ಹೇಗೆ ಕುಮಾರ ವ್ಯಾಸಭಾರತ ಸಮಾಜದಲ್ಲಿ ಅಸ್ತಿತ್ವದಲ್ಲಿರುವ ಆಯಾ ಪ್ರಮುಖ ವರ್ಗಗಳಿಗೆ ಅಗತ್ಯವಿರುವುದನ್ನು ತಿಳಿಸುವ ಕೃತಿಯಾಗಿದೆಯೋ, ಹಾಗೆಯೇ ಚಂದನ ವಾಹಿನಿಯಲ್ಲಿ 13 ವರ್ಷಗಳಿಂದ ಪ್ರಸಾರವಾಗುತ್ತಿದ್ದ, 1,111 ಸಂಚಿಕೆಗಳನ್ನು ಪೂರೈಸಿರುವ ಸತ್ಯದರ್ಶನವೂ ಸಹ ಎಲ್ಲರಿಗೂ ತಲುಪಿರುವ, ಜಿಜ್ಞಾಸುಗಳ ನೆಚ್ಚಿನ ಕಾರ್ಯಕ್ರಮವಾಗಿದೆ. ಏಕೆಂದರೆ 13 ವರ್ಷಗಳಿಂದ ಸತ್ಯದರ್ಶನ ಕಾರ್ಯಕ್ರಮದಲ್ಲಿ ಚರ್ಚೆಯಾಗದ ವಿಷಯವನ್ನು ಗುರುತಿಸುವುದೇ ಕಷ್ಟದ ಕೆಲಸ. ಸತ್ಯದರ್ಶನ ಕಾರ್ಯಕ್ರಮದಲ್ಲಿ ಚರ್ಚೆಯಾದ ಪ್ರಶ್ನೋತ್ತರಗಳ ವ್ಯಾಪ್ತಿ ಅಂತಹದ್ದು!. ಎಲ್ಲಾ ವರ್ಗಗಳಿಗೂ, ಎಲ್ಲಾ ಶಾಖೆ, ಪಂಥಗಳ ಜಿಜ್ಞಾಸೆಗಳಿಗೂ ಉತ್ತರ ನೀಡಿ ಸತ್ಯದರ್ಶನವನ್ನು ಮಾಡಿಸಿದ್ದವು. ರಾಮಾಯಣ, ಮಹಾಭಾರತ, ಭಗವದ್ಗೀತೆ, ಸಿದ್ಧಪುರುಷರು, ಅದ್ವೈತ, ಬೌದ್ಧ, ಜೈನ, ಸಿಖ್ ಪಂಥ, ದಿನ ನಿತ್ಯದ ಆಚರಣೆಗಳಿಗೆ ಸಂಬಂಧಿಸಿದ ಪ್ರಶ್ನೆಗಳು, ವಿಶೇಷ ಸಂದರ್ಭಗಳಲ್ಲಿ ಪಾಲನೆ ಮಾಡಬೇಕಾದ ಧರ್ಮ, ಪ್ರಶ್ನೋತ್ತರಗಳಿಗೆ ಮಿತಿ ಎಲ್ಲಿ? ಓಹ್ ಯಾವುದಿರಲಿಲ್ಲ ವಿದ್ವಾಂಸರಾದ ಡಾ.ಪಾವಗಡ ಪ್ರಕಾಶ್ ರಾವ್ ಅವರು ನಡೆಸಿಕೊಡುತ್ತಿದ್ದ "ಸತ್ಯದರ್ಶನದ"ಲ್ಲಿ?