ಪೆಕರುಗಳ ಪಾಕೇಟ್ ಸ್ಟೋರಿ

ಪೆಕರುಗಳ ಪಾಕೇಟ್ ಸ್ಟೋರಿ

'ಇಂಥಾ ಬಟ್ಟೆಯನ್ನು ನಾವು ನಮ್ಮ ಕೆಲಸದವಳಿಗೆ ಕೊಡಿಸ್ತೀವಿ' ಎಂದು ನೀವು ಧರಿಸಿದ್ದ ಬಟ್ಟೆಯನ್ನು ಅಸಹ್ಯವಾಗಿ ನೋಡಿದವರಿದ್ದಾರೆ, ಅಲ್ಲವೇ?
'ಇನ್ನೂ ಈ ಮೂರು ಸಾವಿರ ರುಪಾಯಿ ಮೊಬೈಲಲ್ಲೇ ಇದ್ದೀಯಾ...!?' ಎಂದು ತಮ್ಮ 'ಸ್ಯಾಮ್‌'ಸಂಘದಿಂದ ನಿಮ್ಮನ್ನು ಉಚ್ಛಾಟಿಸಿದವರಿದ್ದಾರೆ, ಹೌದು ತಾನೇ?
ನಮ್ಮ ಪ್ರತಿಷ್ಠೆಗಾಗಿ ನಾವು 'ಬ್ರ್ಯಾಂಡ್‌'ನ ಬಲೆಯಲ್ಲಿ ಬಿದ್ದಿದ್ದೇವೆ. ಯಾವುದೋ ವಸ್ತು ಕೊಳ್ಳುವಾಗಲೂ ತಲೆಯೊಳಗೆ ಬ್ರ್ಯಾಂಡ್ ನೇಯ್ದ ಬಲೆ ಇದೆ. ಅದರ ಬೆಲೆ ಬೇರೆಯವರ ಮುಂದೆ ಹೇಳಿಕೊಳ್ಳಲಿಕ್ಕಾದರೂ ನೆನಪಿಟ್ಟುಕೊಳ್ಳಬೇಕಿದೆ! ಷರ್ಟಿಗೆ ಐದು ಸಾವಿರ, ಬೆಲ್ಟು 4000, ಮೊಬೈಲ್ 50 ಸಾವಿರ!!!
ಇದೆಲ್ಲವುದೂ ಪೆಕರು ಅನ್ನಿಸುವುದಿಲ್ಲವೇ?

ಆ ಲೇಡಿ ಡಾಕ್ಟರ್ ತನ್ನ ಆರು ವರ್ಷದ ಮಗನನ್ನು ಬೈಯುತ್ತಿದ್ದುದನ್ನು ಕೇಳಿಸಿಕೊಂಡು ದಂಗಾದೆ.
'ನಾಲ್ಕು ಸಾವಿರ ಕೊಟ್ಟು ತಗೊಂಡಿರೋ ಹಷ್ ಪಪ್ಪೀಸ್ ಇದು, ಗಲೀಜು ಮಾಡ್ಕೊಂಡು ಬಂದಿದೀಯಾ!'.
ಡಾಕ್ಟರ್ ಮಗ ಮಾಡಿದ ತಪ್ಪೇನೆಂದರೆ ಹಷ್ ಪಪ್ಪೀಸ್ ಎಂಬ ಬ್ರ್ಯಾಂಡೆಡ್ ಶೂಸನ್ನು ಆಟವಾಡುವಾಗ ಮಣ್ಣು ಮಾಡಿಕೊಂಡಿದ್ದು!
ಜಗತ್ತು ಈಗ ಬ್ರ್ಯಾಂ'ಡೆಡ್‌' ಆಗುತ್ತಾ ಬಂದಿದೆಯಲ್ಲ ಎಂದು ಅರೆಕ್ಷಣ ಅನ್ನಿಸಿತು.
=

ತೀರಾ ಇತ್ತೀಚೆಗೆ, ಹಳೇ ಗೆಳತಿಯರೆಲ್ಲಾ ಒಂದು ಕಡೆ ಸೇರಿ ನಮ್ಮದೇ ಶೈಲಿಯಲ್ಲಿ ಮಜಾ ಮಾಡಬೇಕು ಅಂತ ತೀರ್ಮಾನಿಸಿದ್ವಿ. ಹಾಗೇ ಎಲ್ಲರೂ ಸೇರಿದ್ರು ಕೂಡ. ತುಂಬಾ ವರ್ಷಗಳ ನಂತರ ಸಿಕ್ಕಿದ ಖುಷಿಯಲ್ಲಿ ಜಾಸ್ತಿಯೇ ಮಾತು. ತಮಾಷೆ, ಹರಟೆ, ಕಾಲೆಳೆಯೋದು ನಡೀತಿತ್ತು. ಹೆಣ್ಣುಮಕ್ಕಳೆಂದ ಮೇಲೆ ಒಡವೆ, ಬಟ್ಟೆ, ಊಟ, ಶಾಪಿಂಗು ಇಂತಹದ್ದು ತೀರಾ ಮೆಚ್ಚಿನ ಸಂಗತಿ, ಜೊತೆಗೆ ಸಂಗಾತಿ.
ಆಗ ಗೆಳತಿಯೊಬ್ಬಳು ನಾನು ಧರಿಸಿದ್ದ ಬೆಂಡೋಲೆ ಕಡೆ ಕಣ್ಣು ಹಾಯಿಸಿದಳು, ಅವಳ ಕಣ್ಣಿನ ಹೊಳಪೇ ಸಾಕಿತ್ತು ಅವಳಿಗದು ಇಷ್ಟವಾಗಿದೆ ಅನ್ನೋದಕ್ಕೆ. 'ಎಷ್ಟಾಯ್ತೇ...ಎಲ್ಲಿ ಸಿಕ್ಕುತ್ತೆ ಇದು?' ಎಂದವಳಿಗೆ ನಾನು 300 ರೂಪಾಯಿ ಅಂದೆ. ಇದ್ದಕ್ಕಿದ್ದಂತೆ ಅವಳ ಮುಖ ಕಪ್ಪಿಟ್ಟಿತು. ಅದು ಚಿನ್ನದ ರತ್ನಾಭರಣ ಅಲ್ಲ ಎಂದು ಗೊತ್ತಾಗಿದ್ದೇ ಅವಳ ಮುಖದ ಮೇಲಿನ ಗೆರೆಗಳಲ್ಲಿ ಒಂದು ಬಗೆಯ ಜಿಗುಪ್ಸೆ, ಸಿಟ್ಟು, ಅಸಹನೆ ಎಲ್ಲವೂ ಆವರಿಸಿತು. ಅದು ಮಾತಿನಲ್ಲೂ ವ್ಯಕ್ತವಾದಾಗ ಗರಬಡಿದು ಹೋದೆ. 'ಬ್ರ್ಯಾಂಡೆಡ್ ಅಲ್ಲದ ಯಾವುದನ್ನೂ ನಾನು ಕೊಳ್ಳೋದೇ ಇಲ್ಲ!'
....ಅಲ್ಲಿದ್ದ ಗೆಳತಿಯರಲ್ಲೇ ಎರಡು ಗುಂಪುಗಳಿದ್ದವು. ದುಡ್ಡು, ಬ್ರ್ಯಾಂಡು, ಅಂತಸ್ತು ಹಾಳು ಮೂಳು ಅಂತ ತಲೆಕೆಡಿಸ್ಕೊಳ್ದೆ, 'ಬೇಕಿದೆ' ಅನ್ಸಿದ್ರೆ ತೊಗೋಬೇಕು ಅನ್ನೋ ಪಕ್ಷ. ಮತ್ತೆ ಕೆಲವರು, ಏನೇ ತೊಗೊಂಡ್ರು ಅದನ್ನು ನಮ್ಮ ಸುತ್ತಲಿರುವವರು ಕಣ್ಣೆತ್ತಿ ನೋಡಬೇಕು. ಒಳಗೊಳಗೆ ಕರುಬಬೇಕು. ಒಂದು ಸಲಕ್ಕಿಂತ, ಮತ್ತೊಂದು ಸಲ ತೊಗೊಳ್ಳೋದು ಬೆಲೆ, ಬ್ರ್ಯಾಂಡ್, ಹೆಸರು ಇತ್ಯಾದಿಯಲ್ಲಿ ಮುಂದಿರಬೇಕು ಅನ್ನುವ ವಿಶ್ವಾಸದವರು.
ಆದರೆ ಆ ಗುಂಪಿನಲ್ಲಿ 'ಬ್ರ್ಯಾಂಡೆಡ್‌'ನ ಬ್ಯಾಂಡೇ ಜೋರಾಗಿದೆ ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸಿದೆ.
=
ಬ್ರ್ಯಾಂಡ್‌ನ ಜೇಡರ ಬಲೆಯಲ್ಲಿ
ಪೆಕರುಗಳು ನಮಗೆ ಒಪ್ಪಿಗೆಯಾಗದಿದ್ದರೂ ಒಂದು ಒಪ್ಪಿಕೊಳ್ಳಬೇಕಾದ ಸತ್ಯವೊಂದಿದೆ. ನಮ್ಮ ಪ್ರತಿಷ್ಠೆಗಾಗಿ ನಾವು 'ಬ್ರ್ಯಾಂಡ್‌'ನ ಬಲೆಯಲ್ಲಿ ಬಿದ್ದಿದ್ದೇವೆ. ಯಾವುದೋ ವಸ್ತು ಕೊಳ್ಳುವಾಗಲೂ ತಲೆಯೊಳಗೆ ಬ್ರ್ಯಾಂಡ್ ನೇಯ್ದ ಬಲೆ ಇದೆ. ಅದರ ಬೆಲೆ ಬೇರೆಯವರ ಮುಂದೆ ಹೇಳಿಕೊಳ್ಳಲಿಕ್ಕಾದರೂ ನೆನಪಿಟ್ಟುಕೊಳ್ಳಬೇಕಿದೆ! ಷರ್ಟಿಗೆ ಐದು ಸಾವಿರ, ಬೆಲ್ಟು 4000, ಮೊಬೈಲ್ 50 ಸಾವಿರ!!!
ಇದೆಲ್ಲವುದೂ ಪೆಕರು ಅನ್ನಿಸುವುದಿಲ್ಲವೇ? ಈ ಪೆಕರು ಅನ್ನೋದರ ಅರ್ಥವನ್ನ - ಇದು ಹೀಗೆ- ಎಂದು ವಿವರಿಸಲಾಗುವುದಿಲ್ಲ. ಆದರೆ ನಮ್ಮ ಜೀವನದಲ್ಲಿ ಇಂಥ ಪೆಕರುಗಳನ್ನು ನಾವು ನೋಡುತ್ತಲೇ ಇರ್ತೇವೆ. ಈ ಪೆಕರುಗಳಿಗೆ ಇನ್ನೊಬ್ಬರಿಗಿಂತ ತಮ್ಮ ಬಳಿ ಅತಿಯಾದ ಸಂಪತ್ತಿದೆ ಎಂಬ ಕಾರಣಕ್ಕೋ, ತಮ್ಮ ಜಾತಿಯ ಕಾರಣಕ್ಕೋ, ತಾವು ಬೆಳೆದುಬಂದ ಸ್ಥಿತಿಯಿಂದಲೋ ಇನ್ನೊಬ್ಬರನ್ನು ಕೀಳಾಗಿ ನೋಡುವ, ತಾವು ಅತಿ 'ಸುಪೀರಿಯರ್‌' ಎಂದುಕೊಳ್ಳುವ ಮನೋಭಾವ ಬೆಳೆದು ಬಂದಿರುತ್ತದೆ. ಈ ಜನರಲ್ಲಿ ಯಾರೋ 'ರೆಡಿ' ಮಾಡಿಟ್ಟ 'ರಾಡಿ'ಯ ಮೇಲೆ ತಮ್ಮ ಪ್ರತಿಷ್ಠೆಯ ಗಾಡಿ ಓಡಿಸುವ ಬುದ್ಧಿ ಇರುತ್ತೆ.
ಈ ಪೆಕರುಗಳು ಸೊಫೆಸ್ಟಿಕೇಟೆಡ್ ಎಂದು ಎಲ್ಲರೂ ಗುರುತಿಸಿಕೊಳ್ಳುವ ಜನರ ಮಧ್ಯೆಯೇ ಇರಲು ಬಯಸುತ್ತಾರೆ. ಜೊತೆಗೆ ಬೇರೆಯವರನ್ನು ಕೀಳಾಗಿ ನೋಡುವ 'ದೊಡ್ಡ ಗುಣ' ಇರುತ್ತೆ. ಯಾವುದೋ ಒಂದು ವಸ್ತುವಿನ ಬಗ್ಗೆ ಆದ್ಯತೆ ಇದ್ದಲ್ಲಿ ಅದು ಪೆಕರುತನವಲ್ಲ, ಆದರೆ ಆ ವಸ್ತು ತಮ್ಮ ಬಳಿ ಇದೆ ಎಂಬ ಕಾರಣಕ್ಕೆ ಅಹಂಕಾರ ಬೆಳೆದರೆ ಅದು ಪೆಕರುತನ!
ಆದರೆ ಇದರ ಉಗಮ ಎಲ್ಲಾಯ್ತು? ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಅಂಬಲಿ ಕುಡಿಯುತ್ತಿದ್ದ, ಕಂಬಳಿ ಹೊದೆಯುತ್ತಿದ್ದ ಮಂದಿ, ಪಿಜ್ಜಾ ತಿಂದು ಪಾಲಿ'ಯೆಸ್ಟರ್‌'ಗೆ ಬದಲಾದಾಗಲೇ? ಇದು ನಿನ್ನೆಮೊನ್ನೆ ಆದದ್ದಲ್ಲ, ಆದರೆ ಈಗ ಅತಿಯೆನ್ನಿಸುವಷ್ಟು ಮಾಮೂಲಾಗಿದೆ. ನಮ್ಮ ಜೀವನದಲ್ಲಿ ಕೊಳ್ಳುಬಾಕತನ ಹೆಚ್ಚಾಗಿ ಜೀವನವನ್ನು ನುಂಗಲಾರಂಭಿಸಿದೆ. ನಾವು 'ವಸ್ತು'ಗಳ ಸಮುದ್ರದಲ್ಲಿ ಮುಳುಗಿಹೋಗಿದ್ದೇವೆ. ಒಂದೇ ವಸ್ತುವಿನ ಹಲವು ರೂಪಗಳು ಮಾರುಕಟ್ಟೆ ತಲುಪುತ್ತಿವೆ. ಬೆಲೆ ಮತ್ತು ಅಲ್ಪಸ್ವಲ್ಪ ಗುಣಮಟ್ಟದಲ್ಲಿ ವ್ಯತ್ಯಾಸ ಬಿಟ್ಟರೆ ಎಲ್ಲಾ ಉತ್ಪನ್ನಗಳಲ್ಲೂ ಅಂಥ ದೊಡ್ಡ ವ್ಯತ್ಯಾಸ ಇರುವುದಿಲ್ಲ. ಆದರೆ ಅದನ್ನು ಉತ್ಪಾದಿಸಿದವ ಮಾರಲೇಬೇಕಲ್ಲವೇ?
ಆಗ ನಮ್ಮ ಮೂಲಭೂತ ಕೀಳರಿಮೆಯನ್ನು ಗಮನದಲ್ಲಿಟ್ಟುಕೊಂಡು ಜಾಹೀರಾತುಗಳು ಸೃಷ್ಟಿಯಾಗುತ್ತವೆ. 'ಬೆಸ್ಟ್ ಮಂದಿ' ಉಪಯೋಗಿಸುವ 'ಬೆಸ್ಟ್ ಉತ್ಪನ್ನ' ನಮ್ಮ ತಲೆಯೊಳಗೆ ಹೊಕ್ಕು, 'ಶ್ರೇಷ್ಠ'ರು ಕೊಂಡುಕೊಳ್ಳುವ 'ಕೂಲ್‌' ಎಂಬಂಥಹ ವಸ್ತುಗಳ ಗುಲಾಮರಾಗುತ್ತೇವೆ. ಯಾರ ಬಳಿ ಆ ವಸ್ತು ಇಲ್ಲವೋ, ಅವರನ್ನು ಕೀಳಾಗಿ ನೋಡುವ ಅಭ್ಯಾಸ ಮಾಡಿಕೊಳ್ಳುತ್ತೇವೆ. ಆಗಲೇ ನಾವು ಪೆಕರು ಆಗೋದು!
ಪೆಕರುಗಳಿಗೆ ತೆರೆದ ಮನಸ್ಸಿರದು, ಅದೇ ಕಾರಣಕ್ಕೆ ಜೀವನ ಕೊಡುವ ಎಲ್ಲ ಸವಿಯನ್ನು ಆತ ಜೀವನ ಸವೆದರೂ ಸವಿಯೋಲ್ಲ! ಪ್ರತಿಯೊಂದು ಜಾತಿ, ಧರ್ಮಗಳಲ್ಲಿ ತಮ್ಮ ಜಾತಿಯೇ ಶ್ರೇಷ್ಠ ಎಂದುಕೊಂಡವರು ಇರುತ್ತಾರೆ. ತಾವು ತುಂಬಾ ಸಂಪ್ರದಾಯಸ್ಥರೆಂದು ಹೇಳಿಕೊಳ್ಳುತ್ತಲೇ ಇತರರನ್ನು ಕೀಳಾಗಿ ನೋಡುತ್ತ, ದೇವರ ಅತಿ ಹತ್ತಿರದ ಬಂಧು ಎಂಬಂತೆ ಪೋಸು ಕೊಡುತ್ತಾರೆ. ಎಂಥಾ ವಿಚಿತ್ರ ಇರುತ್ತಾರೆಂದರೆ, ದೇವರಿಗೆ ಅರ್ಚನೆ ಮಾಡುವ ಮುನ್ನ ತೆಂಗಿನಕಾಯಿಯನ್ನೂ ನೀರಿನಲ್ಲಿ ತೊಳೆಯುತ್ತಾರೆ.
ಏಕೆ ಹೀಗಾಯ್ತೋ ನಾನು ಕಾಣೆನು
ಯೋಚಿಸಿ ನೋಡಿ...
ಮದುವೆ ಮನೆ, ಬೇರೆಯವರು ಕೊಡಿಸಿದ ಸಣ್ಣ ಪಾರ್ಟಿ, ನಮ್ಮ ಮನೆಯಲ್ಲೇ ಮಾಡಿದ ಊಟ ಇಂತಹುದರಲ್ಲಿ ನಾವು ಸಾವಿರ ಹುಳುಕು ಹುಡುಕಿ ಹೆಸರಿಡುತ್ತೇವೆ. ಆದರೆ ನಾವೇ ಬಯಸಿ ಬಯಸಿ ಹೋದ ಶ್ರೀಮಂತ ಹೋಟೆಲಿನ ಊಟ ಅಷ್ಟೇನೂ ರುಚಿಯೆನಿಸದಿದ್ದರೂ ನೀಡಿರುವ ಬೆಲೆ, ಇರುವ ಬ್ರ್ಯಾಂಡ್ ಎಂಬ ಮಾಯೆಗೆ ಹೆದರಿಯೋ, ನಮ್ಮನ್ನೇ ಸಂತೈಸಿಕೊಳ್ಳಲೆಂದೋ ಮತ್ತೆ ಮತ್ತೆ ಜೊತೆಯವರನ್ನು 'ಚೆನ್ನಾಗಿದೆಯಲ್ವಾ?' ಅಂತ ಕೇಳುತ್ತಾ ಅರ್ಧ ನಿರಾಸೆ, ಮತ್ತರ್ಧ ವಿಚಿತ್ರ ಗರ್ವದಲ್ಲಿ ಎದ್ದು ಬಂದಿರುತ್ತೇವೆ. ಸಣ್ಣದರಲ್ಲಿ ಸಿಗುತ್ತಿದ್ದ.... ಕೆಲವೇ ಕೆಲವು ಐಸ್‌ಕ್ರೀಮ್‌ಗಳಲ್ಲೇ, ಬ್ರಹ್ಮಾಂಡ ಸಂತೋಷ ಅನುಭವಿಸಿದ್ದ ನಮಗೆ, ಈಗ ಇರುವ ವೈವಿಧ್ಯ, ಆಮಿಷ ಮತ್ತು ಅಸ್ತಿತ್ವದಲ್ಲಿ ಆಯ್ಕೆಯೇ ಭಯ ಹುಟ್ಟಿಸಿ, ಎಲ್ಲಿ ಈ ಸಾವಿರ ಬಗೆಯಲ್ಲಿ ನನ್ನ ರುಚಿ ಅಪಹಾಸ್ಯಕ್ಕೆ ಈಡಾಗುವುದೋ ಎಂಬ ಆತಂಕ ಮತ್ತು ಸಿದ್ಧ ಮಾದರಿಯೊಂದನ್ನು ಒಪ್ಪಿದಂತೆ ನಟಿಸಿಬಿಟ್ಟರೆ ಸಿಗಬಹುದಾದ ಬಿಡುಗಡೆ ಮುಖ್ಯವಾಗಿದೆ ಹೊರತು ತಣ್ಣಗಿನ ಆಸ್ವಾದ ಅಥವಾ ರುಚಿಯಲ್ಲ. ಮತ್ತೆ ಕೆಲವರದು 'ಆರೋಗ್ಯಪೂರ್ಣ, ಸ್ವಾದಿಷ್ಟ, ಪರಿಸರ ಸ್ನೇಹಿ'  ಆಹಾರದ ಅತಿ ಡಾಂಭಿಕತೆಯಾದರೆ, ಕೆಲವರಿಗೆ 'ನಾವು ಆರ್ಗ್ಯಾನಿಕ್ ಫುಡ್ ಅಷ್ಟೇ ತಿನ್ನೋದು' ಎಂಬ 'ಷೋ' ತುಂಬಾ ಇಷ್ಟ. ಕೆಲವರದು ಚೈನೀಸ್, ಮೆಕ್ಸಿಕನ್, ಇಟಾಲಿಯನ್ ಆಹಾರ ಪದ್ಧತಿಯನ್ನು ಅರೆದು ಕುಡಿದ ಅಮಲು. ಇನ್ನೂ ಹಲವರಿದ್ದಾರೆ. ಅವರಿಗೆ ಅಡುಗೆ ಮಾಡೋದು ನಮ್ಮ ಕೆಲಸವಲ್ಲ ಎನ್ನುವ ಹಮ್ಮು. ಹೊತ್ತಿನ ಊಟ ಆಗಷ್ಟೇ ಕುದಿದು, ಬಿಸಿ ಬಿಸಿ ಇರಬೇಕು ಎನ್ನುವ 'ಹಾಠ್‌'ಮಾರಿಗಳೂ ಇದ್ದಾರೆ. ರುಚಿ ನಮ್ಮ ಇಷ್ಟ ಎನ್ನುವುದು ಸರಿಯಾದರೂ, ಡಂಭಾಚಾರವಂತೂ ಸಹಿಸಲು ಅಸಾಧ್ಯಸಿಕ್ಕಾ'ಬಟ್ಟೆ' ಇಷ್ಟಾಪಟ್ಟೆ!!!
ಬಟ್ಟೆಯ ವಿಚಾರಕ್ಕೆ ಬಾನು ಕೂಡ ಎಲ್ಲೆಯಾಗದು. ಫುಟ್‌ಪಾತಿನ ಮೇಲೆ ಮಾಮೂಲು ಮಳಿಗೆಗಳಲ್ಲಿ ಸಿಗುವ ವೈವಿಧ್ಯ ರಂಗಿನ ಬಗೆಬಗೆ ಚಿತ್ತಾರ ಅಗತ್ಯಗಳನ್ನು ಅಂದಾಜನ್ನು ಸರಿದೂಗಿಸುವ ರೀತಿ ನಮ್ಮಂತಹವರಿಗೆ ಪ್ರಿಯವಿರಬಹುದು. ಆದರೆ, ಬ್ರ್ಯಾಂಡೆಡ್ ಬಟ್ಟೆ ಧರಿಸಿದರೆ ಮಾತ್ರ ಮನುಷ್ಯರು. ನಾಗರೀಕರು ಸಭ್ಯರು ಉನ್ನತ ಸ್ಥಾನದ ಮೊಹರು ಒತ್ತಿಸಿಕೊಂಡವರು ಎನ್ನುವವರು ಬಹಳಷ್ಟು ಮಂದಿಯಿದ್ದಾರೆ! ನಿಮ್ಮ ಬಟ್ಟೆಯ ಅಂದ-ಚೆಂದ, ಅದು ಕೊಡುವ ಕ್ಷೇಮ ಭಾವಕ್ಕಿಂತ ಅವರಿಗೆ ಬೆಲೆ ಮತ್ತು ಬ್ರ್ಯಾಂಡ್ ಗ್ರಹಿಕೆಯ ವಸ್ತು. ನೀವು ಅದನ್ನು ಯಾವುದೇ, ಮಾಲ್‌ಗಳಲ್ಲಿ ಸಿಗುವ ಡಿಸೈನರ್-ವೇರ್‌ಗಳ ಮುಂದೆ ಇಟ್ಟರೂ ಸಮದೂಗುತ್ತದೆ ಎನ್ನಬಹುದು. ಆದರೆ, ಬ್ರ್ಯಾಂಡೆಡ್ ಅಲ್ಲ ಎನ್ನುವ ಒಂದೇ ಕಾರಣಕ್ಕೆ ನಿಮ್ಮದು ಕಳಪೆಯೆನಿಸಬಹುದು. ಅದಕ್ಕಾಗಿ ನಾವೇನೂ ಹೆದರಬೇಕಿಲ್ಲ. ನಿಜವಾದ ಖುಷಿ ನಮ್ಮ ಅಭಿರುಚಿ ಆಗಿರುವ ತನಕ ನಾವೇ ರಾಜರು. ನಮಗಾಗಿ ಕೊಳ್ಳುವಾಗ, ಕೊಂಡಿದ್ದೆಲ್ಲಾ ಕನಕ. ಅವರಿವರ ಮೆಚ್ಚಿಸಲು, ಹಿರಿಮೆ ಮೆರೆಸಲು ಕೊಂಡಿದ್ದು, ಕರುಬುವ ತನಕ.
ಅಯ್ಯೋ ಊಟ-ಬಟ್ಟೆಯಾದರೂ ಸ್ವಲ್ಪ ವಾಸಿ, ಹಾಕುವ ಚಪ್ಪಲಿ, ಶೂಗಳಿಗೂ ಬ್ರ್ಯಾಂಡ್‌ನ ಭೂತ ಹಿಡಿದುಬಿಟ್ಟಿದೆ. ಮೊದಮೊದಲು ಪಾದಕ್ಕೆ ರಕ್ಷೆ ಎಂದು ಧರಿಸುತ್ತಿದ್ದವೆಲ್ಲಾ ಈಗ ನಿಮ್ಮ ವ್ಯಕ್ತಿತ್ವ, ಅಂತಸ್ತು ಮತ್ತು ಪ್ರತಿಷ್ಠೆಯ ಸಂಕೇತ ಮತ್ತು ಮಾನದಂಡವಾಗಿದೆ. ಡ್ರೆಸ್‌ಗೆ ಸರಿಹೊಂದುವ ಪಾದರಕ್ಷೆ ಅಂತ ಆಯ್ಕೆ ಹಲವಿಟ್ಟುಕೊಳ್ಳಬಹುದು. ಆದರೆ, ಒಂದೊಂದು ಕೂಡ ಸಾವಿರಾರು ರೂಗಳಷ್ಟು ಬೆಲೆಯುಳ್ಳದ್ದಾಗಿರಬೇಕು ಎನ್ನುವುದು ಬುದ್ಧಿ ಇರುವವರು ಒಪ್ಪುವ ಮಾತಲ್ಲ. ಅಂತಹ ಹತ್ತು ಜೊತೆ ಪಾದರಕ್ಷೆಯನ್ನು ಅಂಬಾರಿಯಲ್ಲಿಟ್ಟು ಮೆರವಣಿಗೆ ಮಾಡಲಾಗುತ್ತದೆಯೇ? ಬ್ರ್ಯಾಂಡ್ ಪ್ರಿಯರು ಅಂತಹ ಅತಿರೇಕಕ್ಕೆ ಹೋಗುತ್ತಾರೆ. ಅಂತೂ ತಾವು ಕೊಂಡದ್ದು ಸಾರ್ಥಕ ಮಾಡಿಕೊಳ್ಳಬೇಕೆಂದು ಎಲ್ಲರ ಮುಂದೆಯೂ ಬ್ರ್ಯಾಂಡೆಡ್ ವಸ್ತುಗಳನ್ನು ಬಿಸಾಡಿದ್ದರ ಬಗ್ಗೆ, ದಾನ ಮಾಡಿಬಿಟ್ಟ(?) ಬಗ್ಗೆ ಕೊಳೆಯಾದ ಕಾರಣಕ್ಕೆ ಕೆಲಸದವರಿಗೆ ದಯಪಾಲಿಸಿದ ಬಗ್ಗೆ ಅವರಿವರು ಅಚ್ಚರಿಗೊಂಡ ಬಗ್ಗೆ ಗಂಟೆಗಟ್ಟಲೆ ಕೊರೆಯಬಲ್ಲರು. ಬೋರು ಹೊಡೆದರೂ ನಿಂತು ಕೇಳುವವರು ಆಕಳಿಸುತ್ತಾ ಇಲ್ಲದ ನಗು ನಟಿಸುತ್ತಾ ನಿಲ್ಲಬಹುದು.
ಐಲು ಐಲು ಕೈಗೆ ಮೊಬೈಲು!
ಕೆಲವರು ಗ್ಯಾಜೆಟ್ ಗುರುಗಳೆಂದು ಕರೆಯಿಸಿಕೊಳ್ಳುವ ಪೆಕರುಗಳು. ಪಿಕ್ಸೆಲ್, ಮೆಗಾ ಪಿಕ್ಸೆಲ್‌ಗಳ ದುಬಾರಿ ಮೊಬೈಲ್‌ಗಳನ್ನು ತಾವು ಕೊಂಡಿದ್ದರ ಬಗ್ಗೆ ಕೊರೆಯುತ್ತಾ ಕೂರುತ್ತಾರೆ. ಅವರ ಭಾಷಣ ಮುಗಿಯುವಷ್ಟರಲ್ಲಿ ಆ ಮೊಬೈಲ್ ಕೂಡಾ ಹಳತಾಗಿರುತ್ತದೆ, ಮೂಲೆಗೆ ಬೀಳುತ್ತದೆ, ಮತ್ತೊಂದು ಏಳುತ್ತದೆ!
ಮತ್ತೊಂದು ಶೋಕಿ ವಾಹನಗಳ ಕುರಿತು! ಮನೆಯ ಸರ್ವ ಸದಸ್ಯರಿಗೂ ಒಂದೊಂದು ಪ್ರತಿಷ್ಠಿತ ಕಾರು ಇರಲೇಬೇಕು ಎಂದು ಬಡಬಡಿಸುವ ಮಹನೀಯರಿದ್ದಾರೆ. ತಮ್ಮ ಮಕ್ಕಳಿಗೆ ಬಸ್ಸು, ಆಟೋ ಇವುಗಳಲ್ಲಿ ಪ್ರಯಾಣಿಸಿಯೇ ಗೊತ್ತಿಲ್ಲ ಎಂದು ಬೀಗುತ್ತಾರೆ, ಶಾಲೆವಾಹನದ 'ಶೆಕೆ'ಯೇ ಗೊತ್ತಿಲ್ಲದವರು. ಯಾವತ್ತೋ ಒಂದು ದಿನ ಹೋಗುವ ಪ್ರವಾಸಕ್ಕೆ, ಜನ ಜಾಸ್ತಿ ಇದ್ದಾಗ ಅತೀ ದೊಡ್ಡ ಕಾರು ಇದ್ದರೆ ಚೆಂದ ಎಂದು ಹಲುಬುವರಿದ್ದಾರೆ. ಆದರೆ ಗಮನಿಸಿ. ನಮ್ಮ ಪ್ರಯಾಣ, ಪ್ರವಾಸ ಅದೇನೇ ಇರಲಿ. ಪ್ರಯಾಸ ಕಮ್ಮಿಯಾಗಲೆಂದು ವಾಹನ ಬೇಕೇ ಹೊರತು, ವಾಹನದ ಕ್ಷೇಮ ನೋಡಿಕೊಳ್ಳುವುದೇ ಪ್ರಮುಖವಾದಾಗ ನಾವು ಎಲ್ಲಿಯವರು?
ಫೇಸ್‌ಬುಕ್‌ನಲ್ಲಿ ಲೈಕಿಗಾಗಿ ಕಾಯುತ್ತ
ನಾವು ಹೋಗುವ ಸ್ಥಳಗಳಿಗೂ ಈಗ ಅದರದೇ ತಾರಾಮೌಲ್ಯ ಬಂದಿದೆ. ಚಿಕ್ಕಂದಿನಲ್ಲಿ ಅಜ್ಜಿ ಮನೆ ಎಂದು ಹಳ್ಳಿಗಳಿಗೆ, ಬೆಟ್ಟಗುಡ್ಡದ ಮಡಿಲಲ್ಲಿರುವ ತವರೂರಿಗೆ, ನದಿ, ಹಳೆ ದೇವಸ್ಥಾನ, ದೊಡ್ಡ ಬಯಲು, ಸಿನಿಮಾ ಟೆಂಟು ಇರುವ ಊರಿಗೆ ಹೋದ ಗೆಳೆಯರನ್ನು ಅಭಿಮಾನದಿಂದ ಕಥೆ ಹೇಳುವಂತೆ ಪೀಡಿಸುತ್ತಿದ್ದ ನೆನಪಿದೆ. ಯಾಕಾದರೂ ನಮ್ಮ ತಂದೆ-ತಾಯಿ ಪಟ್ಟಣಗಳಲ್ಲೇ ಹುಟ್ಟಿ ನಿಂತಿದ್ದಾರೋ ಎಂದು ದುಃಖವೂ ಆಗಿದೆ. ಈಚೆಗೆ ನಮ್ಮ ಪ್ರವಾಸ, ರಜೆಯ ಮೋಜು ಗಮನಾರ್ಹ ಎನಿಸಲು ದೂರದೂರಿನ, ಪ್ರವಾಸಿತಾಣದ ಹಣೆಪಟ್ಟಿ ಹೊತ್ತ ದುಬಾರಿ ಸ್ಥಳಗಳಲ್ಲೇ ನಡೆಯಬೇಕೆಂಬ ಕಲ್ಪನೆಯೊಂದು ಕೆಟ್ಟ ಹುಳವಾಗಿ ಕೊರೆಯತೊಡಗಿದೆ. ಎಷ್ಟೇ ಕಷ್ಟವಾದರೂ, ಅಂತಹ ಸ್ಥಳಗಳಲ್ಲಿ ನಾವು ನಿಂತು, ಕುಳಿತು, ಹಲ್ಲು ಕಿರುದು ಐಸ್ ಕ್ರೀಮ್, ಚಾಕೊಲೇಟು ಹಿಡಿದು ಫೋಟೋ ತೆಗೆಸಿ ಫೇಸ್‌ಬುಕ್‌ಗೆ ಅಪ್‌ಲೋಡ್ ಮಾಡಿ, ನಿರಂತರ ಪ್ರತಿಕ್ರಿಯೆಗಾಗಿ ಹಂಬಲಿಸಿದ್ದೇವೆ. ನಮ್ಮ ಪ್ರವಾಸ, ಬಟ್ಟೆ, ಊಟ ಇನ್ನೊಂದಷ್ಟು ಜನ ನೋಡಿ ಮೆಚ್ಚಿ, ಕುಣಿದು ಕಾಮೆಂಟ್ ಮಾಡಲಿ ಎನ್ನುವುದು ಯಾವ ಪರಿ ಮೂರ್ಖತನ!

ಹೂವಿನ ಹೆಡೆ
ಸಾಲದ್ದಕ್ಕೆ ಗಿಫ್ಟ್‌ಗಳಿಗೂ ಬ್ರ್ಯಾಂಡ್ ಭೂತ ಅಪ್ಪಳಿಸಿದೆ. ಮೊದಲು ಮದುವೆಯಲ್ಲಿ ಪಾತ್ರೆ-ಪಗಡೆ, ಬಟ್ಟೆ ಬರೆ, ಹಣಕಾಸು ಹೀಗೆ ಉಪಯೋಗಕ್ಕೆ ಆಗುವಂತಹದ್ದೇನಾದರೂ ಕೊಡುವ ಪದ್ಧತಿಯಿತ್ತು. ಆಮೇಲೆ ಕೆಲವರು, ಹೂ ಗುಚ್ಛ ಕೊಡುವ ಪರಿಪಾಠ ಬೆಳೆಸಿಕೊಂಡರು. ಮೊದಲಿಗೆ, ಚೆಂದನೆಯ ಗುಲಾಬಿ ಹೂಗಳಷ್ಟೇ ಇದ್ದಿದ್ದು. ಈಗ ಆ ಜಾಗಕ್ಕೆ ಲಿಲ್ಲಿ, ಟುಲಿಪ್ ಹೀಗೆ ಚೆಂದದ ನೂರಾರು ಹೆಸರು ಹೊತ್ತ ಆರ್ಕಿಡ್‌ಗಳು ಬಂದು ನಿಂತಿದೆ. ಹೂ ತೋಟದಲ್ಲಿಯೂ ನಮ್ಮ ಮಣ್ಣಿನ ಮಲ್ಲಿಗೆ, ಸಂಪಿಗೆ, ಜಾಜಿ, ದಾಸವಾಳ, ಕರವೀರ, ಕಾಕಡ, ಸಂಜೆಮಲ್ಲಿಗೆ, ನಂದಿಬಟ್ಟಲು, ನಿತ್ಯ ಕಲ್ಯಾಣಿ, ಕರ್ಣಕುಂಡಲ, ಕಾಮಕಸ್ತೂರಿ, ಡೇರೆ, ಗುಲಾಬಿಗಳ ಬದಲಿಗೆ ಅಲಂಕಾರಿಕ ಸಸ್ಯಗಳು ರಾರಾಜಿಸಿವೆ. ಹೆಚ್ಚುಗಾರಿಕೆಯ ವಿಷಯವಾಗಿವೆ.
ಆದರೆ ಬೆಚ್ಚನೆಯ ಅಪ್ಪುಗೆ, ಭಾವಪೂರ್ಣ ಸಾಲುಗಳಲ್ಲಿ ಶುಭಾಶಯ ಹೊತ್ತು ನಿಂತ, ಕಣ್ಣುಗಳಲ್ಲಿ ಕೃತಜ್ಞತೆಯ ಕಾಂತಿ, ಸಲಸಲದ ಸ್ಮರಣೆಯಲ್ಲಿ ಸವಿಮಾತು ನುಸುಳುತ್ತಿದ್ದ ಜನರೆಲ್ಲಾ ಎಲ್ಲಿ ಹೋದರು? ಝಗಮಗದ ಕಲ್ಯಾಣಮಂಟಪದ ಆಚೆ ಯಾರಿಂದಲೂ ಗುರುತಿಸಲಾಗದೆ ಉಳಿದುಬಿಟ್ಟ ವೃದ್ಧ ಜೋಡಿ, ಸರಿರಾತ್ರಿ ಎಲ್ಲಿ ಕಳೆದರು? ಮಾನವೀಯ ಅಂತಃಕರಣ, ಅಪರೂಪದ ಸಾಲುಗಳಿಗಷ್ಟೇ ಸೀಮಿತವಾಗಿ, ಡಂಭಾಚಾರವೇ ಕೇಂದ್ರಸ್ಥಾನದಲ್ಲಿ ನಿಂತು ಬಿಟ್ಟಿತೋ ಹೇಗೆ?
ಮನಸ್ಸಿನ ಮಾತಿಗೆ ನಿತ್ಯದ ವ್ಯವಹಾರಕ್ಕೆ ಸಂವಹನ ಮಾಧ್ಯಮವಾದ ಭಾಷೆಗೂ ಪ್ರತಿಷ್ಠೆಯ ಕರಾಮತ್ತು ಅಡರಿದೆ. ಇಂಗ್ಲೀಷು ಮೋಹ ಒಂದು ಕಡೆಯಾದರೆ, ಮಾತೃಭಾಷೆಯ ಕುರಿತು ಗಂಟೆಗಟ್ಟಲೆ ಚರ್ಚೆ ಮಾಡುವ ಆದರೆ ತಮ್ಮ ಮಕ್ಕಳು ಕಾನ್ವೆಂಟ್ ಕಂದಮ್ಮಗಳಾಗಿಯೇ ಉಳಿಯುವಂತೆ ನೋಡಿಕೊಳ್ಳುವ ವರ್ಗ ಮತ್ತೊಂದು ಕಡೆ.
'ಶುದ್ಧ ಭಾಷೆ ನಮ್ಮದು. ಗ್ರಾಮ್ಯ ಭಾಷೆ ಅನಾಗರೀಕ ಲಕ್ಷಣ' 'ಶಾಸ್ತ್ರೀಯ ಸಂಗೀತ ಹೆಚ್ಚು. ಸುಗಮ ಸಂಗೀತ ಬರೀ ಹಾಡುಗಾರಿಕೆಯಷ್ಟೇ, ಶಾಸ್ತ್ರ ಸಮ್ಮತವಲ್ಲ' 'ಓದಿದರೆ ಡಾಕ್ಟ್ರು, ಇಂಜಿನಿಯರ್, ಸಿ.ಎ. ಇಂತಹದ್ದೇ ಓದಬೇಕು. ಮಿಕ್ಕಿದ್ದು ಅಪ್ರಯೋಜಕ!' 'ಮಕ್ಕಳು ಹುಟ್ಟಿದರೆ ಮುದ್ದಾಗಿಯೇ ಇರಬೇಕು. ಚೆಂದ ಕಾಣಿಸದಿದ್ದರೆ, ಮಕ್ಕಳು ಅಂತಲೇ ಅನ್ನಲಾಗುವುದಿಲ್ಲ' 'ಬೆಳ್ಳಗಿನ ಹೆಂಡತಿಯೇ ಬೇಕು. ಮನೆ ಎಂದರೆ ಚಿತ್ರದಲ್ಲಿರುವಷ್ಟೇ ಕರಾರುವಕ್ಕಾಗಿರಬೇಕು. ನಗು ಕೂಡ ಇಷ್ಟು ಇಂಚು ಇದ್ದರೆ ಚೆಂದ. ಆಮೇಲೆ ಅಸಹ್ಯ!'
'ನಾಲ್ಕು ಜನ ಮೆಚ್ಚುವ ಹಾಗೆ ಸಮಾರಂಭ ಮಾಡಬೇಕು ಇಲ್ಲವಾದರೆ ಎಂತಕ್ಕೆ ಮಣ್ಣು...' ಹೀಗೆ ನಮ್ಮಲ್ಲೇ ಸಾಕಷ್ಟು ಹುಸಿ ನಂಬಿಕೆ, ಅಪ್ರಬುದ್ಧ ಆದರ್ಶ ಹಾಗೂ ಪರಮ ಪೆಕರು ಪೂರ್ವಾಗ್ರಹಗಳಿವೆ.

ಕೊಳ್ಳೇ ನನ್ನನ್ನು
ಕೊಳ್ಳುವುದರಲ್ಲೇ ಸುಖವಿದೆ ಎನ್ನುವುದಾದರೆ ಬ್ರ್ಯಾಂಡೆಡ್ ಎನ್ನುವುದೇ ವ್ಯಕ್ತಿತ್ವದ ಘನತೆ ನಿರೂಪಿಸುವುದಾದರೆ, ನಮ್ಮನ್ನು ಸಾಕಿದ ಅವರನ್ನು ಬೆಳೆಸಿದ ಜೀವಗಳೆಲ್ಲಾ ಅದು ಹೇಗೆ ನೆಮ್ಮದಿ ತೃಪ್ತಿ ಮುಂತಾದ ವಿಷಯವನ್ನು ವಾಸ್ತವದಲ್ಲಿ ಅರಿತಿದ್ದರು? ಏನೂ ಇಲ್ಲದೆಯೂ ನಗುತ್ತಿರುವ ಎಷ್ಟೋ ಜನರಿಲ್ಲವೆ ಜಗದಲ್ಲಿ? ಎಲ್ಲಾ ಇದ್ದರೂ, ಏಕೆ ಇಲ್ಲ ನಗು ಮೊಗದಲ್ಲಿ? ಬೇರೆಯವರಿಗಾಗಿ ಜೀವಿಸು ಎನ್ನುವ ಮಾತಲ್ಲಿ ಅವರಿವರ ಕಷ್ಟಸುಖಕ್ಕೆ ಭಾಗಿಯಾಗು ಎಂದಿತ್ತೇ ಹೊರತು ಅವರ ಕಣ್ಣಳತೆಯಲ್ಲಿ ತ್ರಿವಿಕ್ರಮನಾಗಲು, ಶ್ರೀಮಂತಿಕೆಯ ಪ್ರದರ್ಶನಮಾಡಲು, ಇರುವುದನ್ನೆಲ್ಲಾ ಚೆಂದ ಕಂಡದ್ದೆಲ್ಲಾ ಕೊಳ್ಳು ಎಂದಿರಲಿಲ್ಲ ಎನಿಸುತ್ತದೆ.
ಒಂದು ಕಾಲಕ್ಕೆ ಸ್ವಂತ ಹಿತ, ಪ್ರೀತಿ ಮತ್ತು ಖಾಸಗಿ ರುಚಿಯಾದ, ತನ್ನ ಬೇಕುಗಳನ್ನು ಆಪ್ತವಾಗಿ ಸಂತೃಪ್ತಗೊಳಿಸಬೇಕಾದ ವಿಷಯಗಳೆಲ್ಲಾ ಇಂದು ಬೀದಿಯ ಮಧ್ಯೆ ನಿಂತು, ಸಾರ್ವಜನಿಕ ಲಕ್ಷ್ಯ, ಒಮ್ಮತ, ಒಪ್ಪಿಗೆ, ಮೆಚ್ಚುಗೆಗೆ ಹಾತೊರೆಯುತ್ತಾ ಸೂಕ್ಷ್ಮವಾಗಿ ಮತ್ತೊಂದು ತುದಿಯಲ್ಲಿ ನಿಂತವರನ್ನು ಮುಜುಗರ, ಜಿಗುಪ್ಸೆ ಮತ್ತು ಸಲ್ಲದ ಸಂಕೋಚಕ್ಕೆ ಎಡೆಮಾಡಿಕೊಡುತ್ತಿರುವುದು ಸುಳ್ಳಲ್ಲ. ಅಂತೆಯೇ ಕೊಳ್ಳುವ ಪ್ರತಿ ವಸ್ತುವೂ ಬೆಲೆಯಲ್ಲಿ ಹೆಸರಿನಲ್ಲಿ ಮುಂಚೂಣಿಯಲ್ಲಿರಬೇಕೆಂಬ ಕಟ್ಟುಪಾಡು ಕೂಡ. ಇಲ್ಲಿ ಅವರು ಬಯಸುತ್ತಿರುವುದು, ಅಗತ್ಯಕ್ಕೆ ಒಳಪಟ್ಟಿರುವುದು 'ವಸ್ತು'ವೋ ಅಥವಾ ಅದರ 'ಹೊಂದುವಿಕೆ'ಯಿಂದ ಅನುಭವಿಸಬಹುದಾದ ಸಾಮಾಜಿಕ ಸ್ಥಿತಿಯೋ ಎಂಬ ಪ್ರಶ್ನೆ ಸದಾ ಕಾಡುತ್ತದೆ. ಏಕೆಂದರೆ ನಮ್ಮ ಖುಷಿಗೆ, ರುಚಿಗೆ, ಪ್ರೀತಿಗೆ ಹಣದ ಹಂಗಿಲ್ಲದೆ ಹೋದಾಗ ಇರುವ ನಿರಾಳಭಾವ, ಮಗುವಿನಂತಹ ಶುಭ್ರ ಮನಃಸ್ಥಿತಿ, ಹೆಸರಿನ ಸೋಗು ಧರಿಸಿದಾಗ ಸಿಗುವುದಿಲ್ಲ.  
ಆಗ ಬೆನ್ನಟ್ಟುವುದು, ಬೆಲೆಯಿಂದ ಬೆಲೆಗೆ ಸ್ಥಿತಿಯಿಂದ ಮತ್ತೊಂದು ಸ್ಥಿತಿಗೆ, ಹೆಸರಿನಿಂದ ಹೆಚ್ಚಿನ ಹೆಸರಿಗೆ ಜಿಗಿಯುವ,ಓಡುತ್ತಲೇ ಇರಬೇಕಾಗುವ, ಕೊಂಡಷ್ಟೂ ಮುಗಿಯದ, ತೃಪ್ತಿಗಾಗಿ ಏನೆಲ್ಲಾ ಬರೆದಿಟ್ಟರೂ ಹುಟ್ಟದಂತಹ ಸಲಸಲಕ್ಕೂ ಮೂರನೆಯವರ ಪ್ರಶಂಸೆಗಾಗಿ ಕಾತರಿಸುವ ಹಪಾಹಪಿತನ ಮಾತ್ರ.
ಇಂಥ ಸ್ಥಿತಿಯಲ್ಲಿ ಮನುಷ್ಯನ ಬಹಿರಂಗಕ್ಕಿಂತ ಅಂತರಂಗವಷ್ಟೇ ಮುಖ್ಯ ಎಂದು ಭಾವಿಸಿ ಬದುಕುವ ಸರಳಜೀವಿಗಳು ಇಂದೂ ನಮ್ಮೊಡನಿದ್ದಾರೆ. ಅವರೇ ನಮ್ಮ ನಿಜವಾದ 'ಬ್ರ್ಯಾಂಡ್ ಅಂಬಾಸಿಡರ್‌'ಗಳು ಅಲ್ಲವೇ?

ದುಬಾರಿಯಾದದ್ದೇ ಚೆನ್ನ!
ನೀವೇ ಯೋಚಿಸಿ. ಮಾಲ್ ಒಂದನ್ನು ಪ್ರವೇಶಿಸಿದಾಗ, ಒಂದೇ ಉತ್ಪನ್ನದ ಹಲವು ರೂಪುಗಳಲ್ಲಿ ನೀವು ಅತಿ ಕಡಿಮೆ ಬೆಲೆಯ ಉತ್ಪನ್ನವನ್ನು ಕೊಳ್ಳಲಿಕ್ಕೆ ಹೋಗುತ್ತೀರಾ? ಖಂಡಿತಾ ಇಲ್ಲ! ಏಕೆಂದರೆ ನಿಮ್ಮ ಮೆದುಳಲ್ಲಿ ಕಡಿಮೆ ಬೆಲೆಯ ಉತ್ಪನ್ನ ಎಂದರೆ ಅದು ಕೆಳದರ್ಜೆಯದು ಎಂಬುದು ಫಿಕ್ಸ್ ಆಗಿದೆ! ಆಗ ನಮ್ಮ ಪೆಕರು ಬುದ್ಧಿ ನಮ್ಮ ಸಾಮಾನ್ಯ ಜ್ಞಾನವನ್ನು ಅಮುಕಿ ದುಬಾರಿಯಾಗಿರುವುದನ್ನೇ ಕೊಳ್ಳುತ್ತದೆ. ಬುದ್ಧಿವಂತನಿಗೆ ತಲೆಯಲ್ಲಿ ಹಣ ಇರಬೇಕು, ಹೃದಯದಲ್ಲಲ್ಲ! ನಮಗಿಷ್ಟವಾಗದ ಮನುಷ್ಯರನ್ನು ಇಂಪ್ರೆಸ್ ಮಾಡಲಿಕ್ಕೆಂದೇ ಹೆಚ್ಚಿನ ಜನ ದುಂದುವೆಚ್ಚ ಮಾಡುತ್ತಾರೆ. ಹಣ ಜೀವನದ ಅತಿ ಮುಖ್ಯ ಸಂಗತಿಯಲ್ಲ, ಆದರೆ ಆಕ್ಸಿಜನ್‌ನಂತೆ ಸ್ವಲ್ಪ ಬೇಕೇ ಬೇಕು ಎನ್ನುವುದು ಸತ್ಯ.

-ಎಸ್. ನಾಗಶ್ರೀ
nagashrees310@gmail.com

(ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555ಆನ್ ಲೈನಲ್ಲಿ ಸಖಿ ಓದಲು http://www.magzter.com/IN/Express-Network-Private-Limited/Sakhi/Women%27s-Interest/ಗೆ ಭೇಟಿನೀಡಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com