸರು ವರದಿಯೊಪ್ಪಿಸಿದ್ದರು. ಸಲ್ಮಾನ್ ಖಾನ್ ತಪ್ಪಿತಸ್ಥ ಎಂದು ರವೀಂದ್ರ ಪಾಟಿಲ್ ಸಾಕ್ಷ್ಯ ನುಡಿದೇ ಬಿಟ್ಟನು.
ಸಿನಿಮಾ ಅಲ್ಲ ಇದು ನೈಜ ಕತೆ 
ಬಾಲಿವುಡ್ ಸ್ಟಾರ್ ಆಗಿರುವ ಸಲ್ಮಾನ್ ಖಾನ್‌ನ್ನು ಈ ಪ್ರಕರಣದಿಂದ ಪಾರು ಮಾಡುವ ಸಲುವಾಗಿಯೇ ಆತನ ಪ್ರಕರಣದ ತೀರ್ಪುಗಳನ್ನು ಮುಂದೂಡುವ ಪ್ರಕ್ರಿಯೆ ನಡೆಯುತ್ತಲೇ ಇರುತ್ತಿತ್ತು. ಈ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿರುವ ರವೀಂದ್ರ ಪಾಟಿಲ್‌ನ ಬಾಯಿ ಮುಚ್ಚಿಸಲು ಹಲವಾರು ಪ್ರಯತ್ನಗಳೂ ನಡೆದವು. ಸಲ್ಮಾನ್ ಪ್ರಕರಣವನ್ನು ಅತ್ಯುತ್ತಮ ವಕೀಲರಿಗೆ ವಾದಿಸುವಂತೆ ವ್ಯವಸ್ಥೆ ಮಾಡಲಾಯಿತು. ಹೀಗಿರುವಾಗ ಒಂದು ದಿನ ರವೀಂದ್ರ ದಿಢೀರ್ ನಾಪತ್ತೆಯಾಗಿ ಬಿಟ್ಟ. ಆತ ನಾಪತ್ತೆಯಾಗಿದ್ದಾನೆ ಎಂದು ರವೀಂದ್ರನ ಸಹೋದರ ಪೊಲೀಸರಿಗೆ ದೂರು ಕೊಟ್ಟ.
ಪ್ರಕರಣದ ವಿಚಾರಣೆ ನಡೆಸುವ ಹೊತ್ತಿಗೆ ರವೀಂದ್ರನನ್ನು ಕರೆದರೂ ಆತ ನ್ಯಾಯಾಲಯಕ್ಕೆ ಹಾಜರಾಗಲೇ ಇಲ್ಲ. ರವೀಂದ್ರ ಎಲ್ಲಿಗೆ ಹೋಗಿದ್ದಾನೆ? ಏನಾಗಿದ್ದಾನೆ ಎಂಬುದು ಯಾರಿಗೂ ಗೊತ್ತಿರಲಿಲ್ಲ. ಅಷ್ಟೊತ್ತರಲ್ಲಿ ಗುದ್ದೋಡು ಪ್ರಕರಣದ ಎಫ್‌ಐಆರ್ ತಯಾರಿಸಿದ ಅಧಿಕಾರಿಯೇ ಪಾಟಿಲ್ ವಿರುದ್ಧ ಅರೆಸ್ಟ್ ವಾರೆಂಟ್ ಹೊರಡಿಸಿದರು.
ಪಾಟಿಲ್ ನ್ನು ಬಂಧಿಸುವುದಕ್ಕೆ ಪೊಲೀಸ್ ತಂಡವನ್ನು ನಿಯೋಜಿಸಲಾಯಿತು. ಈ ತಂಡ ಮುಂಬೈಯ ಲಾಡ್ಜ್ ಒಂದರಿಂದ ರವೀಂದ್ರನನ್ನು ಬಂಧಿಸಿತು. ರವೀಂದ್ರನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ನಂತರ ಆರ್ಥರ್ ರೋಡ್ ಜೈಲಿಗಟ್ಟಲಾಯಿತು. ಆತ ಯಾಕೆ ಕಣ್ಮರೆಯಾದ? ಎಲ್ಲಿ ಅವಿತಿದ್ದ? ಅದಕ್ಕೆ ಕಾರಣವಾದರೂ ಏನು ಎಂಬುದನ್ನು ಯಾವ ನ್ಯಾಯಾಲಯವಾಗಲೀ? ನ್ಯಾಯಾಧೀಶರಾಗಲೀ ಕೇಳಲೇ ಇಲ್ಲ.
ಯಾವುದೇ ತಪ್ಪು ಮಾಡದೇ ಇದ್ದರು ರವೀಂದ್ರ ಜೈಲಿನಲ್ಲಿ ಕಾಲ ಕಳೆಯಬೇಕಾಗಿ ಬಂತು. ನ್ಯಾಯಾಲಯದ ಮೊರೆ ಹೋದರೂ ಅಲ್ಲಿ ರವೀಂದ್ರನಿಗೆ ನ್ಯಾಯ ಸಿಗಲೇ ಇಲ್ಲ. ಅಲ್ಲಿ ಆತನಿಗೆ ಟಿಬಿ (ಕ್ಷಯ ರೋಗ) ಬಂತು. ಹಲವಾರು ತಿಂಗಳುಗಳ ನಂತರ ಆತ ಬಂಧಮುಕ್ತನಾದ.   ಜೈಲಿನಿಂದ ಬಂದ ರವೀಂದ್ರ ನನ್ನು ಸ್ವೀಕರಿಸಲು ಆತನ ಕುಟುಂಬವೂ ಒಪ್ಪಲಿಲ್ಲ. ಹತ್ತಿರವಿದ್ದವರೆಲ್ಲಾ ದೂರವಾಗಿದ್ದರು. ಅಷ್ಟೊತ್ತಿಗೆ ಅವನ ಕೆಲಸವೂ ಹೋಗಿತ್ತು.
ಎಲ್ಲರಿಂದ ನಿರ್ಲಕ್ಷ್ಯಕ್ಕೊಳಗಾದ ರವೀಂದ್ರ ಮತ್ತೆ ನಾಪತ್ತೆಯಾದ. 2007ರಲ್ಲಿ ಮುಂಬೈಯ ಒಂದು ರಸ್ತೆ ಬದಿಯಲ್ಲಿ ಭಿಕ್ಷೆ ಬೇಡುತ್ತಿರುವ ರವೀಂದ್ರನನ್ನು ಆತನ ಗೆಳೆಯನೊಬ್ಬ ಗುರುತುಹಿಡಿದ. ರವೀಂದ್ರನನ್ನು ಆತ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ. ಆಸ್ಪತ್ರೆಗೆ ದಾಖಲಿಸಿದಾಗ ರವೀಂದ್ರನ ದೇಹದಲ್ಲಿ ಬರೀ ಮೂಳೆಗಳಷ್ಟೇ ಎದ್ದು ಕಾಣುತ್ತಿದ್ದವು. ನಿರ್ಗತಿಕನಾದ ರವೀಂದ್ರ ಕ್ಷಯರೋಗದಿಂದ ರಕ್ತ ಕಾರಿ 2007 ಅಕ್ಟೋಬರ್ 4 ರಂದು ಇಹಲೋಕ ತ್ಯಜಿಸಿದ.
ಮರಣ ಹೊಂದುವುದಕ್ಕಿಂತ ಒಂದು ವಾರದ ಮುನ್ನ ರವೀಂದ್ರ ಆತನ ಗೆಳೆಯನಲ್ಲಿ ಹೀಗೆ ಹೇಳಿದ್ದ..'ನಾನು ನನ್ನ ನಿಲುವಿಗೆ ಬದ್ಧವಾಗಿದ್ದೆ. ಆದರೆ ನನ್ನ ಇಲಾಖೆ ನನ್ನ ಸಾಥ್ ನೀಡಲಿಲ್ಲ.  ನನಗೆ ನನ್ನ ಕೆಲಸ ಬೇಕು. ನನಗೆ ಬೇಕು'. ಆದರೆ ರವೀಂದ್ರನ ಈ ಗದ್ಗದಿತ ದನಿ ಯಾರಿಗೂ ಕೇಳಲೇ ಇಲ್ಲ.
ಕೊಲ್ಲಬಹುದು ಆದರೆ ಸೋಲಿಸಲು ಸಾಧ್ಯವಿಲ್ಲ
ಇದೊಂದು ವಿಪ್ಲವಕಾರಿಯ ಮಾತುಗಳಾಗಿದ್ದರೂ, ರವೀಂದ್ರ ಪಾಟಿಲ್ ಎಂಬ ಪೊಲೀಸ್‌ನ ಕಥೆ ನಮ್ಮನ್ನು ಕಣ್ಣೀರಾಗುವಂತೆ ಮಾಡುತ್ತದೆ. ಸಿನಿಮಾದ ಹೀರೋ ಆಗಿ ಮೆರೆದವನನ್ನು ವಿಲನ್ ಆಗಿ ನೋಡಲು ಕಷ್ಟವಾಗುತ್ತದೆ ನಿಜ. ಆದರೆ ಬಾಡಿಗಾರ್ಡ್ ಸಿನಿಮಾದಲ್ಲಿ ದಕ್ಷತೆ ಮೆರೆಯುವ ಪಾತ್ರ ನಿರ್ವಹಿಸಿದ ಸಲ್ಮಾನ್ ಖಾನ್‌ನ ನಿಜ ಜೀವನದ ಬಾಡಿಗಾರ್ಡ್‌ನ ಕಥೆ ಯಾರಿಗೂ ಬೇಕಾಗಿಲ್ಲ.
ರವೀಂದ್ರ ಪಾಟಿಲ್ ಈಗ ನಮ್ಮೊಂದಿಗೆ ಇಲ್ಲ. ಇತ್ತ ಸಲ್ಮಾನ್ ಖಾನ್ ಗುದ್ದೋಡು ಪ್ರಕರಣದ ತೀರ್ಪು ಬಗ್ಗೆ ನಿಟ್ಟುಸಿರು ಬಿಡುವಾಗ, ರವೀಂದ್ರ ಪಾಟಿಲ್‌ನ ದಾರುಣ ಅಂತ್ಯ ಕಾಡದೇ ಇರುವುದಿಲ್ಲ.
ಭಾಯಿಜಾನ್...ನೀವೊಬ್ಬ ಸಿನಿಮಾ ಹೀರೋ ಅಷ್ಟೇ. ರಿಯಲ್ ಲೈಫ್ ನಲ್ಲಿ ನೀವು ವಿಲನ್ ಎಂದು ರವೀಂದ್ರ ಪಾಟಿಲ್ ಆತ್ಮ ಹೇಳುತ್ತಿರಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com