ಅಫೇರ್ & ಲವ್‌ಲೀ...

ಅಫೇರ್ & ಲವ್‌ಲೀ...

ಸಂಜೆಯ ಹೊಂಬಿಸಿಲು ಕ್ಷಣ ಕ್ಷಣಕ್ಕೂ ಬಾಡುತ್ತಿತ್ತು. ಹಳ್ಳಿಯ ಚಿಕ್ಕ ಬೀದಿಯೊಂದರ ಮೂಲೆಯಲ್ಲಿ ಶೀಲಾ ತೀರಾ ಅನ್ಯಮನಸ್ಕಳಾಗಿ ಕುಳಿತಿದ್ದಳು. ಆ ಕ್ಷಣಕ್ಕೆ ಆಕೆಯನ್ನು ಯಾರು ನೋಡಿದರೂ ಮರುಕವೆನಿಸುತ್ತಿತ್ತು. ದಿನ ದಿನಕ್ಕೂ ಆಕೆಯ ಬದುಕು ಮಂಕಾಗುತ್ತಿತ್ತು. ಆ ಮುಖವನ್ನು ವರ್ಣಿಸುವುದು ಅಸಾಧ್ಯದ ಮಾತಾಗಿತ್ತು. ಬಾಡಿ ಹೋದ ಆ ಮುಖದಲ್ಲಿ ಕಳೆದ ಬದುಕಿನ ಕಷ್ಟಗಳ ಛಾಯೆ ಮಾತ್ರ ಇತ್ತು. ಆ ಕಣ್ಣುಗಳಲ್ಲಿ ಅಪಾರವಾದ ದುಃಖ ಮರುಕ ಯಾಕೆ? ಏನು? ಎಂದು ಕೇಳುವವರಿಲ್ಲ. ಕೇಳಿದ್ದರೂ ಆಕೆ ಏನು ಹೇಳಿಯಾಳು? ಯಾವ ದೊಡ್ಡ ಸುಖ ಅವಳಿಗಿರಲಿಲ್ಲ. ಇನ್ನೊಬ್ಬರ ಜೀವನದಲ್ಲಿ ಸುಖವಿದೆ, ತನಗೂ ಅದುದೊರೆಯಬೇಕೆಂಬ ಆಸೆ. ಹದಿನೆಂಟು ವರ್ಷಕ್ಕೆ ಹೆತ್ತವರಿಲ್ಲದ ಆಕೆಯನ್ನು ಸಂಬಂಧಿಕರು ದಿಕ್ಕು ದೆಸೆಯಿಲ್ಲದೆ ಎಲ್ಲಿಂದಲೋ ಬಂದವ್ಯಕ್ತಿಯೊಡನೆ ಮದುವೆ ಮಾಡಿಸಿದ್ರು. ಮಕ್ಕಳಾಗದ ಕಾರಣಕ್ಕಾಗಿ ಇತರರ ಮುಂದೆ ಬಡಿದುಅವಮಾನಗೊಳಿಸುತ್ತಿದ್ದ ಆಕೆಯ ಗಂಡ. ಕಾಲ ಉರುಳುತ್ತಿದ್ದಂತೆ ಆಕೆ ಹೆಣ್ಣು ಮಗುವಿಗೆ ಜನ್ಮವಿತ್ತಳು. ಆದರೂ... ಗಂಡನ ಹಿಂಸೆ ತಾರಕ್ಕೇರಿತು. ಮಗಳು ಬೆಳೆದು ದೊಡ್ಡವಳಾದಂತೆ ಅಪ್ಪಕಣ್ಮುಚ್ಚಿದ.

ಅವಳೆದೆಯಲ್ಲಿ ಹುದುಗಿರುವ ಸತ್ಯ ಆಕೆಯನ್ನು ದಿನ ನಿತ್ಯ ಸುಡುತ್ತಿತ್ತು. ಇದರಿಂದ ಮಗಳಿಗೆ ಮುಕ್ತಿ ಹೇಗೆ? ಇವತ್ತಿನವರೆಗೂ... ಮುಚ್ಚಿಟ್ಟ ಸತ್ಯ ತನ್ನ ಮಗಳಿಗೆ ತಿಳಿಸಲೇಬೇಕು. ಒಂದು ವೇಳೆ ಈ ವಿಷಯ ಇವತ್ತಲ್ಲ ನಾಳೆಯಾದರೂ ಇನ್ಯಾರಿಂದಲೋ ತಿಳಿದುಕೊಂಡಾಗ ಆಕೆ ಹೇಗೆ ಸಹಿಸಿಕೊಳ್ಳಬಹುದು? ನನ್ನ ಬಗ್ಗೆಅವಳಲ್ಲಿ ಯಾವ ಅಭಿಪ್ರಾಯ ಮೂಡಬಹುದು? ನಾನು ಅವಳಿಗೆ ತಿಳಿಸುವುದಕ್ಕೆ ಕಷ್ಟಕರವಾಗಿರುವ ಗುಟ್ಟನ್ನು ಹೇಗೆ ತಿಳಿಸಲಿ? ಏನಾದರಾಗಲಿ ಬೂದಿ ಮುಚ್ಚಿದ ಕೆಂಡದಂತಿರುವ ಸತ್ಯವನ್ನು ಜ್ವಾಲಾಮುಖಿಯಂತೆ ಸ್ಫೋಟಿಸಲೇಬೇಕು. ಸತ್ಯವನ್ನು ಮುಚ್ಚಿಟ್ಟಿರುವ ನನ್ನಂತಹ ಅದೆಷ್ಟೋ ಮಂದಿ ತಾಯಂದಿರು ಈ ಭೂಮಿ ಮೇಲೆ ಇದ್ದಾರೆ. ನಾನು ಆ ರೀತಿ ಮಾಡಿದರೆ ನನ್ನ ಆತ್ಮಕ್ಕೆ ಶಾಂತಿ ಸಿಗಲಾರದು, ನನ್ನ ಮಗಳಿಗೆ ವಂಚನೆ ಮಾಡಿ ಸಾಯಬಾರದು. ಏನಾದರಾಗಲಿ ಇವತ್ತಲ್ಲ ನಾಳೆಯಾದರೂ ನನ್ನ ಮಗಳಿಗೆ ಇಷ್ಟು ವರ್ಷದ ಗುಟ್ಟನ್ನು ತಿಳಿಸಲೇಬೇಕೆಂಬ ಬಯಕೆ ಕಾಡುತ್ತಿತ್ತು. ನೇರವಾಗಿ ಮಗಳಲ್ಲಿ ಹೇಳಲಾಗದೆ ಯೋಚಿಸಿ ಯೋಚಿಸಿ ಕಣ್ಣುಗಳು ತೇವಗೊಂಡವು. ವೇಳೆಯ ಪರಿವೇ ಇಲ್ಲದೆ ಎಲ್ಲವನ್ನು ಮರೆತು ಮೂರು ಸಂಜೆಯ ಹೊತ್ತಲ್ಲಿ ಕುಳಿತು ಅಳುತ್ತಿದ್ದಳು. ಕತ್ತಲಾದಾಗ ಮನೆಯಲ್ಲಿ ದೀಪ ಉರಿಯಬೇಕೆಂದು ತಿಳಿದು ಲಗುಬಗೆಯಿಂದ ಮನೆಯ ಒಳಗೆ ಹೋಗಿ ದೀಪ ಹಚ್ಚಿದಳು. ಇಂತಹ ಜೀವನವನ್ನು ನಡೆಸುವ ಯಾರ ಮುಖದಲ್ಲಿ ಗೆಲುವಿದ್ದೀತು?
ಎಷ್ಟು ಹೊತ್ತು ಯೋಚಿಸಿದಳೋ!... ಆಗಲೇ ಮಗಳು ನಿದ್ರೆ ಹೇಳಿದ್ದಳು. ಇವಳು ಎದ್ದು ಬಂದು ಕಿಟಕಿಯ ಹತ್ತಿರ ನಿಂತಳು. ಮುಂಜಾನೆಯ ಬಣ ಮೌನವಾಗಿ ಸುತ್ತೆಲ್ಲ ತೂಗಾಡುತ್ತಿತ್ತು. ಗಿಡ, ಬಳ್ಳಿ, ನೆಲ, ಮುಗಿಲು, ಎಲ್ಲವೂನಿರ್ವಿಕಾರವಾಗಿ ಕಾಣುತ್ತಿದ್ದವು. ಮನಸುಅವುಗಳಲ್ಲಿ ತೇಲಿ ಹೋಯಿತು. ಕಳೆದ ದಿನಗಳಿಂದ ಆಗೀಗ ಇಣುಕಿ ಹೋಗುತ್ತಿದ್ದ ಯಾವುದೋ ಒಂದು ವಿಚಾರ ಸ್ಪಷ್ಟವಾಯಿತು. ಒಂದು ನಿರ್ಧಾರಕ್ಕೆ ಬಂದಳು. ಒಂದು ಕ್ಷಣ ಮನಸ್ಸು ವಿಪರೀತ ವೇದನೆಗೊಳಗಾಯಿತು. ಆದರೆ ಒಂದು ಕ್ಷಣ ಮಾತ್ರ. ಮರುಕ್ಷಣ ಎಲ್ಲಿಲ್ಲದ ಶಾಂತಿ, ನೆಮ್ಮದಿ, ಸಮಾಧಾನ, ನೆಲೆಸಿದಂತೆ ಭಾಸವಾಯಿತು. ತಿರುಗಿ ಮಲಗಿದ್ದ ಮಗಳ ಹತ್ತಿರ ಕುಳಿತಳು. ದೀಪ ಉರಿಯುತ್ತಲೇ ಇದ್ದಿತು. ಮಗಳು ಸುಖವಾಗಿ ನಿದ್ರೆ ಹೋಗಿದ್ದಳು. ಆಕೆಯ ಶಾಂತವಾದ ಮುಖವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಯೇ ಕಣ್ಣುಗಳು ತೇವಗೊಂಡು ಹೃದಯ ತುಂಬಿ ಬಂತು. ಎರಡು ಕಣ್ಣುಗಳಿಂದ ಹನಿಗಳು ಜಾರಿ ಮುಖದ ಮೇಲೆ ಇಳಿದವು. ಶೀಲಾಳ ಒಲುಮೆ ಉಕ್ಕಿ ಹರಿಯಿತು. ಮಗಳಿಗೆ ಪತ್ರದ ಮೂಲಕ ತಿಳಿಸಲು ನಿರ್ಧರಿಸಿದಳು.

ಪ್ರೀತಿಯ ಮಗಳೇ,
ತಾಯಿ ದೇವರಿಗೆ ಸಮ. ಆದ್ರೂ ಕೂಡಅವಳ ಹೃದಯವೊಂದು ಆಳವಾದ ಬಾವಿ. ಆ ಬಾವಿಯಲ್ಲಿ ಬಗ್ಗಿ ನೋಡಿದರೆ ವಾತ್ಸಲ್ಯವೆಂಬ ನೀರು ತುಂಬಿರುತ್ತದೆ. ತನ್ನ ನೋವನ್ನೆಲ್ಲಾನುಂಗಿಕೊಂಡು ಮಕ್ಕಳಿಗೆ ಸಂತೋಷವನ್ನು ಕೊಡುವಂತಹ ಅಮೃತ ಬಟ್ಟಲು ಅದು.ಮಕ್ಕಳಾಗುವ ಮೊದಲೇ ದುಡ್ಡಿನ ಆಸೆಗಾಗಿ ನಿಮ್ಮಪ್ಪ ಆಪರೇಷನ್ ಮಾಡಿಸಿಕೊಂಡಿದ್ದಾನೆಂದು ಹೇಳಿದರು. ನನಗೆ ಆಕಾಶವೇ ತಲೆಯ ಮೇಲೆ ಬಿದ್ದಂತಹ ಅನುಭವವಾಯಿತು. ಆ ಕ್ಷಣದಲ್ಲಿಯೇ ಸಾಯುವ ನಿರ್ಧಾರ ಮಾಡಿದೆ. ಕೋಣೆಯಲ್ಲಿ ಕುತ್ತಿಗೆಗೆ ಸೀರೆ ಕಟ್ಟಿ ನೇಣು ಹಾಕಿಕೊಳ್ಳಲು ಮುಂದಾದೆ, ಅಷ್ಟರಲ್ಲಿ ಕೆಳಗಿನ ಮನೆಯಿಂದ ಯಾವುದೋ ಕೆಲಸ ಹೇಳಲೆಂದು ಧಾವಿಸಿದ ಗೌಡರ ಮಗ ಒಳಗಿಂದ ಕೇಳುತ್ತಿದ್ದ ಶಬ್ದಕ್ಕೆ ಕಿಟಕಿಯಿಂದ ನೋಡಿ ನನ್ನನ್ನು ಸಾಯುವ ಸ್ಥಿತಿಯಿಂದ ಪಾರು ಮಾಡಿದರು. ನಾನು ಒಳಗೆ ಬರಬೇಡಿ ಎಂದರೂ ಅದನ್ನು ಲಕ್ಷಿಸದೆ ಬಾಗಿಲೊಡೆದು ಬಂದು ಸೀರೆಯನ್ನು ತುಂಡರಿಸಿ ಕಾಪಾಡಿದರು. ನಾನಾಗಿಯೇ ಸಾಯಲು ಮನಸ್ಸು ಮಾಡಿದರೂ. ಆ ಕ್ಷಣದಲ್ಲಿ ರಕ್ಷಿಸಿದರು. ಅವರು ನನಗೆದೇವರಂತೆ ಕಂಡರು. ನನ್ನೆಲ್ಲಾ ಸಂಕಟವನ್ನುಅವರಲ್ಲಿ ತೋಡಿಕೊಂಡೆ. ತಾಯ್ತನದಕುರುಹಾಗಿ ನನಗೊಂದು ಮಗು ಬೇಕು. ಆದರೆ ನನ್ನ ಗಂಡನಿಂದ ಅದು ಸಾಧ್ಯವಿಲ್ಲದಮಾತಾಗಿತ್ತು. ಆದರೂ ನಾನು ಬಂಜೆ ಎಂಬ ಹಣೆಪಟ್ಟಿ ಕೊಟ್ಟಿಕೊಂಡು ಸಮಾಜದಲ್ಲಿಬಾಳಲಾಗುವುದಿಲ್ಲ. ಅದಕ್ಕಾಗಿ ಈ ನಿರ್ಧಾರ ಎಂದು ಹೇಳಿದೆ. ಗೌಡರ ಮಗನು ಅದೇನೋ ನಿರ್ಧಾರ ಮಾಡಿದರೋ ತಿಳಿಯದು. ನೀನು ಮುಂದೊಂದು ದಿನ ಆತ್ಮಹತ್ಯೆ ಮಾಡಿಕೊಳ್ಳುವುದು ಖಂಡಿತ ಎಂದು ಒಮ್ಮೆ ನನ್ನನ್ನು ತಟ್ಟಿ ಹಿಡಿದುದಷ್ಟೇ ಗೊತ್ತು. ಆ ಪ್ರತಿಫಲವೇ ನೀನು ಮಗು. ನಿನ್ನೆಲ್ಲಾ ಆಟ ತೊದಲುಗಳನ್ನು ನೋಡಿ ಆ ಕಹಿ ಘಟನೆ ಮರೆತು ಹೋಯಿತು. ಗಂಡನಾದವನ ಹಿಂಸೆ ತಾರಕ್ಕೇರಿದರೂ ನಿನಗಾಗಿ ಎಲ್ಲ ಸಹಿಸಿಕೊಂಡೆ. ಆದರೆ ಗಂಡ ಅಚಾನಕ್ಕಾಗಿ ಸತ್ತು ಹೋದ ಮೇಲೆ ತಪ್ಪಿತಸ್ಥ ಭಾವನೆ ನನ್ನನ್ನು ಚುಚ್ಚಿ ನೋಯಿಸುತ್ತಿದೆ. ಮಗಳೇ ಹೆಣ್ತನದ ಬಾಳು ಸಾರ್ಥಕವಾಗುವುದು ತಾಯಿ ಆದಾಗಲೇ ಎಂದು ಹಿರಿಯರು ಹೇಳುತ್ತಾರೆ. ಮಗುವಿಗಾಗಿ ದಾರಿ ತಪ್ಪಿದೆ ಹೊರತು ಹಣಕ್ಕಾಗಿ, ಸಂತೋಷಕ್ಕಾಗಿ ಅಲ್ಲ ಎಂಬುದನ್ನು ನೀನು ತಿಳಿಯಬೇಕು ಮಗಳೆ. ನೀನು ನಿನ್ನ ತಂದೆ ಯಾರೆಂದು ಕೇಳಿದಾಗ ನನಗೆ ತಪ್ಪಿತಸ್ಥ ಭಾವನೆ ಬಂದಿದ್ದರಿಂದ ಇದನ್ನೆಲ್ಲ ನಿನಗೆ ಪತ್ರದ ಮೂಲಕ ಹೇಳಿ ನಿರಾಳವಾಗುತ್ತಿದ್ದೇನೆ. ನನ್ನ ಪಶ್ಚಾತಾಪಕ್ಕೆ ಸಾವು ಉತ್ತರವಾಗಲಿ ಎಂಬುದೇ ನನ್ನ ಬಯಕೆ. ನಿನ್ನನ್ನು ಒಬ್ಬಂಟಿಯಾಗಿರಿಸಿ ಬಿಟ್ಟು ಹೋಗುವುದಕ್ಕೆ ಕ್ಷಮಿಸು.

ಅಂದು ಮಗಳಿಗೆ ಕೊನೆಯ ಪರೀಕ್ಷೆ, ಅವಳಿಗೆ ಎಂದಿನಂತೆ ಪರೀಕ್ಷೆ ಬರೆಯಲಾಗಲಿಲ್ಲ. ಯಾಕೋ ಮನೆಗೆ ಹೋಗಬೇಕೆನಿಸಿ ಸರಸರನೇ ಬರೆದು ಮುಗಿಸಿ ಮನೆ ಹಾದಿ ಹಿಡಿದಿದ್ದಳು.ಮನಸ್ಸಿನಲ್ಲಿ ಏನೋ ಸಂಕಟ ಮೂಡಿ ಹೃದಯ ಭಾರವಾಗಿತ್ತು. ಯಾರೋ ಹೇಳಿದರೆಂದು ಅಮ್ಮನ ಬಳಿ ತನ್ನ ತಂದೆ ಯಾರೆಂದು ಕೇಳಬಾರದಿತ್ತು ಎಂದುಕೊಂಡಳು. ಮನೆ ಕಡೆ ಧಾವಿಸಿ ಬಂದಾಗ ಬಾಗಿಲಿನಲ್ಲಿಯೇ ಅಮ್ಮನ ಕೈ ಬರಹದ ಪತ್ರ ನೋಡಿದೊಡನೆ ಹೃದಯ ರೋದಿಸತೊಡಗಿತು. ಪತ್ರ ಓದುತ್ತಿದ್ದಂತೆ ಕುಸಿದು ಬಿದ್ದಳು, ತಡವರಿಸಿ ಒಳಗೆ ಹೋದರೆ ಮನೆಯೆಂಬ ಜಗತ್ತುಶೂನ್ಯವಾಗಿತ್ತು.

-ಉದಯಕುಮಾರಿ, ಚೆಂಬು, ಕೊಡಗು

(ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555ಆನ್ ಲೈನಲ್ಲಿ ಸಖಿ ಓದಲು http://www.magzter.com/IN/Express-Network-Private-Limited/Sakhi/Women%27s-Interest/ಗೆ ಭೇಟಿನೀಡಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com