
ಕೋಲ್ಕತ್ತಾ: ಜಾಗತಿಕ ಮಟ್ಟದಲ್ಲಿ ಭಾರತೀಯ ಆಹಾರದ ಜನಪ್ರಿಯತೆಯನ್ನು ಮಾನ್ಯ ಮಾಡಿರುವ ಆಕ್ಸ್ಫರ್ಡ್ ಇಂಗ್ಲಿಶ್ ನಿಘಂಟು ಖೀಮಾ ಮತ್ತು ಪಾಪಡ್ ಪದಗಳನ್ನು ಮೊದಲ ಬಾರಿಗೆ ತನ್ನ ಇಂಗ್ಲಿಶ್ ಪದಗಳ ಪಟ್ಟಿಗೆ ಸೇರಿಸಿಕೊಂಡಿದೆ.
ಸೋಮವಾರ ಬಿಡುಗಡೆಯಾದ ಆಕ್ಸ್ಫರ್ಡ್ ಉನ್ನತ ಕಲಿಕಾ ನಿಘಂಟಿನ ೯ ನೇ ಆವೃತ್ತಿ ಭಾರತೀಯ ಇಂಗ್ಲಿಶ್ ನ ಸುಮಾರು ೨೪೦ ಹೊಸ ಪದಗಳನ್ನು ಹೊಂದಿದೆ.
ಭಾರತೀಯ ಅಡುಗೆಮನೆಗಳಲ್ಲಿ ಸಾಮಾನ್ಯವಾಗಿ ಬಳಸು ಖೀಮ (ಚೆನ್ನಾಗಿ ಕತ್ತರಿಸಿ ಮಾಡಿದ ಮಾಂಸದ ಅಡುಗೆ) ಮತ್ತು ಪಾಪಡ್ (ಹಪ್ಪಳ) ಈ ನಿಘಂಟಿನಲ್ಲಿ ಸೇರಿರುವುದು ವಿಶೇಷ.
ಭಾರತೀಯ ಇಂಗ್ಲಿಶ್ ನಿಂದ ಸೇರ್ಪಡೆಯಾಗಿರುವ ಪದಗಳಲ್ಲಿ ಶೇಕಡಾ ೬೦ ಪದಗಳು ಹಿಂದಿ ಭಾಷಿಕ ಪದಗಳಾಗಿವೆ. ಸಮಾನ್ಯವಾಗಿ ಹೆಚ್ಚು ಬಳಸುವ ಪದಗಳನ್ನು ವಿಶ್ವದ ಹಲವಾರು ತಜ್ಞರ ಸಮಾಲೋಚನೆಯಲ್ಲಿ ಆಯ್ಕೆ ಮಾಡಲಾಗಿದೆ.
ಹಲಾವರು ವರ್ಷಗಳಿಂದ ಸುಮಾರು ೯೦೦-೧೦೦೦ ಭಾರತೀಯ ಪದಗಳು ಆಕ್ಸ್ಫರ್ಡ್ ಇಂಗ್ಲಿಶ್ ನಿಘಂಟಿನಲ್ಲಿ ಸೇರ್ಪಡೆಯಾಗಿವೆ, ಆದರೆ ಈ ಸೇರ್ಪದೆಯಲ್ಲಿ ಈ ವರ್ಷದ್ದೇ ಮೇಲುಗೈ.
ಅಲ್ಲದೆ ಈ ಒಂಭತ್ತನೇ ಆವೃತ್ತಿಯ ನಿಘಂಟಿನಲ್ಲಿ ಒಟ್ಟು ೯೦೦ ಹೊಸ ಪದಗಳು ಸೇರ್ಪಡೆಯಾಗಿವೆ. ಇವುಗಳಲ್ಲಿ ಶೇಕಡಾ ೨೦ರಷ್ಟು ಅಂತರ್ಜಾಲ, ಸಮಾಜಿಕ ಜಾಲತಾಣಗಳಿಗೆ ಸಂಬಂಧಿಸಿದ ಪದಗಳು. ಅವುಗಳಲ್ಲಿ ಕೆಲವು ಹೀಗಿವೆ: ಟ್ರಾಲ್, ಕ್ಯಾಟ್ ಫಿಶ್, ಟ್ವಿಟ್ಟರಾಟಿ, ಟ್ವೀಟೇಬಲ್, ಟ್ವೀಟ್ ಹಾರ್ಟ್, ಅನ್ ಫ್ರೆಂಡ್, ಸೆಲ್ಫಿ ಮುಂತಾದವು.
Advertisement