ಬದಲಾಗುವ ಹವಾಮಾನ, ಇರಲಿ ಗಮನ

ನಮ್ಮ ಪರಿಸರದಲ್ಲಾಗುವ ಬದಲಾವಣೆಯನ್ನು ನಾವು ದೂರುತ್ತೇವೆ. ಆದರೆ ಇದಕ್ಕೆಲ್ಲಾ ಕಾರಣಕರ್ತರು ಯಾರು? ಎಂಬುದನ್ನು ನಾವು ಯಾವತ್ತಾದರೂ ಚಿಂತಿಸಿದ್ದೇವೆಯೇ?
ವಿಶ್ವ ವಾತಾವರಣ ದಿನ (ಸಾಂದರ್ಭಿಕ ಚಿತ್ರ )
ವಿಶ್ವ ವಾತಾವರಣ ದಿನ (ಸಾಂದರ್ಭಿಕ ಚಿತ್ರ )

ಚಳಿಗಾಲ ಬಂದಾಗ ಎಷ್ಟು ಚಳಿ ಎಂಬರು
ಬಂತಲ್ಲಾ ಬೇಸಿಗೆ ಕೆಟ್ಟ ಬಿಸಿಲೆಂಬರು
ಮಳೆ ಬಿತ್ತೋ ಬಿಡದಲ್ಲ ಶನಿ ಎಂಬ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ

-ಕೆಎಸ್ ನರಸಿಂಹ ಸ್ವಾಮಿ

ನಿಜ, ನಾವು ಮೆಚ್ಚುವ ವಸ್ತು ಇಲ್ಲಿ ಇಲ್ಲವೇ ಇಲ್ಲ. ಬದಲಾಗುವ ಹವಾಮಾನವನ್ನು ಗೊಣಗುತ್ತಾ, ಅದರೊಂದಿಗೆ ಏಗುತ್ತಾ ಬಾಳುವುದು ನಮ್ಮ ಸದ್ಯದ ಪರಿಸ್ಥಿತಿ. ನಮ್ಮ ಪರಿಸರದಲ್ಲಾಗುವ ಬದಲಾವಣೆಯನ್ನು ನಾವು ದೂರುತ್ತೇವೆ. ಆದರೆ ಇದಕ್ಕೆಲ್ಲಾ ಕಾರಣಕರ್ತರು ಯಾರು? ಎಂಬುದನ್ನು ನಾವು ಯಾವತ್ತಾದರೂ ಚಿಂತಿಸಿದ್ದೇವೆಯೇ?

ತಾಳ ತಪ್ಪಿದ ಮಳೆ, ಬಿಸಿಲ, ಗಾಳಿಯಿಂದ ಪ್ರಕೃತಿ ವಿಕೋಪಗಳು ಸಂಭವಿಸಿದಾಗ ತಲೆ ಮೇಲೆ ಕೈಯಿಟ್ಟು ಗೋಳಾಡುವ ಬದಲು ನಮಗೆಲ್ಲವನ್ನು ನೀಡುವ ಭೂಮಿಯನ್ನು ನಾವು ಸಂರಕ್ಷಿಸಿದ್ದೇವೆಯೇ? ಇಂಥಾ ವಿಕೋಪಗಳಿಂದ ನಾವೇನು ಕಲಿತಿದ್ದೇವೆ? ಎಲ್ಲವೂ ಪ್ರಶ್ನೆಗಳಾಗಿಯೇ ಉಳಿಯುತ್ತವೆಯೇ ವಿನಾ ಉತ್ತರದ ಬಗ್ಗೆ ಚಿಂತಿಸಲು ನಮಗೆಲ್ಲಿದೆ ಸಮಯ?
ಇಂಥಾ ಹೊಡೆತಗಳಿಂದ ಕಲಿತರೂ ಇಲ್ಲದೇ ಇದ್ದರೂ ಹವಾಮಾನದ ಬಗ್ಗೆ  ಜಾಗೃತಿ ಮೂಡಿಸುವ ಸಲುವಾಗಿ ಮಾರ್ಚ್ 24 ನ್ನು ವಿಶ್ವ ವಾತಾವರಣ ದಿನವನ್ನಾಗಿ ಆಚರಿಸಲಾಗುತ್ತದೆ. ವಿಶ್ವ ಪವನಶಾಸ್ತ್ರೀಯ ಸಂಸ್ಥೆ ((World Meteorological Organization-WMO) ಈ ದಿನಾಚರಣೆಯ ನೇತೃತ್ವವನ್ನು ವಹಿಸಿಕೊಂಡಿದೆ.

ಮಾರ್ಚ್ 23ನ್ನು ವಿಶ್ವ ವಾತಾವರಣ ದಿನವನ್ನಾಗಿ ಆಚರಿಸುವುದಕ್ಕೆ ಕಾರಣವೂ ಉಂಟು. 1950 ಮಾರ್ಚ್ 23ರಂದು ವಿಶ್ವ ಪವನಶಾಸ್ತ್ರೀಯ ಸಂಸ್ಥೆ ಆರಂಭಗೊಂಡ ದಿನ. 1873ರಲ್ಲಿ ರಚನೆಯಾದ ಅಂತಾರಾಷ್ಟ್ರೀಯ ಪವನಶಾಸ್ತ್ರೀಯ ಸಂಸ್ಥೆ 1950ರಲ್ಲಿ WMO ಆಗಿ ಬದಲಾಯಿತು. 1951ರಲ್ಲಿ ಇದು ವಿಶ್ವಸಂಸ್ಥೆಯ ವಾತಾವರಣ ಏಜೆನ್ಸಿಯಾಗಿ ಬದಲಾಯಿತು.

ಹವಾಮಾನ ವೈಪರೀತ್ಯ
ಹವಾಮಾನ ವೈಪರೀತ್ಯವು ನಿಸರ್ಗ ಸಹಜ ಪ್ರಕ್ರಿಯೆಯೇ ಹೊರತು ಮನುಷ್ಯ ಸೃಷ್ಟಿಯಲ್ಲ. ಈ ಭೂಮಿಯಲ್ಲಿ ಹವಾಮಾನ ವೈಪರೀತ್ಯವು ಮನುಷ್ಯ ಸೃಷ್ಟಿಗೆ  ಮುನ್ನವೇ ಎಷ್ಟೋ ಸಲ ಸಂಭವಿಸಿದೆ. ಭೂಮಿಯ ಮೇಲಿನ ಅತ್ಯಧಿಕ ತಾಪಮಾನದಿಂದಾಗಿ 6. 5 ಕೋಟಿ ವರ್ಷಗಳ ಹಿಂದೆ ಜೀವ ವೈವಿಧ್ಯವೆಲ್ಲಾ ನಾಶವಾಗಿದ್ದೇ ಇದಕ್ಕೆ ನಿದರ್ಶನ ಎಂದು ಹೇಳಲಾಗುತ್ತದೆ. ಡಾರ್ವಿನ್‌ರ ವಿಕಾಸವಾದದ ಮುಖ್ಯ ಸೂತ್ರಗಳಾದ ಅಸ್ತಿತ್ವಕ್ಕಾಗಿ ಸೆಣಸಾಟ, ಸದೃಢರ ಉಳಿವು ಮತ್ತು ಸಹಜ ಆಯ್ಕೆ ಎಲ್ಲವೂ ಹವಾಮಾನದೊಂದಿಗೆ ಬೆಸೆದುಕೊಂಡಿದೆ. ಹವಾಮಾನಕ್ಕೆ ಹೊಂದಿಕೊಳ್ಳುವ ಪ್ರಾಣಿಗಳು ಬದುಕುತ್ತವೆ, ಇಲ್ಲದೇ ಇದ್ದವುಗಳು ನಾಶವಾಗುತ್ತದೆ. ಹವಾಮಾನ ಬದಲಾದಂತೆ ಪ್ರಾಣಿ, ಪಕ್ಷಿ, ಗಿಡಗಳು ಅಳಿವಿನತ್ತ ಸಾಗುತ್ತಾ ಮುಂದೊಂದು ದಿನ ಕಣ್ಮರೆಯಾಗುತ್ತವೆ. ಹೆಚ್ಚುತ್ತಿರುವ ಕೈಗಾರಿಕೋದ್ಯಮ, ಅರಣ್ಯ ನಾಶ ಹೀಗೆ ಎಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಪ್ರಕೃತಿಯ ಸಮತೋಲನವನ್ನು ಅಲ್ಲೋಲಕಲ್ಲೋಲ ಮಾಡುತ್ತಿವೆ.

ನಾವೇನೂ ಮಾಡದಿದ್ದರೂ ಹವಾಮಾನದಲ್ಲಿ ಬದಲಾವಣೆಯುಂಟಾಗುತ್ತದೆ. ಅಗ್ನಿ ಪರ್ವತಗಳು ಸ್ಫೋಟವಾಗುತ್ತವೆ, ಭೂಕಂಪನವಾಗುತ್ತದೆ, ಸಮುದ್ರದಲ್ಲಿ ಜಲ ಪ್ರವಾಹಗಳಾಗುತ್ತದೆ. ಇವೆಲ್ಲವೂ ಹವಾಮಾನ ವೈಪರೀತ್ಯಕ್ಕೆ ಕಾರಣಗಳಾಗುತ್ತವೆ. ಅದೇ ವೇಳೆ ಮನುಷ್ಯ ಭೂಮಿಯನ್ನು ಸಿಗಿದು, ಅಗೆದು ತನ್ನ ಜೀವನ ಸಾಗಿಸುವುದಕ್ಕೆ ಬಳಸುವಾಗ ಪಾಪ ಪ್ರಕೃತಿಯಾದರೂ ಏನು ಮಾಡುತ್ತೆ? ನೀರು, ಗಾಳಿ , ಬೆಳಕು ಎಲ್ಲವೂ ಮಲಿನವಾಗುವ ಮೂಲಕ ಪ್ರಕೃತಿ ತನ್ನ ಸೌಂದರ್ಯವನ್ನು ಕಳೆದುಕೊಂಡು ಬಿಟ್ಟಿದೆ. ಸರಿಯಾದ ಸಮಯಕ್ಕೆ ಮಳೆ ಬರಲ್ಲ, ಮಳೆ ಬರದೇ ಇದ್ದರೆ ಬೆಳೆ ಬೆಳೆಯಲ್ಲ. ಎಲ್ಲವೂ ಒಂದನ್ನೊಂದು ಹೊಂದಿಕೊಂಡು ಬದುಕುವ ಆ ವಾತಾವರಣದಲ್ಲಿ ಏರು ಪೇರುಗಳಾಗುತ್ತಿದ್ದಂತೆ ಪ್ರಕೃತಿ ಬಂಜೆಯಾಗುತ್ತಿದೆ. ಆಹಾರ ಶೃಂಖಲೆಯ ವ್ಯವಸ್ಥೆಯೂ ಅಸ್ತವ್ಯಸ್ತವಾಗುತ್ತಿದೆ. ಇದಕ್ಕೆಲ್ಲಾ ಕಾರಣಕರ್ತ ಮನುಷ್ಯ ಮಾತ್ರ!

ಜಾಗೃತಿ ಮೂಡಲಿ
ಈ ವರ್ಷದ ವಾತಾವರಣ ದಿನಾಚರಣೆಯ ಸಂದೇಶ Climate Knowledge for Climate Action. ವಾತಾರಣದಲ್ಲಾಗುವ ಬದಲಾವಣೆಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಉದ್ದೇಶ ಈ ದಿನಾಚರಣೆಯದ್ದು.
ನಮ್ಮ ಉಳಿವಿಗಾಗಿ ಪ್ರಕೃತಿಯನ್ನು ಉಳಿಸೋಣ, ಹವಾಮಾನದ ರಕ್ಷಣೆಗೆ ಬದ್ಧರಾಗೋಣ.

- ರಶ್ಮಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com