ಬುರುಡೆಯನ್ನು ವೈದ್ಯರು ಏನು ಮಾಡಿದರು?

'ನಾನೀಗ ಪ್ರತಿದಿನ ಎದ್ದು ದೇವರಿಗೆ ಸಾವಿರ ಸಾವಿರ ವಂದನೆಗಳನ್ನು ಸಲ್ಲಿಸಿಯೇ ಮುಂದುವರಿಯುವುದು' ಎನ್ನುತ್ತಾಳೆ ಇಂಗ್ಲೆಂಡ್‌ನ ಸೌತ್‌ಹ್ಯಾಂಪ್ಟನ್ ನಿವಾಸಿ ಶೆರಿಲ್.
ಶೆರಿಲ್
ಶೆರಿಲ್

'ನಾನೀಗ ಪ್ರತಿದಿನ ಎದ್ದು ದೇವರಿಗೆ ಸಾವಿರ ಸಾವಿರ ವಂದನೆಗಳನ್ನು ಸಲ್ಲಿಸಿಯೇ ಮುಂದುವರಿಯುವುದು' ಎನ್ನುತ್ತಾಳೆ ಇಂಗ್ಲೆಂಡ್‌ನ ಸೌತ್‌ಹ್ಯಾಂಪ್ಟನ್ ನಿವಾಸಿ ಶೆರಿಲ್. ಆದಕ್ಕೆ ಕಾರಣ ಸಾವಿನ ಕದ ತಟ್ಟಿ ಬಂದು ಈಗ ಕಣ್ಮುಂದೆ ಗೆಲುವಿನಿಂದ ಓಡಾಡುತ್ತಿರುವ ಆಕೆಯ ಐದು ವರ್ಷದ ಮಗ. ಫುಟ್‌ಬಾಲ್ ಅಭಿಮಾನಿಯಾಗಿದ್ದ ಮಾರ್ಟಿನ್ ಸಂಜೆ ಸೈಕಲ್‌ನಲ್ಲಿ ಮನೆಗೆ ವಾಪಸ್ಸಾಗುತ್ತಿದ್ದಾಗ ಕಾರ್ ಗುದ್ದಿ 15 ಅಡಿಗಳಷ್ಟೆತ್ತರಕ್ಕೆ ಹಾರಿ ತಲೆಗೆ ಪೆಟ್ಟಾಗಿತ್ತು. ತಕ್ಷಣ ಆತನನ್ನು ತುರ್ತು ನಿಗಾ ಘಟಕಕ್ಕೆ ಸ್ಥಳಾಂತರಿಸಲಾಯಿತಾದರೂ ಡಾಕ್ಟರ್ ಆತನ ಜೀವಕ್ಕೆ ಖಾತರಿ ನೀಡಲಿಲ್ಲ. ಆತ ಜೀವನ್ಮರಣದ ನಡುವೆ ಹೊರಾಟ ನಡೆಸುತ್ತಿದ್ದ. ತಲೆಗೆ ತೀವ್ರ ಪೆಟ್ಟಾಗಿದ್ದ ಕಾರಣ ಆತನ ಮೆದುಳಿನ ಮೇಲಿನ ಒತ್ತಡ ಕ್ಷಣಕ್ಷಣಕ್ಕೂ ಹೆಚ್ಚುತ್ತಿತ್ತು. ಪದೇ ಪದೇ ಆತ ಪ್ರಜ್ಞೆ ತಪ್ಪುತ್ತಿದ್ದ. ಒತ್ತಡದಿಂದ ಹಿಗ್ಗುತ್ತಿದ್ದ ಆತನ ಮೆದುಳನ್ನು ಬುರುಡೆ ತಡೆಹಿಡಿಯುತ್ತಿದ್ದುದೇ ಇದಕ್ಕೆ ಕಾರಣವಾಗಿತ್ತು. ಹೀಗೆ ಮುಂದುವರಿದರೆ ಆತನ ಸಾವು ಖಚಿತವಾಗಿತ್ತು. ಕೊನೆಗೆ ವೈದ್ಯರು ಒಂದು ಸಾಹಸಕ್ಕೆ ಇಳಿದರು. ಬೇರೆ ಮಾರ್ಗವೇ ಇರಲಿಲ್ಲ. ಅವರು ಮಾರ್ಟಿನ್‌ನ ತಲೆಬುರುಡೆಯ ಮೇಲ್ಭಾಗವನ್ನು ಕತ್ತರಿಸಿ ಮೆದುಳು ಆದಷ್ಟು ಹಿಗ್ಗಿ ನಿರಾಳವಾಗಲು ದಾರಿ ಮಾಡಿದರು. ನಂತರ ಇನ್‌ಫೆಕ್ಷನ್ ಆಗದಂತೆ ಪದರವನ್ನು ಮುಚ್ಚಿದರು. ಈಗ ಕತ್ತರಿಸಿದ ಬುರುಡೆಯ ಭಾಗವನ್ನು ಬೇರೆಲ್ಲೂ ಇಡುವ ಹಾಗಿರಲಿಲ್ಲ. ಹಾಗಾಗಿ ಆತನ ಹೊಟ್ಟೆಯೊಳಗೆ ಚೀಲದಂತೆ ಮಾಡಿ ಅಲ್ಲಿ ತಲೆಬುರುಡೆಯ ಚೂರನ್ನು ಇಡಲಾಯಿತು, ಹದಿನೆಂಟು ದಿನಗಳ ಕಾಲ! ಅಷ್ಟರಲ್ಲಿ ಹಿಗ್ಗಿದ್ದ ಆತನ ಮೆದುಳು ಕುಗ್ಗಿ ಎಂದಿನಂತೆ ಕಾರ್ಯ ನಿರ್ವಹಿಸಲು ಶುರುಮಾಡಿರುತ್ತದೆ ಎಂಬುದು ವೈದ್ಯರ ಊಹೆ. ಹಾಗೆಯೇ ಆಯಿತು ಕೊನೆಗೂ. 18 ದಿನಗಳ ನಂತರ ಹೊಟ್ಟೆಯೊಳಗಿದ್ದ ತಲೆಬುರುಡೆಯ ಮೇಲ್ಭಾಗವನ್ನು ಹೊರತೆಗೆದು ಯಥಾಸ್ಥಾನದಲ್ಲಿ ಜೋಡಿಸಲಾಯಿತು. ಈಗ ಎಲ್ಲಾ ಮಕ್ಕಳಂತೆ ಮಾರ್ಟಿನ್ ಕೂಡ ಲವಲವಿಕೆಯಿಂದ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾನೆ. ಆತನ ತಾಯಿ, ಡಾಕ್ಟರ್‌ರಿಗೆ ಧನ್ಯವಾದ ಸಲ್ಲಿಸುವುದರ ಜೊತೆಗೆ ಎಲ್ಲವೂ ಅವನ ಕೃಪೆಯೆಂದು ಮೇಲೆ ನೋಡಲು ಮರೆಯುವುದಿಲ್ಲ.

ಕಾಫಿ ಟೇಬಲ್‌ನಿಂದಾಗಿ ದೃಷ್ಟಿ ಬಂತು
ತಿಂಗಳಾನುಗಟ್ಟಲೆ ತಲೆಕೆಡಿಸಿಕೊಂಡು ಸಾವಿರಾರು ರುಪಾಯಿ ವ್ಯಯಿಸಿ ಬಿಡಿಭಾಗಗಳನ್ನು ಬದಲಾಯಿಸಿ ನೋಡಿದರೂ, ಸಾಫ್ಟ್‌ವೇರ್ ತೊಂದರೆ ಏನಾದರೂ ಇದೆಯೆ ಎಂದು ಪರೀಕ್ಷಿಸಿದರೂ ಸರಿಹೋಗದ ಗಣಕಯಂತ್ರ ಕೊನೆಗೂ ಸರಿಯಾಗುವುದು ಪುರಾತನವಾದ ರೇಡಿಯೋ ರಿಪೇರಿ ಟೆಕ್ನಿಕ್ ಮೂಲಕ ಅಂದರೆ ಅದರ ತಲೆಗೊಂದು ಮೊಟಕುವ ಮೂಲಕ. ಮೊಟಕುವುದರಿಂದ ಪಾಪಾ ಪಾಂಡೂನೇ ಸರಿಹೋಗುತ್ತಾನೆಂದರೆ ಯಕಃಶ್ಚಿತ್ ಯಂತ್ರ ಸರಿ ಹೋಗದೆ!? ಇಂತಹ ಕಾಮಿಡಿ ಮಾತೇನೇ ಇದ್ದರೂ ಮೊಟಕುವುದರಿಂದ ಗಂಭೀರ ಸಮಸ್ಯೆಗಳು ಯಾವುವೂ ಪರಿಹಾರವಾಗದು ಎಂಬುದು ಸರ್ವವಿಧಿತ ಮಾತು, ಆದರೆ ನ್ಯೂಝಿಲ್ಯಾಂಡ್‌ನ ಲೀಸಾ ರೇಯ್ಡ್ ಅದಕ್ಕೆ ಸಮ್ಮತಿ ಸೂಚಿಸಳು. 38ರ ಹರೆಯದ ಲೀಸಾಗೆ ಹನ್ನೊಂದನೆ ವಯಸ್ಸಿನಿಂದಲೂ ಕಣ್ಣು ಕುರುಡಾಗಿತ್ತು. ತಲೆಯಲ್ಲಿ ಬೆಳೆದಿದ್ದ ಗೆಡ್ಡೆ ಆಕೆಯ ದೃಷ್ಟಿಹೀನತೆಗೆ ಕಾರಣವಾಗಿತ್ತು. ಆದರೇನಂತೆ ಆಕೆ ಎಲ್ಲರಂತೆ ಆಟಪಾಠಗಳಲ್ಲಿ ಭಾಗಿಯಾಗಿ ಶಿಕ್ಷಣವನ್ನೂ ಪಡೆದು, ತನ್ನ ಓರಗೆಯವರಂತೆಯೇ ಬದುಕು ಸಾಗಿಸಿದಳು. ಲೀಸಾಗೆ ಮದುವೆಯೂ ಆಗಿ ಮಗಳೂ ಇದ್ದಾಳೆ, ಅವಳೀಗ ಹೈಸ್ಕೂಲಿಗೆ ಹೋಗುತ್ತಾಳೆ. ಲೀಸಾಳ ಓಡಾಟಕ್ಕೆ ಸಹಾಯವಾಗಲೆಂದು 'ಆ್ಯಮಿ' ಹೆಸರಿನ ಗೈಡ್ ನಾಯಿ ಆಕೆಯ ಜೊತೆಗೆ ಸದಾ ಇರುತ್ತಿತ್ತು. ಕುರುಡುತನ ಲೀಸಾಗೆ ಎಂದೂ ಮುಳ್ಳಾಗಲೇ ಇಲ್ಲ. ಎಲ್ಲಾ ಅಂಗಗಳು ನೆಟ್ಟಗಿದ್ದು ಕೊರಗುವ ಸುತ್ತಮುತ್ತಲಿನವರಿಗೆ ಆಕೆ ಸ್ಪೂರ್ತಿಯ ಚಿಲುಮೆಯಾದಳು. ಆಕೆಗೆ ತನ್ನ ಊನತೆಯ ಬಗೆಗೆ ಯಾವ ಹತಾಶೆಯೂ ಇರಲಿಲ್ಲ, ಆದರೂ ಮನದ ಮೂಲೆಯಲ್ಲಿ ಕಣ್ಣೆದುರಿನದನ್ನು ಕಾಣುವಾಸೆ ಹುದುಗಿತ್ತು. ಅದೊಂದು ದಿನ ಎಂದಿನಂತೆ ರಾತ್ರಿ ಊಟ ಮುಗಿಸಿ ತನ್ನ ಮೆಚ್ಚಿನ ನಾಯಿ ಆ್ಯಮಿಗೆ ಗುಡ್‌ನೈಟ್ ಹೇಳಿ ಮುತ್ತಿಡಲು ಲೀಸಾ ಕೆಳಕ್ಕೆ ಬಗ್ಗಿದಳು. ಈ ಸಮಯದಲ್ಲಿ ಕಾಫಿ ಟೇಬಲ್ಲಿಗೆ ಆಕೆಯ ತಲೆ ಬಡಿಯಿತು. ಹೆಚ್ಚಿನ ಏಟು ಬೀಳದ್ದರಿಂದ, ಹಣೆ ಉಜ್ಜಿಕೊಳ್ಳುತ್ತಾ ಹಾಸಿಗೆ ಸೇರಿದಳು. ಬೆಳಿಗ್ಗೆ ಎದ್ದಾಗ ಆಕೆಗೆ ಆಶ್ಚರ್ಯ ಕಾದಿತ್ತು. ತನ್ನದೇ ಬೆಡ್‌ರೂಮನ್ನು ಆಕೆ ಅಚ್ಚರಿಯಿಂದ ನೋಡುತ್ತಿದ್ದಳು. ಕಾಫಿ ಟೇಬಲ್‌ಗೆ ಲೀಸಾಳ ತಲೆ ಮೊಟಕಿದ್ದರಿಂದ ಹೋಗಿದ್ದ ದೃಷ್ಟಿ ವಾಪಸ್ ಬಂದಿತ್ತು!

-ಹರ್ಷವರ್ಧನ್

harsh.9mile@gmail.com

(ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555ಆನ್ ಲೈನಲ್ಲಿ ಸಖಿ ಓದಲು http://www.magzter.com/IN/Express-Network-Private-Limited/Sakhi/Women%27s-Interest/ಗೆ ಭೇಟಿನೀಡಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com