ಕ್ರೇನ್‌ಬೇಡಿ ಎಂಬ ಕಿರಣ್ ಬೇಡಿ

ಅಣ್ಣಾ ಹಜಾರೆಯವರ ಭ್ರಷ್ಟಾಚಾರ ನಿರ್ಮೂಲನ ಆಂದೋಲನದಲ್ಲಿ ಜತೆಯಾಗಿ ನಂತರ ಕೇಜ್ರಿವಾಲ್ ಜತೆ ಆಮ್ ಆದ್ಮಿ ಪಕ್ಷ ರಚಿಸಿದ್ದ ಕಿರಣ್ ಬೇಡಿ....
ಕಿರಣ್ ಬೇಡಿ
ಕಿರಣ್ ಬೇಡಿ
Updated on

ಅಣ್ಣಾ ಹಜಾರೆಯವರ ಭ್ರಷ್ಟಾಚಾರ ನಿರ್ಮೂಲನ ಆಂದೋಲನದಲ್ಲಿ ಜತೆಯಾಗಿ ನಂತರ ಕೇಜ್ರಿವಾಲ್ ಜತೆ ಆಮ್ ಆದ್ಮಿ ಪಕ್ಷ ರಚಿಸಿದ್ದ ಕಿರಣ್ ಬೇಡಿ ಈಗ ಬಿಜೆಪಿಗೆ ಸೇರ್ಪಡೆಯಾಗುವ ಮೂಲಕ ಸುದ್ದಿಯಾಗಿದ್ದಾರೆ. ಇಷ್ಟೇ ಅಲ್ಲ, ಕಿರಣ್ ಬೇಡಿಯವರನ್ನು ಬಿಜೆಪಿ ದೆಹಲಿ ಮುಖ್ಯಮಂತ್ರಿ ಆಕಾಂಕ್ಷಿ ಎಂದೇ ಬಿಂಬಿಸುತ್ತಿದೆ. ಭಾರತದ ಮೊದಲ ಮಹಿಳಾ ಐಪಿಎಸ್ ಅಧಿಕಾರಿಯೆಂಬ ಹೆಗ್ಗಳಿಕೆ ಗಳಿಸಿರುವ ಕಿರಣ್ ಬೇಡಿ ಬಗ್ಗೆ ಇಲ್ಲಿದೆ ಇಂಟರೆಸ್ಟಿಂಗ್ ಸಂಗತಿಗಳು


1. ಕಿರಣ್ ಬೇಡಿ ಪೂರ್ಣ ಹೆಸರು ಕಿರಣ್ ಪೆಶಾವಾರಿಯಾ

ಕಿರಣ್‌ಬೇಡಿ ಎಂದೇ ಜನಜನಿತವಾಗಿದ್ದರೂ, ಈಕೆಯ ಪೂರ್ಣ ಹೆಸರು ಕಿರಣ್ ಪೆಶಾವಾರಿಯಾ. ಅಪ್ಪನ ಹೆಸರು ಪ್ರಕಾಶ್ ಪೆಶಾವಾರಿಯಾ, ಅಮ್ಮ ಪ್ರೇಮ ಪೆಶಾವಾರಿಯಾ. ಬ್ರಿಜ್ ಬೇಡಿ ಅವರನ್ನು ಮದುವೆಯಾದ ನಂತರ ಕಿರಣ್ ಪೆಶಾವಾರಿಯಾ ಸರ್‌ನೇಮ್ ಚೇಂಜ್ ಮಾಡಿ ಕಿರಣ್ ಬೇಡಿಯಾದರು.

2. ಐಐಟಿ ದೆಹಲಿಯಿಂದ ಪಿಹೆಚ್‌ಡಿ
ಅಮೃತಸರದ ಕಾನ್ವೆಂಟ್ ಸ್ಕೂಲ್‌ನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ಅಮೃತಸರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಇಂಗ್ಲಿಷ್ ಪದವಿ ಪಡೆದ ನಂತರ ಪಂಜಾಬ್ ಯುನಿವರ್ಸಿಟಿಯಲ್ಲಿ ಪೊಲಿಟಿಕಲ್ ಸಯನ್ಸ್‌ನಲ್ಲಿ ಸ್ನಾತಕೋತ್ತರ ಪದವಿ. 1993ರಲ್ಲಿ ಐಐಟಿ ದೆಹಲಿಯಲ್ಲಿ ಸೋಷ್ಯಲ್ ಸಯನ್ಸ್‌ನಲ್ಲಿ ಪಿಹೆಚ್‌ಡಿ. ಮಾದಕ ವ್ಯಸನ ಮತ್ತು ಸಂಸಾರದಲ್ಲಿನ ದೌರ್ಜನ್ಯಗಳ ಬಗ್ಗೆ ಈಕೆ ಪಿಹೆಚ್‌ಡಿ ಪ್ರಬಂಧ ಬರೆದಿದ್ದರು.


3. ಟೆನ್ನಿಸ್ ಚಾಂಪಿಯನ್
ಈಕೆ ನ್ಯಾಷನಲ್ ಹಾಗೂ ಏಷ್ಯನ್ ಟೆನ್ನಿಸ್ ಚಾಂಪಿಯನ್ ಆಗಿದ್ದರು.



4. ಪ್ರಥಮ ಮಹಿಳಾ ಐಪಿಎಸ್ ಆಫೀಸರ್

1972ರಲ್ಲಿ ಐಪಿಎಸ್ (ಇಂಡಿಯನ್ ಪೊಲೀಸ್ ಸರ್ವೀಸ್)ಗೆ ಆಯ್ಕೆಯಾಗುವ ಮೂಲಕ ಭಾರತದ ಪ್ರಥಮ ಮಹಿಳಾ ಐಪಿಎಸ್ ಅಧಿಕಾರಿಯೆಂಬ ಕೀರ್ತಿಗೆ ಭಾಜನರಾದರು. ದೆಹಲಿಯಲ್ಲಿ ಟ್ರಾಫಿಕ್ ಕಮಿಷನರ್, ಮಿಜೋರಾಂನಲ್ಲಿ ಪೊಲೀಸ್ ಡಿಐಜಿ, ಡೈರೆಕ್ಟರ್ ಜನರಲ್ ಆಫ್ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಮೊದಲಾದ ಹುದ್ದೆಗಳನ್ನು ಕಿರಣ್ ನಿರ್ವಹಿಸಿದ್ದಾರೆ.



5. ಗೌರವ ಡಾಕ್ಟರೇಟ್ ಮತ್ತು ಸಂಯುಕ್ತ ರಾಷ್ಟ್ರಗಳಿಂದ ಪದಕ ಗಳಿಸಿದಾಕೆ

ಕಿರಣ್ ಭಾರತದ ಬ್ಯೂರೋ ಆಫ್ ಪೊಲೀಸ್ ರಿಸರ್ಚ್ ಆ್ಯಂಡ್ ಡೆವಲಪ್‌ಮೆಂಟ್‌ನ ಡೈರೆಕ್ಟರ್ ಜನರಲ್ ಆಗಿ ಕಾರ್ಯ ನಿರ್ವಹಿಸಿದ್ದರು. ಇದಕ್ಕಿಂತ ಮುನ್ನ ಈಕೆ ಸಂಯುಕ್ತ ರಾಷ್ಟ್ರಗಳ ಶಾಂತಿಪಾಲನಾ ಇಲಾಖೆಯಲ್ಲಿ ಪೊಲೀಸ್ ಸಲಹಾಗಾರ್ತಿಯಾಗಿ ಕಾರ್ಯನಿರ್ವಹಿಸಿದ್ದರು. ಕಿರಣ್ ಅವರ ಕಾರ್ಯದಕ್ಷತೆಗಾಗಿ ಸಂಯುಕ್ತ ರಾಷ್ಟ್ರ ಪದಕ ನೀಡಿ ಗೌರವಿಸಿತ್ತು. ಮಾತ್ರವಲ್ಲದೆ 2005ರಲ್ಲಿ ಡಾಕ್ಟರ್ ಆಫ್ ಲಾ ಗೌರವ ಡಾಕ್ಟರೇಟ್ ಪದವಿಗೂ ಭಾಜನರಾಗಿದ್ದರು.

6.ರಾಮನ್ ಮ್ಯಾಗ್ಸೇಸೆ ಅವಾರ್ಡ್ ವಿಜೇತೆ
ಏಷ್ಯನ್ ನೋಬೆಲ್ ಪ್ರಶಸ್ತಿ ಎಂದೇ ಪರಿಗಣಿಸಲ್ಪಡುವ ರಾಮನ್ ಮ್ಯಾಗ್ಸೇಸೆ ಅವಾರ್ಡ್ ವಿಜೇತೆ ಈ ಕಿರಣ್ ಬೇಡಿ.

7. ಲಾಸ್ ಏಂಜಲೀಸ್‌ನಿಂದ ಸ್ಪೆಷಲ್ ಅವಾರ್ಡ್

ಲಾಸ್ ಏಂಜಲೀಸ್, ಸ್ಟೇಟ್ ಆಫ್ ಕ್ಯಾಲಿಫೋರ್ನಿಯಾ ಕಿರಣ್ ಬೇಡಿ ಅವರಿಗೆ ಸ್ಪೆಷಲ್ ರೆಕಗ್ನಿಶನ್ ಅವಾರ್ಡ್ ನೀಡಿ ಸನ್ಮಾನಿಸಿದೆ.


8. ತಿಹಾರ್ ಜೈಲಿನ ಇನ್‌ಸ್ಪೆಕ್ಟರ್ ಜನರಲ್

ದಕ್ಷಿಣ ಏಷ್ಯಾದ ಅತೀ ದೊಡ್ಡ ಸೆರೆಮನೆ ತಿಹಾರ್ ಜೈಲಿನಲ್ಲಿ ಇನ್‌ಸ್ಪೆಕ್ಟರ್ ಜನರಲ್ ಆಗಿ ಕಾರ್ಯ ನಿರ್ವಹಿಸಿದ್ದರು. ಅಲ್ಲಿ ಕೈದಿಗಳಿಗೆ ಡಿಟಾಕ್ಸಿಫಿಕೇಶನ್ ಪ್ರೋಗ್ರಾಂ, ಆರ್ಟ್ ಆಫ್ ಲಿವಿಂಗ್ ಪ್ರಿಸನ್ ಕೋರ್ಸ್‌ಗಳು, ಯೋಗಾ, ಪ್ರಾಣಾಯಾಮ ಸೇರಿದಂತೆ ಸಾಕ್ಷರತೆಯ ಕಾರ್ಯಕ್ರಮಗಳನ್ನೂ ಹಮ್ಮಿಕೊಂಡ ಹೆಗ್ಗಳಿಕೆ ಕಿರಣ್ ಬೇಡಿಯದ್ದು.


9. ಅಣ್ಣಾ ಹಜಾರೆ ಜತೆ ಭ್ರಷ್ಟಾಚಾರ ನಿರ್ಮೂಲನಾ ಆಂದೋಲನ

ಭಾರತದಲ್ಲಿ ಸ್ವಾತಂತ್ರ್ಯ ಹೋರಾಟದ ನಂತರ ನಡೆದ ಅತೀ ದೊಡ್ಡ ಚಳವಳಿಯಾದ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಜನಲೋಕಪಾಲ ಆಂದೋಲನದಲ್ಲಿ ಅಣ್ಣಾ ಹಜಾರೆ ಜತೆ ಸಕ್ರಿಯವಾಗಿ ಭಾಗವಹಿಸಿದ್ದರು.




10. ಜೀವನ ಮತ್ತು ಸಾಧನೆಯ ಬಗ್ಗೆ ಸಿನಿಮಾ

ಕಿರಣ್ ಬೇಡಿಯವರ ಜೀವನ ಮತ್ತು ಸಾಧನೆಯ ಬಗ್ಗೆ ಆಸ್ಟ್ರೇಲಿಯಾದ ಸಿನಿಮಾ ನಿರ್ಮಾಪಕ ಮೆಗಾನ್ ಡೋನ್‌ಮೆನ್ 'ಯೆಸ್ ಮೇಡಂ, ಸರ್‌' ಎಂಬ ಸಿನಿಮಾ ನಿರ್ಮಿಸಿದ್ದಾರೆ. ಇದು ಟೊರಾಂಟೋ, ದುಬೈ, ಅಡಿಲೇಡ್‌ನಲ್ಲಿ ಪ್ರದರ್ಶನ ಕಂಡಾಗ ಕಿರಣ್ ಬೇಡಿ ಅಲ್ಲಿ ಉಪಸ್ಥಿತರಿದ್ದು ಪ್ರತೀ ಶೋ ಮುಗಿದ ನಂತರ ಜನರೊಂದಿಗೆ ಸಂವಾದವನ್ನೂ ನಡೆಸಿದ್ದು ವಿಶೇಷವಾಗಿತ್ತು. ಅಮೆರಿಕ ಫಿಲ್ಮ್ ಫೆಸ್ಟ್‌ನಲ್ಲಿ ಉತ್ತಮ ಡಾಕ್ಯುಮೆಂಟರಿ ವಿಭಾಗದಲ್ಲಿ 100,000 ಡಾಲರ್ ನಗದು ಬಹುಮಾನ ಗೆದ್ದ ಈ ಚಿತ್ರ ಸಂತ ಬರ್ಬರಾ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್‌ನಲ್ಲಿ 2500 ಡಾಲರ್ ನಗದು ಬಹುಮಾನದೊಂದಿಗೆ ಸೋಷ್ಯಲ್ ಜಸ್ಟೀಸ್ ಅವಾರ್ಡ್ ಗೆದ್ದುಕೊಂಡಿತ್ತು.
ಕಿರಣ್ ಬೇಡಿಯವರ ಕತೆಯನ್ನಾಧರಿಸಿ ತೆಲುಗಿನಲ್ಲಿ 1990ರಲ್ಲಿ 'ಕರ್ತವ್ಯಂ' ಎಂಬ ಚಿತ್ರ ತೆರೆಕಂಡಿತ್ತು. ಕಿರಣ್ ಬೇಡಿ ಪಾತ್ರದಲ್ಲಿ ವಿಜಯಶಾಂತಿ ನಟಿಸಿದ್ದು, ಇದು ಮಹಿಳೆಯರಿಗೆ ಸ್ಪೂರ್ತಿ ನೀಡಿದ ಸಿನಿಮಾವಾಗಿತ್ತು.



11. ಕಿರಣ್ ಬೇಡಿ ಆತ್ಮಕತೆ

‘I Dare’ ಮತ್ತು ‘‘The Kindly Baton’’ ಎಂಬ ಹೆಸರಲ್ಲಿ ಎರಡು ಆತ್ಮಕತೆಗಳು ಈಗಾಗಲೇ ಪ್ರಕಟಗೊಂಡಿವೆ.  government@net ಎಂಬ ಪುಸ್ತಕ ಬೇಡಿಯವರ ಸಂಪಾದಕತ್ವದಲ್ಲಿ ಬಿಡುಗಡೆಯಾದರೆ, ‘‘What went wrong’, ‘As I see’ , " It’s Always possible" -ಕಿರಣ್ ಬೇಡಿ ಬರೆದ ಪುಸ್ತಕಗಳು.



12. ನವಜ್ಯೋತಿ (1988) ಮತ್ತು ಇಂಡಿಯಾ ವಿಷನ್ ಫೌಂಡೇಶನ್ ಸಂಸ್ಥಾಪಕಿ

1988ರಲ್ಲಿ ನವಜ್ಯೋತಿ ಮತ್ತು 1994ರಲ್ಲಿ ಇಂಡಿಯಾ ವಿಷನ್ ಫೌಂಡೇಶನ್ ಎಂಬ ಎರಡು ಸಂಸ್ಥೆಗಳನ್ನು ಸ್ಥಾಪಿಸಿದ್ದು, ಈ ಸಂಸ್ಥೆಗಳು ಮಾದಕ ವ್ಯವಸ ಮುಕ್ತ ಸಮಾಜಕ್ಕಾಗಿ ಕಾರ್ಯವೆಸಗುತ್ತಿವೆ.

13. ಲಭಿಸಿದ ಪ್ರಶಸ್ತಿಗಳು ಹಲವು

ರಾಷ್ಟ್ರಪತಿಗಳ ಗ್ಯಾಲೆಂಟ್ರಿ ಅವಾರ್ಡ್ (1979)
ವುವೆನ್ ಆಫ್ ದ ಇಯರ್ ಅವಾರ್ಡ್ (1980)
ಏಷ್ಯಾ ರೀಜನ್ ಅವಾರ್ಡ್ ಫಾರ್ ಡ್ರಗ್ ಪ್ರಿವೆನ್ಶನ್ ಆ್ಯಂಡ್ ಕಂಟ್ರೋಲ್ (1991)
ಮ್ಯಾಗ್ಸೇಸೆ ಅವಾರ್ಡ್ ಫಾರ್ ಗವರ್ನಮೆಂಟ್ ಸರ್ವೀಸ್ (1994)
ಮಹಿಳಾ ಶಿರೋಣಿ ಅವಾರ್ಡ್ (1995)
ಫಾದರ್ ಮಾಚಿಸ್ಮೋ ಹ್ಯುಮನಿಟೇರಿಯನ್ ಅವಾರ್ಡ್ (1995)
ಲಯನ್ ಆಫ್ ದ ಇಯರ್ (1995)
ಜೋಸೆಫ್ ಬ್ಯೂಸ್ ಅವಾರ್ಡ್ (1997)
ಪ್ರೈಡ್ ಆಫ್ ಇಂಡಿಯಾ (1999)
ಮದರ್ ತೆರೆಸಾ ಮೆಮೋರಿಯಲ್ ನ್ಯಾಷನಲ್ ಅವಾರ್ಡ್ ಫಾರ್ ಸೋಷ್ಯಲ್ ಜಸ್ಟೀಸ್ (2005)



14. ಗಣರಾಜ್ಯೋತ್ಸವ ಪೆರೇಡ್ ಸಾರಥ್ಯ

 1973ರಲ್ಲಿ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಪೊಲೀಸ್ ಪಡೆಯ ಸಾರಥ್ಯವನ್ನು ವಹಿಸಿದ್ದರು

15. ಅಕಾಲಿ ನಿರಂಕಾರಿ ಸಿಖ್ ದಂಗೆಯ ಸದ್ದಡಗಿಸಿದ ಧೀರೆ

1977ರಲ್ಲಿ ಇಂಡಿಯಾ ಗೇಟ್ ಬಳಿ ಅಕಾಲಿ ನಿರಂಕಾರಿ ಸಿಖ್ ದಂಗೆ ನಡೆದಾಗ ಕಿರಣ್ ಬೇಡಿ ಈ ದಂಗೆಯ ಸದ್ದಡಗಿಸಿದ್ದರು.

16. ಕಳ್ಳಬಟ್ಟಿ ಸಾರಾಯಿ ವ್ಯಾಪಾರವೂ ಬಂದ್!

1979ರಲ್ಲಿ ಪಶ್ಚಿಮ ದೆಹಲಿಯ ಡಿಸಿಪಿ ಆಗಿದ್ದಾಗ 200 ವರ್ಷಗಳ ಹಿಂದಿನ ಕಳ್ಳಬಟ್ಟಿ ಸಾರಾಯಿ ವ್ಯಾಪಾರವನ್ನೂ ಬಂದ್ ಮಾಡಿಸಿದ್ದರು.

17. ಒಂದೇ ದಿನದಲ್ಲಿ ಇತ್ಯರ್ಥವಾಗದ ಆದೇಶಗಳ ಚುಕ್ತಾ
1985ರಲ್ಲಿ ಡಿಸಿಪಿಯಾಗಿ ನೇಮಕವಾದಾಗ ಒಂದೇ ದಿನದಲ್ಲಿ ಇತ್ಯರ್ಥವಾಗದೇ ಉಳಿದಿದ್ದ 1600 ಬಡ್ತಿ ಆದೇಶಗಳನ್ನು ಚುಕ್ತಾ ಮಾಡಿದ್ದರು.

18. ನಿವೃತ್ತಿಯ ನಂತರವೂ ಸಕ್ರಿಯ
ನಿವೃತ್ತಿಯ ನಂತರೂ ದೇಶದಲ್ಲಿ ಕಾನೂನಿನ ರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಲೇ ಇರುವ ಏಕೈಕ ಐಪಿಎಸ್ ಆಫೀಸರ್. 2007ರಲ್ಲಿ ನಿವೃತ್ತರಾದ ನಂತರ ಜನರ ದೂರುಗಳನ್ನು ಆಲಿಸಲು, ಪೊಲೀಸರು ದೂರು ಆಲಿಸದೇ ಇದ್ದಾಗ ಶಿಷ್ಟ ರಕ್ಷಣೆಗಾಗಿ ಕಿರಣ್ ಬೇಡಿ ವೆಬ್‌ಸೈಟೊಂದನ್ನು ಆರಂಭಿಸಿದ್ದರು.
http://www.saferindia.com/kiranbedi/  -ಇಲ್ಲಿ ಜನರು ತಮ್ಮ ದೂರುಗಳನ್ನು ದಾಖಲಿಸಿ , ಸಹಾಯ ಪಡೆಯಬಹುದು.


19. ಕ್ರೇನ್ ಬೇಡಿ
ಪಾರ್ಕಿಂಗ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ಪ್ರಧಾನಿ ಇಂದಿರಾ ಗಾಂಧಿಯವರ ಕಾರನ್ನು ಕ್ರೇನ್ ನಿಂದ ಎಳೆದು ದಂಡ ವಿಧಿಸಿದ ಘಟನೆಯ ನಂತರ ಕಿರಣ್ ಬೇಡಿಯವರಿಗೆ ಕ್ರೇನ್ ಬೇಡಿ ಎಂಬ ಹೆಸರು ಬಂತು.



20. ಸಂಯುಕ್ತ ರಾಷ್ಟ್ರಗಳ ಸಿವಿಲಿಯನ್ ಪೊಲೀಸ್ ಅಡ್ವೈಸರ್

ಸಂಯುಕ್ತ ರಾಷ್ಟ್ರದಲ್ಲಿ ಸಿವಿಲಿಯನ್ ಪೊಲೀಸ್ ಅಡ್ವೈಸರ್ ಎಂಬ ಪದವಿಗೇರಿರುವ ಮೊದಲ ಮಹಿಳೆ ಎಂಬ ಹೆಗ್ಗಳಿಕೆಯೂ ಕಿರಣ್ ಬೇಡಿಯವರ ಪಾಲಿಗಿದೆ.


ತನ್ನ ಕರ್ತವ್ಯ ಹಾಗು ನಿಷ್ಠೆಯ ಮೂಲಕ ದೇಶದ ಜನತೆಗೆ ಸ್ಪೂರ್ತಿಯಾದ ಕಿರಣ್ ಬೇಡಿ ಭಾರತದ ಇತಿಹಾಸದಲ್ಲಿ ಮಹತ್ತರ ಸ್ಥಾನವನ್ನು ಗಳಿಸಿಕೊಂಡಿದ್ದಾರೆ...
ಅವರ ಧೈರ್ಯಕ್ಕೆ ಸಲಾಂ...

(ಮಾಹಿತಿ ಸಂಗ್ರಹ) -ರಶ್ಮಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com