ವಾಶಿಂಗ್ಟನ್: ತಾನು ಗರ್ಭಿಣಿ ಎಂದೇ ತಿಳಿಯದ ಕೆನಡಾ ಮಹಿಳೆ ವಿಮಾನದಲ್ಲೇ ಮಗುವಿಗೆ ಜನ್ಮ ನೀಡಿದ ಪವಾಡ ಸದೃಶ ಘಟನೆ ನಡೆದಿದೆ.
ತನ್ನ ಪ್ರಿಯಕರ ಮೈಕೆಲ್ ಬ್ರಾಂಚ್ ಜೊತೆ ಮೇ ೧೦ ರಂದು ಕೆನಾಡದಿಂದ ಟೋಕಿಯೋಗೆ ಹೊರಟ ವಿಮಾನ ಏರಿದ ಅದಾ ಗುಆನ್ ಅವರಿಗೆ ವಿಮಾನ ಪೆಸಿಫಿಕ್ ಸಾಗರದ ಮೇಲೆ ಹಾರುತ್ತಿದ್ದಾಗ ಹೆರಿಗೆ ಬೇನೆ ಕಾಣಿಸಿಕೊಂಡಿದೆ.
ಮಗು ಚೋಲೆಯ ಅಜ್ಜಿ ಸಾಂದ್ರಾ ಬ್ರಾಂಚ್ ಅವರಿಗೆ ಅವರ ಮಗ 'ಅಮ್ಮಂದಿರ ದಿನ'ದಂದು ಭಾವನಾತ್ಮಕ ಕರೆ ಮಾಡಿ ಈ ವಿಷಯ ತಿಳಿಸಿದಾಗ ಆಶ್ಚರ್ಯಚಕಿತರಾದ ಅವರು "ಏನು? ಇದು ಹೇಗೆ ಸಾಧ್ಯ ಅವಳು ಗರ್ಭಿಣಿಯಾಗಿರಲಿಲ್ಲ" ಎಂದಿದ್ದಾರೆ ಎಂದು ಕೂಡ ವರದಿಯಾಗಿದೆ.
ಇಂತಹ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ನಮ್ಮ ಸಿಬ್ಬಂದಿಗೆ ಒಳ್ಳೆಯ ತರಬೇತಿ ನಿದಿರುತ್ತೇವೆ ಎಂದು ಏರ್ ಕೆನಡಾ ವಕ್ತಾರ ಏಂಜೆಲಾ ಮಾಹ ತಿಳಿಸಿದ್ದಾರೆ. ಆ ಸಮಯದಲ್ಲಿ ವಿಮಾನದಲ್ಲಿ ವೈದ್ಯರೂ ಇದ್ದುದ್ದರಿಂದ ಸಹಾಯವಾಗಿದೆ. ಸಹಾಯಕ್ಕೆ ಎಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ.
"ಅಮ್ಮಂದಿರ ದಿನದ ಶುಭಾಶಯಗಳು. ಎ ಸಿ ೦೦೦೯ ರಲ್ಲಿ ಸುರಕ್ಷಿತವಾಗಿ ಟೋಕಿಯೋಗೆ ಬಂದಿಳಿದ ತಾಯಿ ಮತ್ತು ಮಗುವಿಗೆ ಶುಭಾಶಯಗಳು" ಎಂದು ವಿಮಾನಯಾನ ಸಂಸ್ಥೆ ಟ್ವೀಟ್ ಮಾಡಿದೆ.
ವಿಮಾನದಲ್ಲಿ ಜನ್ಮ ನೀಡಿದ ೩೭ ತಿಂಗಳ ಗರ್ಭಿಣಿ ಗುಆನ್(೨೩) ಕೆಲವು ದಿನಗಳ ಹಿಂದೆ ತಪಾಸಣೆಗೆ ವೈದ್ಯರ ಬಳಿ ತೆರಳಿದ್ದರು ಕೂಡ ವೈದ್ಯರು ಆಕೆ ಗರ್ಭಿಣಿಯಾಗಿರುವುದನ್ನು ಕಂಡುಹಿಡಿದಿಲ್ಲ. ಅಲ್ಲದೆ ಆಕೆ ಪ್ರತ್ಯೇಕವಾಗಿ ತೆಗೆದುಕೊಂಡ ಗರ್ಭಿಣಿ ತಪಾಸಣೆ ಪರೀಕ್ಷೆ ಕೂಡ ಋಣಾತ್ಮಕವಾಗಿತ್ತು ಎಂದು ವರದಿಯಾಗಿದೆ.
Advertisement