ಬಸವಣ್ಣನವರು ಚಿಕ್ಕಂದಿನಿಂದಲೇ ಕ್ರಾಂತಿಕಾರಿ ಎಂದು ಸಾಬೀತು ಪಡಿಸಿದ್ದು ಅವರ ಉಪನಯನ ಸಂಸ್ಕಾರದ ಘಟನೆಯಿಂದಲೇ ಕ್ರಾಂತಿಗೆ ಮುಂದಾಗುತ್ತಾರೆ. ಅಕ್ಕ ನಾಗಮ್ಮನಿಗೆ ಉಪನಯನ ಸಂಸ್ಕಾರ ಇಲ್ಲವೆಂದಾಗ, ಬಸವ “ಅಕ್ಕನಿಗಿಲ್ಲದ ಜನಿವಾರ ನನಗೂ ಬೇಡ” ಎಂದು ಅದನ್ನು ನಿರಾಕರಿಸಿ ತನ್ನ ಸಹೋದರಿಗಿಲ್ಲದ್ದು ನನಗೂ ಬೇಡ, ಎಂತಹ ಆದರ್ಶ ಸಹೋದರ. ಅದರಂತೆ ಬಸವಣ್ಣ ಮನೆಯನ್ನು ತೊರೆದು ಹೊರಟಾಗ ಅಕ್ಕ ನಾಗಮ್ಮ “ಬಸವನಿಲ್ಲದ ಮನೆಯಲ್ಲಿ ನಾನೂ ಇರಲಾರೆ” ಅನ್ನುವಲ್ಲಿ ಸಹೋದರಿಯ ಪ್ರೀತಿ ಅನಿರ್ವಚನೀಯ. ಮೊದಲು ಸ್ತ್ರೀಯರಿಗೆ ಕೇವಲ ವಿವಾಹ ಒಂದೇ ಮುಖ್ಯ ಸಂಸ್ಕಾರವಾಗಿತ್ತು. ಪತಿಯ ಸಹಾಯವಿಲ್ಲದೇ ಯಾವುದೇ ಧಾರ್ಮಿಕ ಕಾರ್ಯಗಳನ್ನು ಸ್ತ್ರೀಯರಿಗೆ ಮಾಡುವ ಅಧಿಕಾರ ವಿರಲಿಲ್ಲ. ಆದರೆ ಬಸವಣ್ಣನವರು ಲಿಂಗದೀಕ್ಷೆ, ವಿಭೂತಿಧಾರಣ, ಮಂತ್ರ ಪಠಣ ಮೊದಲಾದ ಧಾರ್ಮಿಕ ವಿಧಿಗಳಲ್ಲಿ ಸ್ತ್ರೀಯರೂ ಪುರುಷನಷ್ಟೇ ಅಧಿಕಾರವನ್ನು ಸ್ವೀಕರಿಸುವಂತಹ ವಾತಾವರಣ ನಿರ್ಮಾಣವಾಗಲು ಅಡಿಪಾಯ ಹಾಕಿಕೊಟ್ಟರು.