ಶಿವ ಟಿಬೆಟ್ಟಿನ ಬುಡಕಟ್ಟಿನ ನಾಯಕನಾದಾಗ...

ಶಿವ ಟಿಬೆಟ್ಟಿನ ಬುಡಕಟ್ಟಿನ ನಾಯಕನಾದಾಗ...
Updated on

ಭಾರತೀಯ ಹೊಸ ಆಂಗ್ಲ ಬರಹಗಾರರಲ್ಲಿ ಬಹುಶಃ ಚೇತನ್ ಭಗತ್‌ನ ಅನಂತರ ಇತ್ತೀಚೆಗೆ ಹೊಸ ಅಲೆಯನ್ನೇ ಎಬ್ಬಿಸಿರುವ, ಓದುಗರನ್ನು ಅಪಾರ ಸಂಖ್ಯೆಯಲ್ಲಿ ಸೆಳೆದಿರುವ ಲೇಖಕನೆಂದರೆ ಅಮಿಷ್ ತ್ರಿಪಾಠಿಯೇ ಇರಬಹುದು. ಅವರ 'Shiva Trilogy' ಎಂಬ ಕೃತಿ
ಯ ಬಗ್ಗೆ ಓದುಗರು ಹುಚ್ಚರಾಗಿರುವುದೇ ಇದಕ್ಕೆ ಕಾರಣ. 'The Immortals of Meluha', 'The Secret of The Nagas', 'The Oath of The Vayuputras' ಎಂಬ ಮೂರು ಬೃಹತ್ ಸಂಪುಟಗಳಲ್ಲಿ ಚಲ್ಲವರಿದಿರುವ ಈ 'ಶಿವ ಪುರಾಣ' ಕ್ಲಾಸಿಕ್ ಗುಣವನ್ನು ಹೊಂದಿದೆ. 'ಪರಿಭ್ರಮಣ ಮತ್ತು ಶೋಧ' ಇವೆರೆಡೂ ಕ್ಲಾಸಿಕ್‌ನ ಮುಖ್ಯ ಗುಣವೆಂದು ಸಿ.ಎನ್. ರಾಮಚಂದ್ರನ್ ತಮ್ಮ ಅದೇ ಹೆಸರಿನ ಪುಸ್ತಕದಲ್ಲಿ ಗುರುತಿಸುತ್ತಾರೆ. ಈ ಕಾದಂಬರಿಯ ಪೂರ್ತಿ ಇರುವುದು ಇದೇ ಸತ್ಯಶೋಧನೆಗಾಗಿ ಪರಿಭ್ರಮಣ. ಸಾಮಾಜಿಕ ಶ್ರೇಣೀಕರಣಗಳಲ್ಲಿ ಹೋಳಾಗಿ ಹೋಗಿರುವ ಮಾನವ ಜನಾಂಗದ ಸಂಸ್ಕೃತಿಯನ್ನು ಒಟ್ಟುಗೂಡಿಸುವುದು ಹಾಗೂ ಸಾಂಸ್ಕೃತಿಕ ದಬ್ಬಾಳಿಕೆಗೆ ಉತ್ತರವನ್ನು ಕಂಡುಕೊಳ್ಳುವುದು ಈ ಕಾದಂಬರಿಯ ಉದ್ದೇಶ.
ಶಿವನನ್ನು ಮಾನವೀಯಗೊಳಿಸಿ ಅವನ ಸಾಹಸ ಪರಾಕ್ರಮಗಳನ್ನು ಮೆರೆಯುವ ಈ ಗಾಥೆಯು ಪುರಾಣವೇ?, ಐತಿಹ್ಯವೇ?, ದರ್ಶನ ಶಾಸ್ತ್ರವೇ?, ಇಲ್ಲ ಸಾಹಿತ್ಯವೇ? ಎಂಬ ಗೊಂದಲ ಓದುಗರಲ್ಲಿ ಉಂಟಾದರೆ ಆಶ್ಚರ್ಯವಿಲ್ಲ. ಬಹುಶಃ ಇವುಗಳ ಬಗೆಗಿನ ನಮ್ಮ ಎಲ್ಲಾ ತಿಳುವಳಿಕೆಗಳನ್ನು ಭಂಜನಮಾಡುವ ಉದ್ದೇಶ ಕೂಡ ಇಲ್ಲಿರಬಹುದು. ಇಲ್ಲಿಯ ಶಿವ ಒಬ್ಬ ಆದಿವಾಸಿ ಜನಾಂಗದ ನಾಯಕ. ಅವನು ಆಡುವ ಭಾಷೆ ಅದಕ್ಕೆ ಹೊಂದುವಂತಹುದು. ಇವನು ರಾಮನ ಆನಂತರದವನು. ಎಲ್ಲರಂತೆ ತಾನೂ ರಾಮನನ್ನು ಆದರ್ಶವಾಗಿರಿಸಿಕೊಳ್ಳುವವನು. ರಾಮನ ಶಿಸ್ತು, ನೀತಿ, ನಿಯಮ ಪಾಲನೆಯ ಕಲ್ಪನೆಗೆ ತಲೆಬಾಗಿರುವವನು. ಕಾಶಿಗೆ ಬಂದಾಗ ತನ್ನ ಊರಿಗೆ ಬಂದಂತಹ ಅನುಭವವನ್ನು ಹೊಂದುವವನು. ಕಾಶಿ ವಿಶ್ವನಾಥ ದೇವಾಲಯಕ್ಕೆ ವಾಸುದೇವ (ವಿಷ್ಣು) ಪರಂಪರೆಯವನು ಪಂಡಿತ. ಅವನು ಶಿವನಿಗೆ ಗುರು ಸಮಾನ. ಅವನಿಗಾಗಿ ಪರಿಭ್ರಮಣ ನಡೆಸುವುದೂ, ಶಿವನ ಮುಂದಿನ ತ್ರಿಪುರ ಸಂಹಾರಕ್ಕೆ ಸಹಕಾರಿಯಾದುದು. ಇಲ್ಲಿ ಮಹಾಭಾರತದ ಉಲ್ಲೇಖ ಕೂಡ ಕ್ವಚಿತ್ತಾಗಿ ಬರುವುದರಿಂದ ಈ ಶಿವ ಮಹಾಭಾರತದ ಆನಂತರದವನೂ ಇರಬಹುದು. ಇವನು ಅತ್ಯಂತ ನಾಗರಿಕ ಪ್ರದೇಶವಾದ ಮೆಸಪಟೋಮಿಯಾಕ್ಕೂ ಹೋಗಿಬರುವನು. ನಮ್ಮ ಗ್ರಹಿಕೆಯ ಶಿವನ ಎಲ್ಲಾ ಸಾಹಸಗಳನ್ನು, ಗುಣಗಳನ್ನೂ ಮೈಗೂಡಿಸಿಕೊಂಡಿರುವವನು. ಆದರೆ ನಾವು ಗ್ರಹಿಸಿಕೊಂಡಿರುವ ಕಾಲದ ಶಿವನಲ್ಲ.
ಈ ಶಿವ, ಮಹಾದೇವ ಪರಂಪರೆಯೊಳಗೆ ಬಂದ ಅಥವಾ ಬರಬಹುದಾದ ಅನೇಕ ಶಿವರಲ್ಲಿ ಯಾವುದೋ ಒಬ್ಬ ಶಿವಇರಬಹುದು. ಇಲ್ಲವೇ, ಈ ಶಿವ ಒಬ್ಬ ವ್ಯಕ್ತಿಯಾಗಿರದೇ ಒಂದು ತತ್ವವಾಗಿರುವವನೂ ಆಗಿರಬಹುದು. ನಮ್ಮ ಆತ್ಮಕ್ಕೆ ಹೀಗೆ ಲಾಗಾಯ್ತಿನಿಂದ ಅಂಟಿಸಿಕೊಂಡಿರುವ ನಮ್ಮ ದೈವವನ್ನು, ನಾವು ನಂಬಿಕೊಂಡಿರುವ ಸತ್ಯವನ್ನು, ನಂಬಿಕೆಗಳನ್ನು ಭಂಗಗೊಳಿಸುತ್ತಾ ಸಾಗುವ ಪ್ರಕ್ರಿಯೆಯಲ್ಲಿಯೇ ದಕ್ಕುವ ಶಿವನಾಗಿರಬಹುದು. ಆದರೆ ಅವನ ಗುಣ ಸ್ವಭಾವಗಳು ಮಾತ್ರ ಅವೇ. ಪ್ರೀತಿಗೆ, ಪ್ರೀತಿಸಿದವರಿಗೆ ತನ್ನನ್ನೇ ಕೊಟ್ಟುಕೊಂಡುಬಿಡುವವನು. ಈ ಪ್ರೀತಿಗೆ ಧಕ್ಕೆ ತರುವ ಯಾವುದನ್ನೂ ಕೊಚ್ಚಿ ಕೊಲ್ಲುವಷ್ಟು ಕಡುಕೋಪದವನು. ಸಮಾನತೆಯನ್ನು ಎತ್ತಿಹಿಡಿಯುವವನು. ದೀನರ ಪರವಾಗಿರುವವನು, ಹುಕ್ಕಿ ಬಂತೆಂದರೆ ಆನಂದದಿಂದ ಹಾಡುತ್ತಾ, ನರ್ತನ ಮಾಡುತ್ತಾ, ತನ್ನ ಲೀಲೆಯಲಿ ತಾನೇ ಲೀನವಾಗಿಬಿಡುವವನು, ಪಿತೃಪ್ರಧಾನ ಮೌಲ್ಯಗಳನ್ನೆಲ್ಲಾ ಗಾಳಿಗೆ ತೂರಿ ಸತೀ ಸತೀ ಎಂದು ಅವಳ ಹಿಂದು ಮುಂದು ಅಲೆಯುತ್ತಾ, ಆದರ್ಶ ಪತಿಯಾದವನು.
ಹೀಗೆ ಒಬ್ಬ ಬುಡಕಟ್ಟು ಜನಾಂಗದ ನಾಯಕನಾಗಿದ್ದು, ಶಿವ ತಮ್ಮ ಉಳಿವಿಗಾಗಿ ಸದಾ ಇತರ ಬುಡಕಟ್ಟುಗಳೊಡನೆ ಹೋರಾಡುವ ಅನಿವಾರ್ಯತೆಯಿಂದ ಬೇಸತ್ತು ಹಿಮಾಲಯದಿಂದ ಇಳಿದು ಬರುತ್ತಾನೆ. ಇಂತಹ ಅನಾಗರಿಕ ಯುವಕನೊಬ್ಬ ಧೀರೋದಾತ್ತನಾದ ನಾಯಕನಾಗಿ ಬೆಳೆಯುವ ಕಥೆಯೇ 'ಶಿವಾ ಟ್ರಯಾಲಜಿ'. ಕೈಲಾಸದಿಂದ ಪರಿಭ್ರಮಣ ಹೊರಟು ಮತ್ತೆ ಕೈಲಾಸದಲ್ಲೇ ಸ್ಥಾಪನೆಗೊಳ್ಳುವ ಶಿವ ಇಲ್ಲಿ ಒಬ್ಬ ಟಿಬೆಟ್ಟಿನ ಸಾಹಸೀ ಪುರುಷ. ಶಿವ ಹಂತ ಹಂತವಾಗಿ ಬೆಳೆಯುತ್ತಾ ಹೋಗುತ್ತಾನೆ. ಅವನು ಕಟ್ಟಿಕೊಂಡ ಭ್ರಮೆಗಳು ಹಾಗೂ ಅವನ ಬಗೆಗೆ ನಾವು ಕಟ್ಟಿಕೊಂಡ ಭ್ರಮೆಗಳು ಹರಿಯುತ್ತಾ ಹೋಗಿ 'ಸತ್ಯದರ್ಶನ' ಮಾಡಿಸುತ್ತವೆ.
ಶಿವನ ಬಗೆಗಿನ ನಮ್ಮ ಪೂರ್ವ ತಿಳುವಳಿಕೆಗಳನ್ನು ಇದು ಗೊಂದಲಗೊಳಿಸಿಬಿಡುತ್ತದೆ. ಸ್ಥಾಪಿತವಾದ ನಮ್ಮ ಪೂರ್ವಗ್ರಹಿಕೆಗಳನ್ನೆಲ್ಲಾ ನಾಶಮಾಡಿದಾಗ ಮಾತ್ರ ಉತ್ಕ್ರಾಂತಿ ಸಾಧ್ಯ ಎನ್ನುತ್ತಾರೆ ಜೆ.ಕೆ. ಇಂತಹ ನಾಶಕ್ಕೆ ಶಿವ ಇಲ್ಲಿ ಕಾರಣನಾಗುತ್ತಾನೆ. 'Nothing is outside  the Text' ಎನ್ನುತ್ತಾನೆ ಡೆರಿಡಾ. (textಅಂದರೆ ಅದರ ಅವಿನಾಭಾಗವಾಗಿರುವ context. ಅಂದರೆ ಅದು ಇಡೀ ಜಗತ್ತಿನ ಚರಿತ್ರೆಯೇ ಆಗಿದೆ) ಖಿಜ್ಢಡಿಗೆ ನಾವು ಬದ್ಧರಾಗಿರಬೇಕೆಂದರೆ ನಮ್ಮ ಪೂರ್ವಾಗ್ರಹಗಳನ್ನು ಕಳೆದುಕೊಳ್ಳಬೇಕಾದುದು ಮುಖ್ಯ. ಆಗ ಮಾತ್ರ 'Deconstruction' ಎನ್ನುವುದು ಸಾಧ್ಯ. ಶಿವ ಕೂಡ ಅಂತಹ 'Deconstruction' ನ ಸಾಕಾರ ಮೂರ್ತಿ. ಬದಲಾವಣೆಗೆ ನಾಂದಿ ಹಾಡುವ ಹರಿಕಾರ.
'ಅತಿ ಸರ್ವತ್ರ ವರ್ಜ್ಯಯೇತ್‌' ಎನ್ನುವ ಗೀತೆಯ ಮಾತು ಈ ಕಾದಂಬರಿಯ ಮೂಲಧಾತು. ಮನುಷ್ಯನ ಉಪಭೋಗದ ಶಕ್ತಿಗೆ ಕ್ಷಮತೆಯಿದೆ. ಆದರೆ ಉಪಭೋಗದ ಲಾಲಸೆಗೆ ಮಿತಿಯಿಲ್ಲ. ಏಳೇಳು ಜನ್ಮಗಳಿಗೆ ಸಂಪತ್ತನ್ನು ಕೂಡಿಟ್ಟುಕೊಂಡರೂ ಸಾಲದು ಅವನಿಗೆ. ಈ ಲಾಲಸೆಯೇ ಪಾಪ (evil). ಇದನ್ನು ನಿಯಂತ್ರಿಸಬೇಕಾಗಿದೆ. ಅದಕ್ಕೆ ಸಂಪೂರ್ಣ ಕ್ರಾಂತಿಯ ಅಗತ್ಯವಿದೆ. ಸಂಪೂರ್ಣ ಕ್ರಾಂತಿಗೆ ಕಾಲ ಹದವಾಗಬೇಕು. ಪಾಪದ ಕೊಡ ತುಂಬಬೇಕು. ಆಗ ನೀಲಕಂಠನ ಪ್ರವೇಶವಾಗುತ್ತದೆ. ಇಂದು ಅಭಿವೃದ್ಧಿಯ ಹೆಸರಿನಲ್ಲಿ ಮಾನವ ಜನಾಂಗ ನಿಸರ್ಗದ ಮೇಲೆ ಮಾಡುತ್ತಿರುವ ಅತ್ಯಾಚಾರ ಪರಕಾಷ್ಠೆ ಮುಟ್ಟಿದೆ. ಇದಕ್ಕೆ ಪರ್ಯಾಯವಾಗಿ ಶಿವನ ಗುಣಗಳಿಂದ, ಅವನ ಬದುಕಿನ ರೀತಿಯಿಂದ, ಆಧುನಿಕ ಮನುಷ್ಯ ಪಾಠ ಕಲಿತುಕೊಳ್ಳಬೇಕೆಂಬ ಅಸಾಧ್ಯವಾದ ಆಸೆ ಕೂಡ ಲೇಖಕನಿಗೆ ಇದೆ.
ಸೋಮರಸ ಬದುಕಿನ ಸಂಜೀವಿನಿಯಾಗಿ ದಕ್ಷನ ಸಾಮ್ರಾಜ್ಯವಾದ 'ಮೆಹುಲಾ'ದ ಪ್ರಜೆಗಳನ್ನು ಆರೋಗ್ಯವಂತರನ್ನಾಗಿಸಿ, ಧೀರ್ಘಾಯುಗಳನ್ನಾಗಿಸಿ ರಕ್ಷಿಸಿದೆ. ಕೈಲಾಸದಿಂದ ಬಂದ ಶಿವ ಕೂಡ ನೀಲಕಂಠನಾಗಿ, ಜನರ ಕಣ್ಣಲ್ಲಿ ದೇವರಾಗಿ ಬೆಳೆಯುವುದು ಈ ಸೋಮರಸ ಸೇವನೆಯಿಂದಲೇ. ಆದರೆ ಅದು 'ಮೆಹುಲಾ' ಜನರಿಗೆ ಅಮೃತವಾದರೆ ಅದರ ಉತ್ಪನ್ನದಿಂದ ಉಂಟಾಗುವ ತ್ಯಾಜ್ಯ ವಸ್ತುಗಳನ್ನು ಹರಿಯಬಿಡುವ ನದಿ ನೀರಿನ ಸೇವನೆಯಿಂದ ಬ್ರಂಜ (ವಂಗ), ನಾಗ ಮುಂತಾದ ಜನಾಂಗಕ್ಕೆ ಮಾರಕವಾಗಿವೆ. ಅವರು ಇದರಿಂದಾಗಿ ಅಂಗವೈಕಲ್ಯ, ಪ್ಲೇಗಿನಂಥ ಮಾರಿಗೆ ಬಲಿಯಾಗುತ್ತಿದ್ದಾರೆ. ಶಿವನಿಗೆ ಹೀಗೆ ಅಮೃತವೇ ವಿಷವಾಗುವ ಪರಿ ಅರಿವಿಗೆ ಬಂದದ್ದೇ, ಸೋಮರಸವನ್ನು ಜತನವಾಗಿ ಕಾಪಿಟ್ಟುಕೊಂಡು ಬಂದಂತಹ ದಕ್ಷನಂತಹ ಪಟ್ಟಬದ್ಧ ಹಿತಾಸಕ್ತಿಗಳ ಎದುರಿಗೆ ಯುದ್ಧವನ್ನು ಹೂಡುವುದು ಅನಿವಾರ್ಯವಾಗುತ್ತದೆ. ಈ ಸೋಮರಸದ ಉತ್ಪಾದನೆಗೆ ಕಾರಣನಾದ ವಿಜ್ಞಾನಿ ಸ್ವತಃ ಬೃಹಸ್ಪತಿಗೆ ಇದರ ಅರಿವಿದೆ. ಆದರೆ ದಕ್ಷನ ದರ್ಪದ ಮುಂದೆ ಅವನೂ ಅಸಹಾಯಕನಾಗಿದ್ದಾನೆ. ಅವನಿಗೆ ರಾಜನೆದುರು ಸೊಲ್ಲೆತ್ತುವುದು ಅಸಾಧ್ಯವಾಗುತ್ತದೆ. ಇದಕ್ಕೆ ಪರ್ಯಾಯವನ್ನು ಹುಡುಕುವ ಪ್ರಯೋಗದಲ್ಲಿ ನಿರತನಾದ ಸಂದರ್ಭದಲ್ಲಿ ಮಂದಾರ ಪರ್ವತದಲ್ಲಿ ಉತ್ಪಾದನೆಆಗುತ್ತಿದ್ದ ಸೋಮರಸದ ಕೈಗಾರಿಕಾ ಸ್ಥಾವರ ಸ್ಫೋಟಗೊಂಡು ನಾಶವಾಗುತ್ತದೆ. ಆದರೆ ಭೃಗುಋಷಿ ಅದರ ಪರ್ಯಾಯ ಸ್ಥಾವರವನ್ನು ನಿರ್ಮಾಣ ಮಾಡುವುದರ ಮೂಲಕ ದಕ್ಷನಂತಹ ಕೆಲವು ರಾಜರಿಗೆ ಕುಮ್ಮಕ್ಕು ಕೊಡುವುದಲ್ಲದೇ, ಸೋಮರಸದ ವಿರುದ್ಧವಾಗಿ ಬಂಡೆದ್ದಿರುವ ಶಿವನ ಕುರಿತಾಗಿ ವೈರವನ್ನೂ ಬೆಳೆಸಿಕೊಳ್ಳುತ್ತಾನೆ. ಪ್ರಬಲ ಶಸ್ತ್ರಾಸ್ತ್ರಗಳಿರುವ ದಕ್ಷ, ದಿಲೀಪ ಮುಂತಾದ ರಾಜರುಗಳ ವಿರುದ್ಧ ಸೆಣೆಸಾಡಲು ಶಿವ ಸಮಾಜ ಬಹಿಷ್ಕೃತರಾದ ನಾಗಾ ಜನರನ್ನೂ, ಬ್ರಂಜ (ವಂಗ) ಜನರನ್ನೂ ಬಳಸಿಕೊಂಡು ಯುದ್ಧದ ಸಂಘಟನೆ ನಡೆಸುವುದು ಹಾಗೂ ತ್ರಿಪುರ ನಾಶ ಇವುಗಳ ಸುತ್ತ ಹೆಣೆದಿರುವ ಕಥೆ 'ಶಿವಾ ಟ್ರಯಾಲಜಿ'. ನನಗೆ ಈ ಕಾದಂಬರಿ ಕೆಳಕಂಡ ಅನೇಕ ಕಾರಣಗಳಿಗೆ ಮುಖ್ಯವಾಗುತ್ತದೆ.

ಕರ್ಮಸಿದ್ಧಾಂತದ ಗೋಜಲು
ಮೊದಲಿಗೆ ಈ ಕಾದಂಬರಿ ಕರ್ಮಸಿದ್ಧಾಂತವನ್ನು ಪ್ರಶ್ನಿಸುತ್ತದೆ. ಕರ್ಮಸಿದ್ಧಾಂತವೆನ್ನುವುದು ಒಂದು ಸಿದ್ಧಾಂತವಷ್ಟೇ. ಅದು ಸಾಬೀತಾಗುವುದರ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸುತ್ತದೆ. ಕರ್ಮಸಿದ್ಧಾಂತವನ್ನು ಒಪ್ಪದ ಶಿವ ಒಮ್ಮೆ ಕಾಶಿವಿಶ್ವನಾಥ ದೇವಾಲಯದ ವಾಸುದೇವ ಪಂಡಿತನಿಗೆ ಕೇಳುತ್ತಾನೆ, 'ಛ್ಠಜ ಝಿಜ್ಠಜ ್ಠಜಛಟಟಣ ಠಛಡಡಿ ಟ್ಝಜಿಜ ಡ್ಝಟಿಡ?' ಅದಕ್ಕೆ ನೀನೇನು ಹೇಳುತ್ತೀ? ಎಂದು ಶಿವನನ್ನೇ ಮರು ಪ್ರಶ್ನಿಸುತ್ತಾನೆ, ವಾಸುದೇವ.
'I don't believe anything till I have seen the proof. For anything without proof, I think we should believe the theory that gives us peace. It does not matter whether the theory is true or not' (ಪು. 1110 Nagas) ಎನ್ನುವ ಶಿವನ ಮಾತಿಗೆ, 'ತಮ್ಮ ಪೂರ್ವಜನ್ಮದ ಕರ್ಮಗಳು ಪ್ರಸ್ತುತ ಜನ್ಮದ ಮೇಲೆ ಪ್ರಭಾವ ಬೀರುತ್ತದೆಂದು ತಿಳಿದಾಗ ಜನರು ಒಳ್ಳೆಯ ಬದುಕನ್ನು ಬದುಕಲು ಪ್ರಯತ್ನಿಸಬಹುದು' ಎಂದು ಪ್ರತಿಕ್ರಿಯಿಸುತ್ತಾನೆ ವಾಸುದೇವ.
'Are these people just talented wordsmiths or great philosophers?' ಎಂದು ವಾಸುದೇವನ ಬಗೆಗೆ ಸ್ವಗತದಲ್ಲೇ ಕಟಕಿಯಾಡುವ ಶಿವನ ಮನಸ್ಸನ್ನು ಓದಿಕೊಂಡು 'once again I don't have the answer'! ಎಂದು ವಾಸುದೇವ ಸೋಲೊಪ್ಪಿಕೊಳ್ಳುತ್ತಾನೆ. ಆದರೆ ಶಿವ ನಿಂತಿರುವುದು ನೋವನ್ನೇ ಹೊದ್ದುಕೊಂಡಿರುವ ಸಮಾಜದಿಂದ ಬಹಿಷ್ಕೃತರಾದ, ರೋಗಿಗಳ, ನಿಮ್ನ ಜನಾಂಗದವರ ಪರವಾಗಿ. ರಾಜಸತ್ತೆಗೆ ವಿರುದ್ಧವಾಗಿ. ಸುಖ ಶಾಂತಿಗಳಿಗೆ ಎರವಾದ ಜನ ಕರ್ಮಸಿದ್ಧಾಂತವನ್ನು ನಂಬುವುದಾದರೂ ಹೇಗೆ? ಅದು ನಿಜವಿದ್ದರೂ ಇಲ್ಲದಿದ್ದರೂ ಅದರಿಂದ ಅವರಿಗೆ ಯಾವ ವ್ಯತ್ಯಾಸವಾಗುತ್ತದೆ? ಆದುದರಿಂದಲೇ ಅಂತಹ ಸುಖಶಾಂತಿಗಳಿಂದ ಎರವಾದ ಜನರ ಪರವಾಗಿ ಹೋರಾಡುತ್ತಾ ಒಬ್ಬ ಸಮಾಜ ಸುಧಾರಕನಂತೆಯೂ ಕಾರ್ಯನಿರ್ವಹಿಸುತ್ತಾನೆ.
ತಮ್ಮ ಯಾವುದೋ ಜನ್ಮದ ಪಾಪಗಳಿಂದಾಗಿ ವಿಕರ್ಮ ಎನ್ನುವ ಜನಾಂಗ ಸಮಾಜದಿಂದ ಬಹಿಷ್ಕೃತರಾಗಿ, ಅಸ್ಪೃಶ್ಯರಾಗಿ ಬದುಕುತ್ತಿರುತ್ತಾರೆ. ದಕ್ಷನ ಸಾಮ್ರಾಜ್ಯದಲ್ಲಿ ಇಂತಹ ಅನಿಷ್ಟ ಪದ್ಧತಿಯೊಂದು ಕಾನೂನು ಸಮ್ಮತವಾಗಿರುತ್ತದೆ. ಅಂತಹ ನಂಬಿಕೆಯನ್ನು ಆ ಜನರೇ ಒಪ್ಪಿಕೊಳ್ಳುವಷ್ಟು ಅದು ಪ್ರಾಚೀನವಾಗಿರುತ್ತದೆ. ಇಂತಹ ಪದ್ಧತಿಯನ್ನು ನಂಬಿಕೆಯನ್ನು ಶಿವ ವಿರೋಧಿಸುವುದಲ್ಲದೇ ವಿಕರ್ಮ ಜನಾಂಗದ ಜನರನ್ನು ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ದಕ್ಷನ ಮನವೊಲಿಸಿ ಯಶಸ್ವಿಯಾಗುತ್ತಾನೆ. 'ದ್ರಪಾಕು' ಎನ್ನುವ ವೀರನಾದ ಅಸ್ಪೃಶ್ಯನೊಬ್ಬನ (ದಲಿತ) ವೃದ್ಧ ತಂದೆಯನ್ನು ಅಪ್ಪಿಕೊಂಡು ಅವನ ಕಾಲಿಗೆ ಬೀಳುವುದರ ಮೂಲಕ ವಿಕರ್ಮ ಪದ್ಧತಿಯ ವಿರುದ್ಧ ಹೋರಾಡುವ ಪ್ರಥಮ ಪ್ರಯತ್ನವನ್ನು ತನ್ನಿಂದಲೇ ಪ್ರಾರಂಭಿಸುತ್ತಾನೆ. ದ್ರಪಾಕುವನ್ನು ತನ್ನ ಸೇನೆಯೊಳಗೆ ಸೇರಿಸಿಕೊಳ್ಳುವುದರ ಮೂಲಕ ಅವನಿಗಾದ ಅನ್ಯಾಯವನ್ನು ತುಂಬಿಕೊಡಲು ಪ್ರಯತ್ನಿಸುತ್ತಾನೆ. ಅಷ್ಟೇ ಅಲ್ಲದೆ, ಸತ್ತಮಗುವನ್ನು ಹಡೆದಳೆಂಬ ಕಾರಣಕ್ಕಾಗಿ ದಕ್ಷನ ಮಗಳು ಸತಿ ಕೂಡ ವಿಕರ್ಮಳೆಂದು ಪರಿಗಣಿಸಲ್ಪಟ್ಟಿರುತ್ತಾಳೆ. ನೃತ್ಯ ಕಲಿಸುವಾಗ ಅವಳನ್ನು ಶಿವ ತನಗರಿವಿಲ್ಲದೆಯೇ ಮುಟ್ಟಿದಾಗ ಅಸ್ಪೃಶ್ಯತೆಯನ್ನು ಪಾಲಿಸಿಕೊಂಡು ಬರುತ್ತಿದ್ದ ಆ ಸಮಾಜದ ನಿಯಮದ ಪ್ರಕಾರ ಶುದ್ಧೀಕರಣಕ್ಕೆ ಒಳಗಾಗಲು ನಿರಾಕರಿಸುತ್ತಾನೆ.  
ಒಬ್ಬ ಬುಡಕಟ್ಟು ಜನಾಂಗದಿಂದ ಬಂದ, ಸದಾ ನಿಸರ್ಗದ ಮಡಿಲಲ್ಲೇ ಬೆಳೆದ ಶಿವನಿಗೆ ನಿಸರ್ಗದ ನಿಯಮಗಳಿಗೆ ವಿರೋಧವಾಗಿರುವ ನಾಗರಿಕರ ಈ ಅನಿಷ್ಟ ಪದ್ಧತಿಗಳು ಸೋಜಿಗವಲ್ಲದೇ, ಅಮಾನವೀಯವಾಗಿಯೂ ಕಾಣಿಸುತ್ತದೆ. ಅಸ್ಪೃಶ್ಯಳಾದ, ವಿಧವೆಯಾದ ಸತಿಯನ್ನು ಅವಳ ಧೈರ್ಯ ಸಾಹಸಗಳಿಗೆ ಮೆಚ್ಚಿ, ಪ್ರೀತಿಸಿ ವಿರೋಧಿಗಳೆಲ್ಲರ ಮನವೊಲಿಸಿ ಮದುವೆಯಾಗುತ್ತಾನೆ. ವಿಕರ್ಮ ಪದ್ಧತಿ ನಿರ್ಮೂಲನೆಯ ಹರಿಕಾರನಾಗುತ್ತಾನೆ.
ನಾಗಾ ಜನರು ಕೂಡ ಹೀಗೆ ಪೂರ್ವಜನ್ಮದ ಪಾಪಗಳಿಂದ ಅಂಗವಿಕಲರಾಗಿ ಹುಟ್ಟಿದವರೆಂಬ ನಂಬಿಕೆಯಿಂದ ದಕ್ಷ ಅವರನ್ನು ಸಮಾಜದಿಂದ ಹೊರಗೆ ಹಾಕಿರುತ್ತಾನೆ. ಶಿವ ಈ ಜನರನ್ನು ತನ್ನವರೆಂದು ಅಪ್ಪಿಕೊಳ್ಳುತ್ತಾನೆ. ಹಾಗೆಯೇ ತನ್ನ ತಾಯಿ ಸತಿಯಿಂದ ಹುಟ್ಟಿನಿಂದಲೇ ಬೇರೆಯಾದ, ಅಂಗವೈಕಲ್ಯ ಹೊಂದಿದ, ನಾಗಾ ಜನರ ಅಧಿಪತಿಯಾದ ಗಣಪತಿಯನ್ನು ತನ್ನ ಮಗನೆಂದು ಪ್ರೀತಿಯಿಂದ ಒಪ್ಪಿಕೊಳ್ಳುತ್ತಾನೆ. ಮುಂದೆ ಯುದ್ಧದಲ್ಲಿ ಗಣಪತಿ ತೋರಿಸುವ ಶೌರ್ಯ ಸಾಹಸಗಳನ್ನು ಮೆಚ್ಚಿಕೊಳ್ಳುತ್ತಾನೆ. ಹೀಗೆ ದಕ್ಷ ಪ್ರತಿನಿಧಿಸುವ ಸಮಾಜದಿಂದ ಬಹಿಷ್ಕರಿಸಲ್ಪಟ್ಟ (exclusive policy) ಜನರನ್ನು ಒಳಗೊಳ್ಳುವ (inclusive policy) ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಪ್ರತೀಕವಾಗುತ್ತಾನೆ ಶಿವ. 
ಕೇಡಿನ ಕಲ್ಪನೆ
ಇಲ್ಲಿ ಒಳಿತು ಮತ್ತು ಕೆಡಕುಗಳ ಪರಿಕಲ್ಪನೆ ಧೂಳೀಪಟವಾಗಿದೆ. ಅವುಗಳ ವ್ಯಾಖ್ಯಾನವೇ ಬದಲಾಗಿದೆ. ಒಳಿತು ಕೆಡಕು, ಶತ್ರು, ಮಿತ್ರ, ದೇವ, ರಾಕ್ಷಸ ಎನ್ನುವ ಎಲ್ಲ ರೀತಿಯ ದ್ವಂದ್ವಗಳ ನಡುವಿನ ಗೆರೆಗಳು ಅಳಿಸಿ ಹೋಗಿವೆ. ಪೂರ್ಣರೂಪದ ಒಳಿತಾಗಲೀ, ಪೂರ್ಣರೂಪದ ಕೆಡುಕಾಗಲೀ ಇಲ್ಲವೇ ಇಲ್ಲ. ಇಲ್ಲಿ ಎಲ್ಲವೂ ಸಾಪೇಕ್ಷ ನೆಲೆಯನ್ನು ಬೇಡುತ್ತವೆ. ಚಂದ್ರವಂಶೀಯರು ತಾವು ಬೆಂಬಲಿಸುತ್ತಿರುವ ನಾಗಾಜನರ ಸಹಾಯದಿಂದ ಸೋಮರಸದ ಮೂಲ ಸ್ಥಾವರವಾದ ಮಂದಾರ ಪರ್ವತವನ್ನು ನಾಶಮಾಡಿರಬಹುದೆಂಬ ಅನುಮಾನದ ಮೇಲೆ ಯುದ್ಧ ಸಾರುವ ದಕ್ಷನ ಪಕ್ಷವನ್ನು ಶಿವ ವಹಿಸುತ್ತಾನೆ. ಹೀಗೆ ಶಿವ ದಕ್ಷನ ಪಕ್ಷ ವಹಿಸಲು, ಯುದ್ಧಕ್ಕೆ ಸನ್ನದ್ಧನಾಗಲು ತನ್ನ ಆತ್ಮೀಯ ಸ್ನೇಹಿತನಾದ ಸೋಮರಸದ ಕರ್ತೃ, ವಿಜ್ಞಾನಿಯಾದ ಬೃಹಸ್ಪತಿಯ ಸಾವಿಗೂ ನಾಗಾಜನರೇ ಕಾರಣರಿರಬಹುದೆಂಬ ಅನುಮಾನವೂ ಕಾರಣವಾಗಿರುತ್ತದೆ. ತನ್ನ ಹೊಸ ಯುದ್ಧ ತಂತ್ರಗಳಿಂದ ಶಿವ ಅವನನ್ನು ಗೆಲ್ಲಿಸುತ್ತಾನೆ. ಶತ್ರುಗಳನ್ನು ಸದೆಬಡಿದು, ಸೆರೆಹಿಡಿದು ತಂದಾಗ ಅವರೊಳಗೆ ಯಾವೊಬ್ಬ ನಾಗನೂ ಇಲ್ಲದಿರುವುದನ್ನು ತಿಳಿದು ಶಿವನಿಗೆ ಆಘಾತವಾಗುತ್ತದೆ. ನಾಗಾ ಜನರನ್ನು ಈ ಮೂಲಕ ಹತೋಟಿಗೆ ತೆಗೆದುಕೊಳ್ಳಬಹುದೆಂಬ ಅವನ ನಂಬಿಕೆ ಸುಳ್ಳಾಗುತ್ತದೆ. ಅನ್ಯಾಯವಾಗಿ ಅಮಾಯಕರ ರಕ್ತಪಾತಕ್ಕೆ ಕಾರಣವಾದುದರ ಬಗ್ಗೆ ಪಶ್ಚಾತ್ತಾಪ ಪಡುತ್ತಾನೆ. ಅವನಿಗೆ ಯುದ್ಧದ ವೈಫಲ್ಯದ ಹಾಗೂ ತನ್ನ ತಪ್ಪಿನ ಅರಿವಾಗುತ್ತದೆ. 
'Don't call me the Neelkanth ..I don't deserve the title, I have the blood of thousands on my hand' ಎಂದು ಮಮ್ಮಲ ಮರುಗುತ್ತಾನೆ. ಹತಾಶನಾಗಿ ಅಯೋಧ್ಯೆಯ ರಾಮಜನ್ಮಭೂಮಿ ಮಂದಿರದೊಳಗೆ ಬಂದು ವಾಸುದೇವ ಪಂಡಿತನೊಬ್ಬನನ್ನು ಭೇಟಿಯಾಗುತ್ತಾನೆ. 'ನಾನು ಕೊಂದದ್ದು ಪಾಪಿಗಳನ್ನು ಅಲ್ಲ... ಅವರು ಪಾಪಿಗಳಲ್ಲ (ಪಾಪದ ಜನರು)' ಎಂದು ತನ್ನ ಪಾಪ ಪ್ರಜ್ಞೆಯನ್ನು ತೋಡಿಕೊಳ್ಳುತ್ತಾನೆ. ಅವನ ಈ ಅರಿವಿನ ಸ್ಫೋಟವನ್ನು ಕಂಡ ವಾಸುದೇವ, ತನ್ನ ಪೂರ್ವದ ಎಲ್ಲಾ ಮಹಾದೇವರುಗಳಿಗಿಂತ ಶೀಘ್ರವಾಗಿ ಶಿವನಿಗೆ ಜ್ಞಾನೋದಯವಾದುದಕ್ಕೆ ಅವನನ್ನು ಪ್ರಶಂಸಿಸುತ್ತಾನೆ. ರುದ್ರ ಅಸುರರೆಂಬ ಪಾಪಿಗಳನ್ನು ಸಂಹಾರಮಾಡಿದ ವಿಷಯವನ್ನು ಶಿವ ಹೇಳಿದಾಗ, 'And who said Asuras are Evil'  ಎಂದು ಇನ್ನೊಮ್ಮೆ ಶಿವನಿಗೆ ಗಧಾಘಾತವನ್ನು ಪಂಡಿತ ಕೊಡುತ್ತಾನೆ. ಇದು ಸೂರ್ಯವಂಶಿಗಳಿಗೆ ಚಂದ್ರವಂಶಿಗಳು ಪರಸ್ಪರ ಶತ್ರುಗಳಾದಂತೆ, ದೇವತೆಗಳಿಗೆ ಅಸುರರೂ ಪರಸ್ಪರ ಕೇಡಿನ ಮೂಲಗಳಾದರು ಎನ್ನುವ ಅರಿವಿನ ಸ್ಫೋಟಕ್ಕೆ ಕಾರಣವಾಗುತ್ತದೆ.
ಮೆಹುಲಾದ ಎಲ್ಲಾ ಕೇಡಿಗೆ ನಾಗಾಜನರೇ ಕಾರಣರೆಂಬ ತಪ್ಪು ಕಲ್ಪನೆಯನ್ನು ದಕ್ಷ ಅವನೊಳಗೆ ತುಂಬುತ್ತಾನೆ. ಕೊನೆಗೆ ಅವರೂ ಸಹ ದಕ್ಷನ ಪಿತೂರಿಗೆ ಒಳಗಾದ ಬಲಿಪಶುಗಳೆಂದೂ, ದಕ್ಷನೇ ಸ್ವತಃ ತನ್ನ ಸ್ವಾರ್ಥಕ್ಕಾಗಿ ಅಂಗವಿಕಲ ಮಕ್ಕಳನ್ನು ಸಮಾಜದಿಂದ ಹೊರಗಿಟ್ಟನೆಂದೂ, ಆ ಜನಾಂಗವೇ ನಾಗಾಗಳೆಂದೂ ತಿಳಿದಾಗ ಮತ್ತೊಮ್ಮೆ ಶಿವನಿಗೆ ಗಧಾಘಾತವಾಗುತ್ತದೆ. ಇದುವರೆಗೆ ಸತ್ತಿರಬಹದೆಂದುಕೊಂಡಿದ್ದ ತನ್ನ ಆತ್ಮೀಯ ಸ್ನೇಹಿತ ಬೃಹಸ್ಪತಿಯನ್ನು ನಾಗಾ ಜನರ ಅಧಿಪತಿಯಾದ ಗಣೇಶನೇ ರಕ್ಷಿಸುತ್ತಿರುವ ವಿಚಾರ ತಿಳಿದುಬರುತ್ತದೆ. ನಾಗಾ ಜನರ ಅಧಿಪತಿಯಾದ, ಅತ್ಯಂತ ಪರಾಕ್ರಮಿಯಾದ ಗಣೇಶನನ್ನು ಅವನು ಹುಟ್ಟಿದ ತಕ್ಷಣ ಸತಿಗೆ ತಿಳಿಯದಂತೆ ರಹಸ್ಯವಾಗಿ ಊರ ಹೊರಗೆ ಅಟ್ಟಿದ ವಿಚಾರ ಮತ್ತು ಸತಿಯ ತಂಗಿಯಾದ ನಾಲ್ಕು ಕೈಗಳನ್ನು ಹೊಂದಿದ ಕಪ್ಪು ಬಣ್ಣದ ಕಾಳಿಯನ್ನೂ ಕೂಡಾ ಬಹಿಷ್ಕರಿಸಿದ ವಿಚಾರ ತಿಳಿದು, ಶಿವನಂತೆ ಸತಿಗೆ ಕೂಡ ತನ್ನ ತಂದೆಯ ಬಗೆಗೆ ಹೇವರಿಕೆಯುಂಟಾಗುತ್ತದೆ. ಇದರಿಂದ ದಕ್ಷನ ಮೇಲಿನ ಕ್ರೋಧ ಹೆಚ್ಚಾಗುತ್ತದೆ.
ಶಿವ ಇದುವರೆಗೆ ಯಾರನ್ನು ಶತ್ರುವೆಂದು ಬಗೆದಿದ್ದನೋ ಅವರೆಲ್ಲಾ ದಕ್ಷನ ದಬ್ಬಾಳಿಕೆಗೆ ಸಿಲುಕಿದ ಬಲಿಪಶುಗಳೇ ಆಗಿರುತ್ತಾರೆ. ಈ ಹೊಸ ಎಚ್ಚರದಿಂದಾಗಿ ಶಿವನ ಯುದ್ಧದ ತಂತ್ರಗಳೇ ಬದಲಾಗಿಬಿಡುತ್ತವೆ. ತನ್ನ ಸ್ವಹಿತಕ್ಕಾಗಿ ಕೇಡಿಗೆ ಕಾರಣವಾಗುವ, ಕೇಡನ್ನು ರೂಪಿಸುವ, ಅದನ್ನು ಚಲಾವಣೆಗೆ ತರುವ ಪ್ರಭುತ್ವವೇ ಶಿವನಿಗೆ ಪರಮಶತ್ರುವಾಗಿ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಇನ್ನು ಅವನ ಯುದ್ಧವೆನ್ನುವುದು ದಕ್ಷ, ದಿಲೀಪನಂತಹ ರಾಜ ಪ್ರಭುತ್ವದ ಯುದ್ಧವೇ ಹೊರತು ಅಮಾಯಕ ಸೈನಿಕರ ಮೇಲಿನ ಯುದ್ಧವಲ್ಲ. 'ಮೆಲುಹಾವನ್ನು ನಾಶಮಾಡುವುದು ನಮ್ಮ ಉದ್ದೇಶವಲ್ಲ ಅದನ್ನು ಮರೆಯದಿರಿ. ನಮ್ಮ ಉದ್ದೇಶವೇನಿದ್ದರೂ ಸೋಮರಸ ಉತ್ಪಾದನೆಯನ್ನು ನಾಶಗೊಳಿಸುವುದು' ಎಂದು ಪದೇ ಪದೇ ತನ್ನ ಸೈನಿಕರಿಗೆ ಶಿವ ಹೇಳುವುದು ಇದಕ್ಕೆ ಸಾಕ್ಷಿಯಾಗಿದೆ. ಹಾಗೆ ನೋಡಿದರೆ 'ಈ ಹೋರಾಟದ ಗುರಿ ಸೋಮರಸದ ಉತ್ಪಾದನೆಯ ನಾಶವೊಂದೇ ಅಲ್ಲ. ಸೋಮರಸದ ನೆಪದಲ್ಲಿ ಚರಿತ್ರೆಯೊಳಗೆ ನಿಜವಾದ ಕೇಡಿನ ವಿರುದ್ಧ ಯುದ್ಧ ಸಾರಿದ ಶಿವನ ಐತಿಹ್ಯವನ್ನು ಬಿಟ್ಟುಹೋಗುವುದೇ ಮುಖ್ಯವಾಗಿದೆ' ಎಂದು ಸತಿ ಗಣೇಶನಿಗೆ ಹೇಳುವಲ್ಲಿ ಈ ಕಥೆಯ ತಿರುಳಿದೆ.
ಇನ್ನೂ ಮುಂದುವರಿದು, ದಕ್ಷನ ಸೈನ್ಯವನ್ನು ಎದುರಿಸಲು ದೈವೀ ಅಸ್ತ್ರಗಳನ್ನು ಪಡೆಯಲು ಶಿವ 'ಪರಿಹಾ' (ಮೆಸಪಟೋಮಿಯಾ) ಎನ್ನುವ ಪ್ರದೇಶಕ್ಕೆ ಬರುತ್ತಾನೆ. ಅಲ್ಲಿ ವಾಯುಪುತ್ರರೆಂಬ ಬುಡಕಟ್ಟಿಗೆ ಸೇರಿದ ರುದ್ರನ ವಂಶಜರು ಮಾತ್ರ ಈ ದೈವೀ ಅಸ್ತ್ರಗಳ ಹಕ್ಕುದಾರರಾಗಿರುತ್ತಾರೆ. ಅವರ ಮುಖ್ಯಸ್ಥನಾದ 'ಮಿತ್ರಾ' ಎಂಬುವವನನ್ನು ಭೇಟಿಯಾಗಲು ಬಂದಿರುತ್ತಾನೆ. ಅವನ ಮುಂದೆ ನಿಂತ ಶಿವನ ತಿಳುವಳಿಕೆ ಇನ್ನೂ ವಿಕಾಸಗೊಳ್ಳುತ್ತದೆ. ಒಂದು ಸಾಮಾನ್ಯ ಬುಡಕಟ್ಟಿನ ನಾಯಕನಾದ ತನ್ನನ್ನು ಜನ ನೀಲಕಂಠನಾಗಿ ದೈವತ್ವಕ್ಕೆ ಏರಿಸಿದ್ದನ್ನು ಗಮನದಲ್ಲಿಟ್ಟುಕೊಂಡ ಶಿವ 'ನಾನು ದೇವರಲ್ಲ, ಪ್ರಭು ಮಿತ್ರಾ' ಎಂದು ಹೇಳಿಕೊಂಡಾಗ, 'ನಾವು ದೇವರೆಂದು ಭಾವಿಸುವುದರಿಂದ ಮಾತ್ರ ದೇವರುಗಳಾಗುವುದಿಲ್ಲ. ಹಾಗಾದರೆ ಅದು ಕೇವಲ ಅಹಂಕಾರದ ಮಾತಾಗುತ್ತದೆ. ನಾವು ಈ ವಿಶ್ವದ ದಿವ್ಯ ಚೇತನದ ಒಂದು ಅಂಶ ಎನ್ನುವುದನ್ನು ಅರಿತುಕೊಂಡಾಗ, ಈ ವಿಶ್ವದೊಳಗೆ ನಮ್ಮ ಪಾತ್ರಗಳನ್ನು ಅರ್ಥಮಾಡಿಕೊಂಡು ಅದರಂತೆ ಕ್ರಿಯಾಶೀಲರಾದಾಗ ಮಾತ್ರ ನಾವು ದೇವರಾಗುತ್ತೇವೆ. ದೇವರು ಸೋಲುವುದಿಲ್ಲ. ನೀನು ಸೋಲಬಾರದು. ಕೇಡು ಹಾಗೂ ಒಳಿತು ಇವುಗಳ ಪರಿಮಾಣವನ್ನು ನೀನು ಕಾಯ್ದುಕೊಳ್ಳಬೇಕಾಗಿರುವುದು ನಿನ್ನ ಧರ್ಮ. (you have to take Evil out of equation) ಸೋಮರಸದ ಎಲ್ಲಾ ಚಹರೆಗಳನ್ನು ನೀನು ನಾಶಮಾಡಬಾರದು. ಬರುವ ಕಾಲದಲ್ಲಿ ಸೋಮರಸದಿಂದ ಪುನಃ ಒಳಿತಾಗಬಹುದು. ಆದುದರಿಂದ ಅದರ ಬಗೆಗಿನ ಜ್ಞಾನವನ್ನು ಉಳಿಸಿಕೊಳ್ಳಬೇಕಾಗಿರುವುದು ನಿನ್ನ ಕರ್ತವ್ಯ' ಎಂದು ಎಚ್ಚರಿಸುತ್ತಾನೆ. ಪಾಶುಪತಾಸ್ತ್ರವನ್ನು ಕೊಡುವಾಗ ಯಾವ ಕಾರಣಕ್ಕೂ ಅದನ್ನು ಪ್ರಯೋಗವಾಡಬಾರದೆಂಬ ಪ್ರತಿಜ್ಞೆಯನ್ನು ಶಿವನಿಂದ ಪಡೆದುಕೊಳ್ಳುತ್ತಾನೆ. ಮಿತ್ರನ ಜೊತೆಗಿನ ಭೇಟಿ ಶಿವನ ವ್ಯಕ್ತಿತ್ವ ವಿಕಾಸದ ತುರೀಯ ಹಂತವಾಗಿದೆ.

ಸಾಂಸ್ಕೃತಿಕ ಶ್ರೇಷ್ಠತೆಯ ವ್ಯಸನ
ಸಾಂಸ್ಕೃತಿಕ ಶ್ರೇಷ್ಠತೆಯ ಭ್ರಮೆಗೂ ಕೂಡ ಇಲ್ಲಿ ಧಕ್ಕೆಯುಂಟಾಗಿದೆ. 'ಪರಿಹಾ'ದಲ್ಲಿ ಬಂದಿಳಿದ ಶಿವ, ಭಾರತ ಹಾಗೂ ಅಲ್ಲಿನ ಸಾಂಸ್ಕೃತಿಕ ಸಮಾನಾಂತರತೆಯನ್ನು ಗಮನಿಸಿ ಅಚ್ಚರಿಗೊಳ್ಳುತ್ತಾನೆ. 'ಯಾರು ಯಾರನ್ನ ಪ್ರಭಾವಿಸಿರಬಹುದು, ಗೋಪಾಲ?' ಎಂದು ತನ್ನ ಜೊತೆಗೆ ಬಂದಿದ್ದ ವಾಸುದೇವ ಮುಖ್ಯಸ್ಥನಾದ ಗೋಪಾಲ ಪಂಡಿತನಿಗೆ ಕೇಳುತ್ತಾನೆ. 'ಗೊತ್ತಿಲ್ಲಪ್ಪ. ಬಹುಶಃ ಎರಡೂ ಕಡೆಯವರೂ ಪರಸ್ಪರ ಪ್ರಭಾವಿತರಾಗಿರಬಹುದು.  ಅವರ ಉನ್ನತ ಸಂಸ್ಕೃತಿಯಿಂದ ನಾವು ಕಲಿತುಕೊಂಡಿರುವಂತೆ ಅವರೂ ನಮ್ಮಿಂದ ಕಲಿತುಕೊಂಡಿರಬಹುದು. ಇದು ಪರಸ್ಪರವಾದುದು. ಇದರಲ್ಲಿ ಯಾರು, ಯಾರಿಂದ ಎಷ್ಟು ಹೆಚ್ಚು ಪ್ರಭಾವಿತರಾಗಿದ್ದಾರೆ ಎನ್ನುವುದನ್ನು ಸಾಬೀತು ಪಡಿಸಬೇಕೆಂಬ ಹಟ ಕೇವಲ ನಮ್ಮ ಅಹಂಕಾರಕ್ಕೆ ಸಂಬಂಧಪಟ್ಟುದಾಗಿದೆ' (ವಾಯು..ಪು. 369) ಎಂದು ಅವನು ಕೊಡುವ ಉತ್ತರ ನಮ್ಮೆಲ್ಲಾ ಸಾಂಸ್ಕೃತಿಕ ಶ್ರೇಷ್ಠತೆಯ ವ್ಯಸನಕ್ಕೆ, ಅದೇ ಕಾರಣವಾಗಿ ನಮ್ಮ ಚರಿತ್ರೆ ದಾಖಲುಗೊಳಿಸಿದ ಎಣೆಯಿಲ್ಲದ ರಕ್ತಪಾತಕ್ಕೆ ಕನ್ನಡಿಯಾಗಿದೆ.

ಅನನ್ಯ ಸ್ತ್ರೀಶಕ್ತಿ
ಇಡಿಯ ಕಾದಂಬರಿಯನ್ನು ಹಿಡಿದಿಟ್ಟಿರುವುದು ಕ್ಷಾತ್ರ ಮೌಲ್ಯಗಳು, ವೀರ ಯುಗದ ಆದರ್ಶಗಳು. ಹೀಗಾಗಿ ಇಲ್ಲಿ ಸ್ತ್ರೀಯರ ಗೈರು ಹಾಜರಿ ಇದ್ದರೆ ಆಶ್ಚರ್ಯವೇನೂ ಆಗುತ್ತಿರಲಿಲ್ಲ. ಆದರೆ ಇಲ್ಲಿ ನಿಜವಾಗಿ ಆಶ್ಚರ್ಯವಾಗುವುದು ಅವರ ಶಕ್ತಿಯುತವಾದ ಪಾತ್ರ ಸೃಷ್ಟಿಗೆ. ದಕ್ಷನೊಬ್ಬನನ್ನು ಬಿಟ್ಟರೆ ಇಲ್ಲಿ ಪಿತೃಪ್ರಾಧಾನ್ಯತೆಯ ಸುಳಿವೂ ದೊರೆಯುವುದಿಲ್ಲ. ಸತಿ, ಕಾಳಿ, ಆಯುರ್ವತಿ, ಆನಂದಮಯೀ, ಕನಖಲಾ, ತಾರಾ ಮುಂತಾದ ಮಹಿಳೆಯರೆಲ್ಲಾ ರಾಜಕಾರಣದ ಸಭೆಗಳಲ್ಲಿ, ಅದರ ವ್ಯವಹಾರದಲ್ಲಿ ಬಹು ಮುಖ್ಯಪಾತ್ರವನ್ನು ವಹಿಸುತ್ತಾರೆ. ಸಾಮ್ರಾಜ್ಯದ ಆಗು ಹೋಗುಗಳ ಮುಖ್ಯ ತಿರುವಿಗೆ ಕಾರಣರಾಗುತ್ತಾರೆ. ಸತಿ ಈ ಕಾದಂಬರಿಯ ನಾಯಕಿ. ಶಿವನ ಪ್ರಿಯಪತ್ನಿ ಮಾತ್ರವಲ್ಲ, ಶಿವನ ಸೇನೆಯ ನಾಯಕಿ ಕೂಡ. ಶಿವ ಹಾಗೂ ಸತಿ ನಡೆಸುವ ರಾಜಕಾರ್ಯದ ಚರ್ಚೆಗಳು, ಯುದ್ಧ ನೀತಿಗಳು ಅವರ ದಾಂಪತ್ಯದಾಚೆಗಿನ ಪಾತ್ರಗಳನ್ನು ಅನನ್ಯವಾಗಿ ಹಿಡಿದಿಡುತ್ತವೆ. ಇಲ್ಲಿ ಅನೇಕ ಯುದ್ಧಗಳು ನಡೆಯುತ್ತವೆ. ಅವುಗಳೆಲ್ಲದರಲ್ಲಿ ಶಿವನಿಗೆ ಸರಿಸಾಟಿಯಾಗಿ ಸತಿ ಯುದ್ಧಮಾಡುತ್ತಾಳೆ. ಪ್ರಜೆಗಳ ರಕ್ಷಣೆಗಾಗಿ ಶಿವನ ಗೈರುಹಾಜರಿಯಲ್ಲಿ ತನ್ನದೇ ಸೈನ್ಯವನ್ನು ಒಟ್ಟುಮಾಡಿಕೊಂಡು ಊರಜನರನ್ನು ಕಾಡುತ್ತಿದ್ದ ಸಿಂಹಗಳನ್ನು ಕೊಲ್ಲುತ್ತಾಳೆ. ದಕ್ಷನ ಪಿತೂರಿಗೆ ಒಳಗಾಗಿ ಈಜಿಪ್ತಿನ ವೀರಾಧಿವೀರರ ಜೊತೆ ಏಕಾಂಗಿಯಾಗಿ ಅವಳು ಸೆಣಸುವ ಪರಿಯಂತೂ ಅನನ್ಯವಾಗಿ ಚಿತ್ರಿತವಾಗಿದೆ. ಒಂದೊಂದಾಗಿ ಅವಳ ಅಂಗಾಂಗಗಳು ಕತ್ತರಿಸಿ ಬೀಳುತ್ತಿದ್ದರೂ ರಣಚಂಡಿಯಂತೆ ಶತ್ರುಗಳ ಮೇಲೇರಿ ಹೋಗುತ್ತಾಳೆ. 'ಮಕ್ಕಳನ್ನು ಹೆರುವ ಈ ಯಂತ್ರಗಳ ಜೊತೆ ಯುದ್ಧ ಮಾಡುವುದೇನು' ಎಂದು ತಾತ್ಸಾರದಿಂದ ನುಡಿದ ಶತ್ರು ನಾಯಕನೇ ಕೊನೆ ಉಸಿರಿರುವರೆಗೆ ವೀರಾವೇಶದಿಂದ ಹೋರಾಡಿ ಬಿದ್ದ ಅವಳನ್ನು ಕಂಡು ಬೆರಗಾಗಿ 'Killing you shall be my life's honour, My lady' ಎಂದು ಪ್ರಶಂಸಿಸುತ್ತಾ, 'ಇದೇ ನನ್ನ ಕೊನೆಯ ಕೊಲೆ' ಎಂದು ದುಃಖಿಸುತ್ತಾನೆ.
ಇಲ್ಲಿ 'ಕನಖಲಾ' ಎನ್ನುವ ಮಹಿಳೆ ದಕ್ಷನ ಪ್ರಧಾನ ಮಂತ್ರಿ ಆಗಿದ್ದಾಳೆ. ಮೆಹುಲಾವನ್ನು ಅತ್ಯಂತ ಆಧುನಿಕ ರಾಜ್ಯವನ್ನಾಗಿ ರೂಪಿಸುವುದರಲ್ಲಿ ಅವಳದೇ ಪ್ರಮುಖ ಪಾತ್ರ. ದಕ್ಷನ ದಬ್ಬಾಳಿಕೆಯ ಮುಂದೆ ಅವಳು ಅಸಹಾಯಕಳಾದರೂ ತನ್ನದೇ ಆದ ರೀತಿಯಲ್ಲಿ ಅದನ್ನು ಪ್ರತಿಭಟಿಸುತ್ತಾಳೆ. ಶಿವನನ್ನು ಕೊಲ್ಲಬೇಕೆಂಬ ದಕ್ಷನ ಒಳಸಂಚಿನ ಸಂದೇಶವನ್ನು ಹಕ್ಕಿಯ ಮೂಲಕ ಸತಿಯೆಡೆಗೆ ರಹಸ್ಯವಾಗಿ ಕಳುಹಿಸಲು, ತನ್ನ ಜೀವದ ಹಂಗಿಲ್ಲದೇ ಪ್ರಯತ್ನಿಸುತ್ತಾಳೆ. ಆದರೆ ದಕ್ಷನ ಬೇಹುಗಾರರಿಂದ ಅದು ಪತ್ತೆಯಾಗಿ ಸಿಕ್ಕಿಬೀಳುತ್ತಾಳೆ. ಆದರೂ ದಕ್ಷನ ಕೈಗೆ ಸಿಗದೇ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ದಕ್ಷ ಆಡಳಿತಗಾರಳಾಗಿ ದಕ್ಷನ ರಾಜ್ಯಭಾರದ ಹೊಣೆಹೊತ್ತ ಅವಳು ಅವನದೇ ಕುತಂತ್ರಕ್ಕೆ ಬಲಿಯಾಗುತ್ತಾಳೆ.
ಆಯುರ್ವತಿ ಇಲ್ಲಿ ಪ್ರಮುಖ ವೈದ್ಯೆ. ಜೀವದ ಹಂಗಿಲ್ಲದೇ ಯುದ್ಧಗಳಲ್ಲಿ ಗಾಯಾಳುಗಳ ಸೇವೆ ಮಾಡುವ ಪರಿಣತ ವೈದ್ಯೆ, ಪ್ರೇಮಮೂರ್ತಿ, ಸಾಮಾನ್ಯ ಶಸ್ತ್ರಕ್ರಿಯೆಗಳೇ ಅಲ್ಲದೇ ಸೌಂದರ್ಯ ಶಸ್ತ್ರ ಚಿಕಿತ್ಸೆಗಳನ್ನೂ,(plastic surgery) ಮಾಡುವ ನಿಪುಣೆ. ನೀಲಕಂಠನ ನೀಲಕಂಠತನವನ್ನು ಪತ್ತೆ ಹಚ್ಚುವವಳೂ ಅವಳೇ. ಸತಿಯ ಗೆಳತಿಯಾಗಿ ಯುದ್ಧಭೂಮಿಗಳಲ್ಲಿ, ಸಂಕಷ್ಟ ಪರಿಸ್ಥಿತಿಗಳಲ್ಲಿ ಅವಳು ಸಮಯಕ್ಕೆ ಸರಿಯಾಗಿ ತೆಗೆದು ಕೊಳ್ಳುವ ನಿರ್ಣಯಗಳು, ಅವಳ ಬುದ್ಧಿವಂತಿಕೆ, ಚಾಣಾಕ್ಷತನಗಳು ಅನೇಕರ ಜೀವ ರಕ್ಷಿಸಲು ಸಹಾಯಆಗುತ್ತದೆ.
ಚಂದ್ರವಂಶದ ರಾಜಕುಮಾರಿ ಆನಂದಮಯೀ ತಮ್ಮ ತಪ್ಪಿಲ್ಲದೇ ದಕ್ಷನ ಸೆರೆ ಸಿಕ್ಕಿದಾಗ ನಂದಿಯನ್ನೂ ವೀರಭದ್ರನನ್ನೂ ಸೆಡ್ಡು ಹೊಡೆದು ಒದೆದು ಧರೆಗೆ ಉರುಳಿಸುವ ಧೀರೆ. ಆಜನ್ಮ ಬ್ರಹ್ಮಚಾರಿಯಾದಂತಹ ಪರ್ವತೇಶ್ವರನಂತಹ ಸೇನಾನಾಯಕನನ್ನೂ ಸೆಳೆಯಬಲ್ಲ ಕಾಮಿನಿ. ದಕ್ಷನ ಪರವಾಗಿ ಗಂಡನ ಯುದ್ಧ ನೀತಿಯನ್ನು ವಿರೋಧಿಸಬಲ್ಲ ತಾಖತ್ತಿರುವವಳು. ರಾಜಕಾರ್ಯಗಳಲ್ಲಿ, ಯುದ್ದದ ವಿಷಯಗಳಲ್ಲಿ ತನ್ನದೇ ಅಭಿಪ್ರಾಯಗಳನ್ನು ಹೊಂದಿರುವವಳು. ಗಂಡನ ಪ್ರೇಮಪಾಶಕ್ಕೆ ಸಿಕ್ಕಿ ಅವನನ್ನು ಹಿಂಬಾಲಿಸುತ್ತಾಳೆ. ಆ ಕಾರಣಕ್ಕಾಗಿಯೇ ತನ್ನ ತಪ್ಪಿಲ್ಲದಿದ್ದರೂ ಗಂಡನ ಮೇಲಿನ ಪ್ರೀತಿಗಾಗಿ ಬಲಿದಾನ ಮಾಡುತ್ತಾಳೆ. ಬೃಹಸ್ಪತಿಯ ಪ್ರೇಮಿಯಾದ ತಾರ ಶಸ್ತ್ರಾಸ್ತ್ರಗಳ ವಿಷಯದಲ್ಲಿ, ಸೋಮರಸದ ಸಂಶೋಧನೆಯಲ್ಲಿ ಚತುರಳಾದವಳು. ಭೃಗು ಋಷಿಯ ಆಣತಿಯಂತೆ 'ಪರಿಹಾ'ದೊಳಗೆ ಬೃಹಸ್ಪತಿಯ ನೆನಪಿನಲ್ಲಿ ಕಾಲಹಾಕುತ್ತಿರುತ್ತಾಳೆ. 'ಪರಿಹಾ' ದೇಶದಲ್ಲಿ ಶಿವ ಮತ್ತು ವಾಸುದೇವ ಪಂಡಿತ ಗೋಪಾಲನಿಗೆ ಮಾರ್ಗದರ್ಶಿಯಾಗಿ ಸಹಕರಿಸುವವಳು. ಕೊನೆಗೆ ದೇವಗಿರಿಯನ್ನು ಭಸ್ಮ ಮಾಡುವ ಮುನ್ನ ಪಾಶುಪತಾಸ್ತ್ರವನ್ನು ಸಿದ್ಧಗೊಳಿಸುವವಳೇ ಅವಳು. 
ಕಾಳಿ ನಾಗಾಜನರ ರಾಜಮಾತೆ. ಅತ್ಯಂತ ಪರಾಕ್ರಮಿಯಾದ ಅವಳ ಯುದ್ಧದ ಸ್ವರೂಪದ ಮುಂದೆ ಶಿವನೂ ಹಿಮ್ಮೆಟ್ಟಿರುತ್ತಾನೆ. ದಕ್ಷನ ಅನ್ಯಾಯಕ್ಕೆ ಒಳಗಾಗಿ ನೊಂದ ಜನರ ಪರವಾಗಿ ನಿಲ್ಲುತ್ತಾಳೆ. ದಕ್ಷನ ಮಗಳಾಗಿಯೂ ಬಹಿಷ್ಕೃತಳಾದವಳು. ಹೀಗಾಗಿ ದಂಡಕಾರಣ್ಯವೇ ಅವಳ ಕಾರ್ಯಕ್ಷೇತ್ರ. ಬಹಳ ಚತುರತೆಯಿಂದ ದುರ್ಗಮವಾದ ದಂಡಕಾರಣ್ಯದಲ್ಲಿ ಶಿವನ ಪರಿವಾರವನ್ನೂ, ಸೈನಿಕರನ್ನೂ ಸುರಕ್ಷಿತ ನೆಲೆಗೆ ತಲುಪಿಸುವವಳೂ ಆಗಿದ್ದಾಳೆ. ತಾಯಿಯ ಪ್ರೀತಿಯಿಂದ ವಂಚಿತನಾದ ಗಣೇಶನಿಗೆ ತಾಯಿಯ ಪ್ರೀತಿಯಿತ್ತು ಸಲಹಿ ಅವನನ್ನು ಅತ್ಯಂತ ಪರಾಕ್ರಮಿಯನ್ನಾಗಿ ಮಾಡುತ್ತಾಳೆ. ಶಿವನ ಜೊತೆ ಜೊತೆಗೆ ನಿಂತು ಯುದ್ಧಮಾಡಿ ಅವನಿಗೆ ಗೆಲುವನ್ನು ತಂದುಕೊಡುವಲ್ಲಿ ಅವಳ ಪಾಲು ಬಹಳ ದೊಡ್ಡದು.
ಹೀಗೆ ಸತ್ಯದ ಪರನಿಂತು, ಸಾಮ್ರಾಜ್ಯವನ್ನು ಎದುರುಹಾಕಿಕೊಂಡು ಅನ್ಯಾಯದ ವಿರುದ್ಧ ಹೋರಾಡಿದ ಮಹಿಳೆಯರ ಯಾದಿಯೇ ಈ ಕೃತಿಯಲ್ಲಿದೆ. ಎಲ್ಲಿಯೂ ಈ ಪಾತ್ರಗಳು ಪಿತೃಪ್ರಧಾನತೆಯ ಪ್ರಾಬಲ್ಯದಲ್ಲಿ ನರಳುವುದಿಲ್ಲ. ಬದಲಾಗಿ ಅನೇಕ ವೇಳೆ ಪುರುಷರ ಮಾರ್ಗದರ್ಶಿಗಳಾಗಿ ಕಾರ್ಯ ನಿರ್ವಹಿಸುತ್ತವೆ. ಈ ಪಾತ್ರಗಳಿಗೆ ಯಾವುದೂ ಅಸಾಧ್ಯವಲ್ಲ. ದಕ್ಷನ ಹೆಂಡತಿ ವೀರಿನಿಯ ಪಾತ್ರವೊಂದನ್ನು ಹೊರತು ಪಡಿಸಿದರೆ ಉಳಿದ ಎಲ್ಲಾ ಪಾತ್ರಗಳೂ ಸ್ವಾತಂತ್ರ್ಯದ ಉಸಿರಾಡುತ್ತವೆ. ವೀರಿನಿಗೆ ಕೂಡ ತನ್ನ ಅಸಹಾಯಕತೆ ಅರಿವಾಗುತ್ತದೆ. ಅದನ್ನು ಮೀರದೇ ಹೋದದ್ದಕ್ಕೆ, ದಕ್ಷನ ವಿರುದ್ಧ ನಿಲ್ಲದೇ ಹೋದುದಕ್ಕೆ ಪಶ್ಚಾತ್ತಾಪ ಪಡುತ್ತಾಳೆ. ಇಂತಹ ಪಾತ್ರಗಳು ಪ್ರಸ್ತುತ ನಮ್ಮ ಸಾಮಾಜಿಕ ಜೀವನದಲ್ಲಿ ವೈರುಧ್ಯಗಳಾಗಿ ಕಾಣಬಹುದು. ಆದರೆ ಇಂತಹ ಒಂದು ಆದರ್ಶ, ಕನಸು, ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ನಾಂದಿಯಾಗಬಹುದು.

ಇಲ್ಲಿನ ಎಲ್ಲಾ ಸ್ತ್ರೀ ಪಾತ್ರಗಳು ತಮ್ಮ ಗಂಡಂದಿರನ್ನು ಹೆಸರು ಹಿಡಿದೇ ಸಂಭೋಧಿಸುತ್ತವೆ. ಅವು 'ನಾಥಾ' ' ಸ್ವಾಮಿ' ಎಂಬ ಉಲಿಹುಗಳಾಗಿ ತಮ್ಮ ಪರಾಧೀನತೆಯನ್ನು ಪ್ರದರ್ಶಿಸುವುದಿಲ್ಲ. ಕಾರಣ ಪಿತೃಪ್ರಧಾನತೆ ಇಲ್ಲಿನ ಸಮಾಜದ ಮೌಲ್ಯವಲ್ಲ. ಆಶ್ಚರ್ಯಕರ ಸಂಗತಿಯೆಂದರೆ ಪಿತೃಪ್ರಧಾನ ಸಂಸ್ಕೃತಿಯೊಂದು ಸುಸಜ್ಜಿತವಾಗಿದ್ದ ಕಾಲದ ರಾಮ ಇಲ್ಲಿ ಎಲ್ಲರ ಆದರ್ಶ. ಅವನ ನೀತಿ, ನಿಯಮ, ಶಿಸ್ತುಪಾಲನೆಯ ಅಂಶಗಳನ್ನು ಇಲ್ಲಿ ಎತ್ತಿಹಿಡಿಯಲಾಗಿದೆಯೇ ಹೊರತು, ರಾಮನ ಬೇರೆ ದೌರ್ಬಲ್ಯಗಳನ್ನಲ್ಲ. ಅವನ ದೌರ್ಬಲ್ಯಗಳು ಆಧುನಿಕ ಸಮಾಜಕ್ಕೆ ಆದರ್ಶಗಳಾಗಬೇಕಿಲ್ಲ. ಕಡೆಗೂ ಇಲ್ಲಿ ರಾಮ ಯಾಕೆ ಆದರ್ಶವಾಗಿದ್ದಾನೆ ಎಂಬುದು ಸ್ಪಷ್ಟವಾಗುವುದೇ ಇಲ್ಲ. ಬಹುಶಃ ಲೇಖಕ ರಾಮರಾಜ್ಯದ ಆದರ್ಶಗಳನ್ನು ಸೂಕ್ಷ್ಮವಾಗಿಎತ್ತಿಹಿಡಿಯುತ್ತಿರಬಹುದು.

ಕೌಟುಂಬಿಕ ಸುಖ
ಶಿವ ಒಬ್ಬ ಅಲೆಮಾರಿಯಾದರೂ ಅವನು ಏಕಾಂಗಿಯಲ್ಲ. ಯುದ್ಧವಾಗಲೀ, ಪ್ರಯಾಣವಾಗಲೀ ಕುಟುಂಬದ ಜೊತೆಜೊತೆಗೇ ಚಲಿಸುವವನು. ತಾನು ಅನಿವಾರ್ಯವಾಗಿ ಕುಟುಂಬದಿಂದ ಹೊರಗಿರಬೇಕಾದ ಸಂದರ್ಭಗಳಲ್ಲಿ ಕೂಡಾ, ಕುಟುಂಬದ ಸಾಮೀಪ್ಯಕ್ಕೆ ಹಾತೊರೆಯುವವನು. ದಂಡಕಾರಣ್ಯದ ಮೂಲಕ ಕಾರ್ತೀಕ, ಗಣಪತಿ, ಸತಿ, ನಂದಿ, ವೀರಭದ್ರ ಮುಂತಾದವರನ್ನು ಕೂಡಿಕೊಂಡು ಪಂಚವಟಿಗೆ ಹೋಗುವ ಪ್ರಸಂಗವಂತೂ ಸಾಹಸದ ಜೊತೆಗೆ ಬೇಟೆ, ಮೋಜು, ಹಾಡು, ದಂಪತಿಗಳ ಸಲ್ಲಾಪ, ನರ್ತನ ವಿನೋದಗಳಿಂದ ಕೂಡಿ ಅನನ್ಯವಾಗಿದೆ. ಎಲ್ಲಾ ಜಂಜಾಟವನ್ನು ತ್ಯಜಿಸಿ ಸತಿಯ ಹಿಂದೆ ಮುಂದೆ ಸುತ್ತಾಡಿಕೊಂಡಿರುವುದೇ ಸುಖ ಎಂದು ಶಿವ ನೊಮ್ಮೆ ಹೇಳುತ್ತಾನೆ. ನಿರಂತರ ಪ್ರಯಾಣದ ಈ ಕಥೆಯಲ್ಲಿ ಅನೇಕ ಮಂಗಳಕರ ಸಂಗತಿಗಳು ಘಟಿಸುತ್ತವೆ. ಸೂರ್ಯವಂಶದ ದಂಡನಾಯಕ ಪರ್ವತೇಶ್ವರನನ್ನು ಪ್ರೇಮಿಸಿದ ಚಂದ್ರವಂಶದ ಆನಂದಮಯಿಯೊಡನೆ ವಿವಾಹ ಮಾಡಿಸುವಲ್ಲಿ ಶಿವ ಪ್ರಮುಖ ಪಾತ್ರವನ್ನು ವಹಿಸುತ್ತಾನೆ. ವೀರಭದ್ರನ ಜೊತೆ ತನ್ನ ಜನಾಂಗದ ಕೃತ್ತಿಕೆಯನ್ನು ಮದುವೆಮಾಡಿಸುವಲ್ಲಿ ಕೂಡ ಯಶಸ್ವಿಯಾಗುತ್ತಾನೆ. ಕೊನೆಗೆ ಬೃಹಸ್ಪತಿ ಮತ್ತು ತಾರೆಯನ್ನು ಒಂದು ಗೂಡಿಸುವವನೂ ಅವನೇ. ಪರಸ್ಪರ ಶತ್ರು ವರ್ಗದವರ, ವಿಭಿನ್ನ ಜನಾಂಗದವರ ನಡುವೆ ವಿವಾಹವನ್ನು ನಡೆಸುವುದರ ಮೂಲಕ ಅವುಗಳ ಐಕ್ಯತೆಗೆ ಕಾರಣವಾಗುತ್ತಾನೆ. ಈ ಎಲ್ಲವೂ ಮನುಷ್ಯ ಪ್ರೀತಿಗೆ, ಕುಟುಂಬ ಸೌಖ್ಯಕ್ಕೆ ಶಿವ ಕೊಟ್ಟ ಮಹತ್ವವನ್ನು ವ್ಯಕ್ತಪಡಿಸುತ್ತದೆ. ಇನ್ನೊಂದು ಅರ್ಥದಲ್ಲಿ ಇವೆಲ್ಲವೂ ಕೇಡಿನ ತೀವ್ರತೆಯನ್ನು ಕಡಿಮೆಗೊಳಿಸಬೇಕೆಂಬ, ಒಳಿತು ಕೆಡಕುಗಳ ಪರಿಮಾಣವನ್ನು ಕಾಯ್ದುಕೊಳ್ಳಬೇಕೆನ್ನುವ ಶಿವನ ಪ್ರಯೋಗದ ರೂಪವೇ ಆಗಿರುವಂತೆ ಕಾಣುತ್ತದೆ.
ಸೋತ ದೇವರು
'ದೇವರು ಸೋಲುವುದಿಲ್ಲ. ನೀನು ಸೋಲಬಾರದು...' ಮಾನವ ಜನಾಂಗದ ಮೇಲೆ ಅಪಾರ ದುಷ್ಪರಿಣಾಮವನ್ನು ಎಸಗುವ ಮಾರಕವಾದ 'ಪಾಶುಪತಾಸ್ತ್ರವನ್ನು (Nuclear Bomb) ಪ್ರಯೋಗವಾಡಬಾರದು' ಎಂದು ಮಿತ್ರನಿಂದ ಎಚ್ಚರಿಕೆಯ ಮಾತುಗಳಿಗೆ ತಲೆಬಾಗಿ ಒಪ್ಪಿಕೊಂಡು ಬಂದ ಶಿವ ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳುವುದು ವಿಪರ್ಯಾಸ. ಪಾಶುಪತಾಸ್ತ್ರವನ್ನು ಪಡೆದುಕೊಂಡು 'ಪರಿಹಾ'ದಿಂದ ಬರುವ ವೇಳೆಗೆ ಸತಿ ದಕ್ಷನ ಕುತಂತ್ರಕ್ಕೆ ಬಲಿಯಾಗಿ, ಶತ್ರುಗಳ ಜೊತೆ ಭಯಂಕರವಾಗಿ ಹೋರಾಡಿ ಮಡಿದಿರುತ್ತಾಳೆ. ಅದರಿಂದ ಕೋಪಗೊಂಡ ಶಿವ, ಗೋಪಾಲನಂತಹವರ ವಿರೋಧವನ್ನೂ ಲೆಕ್ಕಿಸದೆ ದೇವಗಿರಿಯ ಮೇಲೆ ಪಾಶುಪತಾಸ್ತ್ರದ ಪ್ರಯೋಗ ಮಾಡುತ್ತಾನೆ. ಪ್ರಯೋಗ ಮಾಡುವ ಮುನ್ನ ದಕ್ಷನ ಕುತಂತ್ರಗಳಿಗೆ ಸಂಬಂಧಿಸದ ಅಮಾಯಕ ಪ್ರಜೆಗಳಿಗೆ ದೇವಗಿರಿಯಿಂದ ಹೊರಗೆ ಹೋಗಲು ಪರವಾನಗಿಯನ್ನು ನೀಡಲಾಗುತ್ತದೆ. ದಕ್ಷನ ಹೆಂಡತಿಯಾದ ವೀರಿನಿ, ಆನಂದಮಯಿ ಮುಂತಾದವರು ಅದರಿಂದ ಹೊರಬರಲು ನಿರಾಕರಿಸುತ್ತಾರೆ. ಶಿವ ಪಾಶುಪತಾಸ್ತ್ರದ ಪ್ರಯೋಗವಾಡಿ, ಅದರ ವಿಕಿರಣ ಪ್ರಭಾವಲಯದ ಆಚೆಗೆ ಕುದುರೆ ಏರಿ ಓಡುತ್ತಾನೆ. ದೇವಗಿರಿ ದಕ್ಷನನ್ನೂ ಒಳಗೊಂಡು ಭಸ್ಮವಾಗುತ್ತದೆ.
ಸತಿಯ ಕೊಲೆ ಶಿವನ ವೈಯಕ್ತಿಕ ನಷ್ಟ. ಅವಳ ಮೇಲಿನ ಮೋಹ ಅವನನ್ನು ಕುರುಡಾಗಿಸುತ್ತದೆ. ಅವನ ವೈಯಕ್ತಿಕ ನಷ್ಟವನ್ನು ಸಾರ್ವಜನಿಕ ನಷ್ಟದಂತೆ ತೋರಿಸಿರುವುದು ಅದಕ್ಕೆ ಪ್ರತಿಯಾಗಿ ಸುಸಜ್ಜಿತವಾದ ಆಧುನಿಕತೆಯಿಂದ ಕೂಡಿದ ಇಡಿಯ ದೇವಗಿರಿಯನ್ನೇ ಅವನ ಈ ವರೆಗಿನ ನಂಬಿಕೆಗಳಿಗೆ ವ್ಯತಿರಿಕ್ತವಾಗಿ ಸ್ಫೋಟಿಸುವುದು ಅವನ ಮಿತಿಯಾಗಿದೆ. ಶಿವನ ಗೈರುಹಾಜರಿಯಲ್ಲಿ, ದಕ್ಷನ ಕುಟಿಲ ನೀತಿಯನ್ನು ಎದುರಿಸಲಾರದ ಸತಿ ಒಮ್ಮೆ ಯುದ್ಧದಿಂದ ಗಾಯಗೊಂಡು ಪಲಾಯನ ಗೈಯುತ್ತಾಳೆ. ಅದಕ್ಕೂ ಮುನ್ನವೇ ನಾಗಾಗಳ ವಿರುದ್ಧ ಯುದ್ಧವೊಂದರಲ್ಲಿ ಪ್ರಾಣಪಾಯಕ್ಕೆ ಸಿಲುಕಿ ಪಾರಾಗುತ್ತಾಳೆ. ಸತಿಯ ಮಿತಿಯನ್ನು ತಿಳಿದೂ ಶಿವ ಅವಳನ್ನು ದಂಡನಾಯಕಿಯನ್ನಾಗಿ ಮಾಡಿ ತಾನು 'ಪರಿಹಾ'ಕ್ಕೆ ಪ್ರಯಾಣ ಬೆಳೆಸುತ್ತಾನೆ. ಇದು ಶಿವನ ಮಿತಿಯೂ ಆಗಿದೆ. ಇಂತಹ ಕಡೆಗಳೆಲ್ಲೆಲ್ಲಾ ಶಿವ ಸಾಮಾನ್ಯ ಮನುಷ್ಯರಿಗೆ ಇರುವ ಮಿತಿಗಳಿಂದ ಹೊರತಾಗಿಲ್ಲ ಎಂಬುದು ವ್ಯಕ್ತವಾಗುತ್ತದೆ. ಲೇಖಕನ ಉದ್ದೇಶವೂ ಬಹುಶಃ ಇದುವೇ ಆಗಿರಬಹುದು.
'ದುಷ್ಟ ಸಂಹಾರಕ, ಕಾಳಗದಲ್ಲಿ ರುದ್ರ ಭಯಂಕರ, ಯಾರೂ ಭ್ರಷ್ಟಗೊಳಿಸಲು ಸಾದ್ಯವಿಲ್ಲದ ಪ್ರಬಲ ನಾಯಕ, ವಿನೋದ ಹಾಗೂ ಶೀಘ್ರ ಕೋಪ ಎರಡನ್ನೂ ಸಮಾನವಾಗಿ ಉಳ್ಳವನು, ಪ್ರೀತಿಯ ಎದುರಿಗೆ ಯಾವುದೂ ಶ್ರೇಷ್ಠವಲ್ಲವೆಂದು ಅದನ್ನು ಎತ್ತಿಹಿಡಿಯುವ ಉತ್ಕಟ ಪ್ರೇಮಿ, ತನ್ನ ನಾಟ್ಯದಲ್ಲಿಯೇ ಲೀನವಾಗಿಬಿಡುವ ನಟರಾಜ 'ಇಂತಹ ವ್ಯಕ್ತಿ ಏನಾದರೂ ಬದುಕಿದ್ದುದೇ ಆದರೆ ಅದು ಪುರಾಣಗಳಲ್ಲಿ ಮಾತ್ರ' ಎಂದು ಇಲ್ಲಿಗೆ ಬಂದ ವಿದೇಶೀಯರು ಅಚ್ಚರಿಪಟ್ಟಿರುವರೆಂದು ಲೇಖಕ ತಮ್ಮ ಮುನ್ನುಡಿಯಲ್ಲಿ ಹೇಳಿಕೊಂಡಿದ್ದಾರೆ. ಅಂತಹ ವಿದೇಶೀಯರ ನಂಬಿಕೆಗಳೇ ಕಾಲಾನುಕ್ರಮದಲ್ಲಿ ನಮ್ಮ ನಂಬಿಕೆಗಳೂ ಆಗಿಬಿಟ್ಟದ್ದು ವಿಷಾದನೀಯ ಎನ್ನುತ್ತಾರೆ.
'This is a fictional series a tribute to my god; I found Him after spending many years in the wilderness of atheism. I hope you find your god as well. It doesn't matter in what form we find Him, so long as we do find Him eventually. Whether He comes to us as Shiva or Vishnu or Shakti Maa or Allah or Jesus Christ or Buddha or any other of His myriad forms, He wants to help us. Let us allow Him to do so." (Preface: The Oath Of Vayuputras)
ರಾಮ ನಿರ್ಮಿಸಿದ, ವರ್ಣಾಶ್ರಮ ಆಧಾರಿತ ಖಂಡ 'ಮೆಹುಲಾ'ವನ್ನು ನಿರ್ನಾಮಗೊಳಿಸಿ, ಅಖಂಡ ಭಾರತವನ್ನು ಕನಸಿದ ಶಿವನನ್ನು ಕಂಡಿರಿಸಿದ ಶ್ರೇಯಸ್ಸು ಅಮಿಷ್ ತ್ರಿಪಾಠಿಯವರಿಗೆ ಸಲ್ಲುತ್ತದೆ. ಪ್ರಾದೇಶಿಕತೆ ತಲೆಯೆತ್ತಿ ಅಖಂಡ ಭಾರತದ ಅಸ್ತಿತ್ವಕ್ಕೆ ಧಕ್ಕೆ ತರುತ್ತಿರುವ ಇಂದಿನ ಸನ್ನಿವೇಶದಲ್ಲಿ ಈ ಲೇಖಕ ಕಂಡಿರುವ ಅಖಂಡ ಭಾರತದ ಕನಸು ಪ್ರಸ್ತುತವಾಗಿದೆ.

-ಗಿರಿಜಾಶಾಸ್ತ್ರಿ
girijashastry@gmail.com


(ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555ಆನ್ ಲೈನಲ್ಲಿ ಸಖಿ ಓದಲು http://www.magzter.com/IN/Express-Network-Private-Limited/Sakhi/Women%27s-Interest/ಗೆ ಭೇಟಿನೀಡಿ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com