ಮತ್ತೆ ಹಾಡಿತು ಹೃದಯ

ಚಂದರ್ ಮಾಝಿ, ಬಿಹಾರದ ಹಳ್ಳಿ ಮುಝಾಫರ್‌ನಗರ್ ನಿವಾಸಿ. ಆತನ ಪತ್ನಿ ವಿಭಾ ಶಿಶುವಿಗೆ ಜನ್ಮ ನೀಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಚಂದರ್ ಆಕೆಯನ್ನು ಬಿಟ್ಟು...
ಮಗು
ಮಗು

ಚಂದರ್ ಮಾಝಿ, ಬಿಹಾರದ ಹಳ್ಳಿ ಮುಝಾಫರ್‌ನಗರ್ ನಿವಾಸಿ. ಆತನ ಪತ್ನಿ ವಿಭಾ ಶಿಶುವಿಗೆ ಜನ್ಮ ನೀಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಚಂದರ್ ಆಕೆಯನ್ನು ಬಿಟ್ಟು ತರಾತುರಿಯಲ್ಲಿ ರೈಲೇರಿದ್ದಾನೆ. ಆತನಿಗೀಗ 900ಕಿ.ಮೀ ದೂರದ ಭಾರತದ ರಾಜಧಾನಿ ನವದೆಹಲಿಯನ್ನು ತಲುಪಬೇಕಿದೆ. ಆತನ ಕಂಗಳಲ್ಲಿ ದುಃಖ ಮಡುಗಟ್ಟಿದೆ, ತೊಡೆಯಲ್ಲಿ ಇನ್ನೂ ಹೆಸರಿಡದ ಆತನ ಮಗು ಗೊರಗಲು ದನಿ ಹೊರಡಿಸುತ್ತಾ ನಿದ್ರಿಸಲೆತ್ನಿಸುತ್ತಿದೆ. ಅದರ ಮೈಯನ್ನಾತ ತೆಳು ಬಟ್ಟೆಯಿಂದ ಮುಚ್ಚಿದ್ದಾನೆ. ಆತ್ತ ಮಗುವಿನ ತಾಯಿ ವಿಭಾಳಿಗೆ ತನ್ನ ಮಗುವನ್ನು ಚೆಕಪ್ಪಿಗಾಗಿ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂಬುದಷ್ಟೆ ಗೊತ್ತು. ಆದರೆ ಅಷ್ಟು ದೂರ ಕರೆದೊಯ್ಯಬೇಕಾದ ತುರ್ತಿರುವಂಥದ್ದೇನಾಗಿದೆ ತನ್ನ ಮಗುವಿಗೆ? ಎಂದನುಮಾನ ಸುಳಿಯದಷ್ಟು ಮುಗ್ಧೆ ಆಕೆ. ನವದೆಹಲಿಯ ಆಸ್ಪತ್ರೆಯ ವೈದ್ಯರು ಮಗುವನ್ನು ಕಂಡ ತಕ್ಷಣ ಹಣದ ಬಗ್ಗೆ ಯೋಚಿಸದೆ ಎಲ್ಲಾ ಏರ್ಪಾಡುಗಳನ್ನು ಮಾಡಿದರು, ಕೂಲಿ ಕಾರ್ಮಿಕನಾದ ಚಂದರ್‌ಗೆ ಅಷ್ಟು ದೊಡ್ಡ ಮೊತ್ತ ಹೊಂದಿಸಲು ಆಗುವುದಿಲ್ಲವೆಂದು ಗೊತ್ತಿದ್ದರೂ! ಇಷ್ಟಕ್ಕೂ ಮಗು ಬಳಲುತ್ತಿದ್ದುದು 'ಎಕ್ಟೋಪಿಯಾ ಕಾರ್ಡಿಸ್‌' ಎಂಬ ಹತ್ತು ಲಕ್ಷಕ್ಕೊಬ್ಬರಲ್ಲಿ ಕಂಡುಬರುವ ಸಮಸ್ಯೆಯಿಂದ. ಸಮಸ್ಯೆ ಏನೆಂದರೆ ಆ ಮಗುವಿನಲ್ಲಿ ಎದೆಗೂಡಲ್ಲಿ ಇರಬೇಕಾದ ಪುಟ್ಟ ಹೃದಯ ಎದೆಯ ಹೊರಗೆ ಜೋತು ಬಿದ್ದಿರುತ್ತದೆ. 'ಎಕ್ಟೋಪಿಯಾ ಕಾರ್ಡಿಸ್‌' ಸಮಸ್ಯೆಯಿದ್ದ ಮಗು ಹುಟ್ಟಿದ ಒಂದು ದಿನ ಹೆಚ್ಚು ಬದುಕುಳಿಯುವ ಸಾಧ್ಯತೆಯೂ ಅತೀ ಕಡಿಮೆ. ಭಾರತದಲ್ಲಂತೂ ಬದುಕುಳಿದ ಉದಾಹರಣೆಯೇ ಇಲ್ಲ. ಅದಕ್ಕೇ ಆಸ್ಪತ್ರೆಯ ವೈದ್ಯರು ಇದನ್ನು ಸವಾಲಾಗಿ ತೆಗೆದುಕೊಂಡು ಉಚಿತವಾಗಿ ಚಿಕಿತ್ಸೆ ನೀಡಲು ಸಿದ್ಧರಾಗಿದ್ದು. ಮಾಧ್ಯಮಗಳಲ್ಲಿ ಈ ಸುದ್ದಿ ಪ್ರಾಮುಖ್ಯ ಪಡೆದು ಭಾರತದಾದ್ಯಂತ ಸುದ್ದಿ ಹರಡಿತು. ಇನ್ನೂ ಹೆಸರಿಡದ ಮಗು 'ಗ್ಝಝಿಛ'ಡ ಝಛ್ಝಟಜ'(ವಿಭಾಳ ಮಗು) ಎಂದೇ ಪ್ರಸಿದ್ಧಿ ಪಡೆಯಿತು. ಹಂತ ಹಂತವಾಗಿ ನಡೆಸಬೇಕಿದ್ದ ಆಪರೇಷನ್ನುಗಳನ್ನು ಆಸ್ಪತ್ರೆಯ ಐವರು ನಿಷ್ಣಾತ ವೈದ್ಯರು ಎರಡು ಮೂರು ವಾರಗಳಲ್ಲಿ ಯಶಸ್ವಿಯಾಗಿ ನಡೆಸಿದರು, ಮಗು ಬದುಕುಳಿಯಿತು. ವೈದ್ಯಕೀಯ ಲೋಕವೇ ಭಾರತದತ್ತ ಮೂಗಿನ ಮೇಲೆ ಬೆರಳಿಟ್ಟು ನೋಡಿತು.

ತಲೆಯಿಂದ ತುಣುಕೊಂದು ಜಾರಿದಾಗ
ಕೋಲ್ಕತಾದ ಆಸ್ಪತ್ರೆಯೊಂದರ ಮುಂದೆ ಜನ ಜಮಾಯಿಸಿದ್ದರು. ಕಿಕ್ಕಿರಿದು ನಿಂತಿದ್ದ ಆ ಜನಸಂದಣಿಗೆ ಕಾರಣವಾಗಿದ್ದು ಒಬ್ಬ ವ್ಯಕ್ತಿ. ಆತನನ್ನು ನೋಡಲೆಂದೇ ಅವರೆಲ್ಲರೂ ಕಾದಿದ್ದರು. ಅವರದ್ದೇನೂ ತಪ್ಪಿಲ್ಲ, ಕೈಯಲ್ಲಿ ತನ್ನದೇ ತಲೆ ಬುರುಡೆಯ ಇಷ್ಟಗಲ ತುಣುಕೊಂದನ್ನು ಹಿಡಿದವನನ್ನು ನೋಡುವ ಅವಕಾಶ ಜೀವಮಾನದಲ್ಲಿ ಎಷ್ಟು ಸಲ ತಾನೇ ಒದಗಿ ಬಂದೀತು. ಅತೀ ವಿರಳವಾದ ಈ ಸುಸಂದರ್ಭ(!!)ವನ್ನು ಕಣ್ತುಂಬಿಕೊಳ್ಳಲು ಅವರು ಅಲ್ಲಿ ನೆರೆದಿದ್ದರು. ರಾಯ್ ಎಂಬಾತ ವಿದ್ಯುತ್ ಇಲಾಖೆಯಲ್ಲಿ ಲೈನ್‌ಮನ್ ಆಗಿದ್ದಾತ. ಹೈಟೆನ್ಷನ್ ವಯರ್ ರಿಪೇರಿಗೆಂದು ಕಂಬ ಹತ್ತಿದ್ದಾಗ ಶಾಕ್ ತಗುಲಿ ಪ್ರಾಣಕ್ಕೇ ಸಂಚಕಾರ ತಂದುಕೊಂಡಿದ್ದ, ಅದೃಷ್ಟವಶಾತ್ ಬದುಕುಳಿದಿದ್ದ. ಆದರೆ ತಲೆಯಲ್ಲಿ ಗಂಭೀರವಾದ ಸುಟ್ಟ ಗಾಯಗಳಾಗಿದ್ದವು. ಚಿಕಿತ್ಸೆಯ ನಂತರ ಮನೆಗೆ ತೆರಳಿದ ರಾಯ್ ಎಂದಿನಂತೆ ತನ್ನ ಕೆಲಸಗಳಲ್ಲಿ ತೊಡಗಿಕೊಂಡಿದ್ದ. ಒಂದೆರಡು ತಿಂಗಳು ಕಳೆಯುವಷ್ಟರಲ್ಲಿ ಒಂದು ದಿನ ಆತನ ತಲೆ ಬುರುಡೆಯ ಒಂದು ಬದಿಯ ಮೇಲ್ಮೆಯ ಭಾಗ ಕಳಚಿ ಜಾರಿತು. ಯಾವ ಸೂಚನೆ ಇಲ್ಲದೆ, ನೋವನ್ನು ಉಂಟುಮಾಡದೆ ಜಾರಿದ ಆ ತುಣುಕನ್ನು ಹಿಡಿದು ರಾಯ್ ಆಸ್ಪತ್ರೆಗೆ ಧಾವಿಸಿದ. ವಿಷಯ ತಿಳಿದ ಜನರು ರಾಯ್‌ನನ್ನು ನೋಡಲು ಆಸ್ಪತ್ರೆಯತ್ತ ಧಾವಿಸಿದರು. ಮಾಧ್ಯಮಗಳು ಡಾಕ್ಟರ್ ಬೆನ್ನು ಬಿದ್ದವು. ಡಾಕ್ಟರರು ಕಳಚಿಬಿದ್ದ ಭಾಗದ ಒಳಗಿನ ಪದರಕ್ಕೇನೂ ಹಾನಿ ಸಂಭವಿಸದಿದ್ದುದಕ್ಕೆ ಆಚ್ಚರಿ ವ್ಯಕ್ತಪಡಿಸಿದರು. 'ಇದು ಅಪರೂಪದ ಕೇಸ್ ಆಗಿದ್ದು, ತಲೆಬುರುಡೆಯ ಆ ಭಾಗಕ್ಕೆ ಸರಿಯಾಗಿ ರಕ್ತ ಪೂರೈಕೆಯಾಗದಿದ್ದುದೇ ಅದು ಕಳಚಿ ಬೀಳಲು ಕಾರಣ' ಎಂದು ವೈಜ್ಞಾನಿಕವಾಗಿ ಸಮಜಾಯಿಷಿಯನ್ನೂ ನೀಡಿದರು. ಆದರೆ ಹೊರಗೆ ಕಾಯುತ್ತಿದ್ದ ಜನರಿಗೆ ಅದ್ಯಾವುದೂ ಬೇಕಿರಲಿಲ್ಲ, ಅವರಿಗೆ ಬೇಕಿದ್ದುದು ಕೈಯಲ್ಲಿ ತನ್ನದೇ ಬುರುಡೆಯಿಂದ ಉರುಳಿದ ತುಣುಕನ್ನು ಹಿಡಿದವನ ದರ್ಶನವಷ್ಟೇ..

-ಹರ್ಷವರ್ಧನ್

harsh.9mile@gmail.com

(ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555ಆನ್ ಲೈನಲ್ಲಿ ಸಖಿ ಓದಲು http://www.magzter.com/IN/Express-Network-Private-Limited/Sakhi/Women%27s-Interest/ಗೆ ಭೇಟಿನೀಡಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com