ಗಂಡಸರೇಕೆ ಹೆಣ್ಣುಬಾಕರಾಗ್ತಾರೆ?

ಗಂಡಸರೇಕೆ ಹೆಣ್ಣುಬಾಕರಾಗ್ತಾರೆ?

ವಯಸ್ಸು, ದುಡ್ಡಿನ ಮದ ಹಾಗೂ ತಾನೆಂದರೆ ಹುಡುಗಿಯರು ಸಾಯುತ್ತಾರೆ ಎಂಬ ಸುಳ್ಳು ನಂಬಿಕೆ ಇವು ಗಂಡಸೊಬ್ಬನನ್ನು ವುಮನೈಸರ್ ಮಾಡುವ ಅಂಶಗಳು.

ಸೆಕ್ಸೇ ಈ ಬದುಕಿನಲ್ಲಿರುವ ಪರಮಸುಖ ಎಂಬ ತಪ್ಪು ಕಲ್ಪನೆ, ಒಬ್ಬಳಿಗೇ ನಿಷ್ಠನಾಗಿ ಜೀವನ ಮುಗಿಸಿದರೆ ನಾನು ದಂಡಪಿಂಡನಾಗುತ್ತೇನೆ, ಎಷ್ಟೊಂದು ಜನರ ಜೊತೆ ಸುಖಪಡುವ ಅವಕಾಶವಿದ್ದರೂ ನಾನೇಕೆ ಒಬ್ಬಳಿಗೇ ಅಂಟಿಕೊಂಡಿರಬೇಕು ಎಂಬಂತಹ ಯೋಚನೆಗಳೂ ಗಂಡಸರನ್ನು ಹೆಣ್ಣುಬಾಕನನ್ನಾಗಿಸುತ್ತವೆ. ಹುಡುಗಿಯೊಬ್ಬಳಿಂದ ಮೋಸಹೋಗಿ ಹೆಣ್ಣುಕುಲದ ಮೇಲೆ ಸೇಡು ತೀರಿಸಿಕೊಳ್ಳಬೇಕೆಂಬ ಜಿದ್ದು ಕೂಡ ಕೆಲವರನ್ನು ಈ ಚಟಕ್ಕೆ ಇಳಿಸುತ್ತದೆ.

ಹೆಣ್ಣುಬಾಕತನ ಎಂಬುದೊಂದು ಮಾನಸಿಕ ಸಮಸ್ಯೆ. ಅದು ಹೊರಗಿನ ಯಾರಿಗೂ ಗೋಚರಿಸುವುದಿಲ್ಲ. ಇವರ ನಡತೆ ಇನ್ನೆಲ್ಲಾ ವಿಷಯದಲ್ಲೂ ನಾರ್ಮಲ್ ಆಗಿರುತ್ತದೆ. ಆದರೆ, ಒಳಗೊಳಗೇ ಇವರು ಈ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ವಿಚಿತ್ರ ಎಂದರೆ, ಇದೊಂದು ಮಾನಸಿಕ ವ್ಯಾಧಿ ಎಂಬುದು ಇವರಿಗೆ ಯಾವತ್ತೂ ತಿಳಿಯುವುದಿಲ್ಲ. ಹಾಗಾಗಿ ಇದರಿಂದ ಹೇಗೆ ಹೊರಬರಬೇಕು ಎಂದೂ ಇವರು ಯೋಚಿಸುವುದಿಲ್ಲ. ಅದರ ಬದಲಿಗೆ, ತಮಗೆ ಅನ್ನಿಸುತ್ತಿರುವುದೇ ಸರಿ ಎಂಬ ಕಲ್ಪನೆಯಲ್ಲಿರುತ್ತಾರೆ. ಆಗ ಹುಡುಗಿಯರ ಹಿಂದೆ ಬೀಳುವುದು, ಅವಳನ್ನು ಸುಖಕ್ಕೆ ಬಳಸಿಕೊಂಡು ಕೊನೆಗೆ ಕೈಕೊಡುವುದು, ಹೆಣ್ಣೊಬ್ಬಳಿಗೆ ಮಾನಸಿಕವಾಗಿ ಆಘಾತ ನೀಡುವುದು ತಪ್ಪು ಎಂದು ಇವರಿಗೆ ಅನ್ನಿಸುವುದಿಲ್ಲ. ಮಹಿಳೆಯರು ಇರುವುದೇ ನಮ್ಮಂತಹ ಗಂಡಸರ ಭೋಗಕ್ಕೆ ಎಂಬ ಅಪಾಯಕಾರಿ ಕಲ್ಪನೆಯೊಂದು ಇವರಿಗಿರುತ್ತದೆ. ಎಲ್ಲ ಹೆಂಗಸರೂ ಸುಖಕ್ಕಾಗಿಹಾತೊರೆಯುತ್ತಿರುತ್ತಾರೆ, ಆದರೆ ಅದನ್ನು ಹೇಳಿಕೊಳ್ಳದೆ ಒಳಗೊಳಗೇ ಆಸೆಪಡುತ್ತ ಸುಮ್ಮನಿರುತ್ತಾರೆ,ನಮ್ಮಂಥವರು ಅವರಿಗೆ ಸುಖ ನೀಡಿ ಉಪಕಾರ ಮಾಡುತ್ತಿದ್ದೇವೆ ಎಂಬ ಹಾಸ್ಯಾಸ್ಪದ ಯೋಚನೆಯೂ ಕೆಲವರಿಗೆ ಇರಬಹುದು. ಇವೆಲ್ಲವೂ ಸೇರಿ ಅಥವಾ ಇವುಗಳಲ್ಲಿ ಯಾವುದಾದರೂ ಕೆಲವು ಅಂಶಗಳು ಸೇರಿ ಒಬ್ಬವುಮನೈಸರ್ ಹುಟ್ಟಿಕೊಳ್ಳುತ್ತಾನೆ.

ಎಲ್ಲಾ ಗಂಡಸರೂ ವುಮನೈಸರ್ ಅಲ್ಲ. ಹುಡುಗಿಯರನ್ನು ತುಂಬಾ ನೋಡುತ್ತಾನೆ ಎಂದ ಮಾತ್ರಕ್ಕೆ ಅವನು ಹೆಣ್ಣುಬಾಕಆಗಿರಬೇಕಿಲ್ಲ. ಹುಡುಗಿಯರು ಹೇಗೆ ಹುಡುಗರನ್ನು ನೋಡುತ್ತಾರೋ ಹಾಗೇ ಇವನೂ ಅವರನ್ನು ಕೊಂಚ ಹೆಚ್ಚು ನೋಡುತ್ತಿರಬಹುದು ಅಷ್ಟೆ. ಇದು ಪ್ರಕೃತಿಸಹಜವಾದ ಆಕರ್ಷಣೆ.ಸೌಂದರ್ಯವನ್ನು ಆಸ್ವಾದಿಸುವ ಗುಣಕೆಲವರಲ್ಲಿ ಸ್ವಲ್ಪ ಹೆಚ್ಚೇ ಇರುತ್ತದೆ. ಹಾಗಾಗಿ ತಮ್ಮನ್ನು ಗುರಾಯಿಸುವವರೆಲ್ಲ ಹೆಣ್ಣುಬಾಕರು ಎಂಬ ಆತುರದ ನಿರ್ಧಾರಕ್ಕೆ ಹೆಣ್ಮಕ್ಕಳುಬರಬಾರದು.

ಒಬ್ಬ ಗಂಡಸು ಹೆಣ್ಣುಬಾಕ ಎಂಬುದು ಮೊದಲು ಗೊತ್ತಾಗುವುದು ಯಾವಾಗ ಅಂದರೆ ಅವನು ಪದೇಪದೇಮೈ ಮುಟ್ಟತೊಡಗಿದಾಗ. ಆಗ ಅವನು ಸಂಬಂಧಕ್ಕೆ ಹಾತೊರೆಯುತ್ತಿದ್ದಾನೆ ಎಂದರ್ಥ.

ಸಾಮಾನ್ಯವಾಗಿ ಗಂಡಸರಲ್ಲಿರುವಪ್ರಬುದ್ಧತೆಯ ಕೊರತೆಯೇ ಅವರನ್ನುಹೆಣ್ಣುಬಾಕನನ್ನಾಗಿಸುತ್ತದೆ. ತಾನು ಬಹಳ ಸಹಜವಾಗಿ ನಾಲ್ಕೈದು ಹೆಣ್ಮಕ್ಕಳ ಜೊತೆ ಸಂಬಂಧ ಇರಿಸಿಕೊಳ್ಳಬಹುದು, ತನಗೆ ಆ ತಾಕತ್ತಿದೆ ಎಂಬ ಭ್ರಮೆಯಲ್ಲಿ ಅವರಿರುತ್ತಾರೆ. ನನ್ನಲ್ಲಿ ದುಡ್ಡಿದೆ, ರೂಪವಿದೆ, ಒಳ್ಳೆಯಕೆಲಸವಿದೆ, ಚೆನ್ನಾಗಿ ಮಾತಾಡುತ್ತೇನೆ,ಹೆಣ್ಮಕ್ಕಳಿಗೆ ಇನ್ನೇನು ಬೇಕು ಎಂದು ಅವನು ಯೋಚಿಸುತ್ತಾನೆ. ಮಹಿಳೆಯರು ಒಬ್ಬಗಂಡಸಿನಲ್ಲಿ ಇವೆಲ್ಲವುಗಳ ಜೊತೆ ಅತ್ಯಂತ ಮುಖ್ಯವಾಗಿ ಗಮನಿಸುವುದು ಇವನು ನನಗೆ ನಿಷ್ಠನಾಗಿರುತ್ತಾನೋ ಇಲ್ಲವೋ ಎಂಬಗುಣವನ್ನು ಎಂಬುದು ಮಾತ್ರ ಇವನಿಗೆಗೊತ್ತಿರುವುದಿಲ್ಲ. ಸಂಬಂಧಗಳನ್ನು ಬೆಸೆಯುವ ಮೊದಲ ಗುಣ ನಂಬಿಕೆ. ಆಮೇಲೆ ಹಣ, ರೂಪ, ಆಕರ್ಷಣೆಗಳೆಲ್ಲ ಬರುತ್ತವೆ ಎಂಬುದನ್ನು ವುಮನೈಸರ್‌ಗಳು ಅರ್ಥಮಾಡಿಕೊಂಡಿರುವುದಿಲ್ಲ. ಹಾಗಾಗಿ ತಾವು ಬೇರೆ ಬೇರೆ ಮಹಿಳೆಯರ ಜೊತೆ ಅಫೇರ್ ಇಟ್ಟುಕೊಂಡರೆ ಹೇಗಿರುತ್ತದೆ ಎಂಬ ಫ್ಯಾಂಟಸಿಯನ್ನೇ ನಿಜ ಎಂದು ನಂಬಿ ಅಂತಹ ಸಾಹಸಕ್ಕೆ ಇಳಿಯುತ್ತಾರೆ. ವಯಸ್ಸಾಗುತ್ತಾ ಹೋದಂತೆ ತಾನು ಎಂತಹ ತಪ್ಪು ಮಾಡಿದೆ ಎಂಬ ಗಿಲ್ಟ್ ಇವರಿಗೂ ಕಾಡದೆ ಬಿಡುವುದಿಲ್ಲ.

ಹೆಣ್ಣುಬಾಕರಲ್ಲೇ ಇನ್ನೊಂದು ವಿಧವಿದೆ. ಅವರು ಕೇವಲ ಫ್ಲರ್ಟ್ ಮಾಡುವವರು. ಇವರಿಗೆ ಬೇರೆ ಬೇರೆ ಹುಡುಗಿಯರ ಸಾನ್ನಿಧ್ಯದಲ್ಲಿ ಇರುವುದೆಂದರೆ ಬಹಳ ಇಷ್ಟ. ಹೆಣ್ಮಕ್ಕಳ ಜೊತೆ ಓಡಾಡುವುದು, ಅವರ ಜೊತೆ ಕ್ಲಬ್ಬು, ಪಬ್ಬುಗಳಿಗೆ ಹೋಗಿ ಹಣ ಖರ್ಚು ಮಾಡುವುದರಲ್ಲೇ ಸುಖ ಕಾಣುತ್ತಾರೆ. ಇವರು ಅಪಾಯಕಾರಿಯಲ್ಲ. ಹೈಫೈ ವರ್ಗದಲ್ಲಿ ಕೆಲ ಹೆಣ್ಮಕ್ಕಳಿಗೂ ಇಂತಹ ಫ್ಲರ್ಟಿಂಗ್ ಇಷ್ಟವಾಗುತ್ತದೆ. ಅವರೂ ಈ ಥರದ ಶಾರ್ಟ್‌ಟೈಮ್ ಅಫೇರುಗಳನ್ನು ಎದುರು ನೋಡುತ್ತಿರುತ್ತಾರೆ. ಹೀಗೆ ಫ್ಲರ್ಟ್ ಮಾಡುವವುಮನೈಸರ್‌ಗಳು ತಮಗೆ ದೀರ್ಘಕಾಲದ ಸಂಬಂಧಗಳಲ್ಲಿ ಇಂಟರೆಸ್ಟ್ ಇಲ್ಲ ಎಂಬುದನ್ನು ಮೊದಲೇ ಹೇಳಿಬಿಡುತ್ತಾರೆ. ಅದೊಂಥರಾ ಜಂಟಲ್‌ಮನ್‌ಗಿರಿ.

ಬಹಳಷ್ಟು ಹೆಣ್ಣುಬಾಕರಿಗೆ ಬೇರೆ ಬೇರೆ ಮಹಿಳೆಯರ ಜೊತೆ ದೈಹಿಕ ಸಂಬಂಧ ಇರಿಸಿಕೊಳ್ಳುವುದರಲ್ಲಿ ಸಿಗುವ ಸುಖಕ್ಕಿಂತ ತಾನು ಎಷ್ಟು ಬೇಕಾದರೂ ಮಹಿಳೆಯರನ್ನು ಬೀಳಿಸಿಕೊಳ್ಳಬಲ್ಲೆ ಎಂಬ ಅಹಂಕಾರವೇ ಥ್ರಿಲ್ ಕೊಡುತ್ತದೆ. ಇವರಿಗೆ ತಾನೊಬ್ಬ ಸ್ಪೆಷಲ್ ವ್ಯಕ್ತಿ ಎಂಬ ಭ್ರಮೆಯಿರುತ್ತದೆ. ಅದನ್ನು ತನಗೆ ತಾನೇ ಸಾಬೀತುಪಡಿಸಿಕೊಳ್ಳುವುದಕ್ಕೆ ಹೆಣ್ಣುಬಾಕರಾಗಿರುತ್ತಾರೆ.

ಬೇರೆ ಬೇರೆ ಥರದ ಮಹಿಳೆಯರು ಬೇರೆ ಬೇರೆ ಥರದ ಸುಖ ಕೊಡುತ್ತಾರೆ ಎಂಬಸೆಕ್ಸ್ ಬುಕ್ ಕಥೆಗಳಿಂದಲೂ ಹೆಣ್ಣುಬಾಕರಾಗುವವರಿದ್ದಾರೆ. ಎಲ್ಲ ಸುಖವೂ ಒಂದೇ, ಅದು ನಾನು ಹೇಗೆ ಅನುಭವಿಸುತ್ತೇನೋ ಹಾಗಿರುತ್ತದೆ ಎಂಬುದು ತಿಳಿಯುವಷ್ಟರಲ್ಲಿ ಇವರು ಮುದುಕರಾಗಿರುತ್ತಾರೆ. ಅಷ್ಟರೊಳಗೆ ಇವರಿಗೂ, ಇವರ ಜೊತೆ ಸಂಬಂಧ ಇರಿಸಿಕೊಂಡಿದ್ದವರಿಗೂ ಏನೇನು ಹಾನಿಯಾಗಬೇಕೋ ಆಗಿರುತ್ತದೆ. ಇವರೊಳಗಿರುವವುಮನೈಸರ್ ಕೂಡ ಸತ್ತುಹೋಗಿರುತ್ತಾನೆ.

ಕಂಪನಿ ಆಫ್ ವಿಮೆನ್
ತಾನು ಬೇರೆ ಬೇರೆ ಮಹಿಳೆಯರನ್ನು ಒಲಿಸಿಕೊಂಡ ಬಗೆಯನ್ನು ವರ್ಣರಂಜಿತವಾಗಿ ಚಿತ್ರಿಸಿ 'ಕಂಪನಿ ಆಫ್ ವಿಮೆನ್‌' ಎಂಬ ಬೆಸ್ಟ್ ಸೆಲ್ಲರ್ ಪುಸ್ತಕ ಬರೆದ ದಿವಂಗತ ಖುಷ್ವಂತ್‌ಸಿಂಗ್ ವುಮನೈಸರ್ ಆಗಿದ್ದರಾ? ಹೇಳುವುದು ಕಷ್ಟ. ಏಕೆಂದರೆ, ಅವರು ಬರೆದಿರುವ ರೀತಿ ನೋಡಿದರೆ ಯಾರಿಗೂ ಅವರು ಮೋಸ ಮಾಡಿಲ್ಲ. ಹಾಗಾಗಿ ಅವರೊಬ್ಬ ಶೋಕಿಲಾಲ ಮಾತ್ರ. ಆದರೆ, ಅಷ್ಟೊಂದು ಜನರ ಜೊತೆ ಸಂಬಂಧ ಇರಿಸಿಕೊಂಡು ಯಾರಿಗೂ ಮೋಸ ಮಾಡದೆ ಇರಲು ಸಾಧ್ಯವೇ ಎಂಬುದು ಪ್ರಶ್ನೆ. ಬಹುಶಃ ತಮ್ಮಿಂದ ಮೋಸಹೋದ ಹೆಂಗಸರ ಬಗ್ಗೆ ಖುಷ್ವಂತ್‌ಬೇಕಂತಲೇ ಬರೆದಿಲ್ಲ ಅಥವಾ ತಾವು ಯಾರಿಗೂ ಮೋಸ ಮಾಡಿಲ್ಲ, ಕೇವಲ ಸುಖ ಕೊಟ್ಟಿದ್ದೇನೆ ಎಂದು ಬರೆದುಕೊಂಡು ಹೀರೋ ಅನ್ನಿಸಿಕೊಳ್ಳುವ ಆಸೆ ಅವರಿಗಿತ್ತು. ಇಷ್ಟಾಗಿಯೂ ಆ ಪುಸ್ತಕದ ಬಗ್ಗೆಯೇ ಸಾಕಷ್ಟು ಅನುಮಾನಗಳಿವೆ. ಅದು ಖುಷ್ವಂತ್‌ಸಿಂಗ್ ತಮ್ಮ ಜೀವನದ ನೈಜ ಘಟನೆಗಳು ಎಂಬಂತೆ ಬಿಂಬಿಸಿರುವ ಕಪೋಲಕಲ್ಪಿತ ಸಂಗತಿಗಳ ಕಾದಂಬರಿ ಎಂದು ಹೇಳುವವರಿದ್ದಾರೆ. ಅದೇ ನಿಜವಾಗಿದ್ದರೆ ಅವರನ್ನೇ ಮಾಡೆಲ್ ಆಗಿಟ್ಟುಕೊಂಡು ರಸಿಕ ಮಹಾಶಯರಂತೆ ಪೋಸು ಕೊಡುವ ಅವರ ಶಿಷ್ಯ ಪರಂಪರೆ ತಮ್ಮ ಸಾಹಸಗಳ ಬಗ್ಗೆ ಇನ್ನೊಮ್ಮೆ ಯೋಚಿಸಬೇಕಿದೆ.

ಆಂಟಿ ಪ್ರೀತ್ಸೇ!
ವುಮನೈಸರ್‌ಗಳು ಕೇವಲ ಹುಡುಗಿಯರಿಗೆ ಮಾತ್ರ ಗಾಳಹಾಕುವುದಿಲ್ಲ. ಮದುವೆಯಾಗಿ ಸೆಟ್ಲ್ ಆದ ಮಹಿಳೆಯರೂ ಇವರಿಗೆ ಬೇಟೆಗಳೇ. ಮಹಿಳೆಯರ ಬದುಕಿನಲ್ಲಿ ವಿವಾಹೇತರ ಸಂಬಂಧಗಳು ಶುರುವಾಗುವುದೇ ಸಾಮಾನ್ಯವಾಗಿ ಇಂತಹಹೆಣ್ಣುಬಾಕರ ಜೊತೆ. ಹೆಚ್ಚಿನ ಸಂದರ್ಭದಲ್ಲಿ ಇದು ದುರಂತದಲ್ಲೇ ಕೊನೆಗಾಣುತ್ತದೆ. ಇವಳ ಗಂಡನಿಗೆ ವಿಷಯ ತಿಳಿದು ರಂಪಾಟವಾಗುತ್ತದೆ. ಅದು ಡೈವೋರ್ಸ್‌ಗೂ ಕಾರಣವಾಗಬಹುದು.

ನೆನಪಿಡಿ: ಮದುವೆಯಾದವರ ಜೊತೆ ಸಂಬಂಧ ಇರಿಸಿಕೊಳ್ಳುವ ವುಮನೈಸರ್‌ಗಳಿಗೆ ಆಕೆ ಆ ಮದುವೆಯಿಂದ ಹೊರಬಂದು ತನ್ನನ್ನು ಮದುವೆಯಾಗುವುದು ಬೇಕಿರುವುದಿಲ್ಲ. ಅವಳು ಗಂಡನ ಜೊತೆಗಿದ್ದುಕೊಂಡೇ ತನ್ನ ಜೊತೆಗೂ ಸಂಬಂಧ ಇರಿಸಿಕೊಳ್ಳಬೇಕು. ಏಕೆಂದರೆಅವನಿಗೂ ಒಂದು ಸಂಸಾರವಿರುತ್ತದೆ. ಅಥವಾ ಅವನು ಬ್ಯಾಚಲರ್ ಆಗಿದ್ದರೆ ಮುಂದೆ ಒಳ್ಳೆಯ ಹುಡುಗಿಯೊಬ್ಬಳ ಜೊತೆ ಮದುವೆಯಾಗುವ ಆಸೆಯಿರುತ್ತದೆಯೇ ಹೊರತು ಈಗಾಗಲೇ ಮದುವೆಯಾದವಳಿಗೆ 'ಬಾಳು ಕೊಡುವ' ಉದಾತ್ತ ಧ್ಯೇಯವೇನೂ ಅವನಿಗಿರುವುದಿಲ್ಲ. ಹಾಗಾಗಿ ತನ್ನ ಗೆಣೆಕಾರ್ತಿ ಅವಳ ಗಂಡನ ಜೊತೆಗೇ ಇದ್ದಷ್ಟೂ ಅವನು ಸೇಫು. ಮದುವೆಯಾದವರನ್ನು ಬಲೆಗೆ ಬೀಳಿಸಿಕೊಳ್ಳುವ ಹೆಣ್ಣುಬಾಕರ ಮೋಡಸ್ ಆಪರೆಂಡಿ ಕೊಂಚ ಬೇರೆಯಾಗಿರುತ್ತದೆ. ಅವರು ಈಕೆಗೆ 'ನೀನು ನಿನ್ನ ಗಂಡನ ಜೊತೆಸುಖವಾಗಿಲ್ಲ. ನಿನಗೊಂದು ಐಡೆಂಟಿಟಿಯೇ ಇಲ್ಲ. ನಿನಗೆ ಯಾವ ಸ್ವಾತಂತ್ರ್ಯವೂ ಇಲ್ಲ. ನಿನ್ನನ್ನು ನಿನ್ನ ಗಂಡ ಗೌರವಿಸುವುದಿಲ್ಲ. ನೀನು ಯಾರೆಂಬುದನ್ನು ನಿನಗೆ ನಾನು ತೋರಿಸುತ್ತೇನೆ' ಎಂಬಂತೆ ವರ್ತಿಸುತ್ತಾರೆ. ಇವಳಿಗೆ ತಾನೊಬ್ಬಳು ವೇಸ್ಟ್ ಅನ್ನಿಸಿಬಿಡಬೇಕು. ಇವನು ನನ್ನನ್ನು ಬಹಳ ಗೌರವಿಸುತ್ತಾನೆ, ತನ್ನ ಗಂಡನಿಗಿಂತ ಹೆಚ್ಚು ಪ್ರೀತಿಸುತ್ತಾನೆ ಅನ್ನಿಸಬೇಕು. ಇವನ ಜೊತೆ ಇದ್ದರೆ ನನಗೆ ಖುಷಿ ಸಿಗುತ್ತದೆ ಎಂಬ ಹುಸಿ ನಂಬಿಕೆ ಬರಬೇಕು. ಹಾಗಿರುತ್ತದೆ ಅವನ ತಂತ್ರಗಳು. ವಾಸ್ತವವಾಗಿ ಅವನಿಗೆ ಬೇಕಿರುವುದು ನಿಮ್ಮಖುಷಿಯಲ್ಲ, ಅವನ ಖುಷಿ. ಅದಕ್ಕಾಗಿ ಅವನು ಆಡುವ ಆಟಗಳು ಇವು. ಭಾವನಾತ್ಮಕ ಬ್ಲ್ಯಾಕ್‌ಮೇಲ್.

-ಸುಗಂಧರಾಜ
(ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555ಆನ್ ಲೈನಲ್ಲಿ ಸಖಿ ಓದಲು http://www.magzter.com/IN/Express-Network-Private-Limited/Sakhi/Women%27s-Interest/ಗೆ ಭೇಟಿನೀಡಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com