ವಿಂಡೋಸ್ 10 ಆಪರೇಟಿಂಗ್ ಸಿಸ್ಟಂನ ವಿಶೇಷತೆಗಳೇನು?

ವಿಂಡೋಸ್ 10 ಆಪರೇಟಿಂಗ್ ಸಿಸ್ಟಂನಲ್ಲಿ ಏನೆಲ್ಲಾ ವಿಶೇಷತೆಗಳಿವೆ ಎಂಬುದನ್ನು ಮೈಕ್ರೋಸಾಫ್ಟ್ ಬಹಿರಂಗಪಡಿಸಿದೆ....
ವಿಂಡೋಸ್ 10
ವಿಂಡೋಸ್ 10

ಜುಲೈ ಮಾಸಾಂತ್ಯದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿರುವ ವಿಂಡೋಸ್ 10 ಆಪರೇಟಿಂಗ್ ಸಿಸ್ಟಂನಲ್ಲಿ ಏನೆಲ್ಲಾ ವಿಶೇಷತೆಗಳಿವೆ ಎಂಬುದನ್ನು ಮೈಕ್ರೋಸಾಫ್ಟ್ ಬಹಿರಂಗಪಡಿಸಿದೆ.   190 ರಾಷ್ಟ್ರಗಳಲ್ಲಿ 11 ಭಾಷೆಗಳಲ್ಲಿ ಏಕ ಕಾಲದಲ್ಲಿ ಬಿಡುಗಡೆಯಾಗಲಿರುವ ವಿಂಡೋಸ್ 10 ಆಪರೇಟಿಂಗ್ ಸಿಸ್ಟಂಗೆ 7 ವ್ಯತ್ಯಸ್ತ ಆವೃತ್ತಿಗಳಿರುತ್ತವೆ.

ಈ ಏಳು ಆವೃತ್ತಿಗಳ ಬಗ್ಗೆ ಮೈಕ್ರೋಸಾಫ್ಟ್ ಅಧಿಕೃತ ಬ್ಲಾಗ್ http://blogs.windows.com  ನಲ್ಲಿ ವಿವರಗಳನ್ನು ನೀಡಲಾಗಿದೆ.

ವಿಂಡೋಸ್ 10 ಆಪರೇಟಿಂಗ್ ಸಿಸ್ಟಂನ ಏಳು ವ್ಯತ್ಯಸ್ತ ಆವೃತ್ತಿಗಳ ಬಗ್ಗೆ ತಿಳಿಯೋಣ


 ವಿಂಡೋಸ್ 10 ಹೋಂ
ಡೆಸ್ಕ್‌ಟಾಪ್ ಕಂಪ್ಯೂಟರ್, ಲ್ಯಾಪ್‌ಟಾಪ್, ಟ್ಯಾಬ್ಲೆಟ್, ಲ್ಯಾಪ್ ಮತ್ತು ಟ್ಯಾಪ್ ಸಂಯೋಗದ ಹೈಬ್ರಿಡ್ ಡಿವೈಸ್‌ಗಳಿಗಾಗಿ ತಯಾರು ಮಾಡಿದ್ದಾಗಿದೆ ಇದು.

ಪರ್ಸನಲ್ ಡಿಜಿಟಲ್ ಅಸಿಸ್ಟೆಂಟ್ ಆಗಿ ಕೋರ್ಟನಾ ಸೌಲಭ್ಯ., ಮೈಕ್ರೋಸಾಫ್ಟ್ ನ ಹೊಸ ಎಡ್ಜ್ ಬ್ರೌಸರ್,  ವಿಂಡೋಸ್ ಹಲೋ ಫೇಸ್ ರೆಕಗ್ನಿಷನ್, ಮನುಷ್ಯನ ಕಣ್ಣಿನ ಪಾಪೆ, ಬೆರಳಚ್ಚು ಅರಿಯುವ ಬಯೋವುಟ್ರಿಕ್ ಲಾಗಿನ್, ವಿಂಡೋಸ್ ಅಪ್ಲಿಕೇಶನ್‌ಗಳಾದ ಫೋಟೋಸ್, ಮ್ಯಾಪ್ಸ್, ಮೇಲ್, ಕ್ಯಾಲೆಂಡರ್, ಮ್ಯೂಸಿಕ್, ವೀಡಿಯೋ ಎಲ್ಲವೂ ವಿಂಡೋಸ್ 10 ಹೋಂನಲ್ಲಿದೆ.

ವಿಂಡೋಸ್ 10 ಮೊಬೈಲ್ ಸ್ಮಾರ್ಟ್ ಫೋನ್‌ಗಳಿಗೂ ಚಿಕ್ಕ ಸ್ಕ್ರೀನ್ ಇರುವ ಟ್ಯಾಬ್ಲೆಟ್‌ಗಳಿಗಾಗಿ ವಿಶೇಷವಾಗಿ ತಯಾರಿಸಲ್ಪಟ್ಟದ್ದಾಗಿದೆ ಇದು. ವಿಂಡೋಸ್ 10 ಹೋಂನಲ್ಲಿರುವ ಎಲ್ಲ ಸೌಲಭ್ಯಗಳು ಇಲ್ಲಿವೆ. ಬ್ಯುಸಿನೆಸ್ ಕಾರ್ಯಗಳಿಗಾಗಿ ಸ್ಮಾರ್ಟ್‌ಫೋನ್ ಬಳಸುವುದಾದರೆ ಡಾಟಾಗೆ ಹೆಚ್ಚಿನ ಭದ್ರತೆಯನ್ನು ಈ ಆವೃತ್ತಿ ಕಲ್ಪಿಸುತ್ತದೆ. ದೊಡ್ಡ ಸ್ಕ್ರೀನ್‌ಗೆ ಕನೆಕ್ಟ್ ಮಾಡಿದರೆ ಸ್ಮಾರ್ಟ್‌ಫೋನ್‌ನ್ನು ಪರ್ಸನಲ್ ಕಂಪ್ಯೂಟರ್‌ನಂತೆ ಬಳಸಬಹುದಾಗಿದೆ.

ವಿಂಡೋಸ್ 10 ಪ್ರೋ
ವಿಂಡೋಸ್ 10 ಹೋಂನ ಪ್ರೊಫೆಶನಲ್ ಆವೃತ್ತಿಯಾಗಿದೆ ಇದು. ಪರ್ಸನಲ್ ಕಂಪ್ಯೂಟರ್, ಟ್ಯಾಬ್ಲೆಟ್ ಹಾಗೂ ಹೈಬ್ರಿಡ್ ಡಿವೈಸ್‌ಗಳಲ್ಲಿ ಇದನ್ನು ಬಳಸಬಹುದು. ಸಣ್ಣ ಕೈಗಾರಿಕೋದ್ಯಮಿಗಳನ್ನು ಲಕ್ಷ್ಯವಿರಿಸಿ ಈ ಆವೃತ್ತಿ ತಯಾರಿಸಲಾಗಿದೆ. ಕ್ಲೌಡ್ ಕಂಪ್ಯೂಟಿಂಗ್ ಸಹಾಯದಿಂದ ಬ್ಯುಸಿನೆಸ್ ವಿವರಗಳನ್ನು ಜಾಗರೂಕತೆಯಿಂದ ಸೇವ್ ಮಾಡಲು ಇದರಲ್ಲಿ ಸೌಲಭ್ಯವಿದೆ. ವಿಂಡೋಸ್ ಬ್ಯುಸಿನೆಸ್ ಆವೃತ್ತಿಯ ಪರಿಷ್ಕೃತ ಅಪ್‌ಡೇಟ್‌ಗಳ ಮೊದಲು ಲಭ್ಯವಾಗುವುದು ಈ ಆವೃತ್ತಿಯಲ್ಲೇ.

ಈಗಿರುವ ವಿಂಡೋಸ್ 7, ವಿಂಡೋಸ್ 8.1, ವಿಂಡೋಸ್ ಫೋನ್  8.1 ಆಪರೇಟಿಂಗ್ ಸಿಸ್ಟಂ ಆವೃತ್ತಿಗಳನ್ನು ಬಳಸುತ್ತಿರುವವರಿಗೆ ವಿಂಡೋಸ್ 10 ಹೋಂ, ವಿಂಡೋಸ್ 10 ಮೊಬೈಲ್, ವಿಂಡೋಸ್ 10 ಪ್ರೋ  ಆಪರೇಟಿಂಗ್ ಸಿಸ್ಟಂ ಉಚಿತವಾಗಿ ಅಪ್‌ಗ್ರೇಡ್ ಮಾಡಲು ಅನುವು ಮಾಡುವುದಾಗಿ ವಿಂಡೋಸ್ ಬ್ಲಾಗ್‌ನಲ್ಲಿ ಹೇಳಿದೆ.

ವಿಂಡೋಸ್ 10 ಎಂಟರ್‌ಪ್ರೈಸ್
ಮಧ್ಯಮ ಹಾಗೂ ಅತೀ ದೊಡ್ಡ ಕಂಪನಿಗಳಿಗಾಗಿರುವ ಆವೃತ್ತಿಯಾಗಿದೆ ವಿಂಡೋಸ್ 10 ಎಂಟರ್‌ಪ್ರೈಸ್.
ಕಂಪನಿ ಬಗ್ಗೆ ವಿವರಗಳು, ಉದ್ಯೋಗಿಗಳ ಲಾಗಿನ್, ನೆಟ್‌ವರ್ಕ್‌ನಲ್ಲಿ ಕನೆಕ್ಟ್ ಆಗಿರುವ ಉಪಕರಣಗಳ ಸುರಕ್ಷೆ ಎಲ್ಲವನ್ನೂ ನೋಡಿಕೊಳ್ಳಲು ಈ ಆಪರೇಟಿಂಗ್ ಸಿಸ್ಟಂ ಸಹಕಾರಿ. ಈಗಾಗಲೇ ವಿಂಡೋಸ್‌ನ್ ವಾಲ್ಯೂಂ ಲೈಸನ್ಸಿಂಗ್ ಸೇವೆ ಪಡೆದಿರುವ ಕಂಪನಿಗಳಿಗೆಲ್ಲಾ ವಿಂಡೋಸ್ 10 ಎಂಟರ್‌ಪ್ರೈಸ್‌ಗೆ ಅಪ್‌ಗ್ರೇಡ್ ಮಾಡಬಹುದಾಗಿದೆ.

ವಿಂಡೋಸ್ 10 ಎಜ್ಯುಕೇಷನ್

ವಿದ್ಯಾಭ್ಯಾಸ ಸಂಸ್ಥೆಗಳಿಗೆ ಮಾತ್ರ ಪ್ರತ್ಯೇಕವಾಗಿ ತಯಾರಿಸಲ್ಪಟ್ಟಿದ್ದಾಗಿದೆ. ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಶಾಲಾ ಸಿಬ್ಬಂದಿಗಳಿಗೆ ಎಲ್ಲರಿಗೂ ಏಕಕಾಲದಲ್ಲಿ ಲಾಗಿನ್ ಆಗಿ ಅವರ ಕೆಲಸವನ್ನೆಲ್ಲ ಬೇಗ ಮುಗಿಸಲು ಇದು ಸಹಕಾರಿ. ಅಕಾಡಮಿಕ್ ವಾಲ್ಯೂಂ ಲೈಸನ್ಸಿಂಗ್ ನ ಬದಲು ಈ ಆವೃತ್ತಿಯನ್ನು ವಿಂಡೋಸ್ ನೀಡುತ್ತಿದೆ.

ವಿಂಡೋಸ್ 10 ಮೊಬೈಲ್ ಎಂಟರ್‌ಪ್ರೈಸ್

ಜಗತ್ತು ಇ-ಕಾಮರ್ಸ್‌ನಿಂದ ಎಂ- ಕಾಮರ್ಸ್‌ಗೆ ಜಿಗಿಯುತ್ತಿದೆ. ಇದೀಗ ಮೊಬೈಲ್‌ನಲ್ಲಿ ವ್ಯಾಪಾರ ವಹಿವಾಟು ಮಾಡುತ್ತಿರುವವರಿಗಾಗಿ ತಯಾರಿಸಿದ ಆಪರೇಟಿಂಗ್ ಸಿಸ್ಟಂ ಇದು. ಹೆಚ್ಚಿನ  ಕಾರ್ಯ ಕ್ಷಮತೆ, ಭದ್ರತೆ ಇವೇ ಇದರ ವೈಶಿಷ್ಟ್ಯಗಳು

ವಿಂಡೋಸ್ 10 ಐಒಟಿ ಕೋರ್
ಎಲ್ಲ ಗ್ಯಾಜೆಟ್‌ಗಳೂ ಇಂಟರ್‌ನೆಟ್‌ನೊಂದಿಗೆ ಕನೆಕ್ಟೆಡ್ ಆಗಿರುವ ಈ ಕಾಲದಲ್ಲಿ ಅಂಥಾ ಗ್ಯಾಜೆಟ್ ಗಳಲ್ಲಿ ಕಾರ್ಯ ನಿರ್ವಹಿಸುವ  ಆಪರೇಟಿಂಗ್ ಸಿಸ್ಟಂ ಇದು. ಎಟಿಎಂ, ರೀಟೈಲ್ ಪಾಯಿಂಟ್ ಆಫ್ ಸೇಲ್, ಹ್ಯಾಂಡ್ ಹೆಲ್ಡ್ ಟರ್ಮಿನಲ್ ,  ಆಸ್ಪತ್ರೆಯಲ್ಲಿನ ಹಾರ್ಟ್‌ರೇಟ್ ಮಾನಿಟರ್ ಮೊದಲಾದವುಗಳಲ್ಲಿ ಇದನ್ನು ಬಳಸಬಹುದು.

ವಿಂಡೋಸ್ 10 ಮೈಕ್ರೋಸಾಫ್ಟ್‌ನ ಕೊನೆಯ ಆಪ್‌ರೇಟಿಂಗ್ ಸಿಸ್ಟಂ ಆಗಿರುತ್ತದೆ.

-ಅಂಜಲಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com