ರವಿಪ್ರಕಾಶ

ಸಾಮಾಜಿಕ ಜಾಲತಾಣಗಳು ಪ್ರತಿಯೊಬ್ಬರನ್ನೂ ಕ್ರಿಯಾಶೀಲರನ್ನಾಗಿ ಮಾಡುತ್ತಿದೆ. ಪ್ರತಿಯೊಬ್ಬನಲ್ಲೂ...
ಫೋಟೋಗ್ರಾಫರ್ ರವಿಪ್ರಕಾಶ
ಫೋಟೋಗ್ರಾಫರ್ ರವಿಪ್ರಕಾಶ
Updated on

ಸಾಮಾಜಿಕ ಜಾಲತಾಣಗಳು ಪ್ರತಿಯೊಬ್ಬರನ್ನೂ ಕ್ರಿಯಾಶೀಲರನ್ನಾಗಿ ಮಾಡುತ್ತಿದೆ. ಪ್ರತಿಯೊಬ್ಬನಲ್ಲೂ ಒಬ್ಬ ಬರಹಗಾರ ಜನ್ಮತಾಳುತ್ತಿದ್ದಾನೆ, ಪ್ರತಿಯೊಬ್ಬನಲ್ಲೂ ಒಬ್ಬ ಕವಿ, ವರದಿಗಾರ, ಗಾಯಕ, ಫೋಟೋಗ್ರಾಫರ್ ಅನಾವರಣಗೊಳ್ಳುತ್ತಿದ್ದಾನೆ. ರಿಯಾಲಿಟಿಯಲ್ಲಿ ತನ್ನ ಪ್ರತಿಭೆ ಬಹಿರಂಗಗೊಳಿಸಲು ಸಂಕೋಚ ಪಡುವ ವ್ಯಕ್ತಿಗಳು ಹೀಗೆ ತಮ್ಮೊಳಗಿನ ಸುಪ್ತ ಪ್ರತಿಭೆಗಳನ್ನೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಯಾವ ಹಿಂಜರಿಕೆಯಿಲ್ಲದೆ ತೋರ್ಪಡಿಸಿಕೊಂಡು ಆ ಮೂಲಕ ಮುಖ್ಯವಾಹಿನಿಗೆ ಬರುತ್ತಿದ್ದಾರೆ.

ಅದರಲ್ಲೂ ಫೋಟೋಗ್ರಾಫಿ ಹವ್ಯಾಸ ಇತ್ತೀಚೆಗೆ ವೈರಲ್ ಆಗುತ್ತಿದೆ. ಸ್ಮಾರ್ಟ್ ಫೋನಿನಲ್ಲೇ ತಮ್ಮ ಕ್ಯಾಮೆರಾ ಕೈಚಳಕ ತೋರುತ್ತಿರುವ ಹವ್ಯಾಸಿಗಳು ಆ ನಂತರ ಡಿಎಸ್‍ಎಲ್ಆರ್, 5ಡಿ, 7ಡಿ ಮುಂತಾದ ಕ್ಯಾಮೆರಾಗಳಿಗೆ ಬಂಡವಾಳ ಹೂಡುವಷ್ಟರ ಮಟ್ಟಿಗೆ ಛಾಯಾಗ್ರಹಣದತ್ತ ಆಸಕ್ತಿ ಬೆಳೆಸಿಕೊಳ್ಳುತ್ತಿದ್ದಾರೆ. ಸಾಫ್ಟ್ ವೇರ್ ಟೆಕ್ಕಿಗಳ ಫೇವರಿಟ್ ಟೈಂಪಾಸ್ ಹವ್ಯಾಸ ಫೋಟೋಗ್ರಫಿ ಎಂಬಂತಾಗಿದೆ. ಕೆಲವರು ಮಾತ್ರ ಇದನ್ನು ಹವ್ಯಾಸದಿಂದಾಚೆಗೆ ತುಂಬ ಗಂಬಿsೀರವಾಗಿ ಪರಿಗಣಿಸಿ ಅದರಲ್ಲಿ ಉನ್ನತಿ ಸಾಧಿಸುತ್ತಿದ್ದಾರೆ.

ಅಂಥವರ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಕಾಣಿಸುತ್ತಿರುವ ಒಂದು ಹೆಸರು ಎಸ್. ಎಸ್.ರವಿಪ್ರಕಾಶ್. ರವಿಪ್ರಕಾಶ್ ವೃತ್ತಿಯಿಂದ ಸಾಫ್ಟ್ ವೇರ್ ಟೆಕ್ಕಿಯಾದರೂ ಸುಮಾರು ಒಂದು ದಶಕದಿಂದ ಫೋಟೋಗ್ರಫಿಯನ್ನೇ ಉಸಿರಾಡುತ್ತಿದ್ದಾರೆ. ವನ್ಯಜೀವಿ ಛಾಯಾಗ್ರಹಣದಲ್ಲಿ ಹಂತಹಂತವಾಗಿ ಬೆಳೆದು ಒಂದು ಎತ್ತರವನ್ನು ಸಾಧಿಸಿದ್ದಾರೆ. ಅವರ ಈ ಪರಿಶ್ರಮ ಮತ್ತು ಆಸಕ್ತಿಗೆ ಕಳೆದ ಅಕ್ಟೋಬರ್ ನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಮನ್ನಣೆ ಸಿಕ್ಕಿದೆ.

ಲಂಡನ್ನಿನ ಬಿಬಿಸಿ ವಲ್ರ್ಡ್ ವೈಡ್ ಮತ್ತು ನ್ಯಾಚುರಲ್  ಹಿಸ್ಟರಿ ಮ್ಯೂಸಿಯಂ ನಡೆಸಿದ ಅಂತಾರಾಷ್ಟ್ರೀಯ ಛಾಯಾಗ್ರಹಣ ಸ್ಪರ್ಧೆಯಲ್ಲಿ ದ ಡಿವೈನ್ ಸ್ನೇಕ್ ಎಂಬ ಪೋಟೋಗೆ ಪ್ರಥಮ ಪುರಸ್ಕಾರ ದೊರೆತಿದೆ. ಪ್ಯೂರ್ ಮ್ಯಾಜಿಕ್ ಎಂಬ ಹೆಸರಿನ ಇನ್ನೊಂದು ಛಾಯಾಚಿತ್ರಕ್ಕೆ ಫೈನಲಿಸ್ಟ್  ಪ್ರಶಸ್ತಿ ಸಿಕ್ಕಿದೆ. ಇವು ಸಾಮಾನ್ಯ ಪ್ರಶಸ್ತಿಗಳಲ್ಲ. ಇದನ್ನು ಫೋಟೋಗ್ರಫಿಯ ಆಸ್ಕರ್ ಪುರಸ್ಕಾರ ಎಂದೇ ಪರಿಗಣಿಸಲಾಗುತ್ತದೆ. ಸರೀಸೃಪಗಳ ಮತ್ತು ಉಭಯವಾಸಿಗಳ ಸ್ಥಿರಛಾಯಾಗ್ರಹಣಕ್ಕೆ 1250ಪೌಂಡ್‍ಗಳ ನಗದು ಬಹುಮಾನದೊಂದಿಗೆ ಪ್ರಮಾಣಪತ್ರವನ್ನೂ ಪಡೆದುಕೊಂಡಿರುವ ರವಿಪ್ರಕಾಶ್ ಈ ಪ್ರಶಸ್ತಿ ಗಳಿಸಿದ ಏಕೈಕ ಕನ್ನಡಿಗ ಎಂಬುದು ರಾಜ್ಯದ ಹೆಮ್ಮೆ. ಅಷ್ಟೇ ಅಲ್ಲ. 1986ರ ನಂತರ
ಇದೇ ಮೊದಲ ಬಾರಿಗೆ ಭಾರತೀಯನೊಬ್ಬ ಈ ಪ್ರಶಸ್ತಿಗಳಿಸಿದ್ದು. ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಇಂಗ್ಲೆಂಡಿನ ರಾಜಕುಮಾರಿ ಕೇಟ್ ಮಿಡ್ಲ್  ಟನ್ ಮತ್ತು ಖ್ಯಾತ ವನ್ಯಜೀವಿ ಚಿತ್ರನಿರ್ದೇಶಕ ಡೇವಿಡ್ ಅಟನ್ ಬರೋ ಭಾಗವಹಿಸಿದ್ದು ಹಾಗೂ ಅವರಿಂದ ಪ್ರಶಸ್ತಿ ಸ್ವೀಕರಿಸಿದ್ದು ರವಿಪ್ರಕಾಶ್ ಪಾಲಿನ ಸ್ಮರಣೀಯ ಕ್ಷಣಗಳು.

ಮೇಲ್ನೋಟಕ್ಕೆ ಇವು ನಿಜಕ್ಕೂ ಫೋಟೋಗ್ರಫಿಯೋ ಅಥವಾ ಫೋಟೋಶಾಪ್ ಕರಾಮತ್ತೋ ಅಥವಾ ಪೇಂಟಿಂಗೋ ಎಂಬಷ್ಟು ಅನುಮಾನ ತರಿಸುವ ಇವರ ಕೈಚಳಕ ಬಹುಪಾಲು ಕರ್ನಾಟಕದ ಕಾಡುಗಳಲ್ಲೇ  ನಡೆದಿದೆ. ಪ್ರಥಮ ಬಹುಮಾನ ಪಡೆದ ಆ ಹಾವಿನ ಚಿತ್ರ ರವಿ ಸೆರೆಹಿಡಿದದ್ದು ಶೃಂಗೇರಿಯ ಅವರ ಮನೆಯ ಬಳಿಯಲ್ಲೇ. ಅದೇ ರೀತಿ ಅವರ ಇನ್ನೊಂದು ಕಲಾಕೃತಿಗೆ ಪೀಪಲ್ಸ್ ಚಾಯ್ಸ್ ಪ್ರಶಸ್ತಿ ಕೂಡ ಲಭಿಸಿದೆ.

ತಂದೆ ಹುಟ್ಟುಹಬ್ಬದ ಉಡುಗೊರೆಯಾಗಿ ಕೊಟ್ಟಿದ್ದ ಕ್ಯಾಮೆರಾವನ್ನು ಹಿಡಿದು ಹವ್ಯಾಸ ಆರಂಭಿಸಿದ್ದ ಟಿಸಿಎಸ್ ಉದ್ಯೋಗಿ ರವಿಪ್ರಕಾಶ್ ಛಾಯಾಗ್ರಹಣ ಕ್ಷೇತ್ರದಲ್ಲಿ ಇಂಥ ಸಾಧನೆ ಮಾಡಬಹುದೆಂದು ಸ್ವತಃ ಅವರೇ ಎಣಿಸಿರಲಿಲ್ಲವಂತೆ. ಆದರೆ ವನ್ಯಜೀವಿ ಮತ್ತು ಕ್ರಿಮಿಕೀಟಗಳನ್ನು ಕ್ಯಾಮೆರಾ ಕಣ್ಣುಗಳಲ್ಲಿ ನೋಡುತ್ತಾ ಅವರ ಕ್ರಿಯಾಶೀಲತೆ ದಿನೇದಿನೇ ಇಮ್ಮಡಿಗೊಳ್ಳುತ್ತಾ ಹೋಗಿ ಅವರನ್ನು ಅಂತಾರಾಷ್ಟ್ರೀಯ ಪ್ರಶಸ್ತಿ ಗೆಲ್ಲುವ ಹಂತಕ್ಕೆ ಕರೆತಂದಿದೆ.

ರವಿಪ್ರಕಾಶ್ ಈಗ ಈ ಸಂತಸ ಹಂಚಿಕೊಳ್ಳುವ ನೆಪದಲ್ಲಿ ಇದೇ ವಾರಾಂತ್ಯ ಅಂದರೆ ಜ.30ರಿಂದ ಫೆ1ರ ವರೆಗೆ ಮೂರುದಿನಗಳ ಕಾಲ ತಾವು ಸೆರೆಹಿಡಿದ ಛಾಯಾಚಿತ್ರಗಳ ಪ್ರದರ್ಶನ ಮತ್ತು ಮಾರಾಟವನ್ನು ಏರ್ಪಡಿಸಿದ್ದಾರೆ. ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ನಡೆಯುವ ಈ ಪ್ರದರ್ಶನ ಮಾರಾಟದಲ್ಲಿ ಅಂತಾರಾಷ್ಟ್ರೀಯ ಪ್ರಶಸ್ತಿ ಗಳಿಸಿದ ಚಿತ್ರಗಳೂ ಇಲ್ಲಿ ನೋಡಲು ಹಾಗೂ ಕೊಳ್ಳಲು ದೊರೆಯಲಿವೆ. ಪ್ರದರ್ಶನ  ಬೆಳಿಗ್ಗೆ ಹತ್ತುಗಂಟೆಯಿಂದ ಸಂಜೆ ಐದರ ತನಕ ನಡೆಯಲಿದ್ದು, ಆಸಕ್ತರು ವೆಂಕಟಪ್ಪ ಗ್ಯಾಲರಿಯಲ್ಲಿ ರವಿಪ್ರಕಾಶ್ ರೊಂದಿಗೆ ಸಂವಾದಿಸಬಹುದು ಹಾಗೂ ಫೋಟೋಗಳನ್ನು ವೀಕ್ಷಿಸಬಹುದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com