ಹೆಣ್ಣುಬಾಕರನ್ನು ಪತ್ತೆಹಚ್ಚೋದು ಹೇಗೆ?

ಹೆಣ್ಣುಬಾಕರನ್ನು ಪತ್ತೆಹಚ್ಚೋದು ಹೇಗೆ?

ಅವನು ಸ್ಮಾರ್ಟ್. ಅವನಿಗೆ ಅದ್ಭುತಬಾಡಿಯಿದೆ. ಬಹಳ ಚೆನ್ನಾಗಿ ಮಾತನಾಡುತ್ತಾನೆ. ಸಖತ್ತಾಗಿ ಜೋಕ್ ಮಾಡುತ್ತಾನೆ. ತುಂಬಾ ಹೆಲ್ಪಿಂಗ್ ನೇಚರ್. ಅದರಲ್ಲೂ ಹುಡುಗಿಯರಿಗೆ ಹೆಲ್ಪ್ ಮಾಡಲು ಸದಾ ತುದಿಗಾಲಲ್ಲಿ ನಿಂತಿರುತ್ತಾನೆ. ಬಹುಶಃ ಅದೇ ಅವನ ಬದುಕಿನಪರಮೋದ್ದೇಶ! ಜಗತ್ತಿನ ಎಲ್ಲಾ ವಿಷಯಗಳೂಅವನಿಗೆ ಗೊತ್ತು. ಮೇಲ್ನೋಟಕ್ಕೆ ಅವನಷ್ಟು ಬುದ್ಧಿವಂತರು ಅವನ ಸರ್ಕಲ್‌ನಲ್ಲಿ ಯಾರೂ ಇಲ್ಲ. ಮೊದಲ ನೋಟದಲ್ಲೇ ಯಾರನ್ನು ಬೇಕಾದರೂ ಸೆಳೆಯುತ್ತಾನೆ. ಸುಂದರಾಂಗನಂತೆ ನೀಟಾಗಿ ಡ್ರೆಸ್ ಮಾಡಿಕೊಳ್ಳುತ್ತಾನೆ. ಒಳ್ಳೆಯ ಕಾರೋ ದುಬಾರಿ ಬೈಕೋ ಇಟ್ಟಿದ್ದಾನೆ.ವಾರಕ್ಕೊಂದು ದುಬಾರಿ ಶೂ ಹಾಕುತ್ತಾನೆ.
ಆ ಕಾರಣಕ್ಕೇ ಹುಡುಗಿಯರು ಅವನಿಗೆ ಸುಲಭವಾಗಿ ಬೀಳುತ್ತಾರೆ.
ಆದರೆ ಅವನೊಬ್ಬ ವುಮನೈಸರ್! ಅಚ್ಚ ಕನ್ನಡದಲ್ಲಿ ಹೇಳುವುದಾದರೆ ಹೆಣ್ಣುಬಾಕ.
ಹೆಣ್ಮಕ್ಕಳು ಅಥವಾ ಹೆಂಗಸರೇಕೆ ಫಟಿಂಗರಿಗೆ ಬೇಗ ಮರುಳಾಗುತ್ತಾರೆ ಎಂಬುದು ಗಂಡಸರಿಗೆ ಇವತ್ತಿಗೂ ಉತ್ತರ ದೊರೆಯದ ಅನಾದಿಕಾಲದ ಪ್ರಶ್ನೆ. ಇಂಗ್ಲಿಷ್ ಸಿನಿಮಾಗಳನ್ನು ನೋಡಿ; ಅಲ್ಲಿ ಶೋಕಿಲಾಲರ ಸುತ್ತ ಸದಾ ಹುಡುಗಿಯರು ಸುತ್ತುತ್ತಿರುತ್ತಾರೆ. ಹಿಂದಿ ಸಿನಿಮಾ ನೋಡಿ; ಇಮ್ರಾನ್ ಹಶ್ಮಿಗೆ ಯಾವಾಗಲೂ ಹುಡುಗಿಯರು ಬೀಳುತ್ತಾರೆ. ಕನ್ನಡ ಸಿನಿಮಾ ನೋಡಿ; ಮಾಡಲು ಏನೂ ಕೆಲಸವಿಲ್ಲದೆ ತಿರುಬೋಕಿಯಂತೆ ಅಡ್ಡಾಡಿಕೊಂಡಿರುವವನಿಗೊಬ್ಬಳು ಸುಂದರ, ಸುಸಂಸ್ಕೃತ ಹಾಗೂ ಒಳ್ಳೆಯ ಕೆಲಸದಲ್ಲಿರುವ ಗರ್ಲ್‌ಫ್ರೆಂಡ್ ಇರುತ್ತಾಳೆ. ಕಾಲೇಜಿನಲ್ಲಿ ನೋಡಿ; ಓದಲು ಬುದ್ಧಿವಂತನಲ್ಲದ, ಒಳ್ಳೆಯವನೂಅಲ್ಲದ ಡ್ಯಾಂಡಿಗೆ ಆ ಕಾಲೇಜಿನ ಕಣ್ಮಣಿ ಹುಡುಗಿಯೊಬ್ಬಳು ಫಿದಾ ಆಗಿರುತ್ತಾಳೆ. ನಿಮ್ಮ ಪಕ್ಕದ ಬೀದಿಯಲ್ಲೇ ನೋಡಿ; ಉಡಾಳನಂತೆ ಮೂರು ಹೊತ್ತೂ ಸೈಲೆನ್ಸರ್ ಕಿತ್ತ ಬೈಕ್ ಮೇಲೆ ಅರೇಬಿಯಾದ ಸರ್ವ ಸುಗಂಧಗಳನ್ನೂಬೆರೆಸಿದಂತಹ ಸೆಂಟ್‌ಹಾಕಿಕೊಂಡು ರೊಂಯ್ಯನೆ ಬೀಟ್‌ಹೊಡೆಯುವ ಹುಡುಗನಿಗೆ ಆಗಷ್ಟೇ ಕೆಲಸಕ್ಕೆ ಸೇರಿದ ಪಕ್ಕದ ಮನೆಯ ಸಭ್ಯ ಹುಡುಗಿ ಬೋಲ್ಡ್ ಆಗಿರುತ್ತಾಳೆ. ಆಫೀಸಿನಲ್ಲಿ ನೋಡಿ; ಯಾವತ್ತೂ ಬಾಸ್ ಬಳಿ ಬೈಸಿಕೊಳ್ಳುವಬೇಜವಾಬ್ದಾರಿ ಕೊಲೀಗ್ ಒಬ್ಬನ ಜೊತೆಅಲ್ಲಿನ ಸುಂದರ ಮಹಿಳಾ ಉದ್ಯೋಗಿಯ ಅಫೇರ್ ನಡೆಯುತ್ತಿರುತ್ತದೆ.

ಈ ಎಲ್ಲ ಕತೆಗಳ ಅಂತ್ಯವೂ ಸಾಮಾನ್ಯವಾಗಿ ಒಂದೇ ರೀತಿಯಿರುತ್ತದೆ. ಅಮರ ಪ್ರೇಮಿಯಂತೆ ಪೋಸು ಕೊಟ್ಟಿದ್ದ ಹುಡುಗ ಕೊನೆಗೆ ಅವಳಿಗೆ ಕೈಕೊಟ್ಟು ಇನ್ನೊಬ್ಬಳನ್ನು ಹುಡುಕಿಕೊಂಡು ಹೋಗಿರುತ್ತಾನೆ. ಅವಳು ಜೂನ್ ತಿಂಗಳ ಮಳೆಯೂ ನಾಚುವಂತೆ ಕಣ್ಣೀರುಸುರಿಸುತ್ತಾಳೆ.

ಏಕೆಂದರೆ ಅವಳು ಮೋಸಹೋಗಿದ್ದಾಳೆ. ಏಕೆಂದರೆ ಅವನೊಬ್ಬ ಹೆಣ್ಣುಬಾಕ. ಏಕೆಂದರೆ ಒಬ್ಬಳಿಗೆ ನಿಷ್ಠನಾಗಿರುವುದು ಅವನ ಜಾತಕದಲ್ಲೇ ಬರೆದಿಲ್ಲ. ಏಕೆಂದರೆ ಅವಳು ಅವನನ್ನುಪ್ರೀತಿಸುವಾಗ ಕೇವಲ ಮನಸ್ಸಿನ ಮಾತುಕೇಳಿರುತ್ತಾಳೆಯೇ ಹೊರತು ಸ್ವಲ್ಪವೂ ತಲೆ ಖರ್ಚುಮಾಡಿ ಮೆದುಳಿನಿಂದ ಯೋಚಿಸಿರುವುದಿಲ್ಲ. ಮತ್ತು, ಏಕೆಂದರೆ ಜಗತ್ತಿನಲ್ಲಿ ಇಂತಹಹೆಣ್ಣುಬಾಕರ ಸಂತತಿ ಸಮೃದ್ಧವಾಗಿದೆ.
ಎಲ್ಲಾ ಗಂಡಸರಿಗೂ ಹೆಂಗಸರಲ್ಲಿ ಆಕರ್ಷಣೆಯಿರುತ್ತದೆ. ತಮ್ಮ ಪ್ರೇಯಸಿ ಅಥವಾ ಹೆಂಡತಿಯನ್ನು ಬಿಟ್ಟು ಇನ್ನೊಬ್ಬಳ ಬಗ್ಗೆ ಇವನು ಯೋಚಿಸುವುದೇ ಇಲ್ಲ ಎಂಬಂತಹ ಸರ್ವಾಂಗ ಸಭ್ಯ ಮಾಸ್ಟರ್‌ಪೀಸ್ ಗಂಡಸರು ಜಗತ್ತಿನಲ್ಲಿಲ್ಲ. ಆದರೆ, ಇವರಲ್ಲಿ ಹೆಚ್ಚಿನವರು ಮನಸ್ಸಿನಲ್ಲೇ ಮಂಡಿಗೆ ತಿನ್ನುತ್ತ, ಪಕ್ಕದ ಮನೆಯ ಗಾರ್ಡನ್ನಿನಲ್ಲಿ ಬೆಳೆದ ಹುಲ್ಲು ಬಹಳ ಹಸಿರಾಗಿದೆ ಎಂದು ಗೆಳೆಯರ ಜೊತೆಮಾತನಾಡುತ್ತ ಕಾಲ ಕಳೆಯುತ್ತಾರೆಯೇ ಹೊರತು ಬಹಿರಂಗವಾಗಿ ಅವಳ ಹಿಂದೆ ಬೀಳುವುದಿಲ್ಲ. ಮನಸ್ಸಿನಲ್ಲಿ ತಪ್ಪುಮಾಡಿದರೂ ದೈಹಿಕವಾಗಿ ತಪ್ಪು ಮಾಡಲು ಹೋಗುವುದಿಲ್ಲ. ಆದರೆ, ಇವರಲ್ಲೇ ಕೆಲ ಸಾಹಸಪ್ರಿಯ ಉಡಾಳರಿದ್ದಾರೆ. ಅವರು ಯಾವಾಗಲೂ ಒಂದು ಬಲೆಯನ್ನುಬ್ಯಾಗ್‌ನಲ್ಲಿ ಇಟ್ಟುಕೊಂಡೇ ಓಡಾಡುತ್ತಿರುತ್ತಾರೆ. ಸಮಯ ಸಿಕ್ಕಾಗ ಚಕ್ಕನೆ ಅದನ್ನು ಬೀಸುತ್ತಾರೆ. ಹೆಣ್ಣು ಮಿಕವೊಂದು ಕರೆಕ್ಟಾಗಿ ಅದರಲ್ಲಿಬಿದ್ದಿರುತ್ತದೆ! ಇವರೇ ಹೆಣ್ಣುಬಾಕರು. ಇವರ ಬಗ್ಗೆ ಹುಡುಗಿಯರು ಹಾಗೂ ಮದುವೆಯಾದ ಹೆಂಗಸರು ಕೂಡ ಎಷ್ಟು ಹುಷಾರಾಗಿದ್ದರೂ ಸಾಲದು.
ಟೀವಿ ಚಾನಲ್ಲುಗಳಲ್ಲಿ ಬರುವ ಹುಡುಗಿಯರು ಮೋಸಹೋದ ಬಹುತೇಕ ಕತೆಗಳಲ್ಲಿ ಇಂತಹ ಹೆಣ್ಣುಬಾಕರೇ ಹೀರೋಆಗಿರುತ್ತಾರೆ. ಹೆಚ್ಚಿನ ಅಕ್ರಮಸಂಬಂಧಗಳಲ್ಲೂ ಇವರೇ ಇರುತ್ತಾರೆ.ಹೆಣ್ಣುಬಾಕನೊಬ್ಬನಿಗೆ ಅವನು ಅಂದುಕೊಂಡಂತೆ ಯಾರೂ ಸಿಗಲಿಲ್ಲ ಎಂದಾದರೆ ಒಂದು ವಿಷಮ ಗಳಿಗೆಯಲ್ಲಿ ಅವನೇ ರೇಪಿಸ್ಟ್ ಕೂಡ ಆಗಬಹುದು.

ಎಲ್ಲ ಹೆಣ್ಣುಬಾಕರೂ ಡೇಂಜರಸ್ ಅಲ್ಲ
ಹೆಣ್ಣುಬಾಕರಲ್ಲಿ ಎರಡು ವಿಧವಿದೆ. ಒಬ್ಬರು ನಿರುಪದ್ರವಿಗಳು. ಇನ್ನೊಬ್ಬರು ಅಪಾಯಕಾರಿ.
ನಿರುಪದ್ರವಿ ಹೆಣ್ಣುಬಾಕರು ಬರಿದೆ ಶೋಕಿಲಾಲರು. ಅವರು ಬೇರೆ ಬೇರೆ ಹುಡುಗಿಯರ ಜೊತೆ ಓಡಾಡುತ್ತಾರೆ. ತನಗೆ ಇಂತಿಂಥವರ ಜೊತೆ ಅಫೇರ್ ಇದೆ ಎಂದು ಖಾಸಾ ಸ್ನೇಹಿತರಲ್ಲಿ ಸುಳ್ಳೇ ಬಡಾಯಿ ಕೊಚ್ಚಿಕೊಳ್ಳುತ್ತಾರೆ.ಮದುವೆಯಾಗಿದ್ದರೂ ಬೇರೆಯವರ ಜೊತೆ ಫೋನು, ಇಂಟರ್ನೆಟ್‌ನಲ್ಲಿ ಸಲ್ಲಾಪದ ಚಾಟ್ ಮಾಡುತ್ತಾರೆ. ಆಫೀಸಿನಲ್ಲಿ ಮಹಿಳಾ ಉದ್ಯೋಗಿಗಳ ಸುತ್ತಲೇ ಸುತ್ತುತ್ತಿರುತ್ತಾರೆ. ಆದರೆ, ಇನ್ನೂ ಮುಂದುವರಿಯಲು ಇವರಿಗೆ ಹೆದರಿಕೆ. ಹಾಗಾಗಿ ಹುಡುಗಿಯರನ್ನು ಬೈಕು ಅಥವಾ ಕಾರು ಹತ್ತಿಸಿಕೊಂಡು ಹೋಗಿ ಐಸ್‌ಕ್ರೀಂ ತಿನ್ನಿಸುವಲ್ಲಿಗೆ ಇವರ ಹೆಣ್ಣುಬಾಕತನ ಇತಿಶ್ರೀಗೊಳ್ಳುತ್ತದೆ. ಇವನ ಜೊತೆ ಓಡಾಡಿದ ಹುಡುಗಿಗೆ ದೈಹಿಕವಾಗಿ ಅಥವಾ ಮಾನಸಿಕವಾಗಿ ಯಾವ ಅಪಾಯವೂಆಗುವುದಿಲ್ಲ. ಒಂದು ದಿನ ಇವನು ಬಿಟ್ಟುಹೋದರೆ ಅವಳಿಗೇನೂ ಆಘಾತವಾಗುವುದಿಲ್ಲ. ಎಂಟು-ಹತ್ತು ದಿನ ಅವನ ನೆನಪಾಗಬಹುದು. ಆದರೆ ಕೊನೆಗೆ ಎಲ್ಲವೂ ಮೊದಲಿನಂತಾಗುತ್ತದೆ. ಅವನು ಅಡ್ರೆಸ್ಸೇ ಇಲ್ಲದಂತೆ ದೂರಹೋಗಿರುತ್ತಾನೆ.

ಆದರೆ, ಹುಡುಗಿಯರು ತಿಳಿದುಕೊಂಡಿರಬೇಕಾದ್ದು ಅಪಾಯಕಾರಿ ಹೆಣ್ಣುಬಾಕರ ಬಗ್ಗೆ. ಬಹಳ ನೈಸಾಗಿ ಹೆಣ್ಮಕ್ಕಳನ್ನು ಬಲೆಗೆ ಬೀಳಿಸಿಕೊಳ್ಳುವ ಇವರ ಅಂತಿಮ ಉದ್ದೇಶ ಸೆಕ್ಸ್. ಕೆಲವರು ಒಮ್ಮೆ ಈ ಗುರಿ ಈಡೇರಿದ ಕೂಡಲೇ ಬಿಟ್ಟುಹೋದರೆ, ಇನ್ನು ಕೆಲವರು ದೀರ್ಘಕಾಲದವರೆಗೆ ಆ ಅಫೇರ್ ಇಟ್ಟುಕೊಂಡು ಬೇಸರ ಬಂದಮೇಲೆಕೈಕೊಡುತ್ತಾರೆ. ಯಾವುದೇ ಸಭ್ಯ ಹೆಣ್ಮಗಳು ಬರೀ ಸೆಕ್ಸ್‌ಗಾಗಿ ಗಂಡಿನ ಹಿಂದೆ ಹೋಗುವುದಿಲ್ಲ.ಅವಳು ಹೋಗುವುದು ಪ್ರೀತಿಯ ಹಿಂದೆ. ಹೆಣ್ಣುಬಾಕನ ನಯವಂಚಕತನವನ್ನೇ ಇವಳು ಪ್ರೀತಿಯೆಂದು ತಪ್ಪಾಗಿ ಭಾವಿಸಿರುತ್ತಾಳೆ. ಆ ಪ್ರೀತಿಗೆ ಗಂಟುಬಿದ್ದೇ ಭಾವನಾತ್ಮಕವಾಗಿ ಅವನಿಗೆ ದೇಹ ಒಪ್ಪಿಸಿಕೊಳ್ಳುತ್ತಾಳೆ. ಕೊನೆಗವನು ಕೈಕೊಟ್ಟಾಗ ಜೀವನಪೂರ್ತಿಒಳಗೊಳಗೇ ಪರಿತಪಿಸುತ್ತಾಳೆ. ಆಗಿದ್ದು ಆಗಿಹೋಯಿತು ಎಂದು ಅದರಿಂದಹೊರಬರುವವರು ಕಡಿಮೆ. ಸಾಯುವವರೆಗೂಅವಳಲ್ಲೊಂದು ಗಿಲ್ಟ್ ಕಾಡುತ್ತಿರುತ್ತದೆ.

ಅವಳು ಮಾಡಿದ ತಪ್ಪೇನು? ತಪ್ಪು ವ್ಯಕ್ತಿಯನ್ನು ಪ್ರೀತಿಸಿದ್ದು ಮತ್ತುದಡ್ಡಿಯಂತೆ ವರ್ತಿಸಿದ್ದು. ಆಕೆ ಸ್ವಲ್ಪ ಎಚ್ಚರದಿಂದಿದ್ದರೆ ಇವೆರಡನ್ನೂ ತಪ್ಪಿಸಲು ಸಾಧ್ಯವಿದೆ.

ಹೆಣ್ಣುಬಾಕರನ್ನು ಪತ್ತೆಹಚ್ಚುವುದು ಹೇಗೆ?
ವುಮನೈಸರ್‌ಗಳಲ್ಲಿ ಒಂದಷ್ಟು ಸಾಮಾನ್ಯ ಲಕ್ಷಣಗಳಿರುತ್ತವೆ. ಅವುಗಳ ಬಗ್ಗೆ ಮೊದಲೇ ತಿಳಿದುಕೊಂಡಿದ್ದರೆಹೆಣ್ಮಕ್ಕಳು ಅವರಿಂದ ಮೋಸಹೋಗುವುದನ್ನು ತಪ್ಪಿಸಿಕೊಳ್ಳಬಹುದು. ಇದರ ಜೊತೆಗೆ ಒಂದಷ್ಟು ಕಾಮನ್‌ಸೆನ್ಸ್ ಇರುವುದು ಕಡ್ಡಾಯ.

ಹೆಣ್ಣುಬಾಕನಿಗೆ ನಿಮ್ಮ ಮನಸ್ಸಿಗಿಂತ ದೇಹದಲ್ಲೇ ಹೆಚ್ಚು ಆಸಕ್ತಿ. ಅವನನಡವಳಿಕೆ ಸಹಜವಲ್ಲ, ಅದೊಂದು ನಟನೆ. ನಿಮ್ಮಲ್ಲಿ ಮತ್ತು ನಿಮ್ಮೊಬ್ಬರಲ್ಲೇ ವಿಪರೀತ ಆಸಕ್ತಿಯಿರುವಂತೆ ಅವನುನಟಿಸುತ್ತಾನೆ. ಇದನ್ನು ಪತ್ತೆಹಚ್ಚುವುದುಅಷ್ಟೇನೂ ಸುಲಭವಲ್ಲ. ಆದರೆ, ಸೂಕ್ಷ್ಮವಾಗಿ ಗಮನಿಸಿದರೆ ಅವನ ಮರ್ಮ ತಿಳಿದೀತು. ಸುತ್ತಾಡಲು ಹೋದ ಮೊದಲ ಭೇಟಿಯಲ್ಲೇ ಅವನು 'ನಿನಗಿರುವಷ್ಟು ಸುಂದರ ಕಣ್ಣುಜಗತ್ತಿನಲ್ಲಿ ಯಾರಿಗೂ ಇಲ್ಲ' 'ಯಾರ ಜೊತೆಗೂ ನಾನು ಇಷ್ಟು ಫ್ರೀಯಾಗಿವರ್ತಿಸಿಲ್ಲ' ಎಂದೆಲ್ಲಾ ನಾಟಕೀಯವಾಗಿ ಜಾಕ್ ಎತ್ತತೊಡಗಿದರೆ ಅದು ನಿಮ್ಮನ್ನು ಬಲೆಗೆ ಬೀಳಿಸಿಕೊಳ್ಳುವ ತಂತ್ರ ಎಂದೇ ಅರ್ಥ. ಅವನಿಗೆ ಬೇಕಿರುವುದು ನಿಮ್ಮಪ್ರೀತಿಯಲ್ಲ, ದೇಹ.

ಅವನ ಫೇಸ್‌ಬುಕ್ ವಾಲ್‌ನಲ್ಲಿ ಹುಡುಗರಿಗಿಂತ ಹುಡುಗಿಯರ ಪೋಸ್ಟ್‌ಗಳೇ ಹೆಚ್ಚಿರುತ್ತವೆ. ನಿಮಗೆ ಅಂದಾಜು ಮಾಡಲೂ ಸಾಧ್ಯವಾಗದ ಮೂಲಗಳಿಂದ ಹುಡುಗಿಯರು ಅವನ ಪೋಸ್ಟ್‌ಗಳಿಗೆ 'ಐ ಮಿಸ್ ಯು'  'ಯಾವಾಗ ನೀನು ಸಿಗೋದು' 'ಹೀರೋ ಕಣೋ ನೀನು' ಎಂಬಂತಹ ಕಮೆಂಟ್‌ಗಳನ್ನು ಮೇಲಿಂದ ಮೇಲೆ ಹಾಕುತ್ತಿರುತ್ತಾರೆ. ಹಾಗಿದ್ದರೆ ನಿಮಗೆಅವನ ಸಹವಾಸ ಬೇಡ.

ವಿಪರೀತ ವುಮನೈಸರ್ ಆಗಿದ್ದರೆ ಹುಡುಗರಿಗೆ ಹುಡುಗಿಯರ ಹೆಸರುಗಳೂ ಕನ್‌ಫ್ಯೂಸ್ ಆಗುವುದುಂಟು! ಬೇರೆ ಹುಡುಗಿಯ ಹೆಸರಿನಲ್ಲಿ ನಿಮ್ಮನ್ನು ಕರೆದರೆ ಅಥವಾ ಮಾತನಾಡುವಾಗ ಇನ್ಯಾವುದೋ ಹುಡುಗಿಯ ಮನೆಯವರನ್ನು ನಿಮ್ಮ ಮನೆಯವರ ಜೊತೆ ಕನ್‌ಫ್ಯೂಸ್ ಮಾಡಿಕೊಂಡು ಅವರ ಬಗ್ಗೆ ವಿಚಾರಿಸಿದರೆ, ಅಥವಾ ನೀವಿಬ್ಬರು ಯಾವತ್ತೂ ಒಟ್ಟಿಗೆ ಹೋಗಿರದ ಕಾಫಿಶಾಪ್‌ನಲ್ಲಿ ಕುಳಿತು 'ಲಾಸ್ಟ್ ಟೈಮ್ ಇಲ್ಲಿಗೆ ಬಂದಾಗ ಕಾಫಿ ಸಖತ್ತಾಗಿತ್ತು' ಎಂದೇನಾದರೂ ಹೇಳಿದರೆ, ಆವತ್ತೇ ಅವನಿಗೆ ಗುಡ್‌ಬೈ ಹೇಳಿಬಿಡಿ.

ಭವಿಷ್ಯದ ಬಗ್ಗೆ ಹುಡುಗಿಯರು ತುಂಬಾ ತಲೆಕೆಡಿಸಿಕೊಳ್ಳುತ್ತಾರೆಂಬುದು ಹೆಣ್ಣುಬಾಕರಿಗೆ ಗೊತ್ತು. ಹಾಗಾಗಿಅವರು ಮಾತುಮಾತಿಗೂ 'ಮುಂದೆ ನಾವಿಬ್ಬರೂ ಸೇರಿ ಹೀಗೆ ಮಾಡೋಣ, ಹಾಗೆ ಮಾಡೋಣ, ಅಲ್ಲಿಗೆ ಹೋಗೋಣ, ಆಜಾಗದಲ್ಲಿ ಸೈಟ್ ತೆಗೆದುಕೊಳ್ಳೋಣ, ಕಾರು ಕ್ರೀಮ್‌ಕಲರ್ ಇರಬೇಕು, ಮನೆ ಮುಂದೆ ಗಾರ್ಡನ್ ಇರಬೇಕು, ಮಗಳು ಹುಟ್ಟಿದರೆ ಈ ಹೆಸರಿಡೋಣ' ಎಂಬಂತಹ ಫ್ಯೂಚರ್ ಪ್ಲ್ಯಾನ್‌ಗಳನ್ನು ಹೇಳುತ್ತಿರುತ್ತಾರೆ. ಪ್ರತಿ ಬಾರಿ ಇದನ್ನು ಹೇಳುವಾಗಲೂ 'ನಾವು' 'ನಾವು' ಎನ್ನುತ್ತಿರುತ್ತಾರೆ. ಒಳ್ಳೆಯ ಹುಡುಗರೂ ಹೀಗೆ ಹೇಳಬಹುದು. ಆದರೆ, ಹೆಣ್ಣುಬಾಕರುವಿಪರೀತ ಎನ್ನಿಸುವಷ್ಟು ಹೇಳುತ್ತಾರೆ.

ನಿಮ್ಮ ಜೊತೆ ಹೊರಗೆ ಸುತ್ತಾಡಲು ಹೋದಾಗ ಒಂದ್ ನಿಮಿಷ ಎಂದು ಸ್ವಲ್ಪ ದೂರ ಹೋಗಿ ಫೋನ್‌ನಲ್ಲಿ ಮಾತನಾಡಬಹುದು. ಅಥವಾ ಪದೇಪದೇ ಮೆಸೇಜ್ ಮಾಡುತ್ತಿರಬಹುದು. ಅಥವಾ ನಿಮಗೆ ತಿಳಿಯದ ಕೋಡ್‌ವರ್ಡ್‌ಗಳಲ್ಲಿ ಫೋನ್‌ಗೆ ಉತ್ತರಿಸಬಹುದು. ಇವೆಲ್ಲಅವನಿಗೆ ನಿಮ್ಮಲ್ಲೊಂದೇ ಆಸಕ್ತಿಯಿಲ್ಲ, ಇನ್ನೂ ಯಾರೋ ಇದ್ದಾರೆ ಎಂಬುದರ ಸುಳಿವುಗಳು.

ವುಮನೈಸರ್‌ಗಳ ಬಳಿ ನಿಮ್ಮನ್ನು ಮೋಡಿ ಮಾಡುವ ಪೆಟ್ ಹೆಸರುಗಳ ದೊಡ್ಡ ಪಟ್ಟಿಯೇ ಇರುತ್ತದೆ. ಸ್ವೀಟಿ, ಡಾರ್ಲಿಂಗ್, ಹನಿ, ಮೈ ಫ್ಲವರ್, ಮೈ ಲೈಫ್, ಬೇಬ್, ಕ್ಯೂಟಿ ಹೀಗೆ ನಿಮಗೆ ಆ ಕ್ಷಣಕ್ಕೆ ಖುಷಿಯಾಗುವಂತೆ ಯಾವ ಹೆಸರು ಹಿಡಿದು ಕರೆಯಬೇಕು ಎಂಬುದು ಅವರಿಗೆ ಗೊತ್ತಿರುತ್ತದೆ. ಕೆಲವರು ಬೇರೆ ಹುಡುಗಿಯರ ಜೊತೆ ನಿಮ್ಮ ಹೆಸರು ಕನ್‌ಫ್ಯೂಸ್ ಆಗದೇ ಇರಲಿ ಎಂದೂ ಹೀಗೆ ಕರೆಯುವುದುಂಟು!

ಗಂಡಸರು ಸಾಮಾನ್ಯವಾಗಿ ತಮ್ಮ ಬಿಸಿನೆಸ್ ವ್ಯವಹಾರಗಳು ಅಥವಾ ಆಫೀಸ್ ಕೆಲಸಗಳಲ್ಲಿ ಹೆಂಡತಿ ಅಥವಾ ಗರ್ಲ್‌ಫ್ರೆಂಡ್‌ಗಳು ಮೂಗು ತೂರಿಸುವುದನ್ನು ಸಹಿಸುವುದಿಲ್ಲ. ಹಾಗಾಗಿ ಫೋನ್‌ನಲ್ಲೂ ಅವುಗಳನ್ನು ತಕ್ಕಮಟ್ಟಿಗೆ ಗುಟ್ಟಾಗಿಯೇ ಇಟ್ಟಿರುತ್ತಾರೆ. ಆದರೆ, ಬೈ ಚಾನ್ಸ್ ಇದನ್ನು ಹೆಂಡತಿ ಅಥವಾ ಗರ್ಲ್‌ಫ್ರೆಂಡ್ ನೋಡಿಬಿಟ್ಟಳು ಎಂದಾದರೆ ತೀರಾ ಜಗತ್ತು ಬಿದ್ದುಹೋದಂತೆ ಆಡುವುದಿಲ್ಲ.ವುಮನೈಸರ್‌ಗಳು ಹೀಗಾಡುತ್ತಾರೆ. ಅವರು ಯಾವಾಗಲೂ ತಮ್ಮ ಫೋನನ್ನು ಲಾಕ್ ಮಾಡಿಟ್ಟಿರುತ್ತಾರೆ. ವಿಪರೀತ ಗುಟ್ಟು ಮಾಡುತ್ತಾರೆ. ಅದೇ ವೇಳೆ, ನಿಮ್ಮ ಫೋನ್‌ನೊಳಗಿರುವ ಗುಟ್ಟುಗಳ ಬಗ್ಗೆಯೂ ಅವರಿಗೆ ಆಸಕ್ತಿಯಿರುವುದಿಲ್ಲ. ಏಕೆಂದರೆ ಅವರಿಗೆ ಆಸಕ್ತಿಯಿರುವುದು ನಿಮ್ಮ ದೇಹದಲ್ಲಷ್ಟೆ.

ಸ್ನೇಹಿತರ ವಲಯದಲ್ಲಿ ಅವನುವುಮನೈಸರ್ ಎಂದೇ ಫೇಮಸ್ಸಾಗಿರಬಹುದು. ಹಾಗಂತ ಅದು ಸ್ನೇಹಿತರುತಮಾಷೆಗೆ ಕರೆಯುವುದೂಇರಬಹುದು. ಆದರೆ, ಹೊಗೆಯಿದ್ದಲ್ಲಿಬೆಂಕಿಯಿದೆ. ಸುಮ್ಮಸುಮ್ಮನೆ ಅವನಿಗೆ ಯಾರೂ ಆ ಪಟ್ಟ ಕಟ್ಟುವುದಿಲ್ಲ. ಹಾಗೆ ಯಾರಾದರೂ ಅವನ ಬಗ್ಗೆ ಹೇಳುವುದು ನಿಮ್ಮ ಕಿವಿಗೆ ಬಿದ್ದರೆ ಅವನ ಸಹವಾಸ ಬೇಡ. ಅವನೊಬ್ಬನೇ ಹುಡುಗನೇ? ಸುಮ್ಮನೆ ಯಾಕೆ ಟೈಮ್ ವೇಸ್ಟ್ ಮಾಡುತ್ತೀರಿ.

ಒಂದೇ ಸಲಕ್ಕೆ ದೂರವಾಗಬೇಡಿ
ವುಮನೈಸರ್‌ಗಳು ಎಷ್ಟು ಮೋಸಗಾರರೋ ಅಷ್ಟೇ ಆಕರ್ಷಕ ವ್ಯಕ್ತಿಗಳು ಕೂಡ. ಹೆಣ್ಣನ್ನು ಒಲಿಸಿಕೊಳ್ಳುವ ಸಕಲ ಕಲೆಗಳೂ ಅವರಿಗೆ ಗೊತ್ತಿರುತ್ತವೆ. ಅವರ ಬಲೆಗೆ ಬಿದ್ದ ಹೆಣ್ಣಿಗೆ ತಾನು ಮೋಸಹೋಗುತ್ತಿದ್ದೇನೆ ಎಂಬುದು ಗೊತ್ತಾಗುವುದಿಲ್ಲ ಎಂಬುದು ಒಂದು ಪ್ರಮುಖ ಸಂಗತಿಯಾದರೆ, ಕೆಲವರಿಗೆ ತಾವು ಮೋಸಹೋಗುತ್ತಿದ್ದೇವೆ ಎಂದು ಗೊತ್ತಾದರೂಅವನನ್ನು ಬಿಟ್ಟಿರಲಾಗದಷ್ಟು ಅಟ್ಯಾಚ್‌ಮೆಂಟ್ ಬೆಳೆದಿರುತ್ತದೆ. ಏಕೆಂದರೆ, ಆ ಆಸಾಮಿ ಅಷ್ಟು ತೀವ್ರವಾಗಿ ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ ಎಂಬ ನಂಬಿಕೆ ಹುಟ್ಟಿಸಿರುತ್ತಾನೆ. ಮೊದಲೇ ಇವಳ ಮನಸ್ಸು ಸೂಕ್ಷ್ಮ. ಮೋಸ ಮಾಡುವ ಇರಾದೆ ಅವನಿಗಿದ್ದರೂ ಅವನನ್ನು ತಿದ್ದಿನನ್ನವನನ್ನಾಗಿಸಿಕೊಳ್ಳುತ್ತೇನೆ ಎಂಬಭಾವತೀವ್ರತೆಗೆ ಕಟ್ಟುಬಿದ್ದುಬಿಡುವಅಪಾಯವಿದೆ. ಇದು ಬಹಳ ಟ್ರಿಕ್ಕಿ ಸನ್ನಿವೇಶ. ಇದರಿಂದ ಪಾರಾಗುವುದು ಹೇಗೆ?
ಇದಕ್ಕೆ ಪರಿಹಾರ ಹೆಣ್ಣಿನಲ್ಲೇ ಇದೆ. ಅವನು ಮೋಸಗಾರ ಮತ್ತು ಯಾವತ್ತೂ ಮೋಸಗಾರನೇ ಆಗಿರುತ್ತಾನೆ ಎಂಬ ಕಟುಸತ್ಯವನ್ನು ಮೊದಲು ಇವಳು ಮನಗಾಣಬೇಕು. ತಾನೊಬ್ಬಳೇ ಅಲ್ಲ, ಅವನಿಗೆ ನನ್ನಂತೆ ಇನ್ನೂ ಹಲವರಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಇವತ್ತು ಅವನನ್ನು ಒಲಿಸಿಕೊಂಡು ಸರಿದಾರಿಗೆ ತಂದರೂ ಮುಂದೆಂದಾದರೂ ಮತ್ತೆ ಅವನು ತನ್ನ ಹಳೆ ಚಾಳಿ ಮುಂದುವರಿಸುತ್ತಾನೆ ಎಂಬುದು ಇವಳಿಗೆ ಗೊತ್ತಾಗಬೇಕು. ಆಗ ಮಾತ್ರ ಅವನ ಸಂಬಂಧದಿಂದ ಹೊರಬರಲು ಇವಳ ಮನಸ್ಸು ಗಟ್ಟಿಯಾಗುತ್ತದೆ.
ವುಮನೈಸರ್‌ಗಳ ಬಲೆಗೆ ಬಿದ್ದು ಅವನಿಗೆ ಮನಸ್ಸು ಒಪ್ಪಿಸಿದ ಹೆಣ್ಮಕ್ಕಳು ಆ ಸಂಬಂಧದಿಂದ ಹೊರಬರಲು ಒಂದಷ್ಟು ದಾರಿಗಳಿವೆ. ಅವು ನಿಮಗೆ ಗೊತ್ತಿರಲಿ.

ಒಬ್ಬಳೇ ಕುಳಿತು ಸೀರಿಯಸ್ಸಾಗಿ ನಿಮ್ಮ ಭವಿಷ್ಯದ ಬಗ್ಗೆ ಯೋಚಿಸಿ. ಸಂಬಂಧಗಳು ತುಂಬಾ ಸಂಕೀರ್ಣ.ಅಲ್ಲಿ ಯಾವತ್ತು ಮೋಸವಾದರೂ ಅದನ್ನು ತಡೆದುಕೊಳ್ಳುವ ಶಕ್ತಿನಮಗಿರುವುದಿಲ್ಲ. ಹಾಗಾಗಿ ಮುಂದೆ ಮತ್ತೊಮ್ಮೆ ಮೋಸವಾದಾಗ ಆಗುವ ನೋವನ್ನು ಈಗಲೇ ಒಮ್ಮೆ ಕಲ್ಪಿಸಿಕೊಳ್ಳಿ.ಅವನಿಂದ ದೂರವಾಗಿ ಬೇರೊಂದು ಒಳ್ಳೆಯ ಸಂಬಂಧ ಹುಡುಕಿಕೊಂಡರೆ ಅದರಿಂದಾಗುವ ಲಾಭವನ್ನು ಯೋಚಿಸಿ. ನಿಮ್ಮ ಯೋಚನೆಗಳನ್ನೆಲ್ಲ ಒಂದೆಡೆ ಬರೆದುಕೊಳ್ಳಿ. ಆಗ ಮನಸ್ಸು ಒಂದು ಹಂತಕ್ಕೆ ಬರುತ್ತದೆ. ಆ ಸಂಬಂಧದಿಂದ ಏಕೆ ಹೊರಬರಬೇಕು ಎಂಬುದು ನಿಮಗೇತಿಳಿಯುತ್ತದೆ.

ನೀವು ಬಹಳ ನಂಬುವ ಆಪ್ತ ಗೆಳತಿಯೊಬ್ಬಳ ಬಳಿ ಇದನ್ನೆಲ್ಲ ಹೇಳಿಕೊಳ್ಳಿ. ವುಮನೈಸರ್‌ಜೊತೆಗಿನ ನಿಮ್ಮ ಸಂಬಂಧ ಕೊನೆಗಾಣಿಸುವುದು ಹೇಗೆ ಎಂಬ ಬಗ್ಗೆ ಅವಳ ಸಲಹೆ ಕೇಳಿ. ಬೇಕಾದರೆ, ಅವನ ಜೊತೆಗೆ ಸಂಬಂಧ ಮುಂದುವರೆಸಬೇಕೇ ಬೇಡವೇ ಎಂದೂ ಕೇಳಿನೋಡಿ. ಅವಳು ನಿಜಕ್ಕೂ ನಿಮ್ಮ ಹಿತೈಷಿಯೇ ಆಗಿದ್ದರೆ ಬೇಡ ಎನ್ನುತ್ತಾಳೆ. ಏಕೆಂದರೆ ತನ್ನ ಆಪ್ತ ಗೆಳತಿ ಹೀಗೆ ಮೋಸಹೋಗುವುದನ್ನು ಅವಳು ಬಯಸುವುದಿಲ್ಲ.

ಸ್ವಲ್ಪ ದಿನ ಅವನಿಂದದೂರವಾಗಿ ಬೇರೇನಾದರೂ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಆ ಕೂಡಲೇ ಹೊಸ ಸಂಬಂಧ ಹುಡುಕಲು ಹೋಗಬೇಡಿ.ಕರಿಯರ್ ಬಗ್ಗೆ ಯೋಚಿಸಿ. ಹೊಸ ಕೋರ್ಸ್‌ಗೆ ಸೇರಿಕೊಳ್ಳಿ. ಯಾವುದಾದರೂ ಒಳ್ಳೆಯ ಹಾಬಿ ಶುರುಮಾಡಿ. ಆಗ ಒಬ್ಬ ಗಂಡಸಿನ ಜೊತೆ ಅಫೇರ್ ಇಟ್ಟುಕೊಳ್ಳುವ ಬದಲು ಅದಕ್ಕಿಂತ ಒಳ್ಳೆಯ ಕೆಲಸಗಳೂ ನನಗಿವೆ ಎಂಬುದು ತಿಳಿಯುತ್ತದೆ. ಅಥವಾ ನಿಮ್ಮಲ್ಲೇ ಇರುವ ನಿಮಗೆ ಗೊತ್ತಿಲ್ಲದ ಹೊಸಕಲೆಯೊಂದು ಈ ಸಮಯದಲ್ಲಿ ಹೊರಬರಬಹುದು.

ಏಕಾಏಕಿ ಅವನ ಜೊತೆಗಿನ ಎಲ್ಲ ಸಂಬಂಧವನ್ನು ಕಡಿದುಕೊಳ್ಳಬೇಡಿ. ಅದು ಕೆಲವೊಮ್ಮೆಅಪಾಯಕಾರಿಯೂ ಆಗಬಹುದು. ಜಿದ್ದಿಗೆ ಬಿದ್ದು ಅವನು ಏನಾದರೂ ಹಾನಿ ಮಾಡಬಹುದು. ಆದರೆ, ಅವನ ಜೊತೆಗೆ ಒಬ್ಬಂಟಿಯಾಗಿ ನಿರ್ಜನ ಜಾಗಕ್ಕೆ ಹೋಗುವುದನ್ನು ಅವಾಯ್ಡ್ ಮಾಡಿ. ಪದೇಪದೇಅವನು ಫೋನ್ ಮಾಡಿದರೆ ಮೂರ್ನಾಲ್ಕು ದಿನಕ್ಕೆ ಒಮ್ಮೆ ಮಾತ್ರ ಉತ್ತರಿಸಿ. ಅವನ ಜೊತೆ ಹೊರಗೆ ಸುತ್ತಾಡಬೇಕು, ಮಾತನಾಡಬೇಕು ಅನ್ನಿಸಿದರೆ ಸಾಧ್ಯವಾದಷ್ಟು ಪ್ರಯತ್ನಿಸಿ ಆ ಆಸೆಯನ್ನು ಅದುಮಿಡಿ. ಇದಕ್ಕೆಲ್ಲ ಒಂದೆರಡು ತಿಂಗಳೇಹಿಡಿಯಬಹುದು. ಒಮ್ಮೆ ಅವನಿಂದ ನಾನು ದೂರವಾದೆ, ಇನ್ನು ನನಗವನ ಅಗತ್ಯವಿಲ್ಲ ಅನ್ನಿಸಿದ ದಿನ ಅವನೊಂದಿಗಿನಸಂಬಂಧವನ್ನು ಶಾಶ್ವತವಾಗಿ ಕೊನೆಗೊಳಿಸಿಬಿಡಿ.

ಹೊಸ ಹೊಸ ವ್ಯಕ್ತಿಗಳನ್ನು ಭೇಟಿ ಮಾಡಿ. ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವೇ ನೋಡಿ. ಜನರ ಜೊತೆ ಬೆರೆಯಿರಿ. ಯಾರಿಗೆ ಗೊತ್ತು, ಈ ಸಮಯದಲ್ಲೇ ನಿಮಗೊಬ್ಬ ಹೊಸ ಸಂಗಾತಿ ಸಿಕ್ಕಾನು!
-ಸುಗಂಧರಾಜ

(ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555ಆನ್ ಲೈನಲ್ಲಿ ಸಖಿ ಓದಲು http://www.magzter.com/IN/Express-Network-Private-Limited/Sakhi/Women%27s-Interest/ಗೆ ಭೇಟಿನೀಡಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com