ನವೆಂಬರ್ ನ 'ಪರ ಭಾಷಾ- ಕನ್ನಡಿಗರು'

"ಭೈಯಾ ಪಾವ್ ಭಾಜಿ ಕಿತನೆ ಕಾ?" ಅಂತ ಜಯನಗರದ ಬೀದಿಯಲ್ಲಿ ನಮ್ಮ ಹೆಮ್ಮೆಯ ಕನ್ನಡಿಗರು ಕಷ್ಟ ಪಟ್ಟು ಹಿಂದಿ ಬರದೇ ಇದ್ದರೂ ಯಾರನ್ನೋ ಮೆಚ್ಚಿಸುವ ರೀತಿಯಲ್ಲಿ ಹಿಂದಿ ಮಾತಾಡಿ, ನವೆಂಬರ್ ಬಂದ.....
ಕನ್ನಡ ರಾಜ್ಯೋತ್ಸವ
ಕನ್ನಡ ರಾಜ್ಯೋತ್ಸವ
"ಭೈಯಾ ಪಾವ್ ಭಾಜಿ ಕಿತನೆ ಕಾ?" ಅಂತ ಜಯನಗರದ ಬೀದಿಯಲ್ಲಿ ನಮ್ಮ ಹೆಮ್ಮೆಯ ಕನ್ನಡಿಗರು ಕಷ್ಟ ಪಟ್ಟು ಹಿಂದಿ ಬರದೇ ಇದ್ದರೂ ಯಾರನ್ನೋ ಮೆಚ್ಚಿಸುವ ರೀತಿಯಲ್ಲಿ ಹಿಂದಿ ಮಾತಾಡಿ,  ನವೆಂಬರ್ ಬಂದ ಕೂಡಲೇ ಕನ್ನಡ ಪ್ರೇಮ ಉಕ್ಕಿ ಹರಿಯುವಂತೆ "ಜೈ ಕರ್ನಾಟಕ" ಘೋಷಣೆ ಕೂಗುತ್ತಾ ತಮ್ಮಲ್ಲಿ ಅಡಗಿರುವ ಕನ್ನಡತನವನ್ನು ತೋರಿಸಿಕೊಳ್ಳುವುದರಲ್ಲಿ ನಿಪುಣರು. ತಮ್ಮ ಕಂಪೆನಿಗಳಲ್ಲಿ ಕೆಂಪು, ಹಳದಿ ಬಣ್ಣದ ಟಿ ಶರ್ಟ್ ಗಳನ್ನು ಹಾಕೊಂಡು, ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದ ಪಟ್ಟಿ ಹಾಕುತ್ತ ಭಾಷೆಯ ಬಗ್ಗೆ ದಿಢೀರ್ ಕಾಳಜಿ ವಹಿಸುತ್ತಾ ದಿವ್ಯ ಕನ್ನಡದ ಮಕ್ಕಳು ಅನ್ನಿಸ್ಕೊಳೋದು ನವೆಂಬರ್ ನ ಸಾಮಾನ್ಯದ ವಿಷಯ.
ಅದೇ ಕನ್ನಡಿಗರು ಸಾಮಾನ್ಯ ದಿನಗಳಲ್ಲಿ ಎಂ ಜಿ ರಸ್ತೆ ಹೋಗಿ ಎಲ್ಲಿ ಕನ್ನಡ ಮಾತಾಡದ್ರೆ ಅವಮಾನ ಆಗುತ್ತೋ ಅನ್ನೋ ರೀತಿಯಲ್ಲಿ ವರ್ತಿಸೋದು ಇಡೀ ವರ್ಷದ ಸಾಮಾನ್ಯದ ವಿಷಯ. ಇಂದಿಗೆ ಭಾಷೆ ಒಂದು ideology ಯ ವಾದ ವಿವಾದಕ್ಕೆ ಸಿಲುಕಿ ತುಂಬಾ ದೂರ ಸಾಗಿಹೋಗಿದೆ. ಈಗಷ್ಟೇ ಬೆಂಗಳೂರು ಮೆಟ್ರೋ ರೈಲಿನಲ್ಲಿ ಕನ್ನಡದ ಆದ್ಯತೆ ಬಗ್ಗೆ ಹಲವಾರು ಚರ್ಚೆಗಳಾದವು. ಕನ್ನಡಪರ ಸಂಸ್ಥೆಗಳು ತಮ್ಮ ಹೋರಾಟದಲ್ಲಿ ಬಹುಪಾಲು ಯಶಸ್ವಿಯಾಗಿ
ನಮ್ಮ ಭಾಷೆಯ ಮರ್ಯಾದೆ ಉಳಿಸಿಕೊಂಡರು ಅನ್ನೋ ಭಾವನೆ ನಮ್ಮಲ್ಲಿ ಮೂಡಿಸಿದವು. ನಾವು ಕೂಡ ಕೈ ತಟ್ಟಿ "ಇದಪ್ಪ ವರ್ಸೆ" ಅಂತ ಜೈ ಕಾರ ಹಾಕಿದ್ವಿ. ಒಂದು ಕ್ಷಣ ಎಲ್ಲವನ್ನೂ ಪಕ್ಕಕೆ ಇಟ್ಟು ನಾವು ಯೋಚಿಸೋಣ, ಜಗತ್ತಿನ ಅತ್ಯಂತ ಪುರಾತನ ಭಾಷೆಗಳಲ್ಲಿ ಒಂದಾದ ಕನ್ನಡವನ್ನು ನಾವು ಇಂದಿಗೆ ರಕ್ಷಿಸೋ ಪ್ರಮೇಯ ಬಂದಿದೆ ಅಂದ್ರೆ ಅದ್ದಕಿಂತ ದುಸ್ಥಿತಿ ಮತ್ತೇನೂ ಇಲ್ಲ. ಯಾವುದೇ ಒಂದು ಅಂಶವನ್ನು ನಾವು "ರಕ್ಷಿಸಬೇಕಾದರೆ" ಆ ಅಂಶದ ಹೀನಾಯ ಸ್ಥಿತಿಯನ್ನು ಒಮ್ಮೆ ಯೋಚಿಸಿ! ಈ ಸ್ಥಿತಿಯನ್ನು ತಲುಪುವುದಕ್ಕೆ ಹಲವಾರು ಕಾರಣಗಳಿರಬಹುದು! ಅವೆಲ್ಲ ಇಂದಿಗೆ ಆಗುಹೋಗುಗಳು.
ಇಂದಿಗೆ ಬೆಂಗಳೂರು ದೊಡ್ಡದಾಗಿ ಬೆಳೆದು ನಿಂತಿದೆ. ನಮ್ಮ ಊರು ಇಂದು ಬರಿ ನಮ್ಮ ಊರಲ್ಲ, ಬಹುತೇಕರು ಇಲ್ಲಿಗೇ ಬಂದು ತಮ್ಮ ಕನಸಿನ ಬದುಕನ್ನು ಕಟ್ಟಿಕೊಳ್ಳುತ್ತಾರೆ. ದೇಶದ ಅರ್ಧ ಭಾಗ ವಿದ್ಯಾವಂತರು ಇಂದಿಗೆ ಬೆಂಗಳೂರಿಗೆ ಬಂದು ಐಟಿ ವಲಯದಲ್ಲಿ ಕೆಲಸ ಮಾಡುತ್ತಾರೆ. ಆ ಲೆಕ್ಕದಲ್ಲಿ ನೋಡಿದರೆ ಕನ್ನಡ ನಮ್ಮ ದೇಶದ ಅತಿ ದೊಡ್ಡ ಭಾಷೆಯಾಗಿ ಬೆಳೆಯಬೇಕಾಗಿತ್ತು. ಆದರೆ ಅದು ಬರಿ ಕನಸಷ್ಟೇ. ನಾನು ಹಲವಾರು ವರ್ಷ ಖಾಸಗಿ ಕಂಪನಿ
ಒಂದರಲ್ಲಿ ಕೆಲಸ ಮಾಡಿದೆ. ಅಲ್ಲಿನ ಹೆಚ್ಚಿನ 'Non-Kannadigas" ರನ್ನು ಕನ್ನಡದ ಬಗ್ಗೆ ಆಗಾಗ ಪ್ರಶ್ನೆ ಮಾಡುತ್ತಿದ್ದೆ. 'ಭಾಷೆಯನ್ನು ಕಲಿಯಲು ಅವರಿಗೇಕೆ ಅಸಡ್ಡೆ?' ಅನ್ನೋ ವಿಷಯವನ್ನು ಕೂಲಂಕುಷವಾಗಿ ನಾನು ವಿಚಾರ ಮಾಡಿದಾಗ ಬಹುತೇಕೆ "Non-Kannadigas" ಹೇಳಿದ್ದು ಒಂದೇ "ನಮಗೆ ಕಲಿಯುವ ಅಗತ್ಯಾನೇ ಇಲ್ವಲ್ಲ!"
"ಅಗತ್ಯ" ಅನ್ನೋದು ಅವರವರ ಅರ್ಥಕ್ಕೆ ಬಿಟ್ಟ ಪದ. ಆದರೆ ಜಯನಗರ 4 ನೇ ಬ್ಲಾಕ್ ನಲ್ಲಿ ಒಂದು ಪಾವ್ ಭಾಜಿ ಅಂಗಡಿ ಮುಂದೆ ನಿಂತಿದ್ದಾಗ ಕನ್ನಡಿಗರು ಇಬ್ಬರು ಬಂದು ಕಷ್ಟ ಪಟ್ಟು ಹಿಂದಿಯಲ್ಲಿ ಮಾತನಾಡಿದಾಗ ನನಗೆ ನಮ್ಮ "Non- Kannadigaru" ಹೇಳಿದ್ದ 'ಅಗತ್ಯದ' ಮಾತು ನೆನೆಪಾಯ್ತು. ತಕ್ಷಣ ನಾನು ಆ ಅಂಗಡಿಯವನನ್ನು "ಕನ್ನಡ ಬರುತ್ತಾ" ಅಂತ ಕೇಳ್ದಾಗ ಅವನು ನಕ್ಕು ವಾಪಸ್ಸು ನನಗೆ "ಹಿಂದಿ ಬರುತ್ತಾ?" ಅಂತ ಪ್ರಶ್ನೆ ಹಾಕಿದ್ದ. ಇದು
ಬಹುಷಃ ಅವನ ತಪಲ್ಲ ಆದರೂ ನಾವು ಅಥವಾ ಯಾವುದೇ ಕನ್ನಡಪರ ಸಂಸ್ಥೆಗಳು ಹೋರಾಟಕ್ಕೆ ಬೀದಿಗೆ ಇಳಿದಿದ್ದ ತಕ್ಷಣ ಇಂತಹ ಅನೇಕರನ್ನು ನಮ್ಮ ಕೋಪಕ್ಕೆ ತುತ್ತು ಮಾಡಿಕೊಳ್ಳುವುದು ಸಹಜ.
ಭಾಷಾ ಅಭಿಮಾನ ನಾವು ಹಾಕಿಕೊಂಡಿರುವ ಟಿ ಶರ್ಟ್ ನಲ್ಲೋ ಅಥವಾ ನಾವು arrange ಮಾಡೋ orchestra ನಲ್ಲಿ ಇರುವುದು ಅಂತ ನಂಬಿ ಕೂತಿರುವ ಕನ್ನಡಿಗರಿಗೆ ನವೆಂಬರ್ ತಿಂಗಳು ಹಬ್ಬ ಇದ್ದಂಗೆ. ಅತ್ತ ವರ್ಷ ಪೂರ್ತಿ ಕನ್ನಡ ಭಾಷೆಯ ಸುಳಿವಿಲ್ಲದೆ ಜೀವನ ಮಾಡೋ ನಮಗೆ ಆ ಒಂದು ದಿನ ನಮ್ಮಲಿ "ಜಯ ಭಾರತ ಜನನಿಯ ತನುಜಾತೆ" ಹಾಡಿನ ಮುಖಾಂತರ ತಾಯಿ ಭುವನೇಶ್ವರಿ ಉದ್ಭವ ಆಗುತ್ತಾಳೆ! ಇತ್ತ ಕನ್ನಡಪರ ಸಂಸ್ಥೆಗಳು ಅವತ್ತು "ಸಿರಿಗನ್ನಡಂ
ಗೆಲ್ಗೆ" ಓಡಾಡ್ಕೊಂಡು ತಮ್ಮ ದರ್ಪವನ್ನು ತೋರಿಸುತ್ತಾರೆ. ತಮಿಳರ ಅಲಸೂರು, ಹಿಂದಿಯರ ಮಾರತ್ ಹಳ್ಳಿ, ತೆಲಗು ಮಾತಾಡೋ ಕೆ.ಆರ್ ಪುರಂ, ಇಂಗ್ಲಿಷ್ ಮಾತಾಡೋ ಬ್ರಿಗೇಡ್ ರಸ್ತೆ, ಫ್ರೆಂಚ್ ಗೆ ವಸಂತನಗರ, ಜರ್ಮನ್ ಗೆ ಇಂದಿರಾನಗರದ ಮಧ್ಯೆ ನಮ್ಮ ಕನ್ನಡ ಈ ಬಾರಿಯಾದರೂ ಶಾಶ್ವತವಾಗಿ ಉದ್ಭವವಾಗಿರಲಿ ಅನ್ನೋದೇ ಈ ವರ್ಷದ ರಾಜ್ಯೋತ್ಸವದ ಕನಸು. ಕನ್ನಡ ಬೆಳೆಸುವ ಹಾಗು ಬೆಳವಣಿಗೆಗೆ ಒಂದೇ ದಾರಿ! ನಿತ್ಯ ನಿರಂತರವಾಗಿ ಕನ್ನಡದಲ್ಲೇ ಮಾತನಾಡುವುದು, ಕನ್ನಡದಲ್ಲೇ ವ್ಯವಹರಿಸುವುದು ಅಷ್ಟೇ. ಕನ್ನಡ ರಾಜ್ಯೋತ್ಸವದ ಶುಭಾಶಯಗಳು..
-ಅಭಿಷೇಕ್ ಐಯ್ಯಂಗಾರ್
abhishek.iyengar@wemovetheatre.in

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com