ಓದಿದ್ದು ಸಿವಿಲ್, ಹೃದಯ ಮಿಡಿದಿದ್ದು ಪರಿಸರ ರಕ್ಷಣೆಯತ್ತ!

ಸಾಲುಮರದ ತಿಮ್ಮಕ್ಕನಂತೇ ಇವರು ಕೂಡ ಪರಿಸರ ಪ್ರೇಮಿ, ಪರಿಸರಕ್ಕಾಗಿಯೇ ಆಂದೋಲನ ಪ್ರಾರಂಭಿಸಿದವರು. ಸಸಿ ನೆಡುವ ಬಗ್ಗೆ...
ಸಾಲುಮರದ ತಿಮ್ಮಕ್ಕನ ಜೊತೆ ಯುಎಸ್ ಮೊಯಿನುದ್ದೀನ್
ಸಾಲುಮರದ ತಿಮ್ಮಕ್ಕನ ಜೊತೆ ಯುಎಸ್ ಮೊಯಿನುದ್ದೀನ್

ಸಾಲುಮರದ ತಿಮ್ಮಕ್ಕನಂತೇ ಇವರು ಕೂಡ ಪರಿಸರ ಪ್ರೇಮಿ, ಪರಿಸರಕ್ಕಾಗಿಯೇ ಆಂದೋಲನ ಪ್ರಾರಂಭಿಸಿದವರು. ಸಸಿ ನೆಡುವ ಬಗ್ಗೆ ಜನರಲ್ಲಿ ಸಾಮಾಜಿಕ ಕಳಕಳಿ ತುಂಬಿದವರು. ಅಲ್ಲದೇ, ಪ್ರತಿಯೊಬ್ಬರಿಗೂ ಉಚಿತ ಸಸಿ ನೀಡಿ, ಪರಿಸರ ಕಾಪಾಡಿಸುವಲ್ಲಿ ಪ್ರಮುಖ ಪಾತ್ರವಹಿಸಿದವರು ಎಂದರೆ ತಪ್ಪಾಗುವುದಿಲ್ಲ.

ಬಾಲ್ಯದಿಂದಲೇ ಪರಿಸರ ಪ್ರೇಮ ಬೆಳಸಿಕೊಂಡ ಈ ಪರಿಸರ ಪ್ರೇಮಿಯ ಹೆಸರೇ ಯು.ಎಸ್. ಮೊಯಿನುದ್ದೀನ್. ಸಾವಿರ, ಲಕ್ಷವಲ್ಲ, ಕೋಟಿಯ ಲೆಕ್ಕದಲ್ಲಿ ಮರ ನೆಡುವ ಕನಸು ಹೊಂದಿರುವ ಇವರು ಸಿವಿಲ್ ಎಂಜಿನಿಯರಿಂಗ್ ಓದಿದರೂ ಆ ವೃತ್ತಿಗೆ ಹೋಗದೆ, ಪರಿಸರ ಕಾಳಜಿಯತ್ತ ತಮ್ಮ ಮನಸ್ಸನ್ನು ಪ್ರೀತಿ, ಕಳಕಳಿಯಿಂದಲೇ ಪರಿವರ್ತಿಸಿಕೊಂಡವರು. ಬೆಂಗಳೂರಿನ ಉಮರ್ಬಾಗ್ ಲೇಔಟ್ನಲ್ಲಿ ಮೊಯಿನುದ್ದೀನ್ ವಾಸವಾಗಿದ್ದಾರೆ.  
ನಮ್ಮ ದೇಶದಲ್ಲಿ ಅದೆಷ್ಟೋ ಮಂದಿ ಸ್ವಾತಂತ್ರ್ಯ, ನೀರು, ಸೇರಿಂದಂತೆ ತಮ್ಮ ಹಕ್ಕುಗಳಿಗಾಗಿ ಚಳುವಳಿ ನಡೆಸಿರುವ ಮಾದರಿಗಳಿವೆ. ಆದರೆ, ಇವರು ಗಿಡ ನೆಡುವುದಕ್ಕಾಗಿ ಜಾಗತಿಕ ಮಟ್ಟದ ಆಂದೋಲನ ರೂಪಿಸಿದ್ದಾರೆ. 2002ರಿಂದಲೇ  ಜನರಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಆರಂಭಿಸಿದ ಇವರು, ವಿಶ್ವಮಟ್ಟದಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

'ಒಬ್ಬ ವ್ಯಕ್ತಿ, ಒಂದು ಮರ' ಎಂಬ ಶೀರ್ಷಿಕೆಯಡಿ ಜಾಗತಿಕ ಆಂದೋಲನ ಆರಂಭಿಸಿ, ಈಗಾಗಲೇ ಸುಮಾರು 1 ಲಕ್ಷ ಸಸಿಗಳನ್ನು ನೆಡಿಸಿದ ಕನ್ನಡಿಗ. ಆಧುನಿಕ ತಂತ್ರಜ್ಞಾನ ಯುಗಕ್ಕೆ ತಕ್ಕಂತೆ ಇವರ ಪರಿಸರ ಆಂದೋಲನದ ಪ್ರಚಾರ ಮಾರ್ಗವನ್ನು ಇಂಟರ್ನೆಟ್, ಫೇಸ್ಬುಕ್, ಇಮೇಲ್ ಗಳ ಮೂಲಕ ವಿಶ್ವಮಟ್ಟದಲ್ಲಿ ಪ್ರಚುರ ಪಡಿಸಿದ್ದಾರೆ. ಇದರ ಪ್ರತಿಫಲದಿಂದಾಗಿ ಬೆಂಗಳೂರು, ಕರ್ನಾಟಕ ಹಾಗೂ ಭಾರತ ಮಾತ್ರವಲ್ಲದೆ ಹೊರ ರಾಷ್ಟ್ರಗಳಾದ ನೈಜೀರಿಯಾದಲ್ಲೂ, ಥೈಲೆಂಡ್, ಬಾಂಗ್ಲಾದೇಶದ ವೃಕ್ಷ ಪ್ರೇಮಿಗಳು ಸಸಿ ನೆಡುವ ಕಾರ್ಯಕ್ಕೆ ಮುಂದಾಗುತ್ತಿದ್ದಾರೆ. ಅಂದ ಹಾಗೆ, ಸಸಿಗಳನ್ನು ನೆಟ್ಟ ನಂತರ ಅವುಗಳ ಪೋಷಣೆ ಕಾರ್ಯಕ್ಕೆ ಹುರಿದುಂಬಿಸುವುದರಲ್ಲಿಯೂ ಸದಾ ನಿರತರಾಗಿದ್ದಾರೆ. ಸಾಲು ಮರದ ತಿಮ್ಮಕ್ಕ ಸೇರಿದಂತೆ ಅನೇಕ ಪರಿಸರವಾದಿಗಳಿಂದ ಅಗತ್ಯ ಸಲಹೆ ಪಡೆಯುವ ಮೂಲಕ ಪರಿಣಾಮಕಾರಿಯಾಗಿಸಬೇಕೆಂಬುದೇ ಇವರ ಮುಖ್ಯ ಗುರಿ.

720 ಕೋಟಿ ಸಸಿಗಳ ಆಕಾಂಕ್ಷಿ
ಬೆಂಗಳೂರಿನಲ್ಲಿ 95 ಲಕ್ಷ ಜನ, ದೇಶದಲ್ಲಿ 124 ಕೋಟಿ ಹಾಗೂ ವಿಶ್ವದಾದ್ಯಂತ 720 ಕೋಟಿ ಜನರಿದ್ದಾರೆ. ಇವರೆಲ್ಲರೂ ತಮ್ಮ ಜೀವಿತಾವಧಿಯಲ್ಲಿ ಒಂದೊಂದು ಸಸಿ ನೆಟ್ಟರೆ ಹೆಚ್ಚುತ್ತಿರುವ ಜಾಗತಿಕ ತಾಪಮಾನ ತಗ್ಗಿಸಬಹುದು. ಜತೆಗೆ ಮನುಕುಲ, ಪ್ರಾಣಿ-ಪಕ್ಷಿ ಸಂಕುಲಕ್ಕೂ ಆರೋಗ್ಯಪೂರ್ಣ ವಾತಾವರಣ ಸಿಗುತ್ತದೆ. ಭವಿಷ್ಯದಲ್ಲಾಗುವ ಪ್ರಕೃತಿ ವಿಕೋಪಗಳೂ ತಡೆಯಬಹುದು ಎಂಬ ಮಹಾತ್ವಕಾಂಕ್ಷೆ ಇವರದು. ಇದರ ಯಶಸ್ಸಿನ ಪ್ರಚಾರಕ್ಕಾಗಿ ನಾನಾ ಮಾರ್ಗಗಳನ್ನು ಹಿಡಿದಿದ್ದಾರೆ. ಸಾಮಾಜಿಕ ನಾಟಕಗಳ ಪ್ರದರ್ಶನ ಹಾಗೂ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಶಿಕ್ಷಣ ಇಲಾಖೆಯೊಂದಿಗೆ ಮಾತುಕತೆ ಹಾಗೂ ನಿರಂತರ ಸಂಪರ್ಕ, ಹಲವು ಸರ್ಕಾರಿ ಮತ್ತು ಖಾಸಗಿ ಕಂಪನಿಗಳ ಒಲವು, ಪರಿಸರ ತಜ್ಞರ ನೆರವು, ಇಂಟರ್ನೆಟ್, ಬ್ಲಾಗ್ ಗಳ ಮೂಲಕ ವಿದೇಶಿಗರ ಸೆಳೆತ ಹಾಗೂ ಇತರ ಮಾಧ್ಯಮಗಳ ಮೂಲಕ ಕ್ರಿಯಾ ಯೋಜನೆಗಳನ್ನು ರೂಪಿಸುತ್ತಿದ್ದಾರೆ.

ಪರಿಸರ ಪೂರಕ ಸಸಿಗಳ ವಿತರಣೆ
ಬಳಕೆಗೆ ಯೋಗ್ಯವಾದ ಹಾಗೂ ಪರಿಸರಕ್ಕೆ ಪೂರಕವಾದ ಸಸಿಗಳನ್ನೇ ಉಚಿತವಾಗಿ ವಿತರಿಸುತ್ತಿದ್ದಾರೆ. ಮಹಾಗನಿ, ಸಿಲ್ವರ್ ಓಕ್, ಹೊಂಗೆ, ಗಸಗಸೆ ಮರ, ಹಲಸು, ಹುಣಸೆ, ಬೇವು ಹೀಗೆ ಹಲವು ಬಗೆಯ ಸಸಿಗಳ ವಿತರಣೆ ಮಾಡಲಾಗುತ್ತಿದೆ. ಸಸಿ ಪಡೆಯುವ ಗ್ರಾಹಕರು, ಉಚಿತವಾಗಿ ಸಸಿ ವಿತರಿಸುತ್ತಾರೆ ಎಂದು ಸಸಿಗಳನ್ನು ಪಡೆದುಕೊಂಡು ಹೋದರಾಯ್ತು ಎಂದುಕೊಂಡಿದ್ದರೇ, ಅದು ತಪ್ಪು. ಏಕೆಂದರೆ, ಇವರು ಸಸಿಗಳನ್ನು ವಿತರಿಸುವುದರ ಜೊತೆಗೆ ಸಸಿ ಪಡೆದವರ ಮಾಹಿತಿ ಸಂಗ್ರಹಿಸಿ, ನೆಟ್ಟ ಸಸಿಯ ನಿರ್ವಹಣೆ ಬಗ್ಗೆ ಸಲಹೆ ನೀಡುತ್ತಾರೆ. ಹಾಗೇ ಬೆಳೆಸಿದ ನಂತರ ಮರದ ಬಗ್ಗೆ ಇವರಿಗೆ ಮಾಹಿತಿ ನೀಡಬೇಕು.

ಮೊಯಿನುದ್ದೀನ್ ಪರಿಸರವಾದಿಯಷ್ಟೇ ಅಲ್ಲ, ವಿದ್ಯಾರ್ಥಿಗಳು, ಗೃಹಿಣಿಯರು ಸೇರಿದಂತೆ ನಾನಾ ವರ್ಗದವರಿಗೆ ಪ್ರೇರಣೆ ತುಂಬುವ ಉಪನ್ಯಾಸ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲೂ ಎತ್ತಿದ ಕೈಯಾಗಿರುವ ಇವರು, `ಡ್ರೀಮ್ಸ್ ಆ್ಯಕ್ಷನ್ ಅಂಡ್ ಸಕ್ಸಸ್' ಮತ್ತು `ಗ್ರೇಟ್ ಥಾಟ್ಸ್' ಪುಸ್ತಕಗಳನ್ನು ಬರೆದು ಹಲವು ಓದುಗ ಬಳಗವನ್ನೂ ತಮ್ಮದಾಗಿಸಿಕೊಂಡಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೂ ಕೊಡುಗೆ ನೀಡಿರುವ ಇವರು ಜೆಎಚ್ಬಿಸಿ ಲೇಔಟ್ನಲ್ಲಿ `ಮ್ಯಾಗ್ನಿಫಿಕ್ ಇಂಗ್ಲಿಷ್ ಸ್ಕೂಲ್' (2001)ಮತ್ತು ಕನಕಪುರ ರಸ್ತೆಯಲ್ಲಿ `ಮ್ಯಾಗ್ನಿಫಿಕ್ ಪಬ್ಲಿಕ್ ಸ್ಕೂಲ್' (2005)ಗಳನ್ನೂ ನಡೆಸುತ್ತಿದ್ದಾರೆ. ಈ ಶಾಲೆಗಳಲ್ಲಿ ಹಸಿರೇ ಕಂಗೊಳಿಸುತ್ತಿದ್ದು, ಸಹಸ್ರಾರು ಗಿಡ-ಮರಗಳ ವಿಶಾಲ ಕಾನನದದ ಪರಿಸರವನ್ನು ಕಲ್ಪಿಸಿದ್ದಾರೆ. ಮಕ್ಕಳೊಂದಿಗೆ ಪ್ರಾಣಿ-ಪಕ್ಷಿಗಳಿಗೂ ಇಲ್ಲಿ ಆಶ್ರಯ ನೀಡಿರುವ ವಿಶೇಷ ಶಾಲೆಗಳಾಗಿವೆ.

ಮರುಭೂಮಿಗಳನ್ನೂ ಹಸಿರಾಗಿಸುವ ಕನಸು
ವಿಶ್ವದಲ್ಲಿರುವ ಮರುಭೂಮಿಗಳನ್ನು ಹಸಿರಾಗಿಸುವ ಕನಸು ಇವರದಾಗಿದೆ. ಉತ್ತರ ಆಫ್ರಿಕಾದ ಸಹರಾ, ರಾಜಸ್ತಾನದ ಥಾರ್, ದಕ್ಷಿಣ ಆಫ್ರಿಕಾದ ಕಲಹರಿ, ಸೆಂಟ್ರಲ್ ಏಷ್ಯಾದ ಗೋಬಿ ಹಾಗೂ ಆಸ್ಟ್ರೇಲಿಯಾದ ಗ್ರೇಟ್ ಆಸ್ಟ್ರೇಲಿಯನ್ ಮರುಭೂಮಿಗಳನ್ನು ಹಸಿರುಗೊಳಿಸಬೇಕೆಂಬ ಕನಸು ಹೊಂದಿದ್ದಾರೆ. ಹೀಗಾಗಿ ಮರುಭೂಮಿಗಳಲ್ಲಿ ಬೆಳೆಯುವ ಕ್ಯಾಕ್ಟಸ್, ಖಜೂರ, ಬೇವಿನ ಮರಗಳನ್ನು ನೆಡಬಹುದು ಎಂಬ ಪ್ರಚಾರವನ್ನು ಮಾಡುತ್ತಿದ್ದಾರೆ.

"ಒಬ್ಬ ವ್ಯಕ್ತಿ ಒಂದು ಗಿಡ ನೆಟ್ಟು ಪೋಷಿಸಿದರೆ, ಪರಿಸರವನ್ನು ಕಾಪಾಡುವುದರ ಜೊತೆಗೆ ಜಾಗತಿಕ ತಾಪಮಾನವು ಕಡಿಮೆಯಾಗುತ್ತದೆ. ಗಿಡು ನೆಡುವುದು ಅಷ್ಟೇ ಅಲ್ಲ, ಅದರ ಜೊತೆಗೆ ಅದರ ಪೋಷಣೆಯು ಮುಖ್ಯವಾಗಿರುತ್ತದೆ. ತಮ್ಮ ಮಕ್ಕಳಂತೆ ಜನರು ಗಿಡಗಳನ್ನು ಪ್ರೀತಿಸಬೇಕು. ಆಗಲೇ ಪರಿಸರ ರಕ್ಷಣೆ ಸಾಧ್ಯ. ಹಾಗೇ, ಪರಿಸರಕ್ಕೆ ಕೆಲಸ ಮಾಡುವವರಷ್ಟೇ ಪರಿಸರ ರಕ್ಷಣೆ ಮಾಡಬೇಕು ಎಂದೇನಿಲ್ಲ. ಪ್ರತಿಯೊಬ್ಬ ನಾಗರಿಕನು ಪರಿಸರ ರಕ್ಷಣೆ ಮಾಡಬೇಕಿದೆ. ಇದು ಎಲ್ಲರ ಜವಾಬ್ದಾರಿಯಾಗಿರುತ್ತದೆ'
-ಯು.ಎಸ್. ಮೊಯಿನುದ್ದೀನ್, ಪರಿಸರವಾದಿ

- ಮೈನಾಶ್ರೀ. ಸಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com