ಏಷ್ಯನ್ ಗೇಮ್ಸ್ ನಲ್ಲಿ ದೇಶವನ್ನು ಪ್ರತಿನಿಧಿಸಲು ಮೈಸೂರಿನ ವೈದ್ಯೆ ವರ್ಷಾ ಸಿದ್ಧತೆ!

ಮೈಸೂರು ಮೂಲದ ರೋಲರ್ ಸ್ಕೇಟರ್ ಡಾ. ವರ್ಷಾ ಎಸ್. ಪುರಾಣಕ್, ಇಂಡೋನೇಷಿಯಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ಗೆ ಆಯ್ಕೆಯಾಗುವ ಮೂಲಕ ಕರುನಾಡ ಕೀರ್ತಿಗೆ....
ಡಾ. ವರ್ಷಾ ಎಸ್. ಪುರಾಣಕ್
ಡಾ. ವರ್ಷಾ ಎಸ್. ಪುರಾಣಕ್
ಬೆಂಗಳೂರು: ಮೈಸೂರು ಮೂಲದ ರೋಲರ್ ಸ್ಕೇಟರ್ ಡಾ. ವರ್ಷಾ ಎಸ್. ಪುರಾಣಕ್, ಇಂಡೋನೇಷಿಯಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ಗೆ ಆಯ್ಕೆಯಾಗುವ ಮೂಲಕ ಕರುನಾಡ ಕೀರ್ತಿಗೆ ಹೆಮ್ಮೆಯ ಗರಿ ಮೂಡಿಸಿದ್ದಾರೆ. ಏಷ್ಯನ್ ಗೇಮ್ಸ್ ಗೆ ಆಯ್ಕೆಗೊಂಡ ಮೈಸೂರಿನ ಏಕೈಕ ಮಹಿಳೆ ಇವರೆನ್ನುವುದು ಗಮನಾರ್ಹ.
ಇಂಡೋನೇಷಿಯಾದ ಜಕಾರ್ತಾ ಹಾಗೂ  ಪಾಲೆಂಬಂಗ್ ನಲ್ಲಿ ಆಗಸ್ಟ್ 18 ರಿಂದ ಸೆಪ್ಟೆಂಬರ್ 2 ರವರೆಗೆ ನಡೆಯಲಿರುವ ಕ್ರೀಡಾಕೂಟದಲ್ಲಿ ವರ್ಷಾ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಇದೀಗ ಮೂರನೇ ಬಾರಿಗೆ ಈಕೆ ಏಷ್ಯನ್ ಗೇಮ್ಸ್ ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ""ನಾನು ಎಂಟು ವಿಭಿನ್ನ ದೇಶಗಳ ಕ್ರೀಡಾಪಟುಗಳನ್ನು ಎದುರಿಸಬೇಕಾಗಿದೆ. ಇದರಲ್ಲಿ ನಮ್ಮ ದೇಶದವರೂ ಇದ್ದಾರೆ. ನಾಲ್ವರು ವಿಶ್ವ ಚಾಂಪಿಯನ್ ಸಹ ನನ್ನ ಎದುರಾಳಿಗಳಾಗಿದ್ದು ಕಠಿಣ ಸ್ಪರ್ಧೆ ಎದುರಾಗುವ ನಿರೀಕ್ಷೆ ಇದೆ. ಆದರೆ ನಾನು ಸಹ ಕಠಿಣ ಸ್ಪರ್ಧಿಯೇ ಹೌದು" 
ಬಾಲ್ಯದಲ್ಲೇ  ಶುರುವಾದ ಸ್ಕೇಟಿಂಗ್ ಸೆಳೆತ
ವರ್ಷಾ ತನ್ನ ಮೂರನೇ ವಯಸಿಗೆ ಸ್ಕೇಟಿಂಗ್ ಪ್ರಾರಂಭಿಸಿದರೆ ತಮ್ಮ 18ನೇ ವಯಸ್ಸಿನಲ್ಲಿ ಐಸ್ ಸ್ಕೇಟಿಂಗ್ ನಲ್ಲಿ ಭಾಗವಹಿಸಿದ್ದರು.ಅತ್ಯಲ್ಪ ಅವಧಿಯಲ್ಲಿಯೇ ಅವರು ಈ ಎರಡೂ ವಿಭಾಗಗಳಲ್ಲಿ ದಾಖಲೆಯನ್ನು ನಿರ್ಮಿಸಿದ್ದರು.ವೃತ್ತಿಯಿಂದ ವೈದ್ಯರಾಗಿರುವ ವರ್ಷಾ  ಕಾವೇರಿ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸ್ ನಲ್ಲಿ ಕನ್ಸಲ್ಟೆಂಟ್ ಆಗಿ ಸೇವೆ ಸಲ್ಲಿಸುತ್ತಿದಾರೆ. ಇಷ್ಟಾಗಿಯೂ ದಿನಕ್ಕೆ ಏಳು ಗಂಟೆಗಳ ಕಾಲ  ಸ್ಕೇಟಿಂಗ್ ನ  ಕಠಿಣ ತರಬೇತಿ ಪಡೆಯುತ್ತಾರೆ.
""ನಾನು ಮೂರು ವರ್ಷದವನಿದ್ದಾಗ ನನ್ನ ತಾಯಿ ನನ್ನನ್ನು ಸ್ಕೇಟಿಂಗ್ ತರಬೇತಿಗೆ ಸೇರಿಸಿದ್ದರು. ಕೇವಲ ಒಂದು ವರ್ಷದ ತರಬೇತಿಯ ನಂತರ ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್ ನಲ್ಲಿ ನಾನು ಕರ್ನಾಟಕವನ್ನು ಪ್ರತಿನಿಧಿಸಿದ್ದೆ. ಹೀಗೆ ರಾಜ್ಯವನ್ನು ಪ್ರತಿನಿಧಿಸಿದ್ದ ಅತ್ಯಂತ ಕಿರಿಯ ಅಥ್ಲೀಟ್ ನಾನೆನ್ನುವುದು ನನಗೆ ಹೆಮ್ಮೆಯ ಸಂಗತಿ" ವರ್ಷಾ ಹೇಳುತ್ತಾರೆ.
ಏಷ್ಯನ್ ಗೇಮ್ಸ್ ಗೆ ಆಯ್ಕೆಗೊಳ್ಳುವುದರ ಹಿಂದೆ ಕಠಿಣ ಪರಿಶ್ರಮವಿದೆ ಎನ್ನುವ ವರ್ಷಾ  "ನಾನು ಎರಡು ವರ್ಷಗಳ ಹಿಂದೆ ತರಬೇತಿಯನ್ನು ಪ್ರಾರಂಭಿಸಿದ್ದೆ. , ಏಷ್ಯನ್ ಕ್ರೀಡಾಕೂಟಕ್ಕಾಗಿ ತರಬೇತಿ ಪಡೆಯುವುದು ಇತರೆ ತರಬೇತಿಗಳಿಗಿಂತ ಬಹಳ ಭಿನ್ನವಾಗಿದೆ. ಏಕೆಂದರೆ ಇದು ನಾಲ್ಕು ವರ್ಷಕ್ಕೊಮ್ಮೆ ನಡೆಯುತ್ತದೆ. ಇಲ್ಲಿ ತಪ್ಪುಗಳಿಗೆ ಜಾಗವಿಲ್ಲ" ಎನ್ನುತ್ತಾರೆ.
ನಾನು ನನ್ನ ಅತ್ಯುತ್ತಮ ಪ್ರದರ್ಶನ ನೀಡುತ್ತೇನೆ
ರಾವ್ಸ್ ರೋಲರ್ ಸ್ಕೇಟಿಂಗ್ ಅಕಾಡೆಮಿಯ ಕೆ ಶ್ರೀಕಾಂತ ರಾವ್ ಅವರಲ್ಲಿ ತರಬೇತಿ ಪಡೆದಿರುವ ವರ್ಷಾ "ಕ್ರೀಡಾಕೂಟದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಕರ್ನಾಟಕದ ಮೊದಲ ಮಹಿಳೆಯಾಗಬೇಕೆಂದು ನಾನು ಬಯಸುತ್ತೇನೆ" ಎನ್ನುತ್ತಾರೆ . 
2010 ರಲ್ಲಿ ಚೀನಾದಲ್ಲಿ ನಡೆದ ಬೇಸಿಗೆ ಏಷ್ಯನ್ ಕ್ರೀಡಾಕೂಟದಲ್ಲಿ (ಸಮ್ಮರ್ ಏಷ್ಯನ್ ಗೇಮ್ಸ್) ಮೊದಲ ಬಾರಿಗೆ ರೋಷರ್ ಸ್ಕೇಟಿಂಗ್ ಅನ್ನು ಪರಿಚಯಿಸಲಾಗಿತ್ತು. ವರ್ಷಾ ತಾವು ಮೊದಲಿಗೆ ಆಯ್ಕೆಯಾದಾಗ ಏಳನೇ ಸ್ಥಾನ ಪಡೆದಿದ್ದರು. 2014ರಲ್ಲಿ ನಡೆದ ಕ್ರೀಡಾಕೂಟದಲ್ಲಿ ರೋಲರ್ ಸ್ಕೇಟಿಂಗ್ ಸ್ಪರ್ಧೆ ಇರಲಿಲ್ಲ.
2001, 2004, 2012, 2014 ಮತ್ತು 2016 ರಲ್ಲಿ ನಡೆದಿದ್ದ ಏಷ್ಯನ್ ಚಾಂಪಿಯನ್ ಶಿಪ್ ನಲ್ಲಿ ವರ್ಷಾ ಭಾರತವನ್ನು ಪ್ರತಿನಿಧಿಸಿದ್ದಾರೆ. ಅಲ್ಲದೆ ಈ ವರ್ಷ ಸಪ್ಟೆಂಬರ್ ನಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆಯುವ ಷ್ಯನ್ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಸಹ ಇವರು ಪಾಲ್ಗೊಳ್ಳಲಿದ್ದಾರೆ. ಇವರ ಸಾಧನೆಯನ್ನು ಗುರುತಿಸಿದ್ದ ಕರ್ನಾಟಕ ಸರ್ಕಾರ 2013ರಲ್ಲಿ ಈಕೆಗೆ ಏಕಲವ್ಯ ಪ್ರಶಸ್ತಿ ನೀಡಿ ಪುರಸ್ಕರಿಸಿತ್ತು.
ಯಾವುದೇ ಮಕ್ಕಳು ಪ್ರತಿಭಾವಂತರೆಂದು ಕಂಡರೆ ಅಂತಹಾ ಮಕ್ಕಳನ್ನು ಪೋಷಕರು ಹೆಚ್ಚು ಪ್ರೋತ್ಸಾಹ ನೀಡಿ ಬೆಳೆಸಬೇಕು. ಇದರಿಂದ ಅವರಲ್ಲಿನ ಪ್ರತಿಭೆ ಇನ್ನಷ್ಟು ವೃದ್ದಿಯಾಗುತ್ತದೆ ಎನ್ನುವ ವರ್ಷಾ ರೋಲರ್ ಸ್ಕೇಟಿಂಗ್ ಅಲ್ಲದೆ ತೋಟಗಾರಿಗೆ, ಪುಸ್ತಕಗಳ ಓದಿನ ಆಸಕ್ತಿಯನ್ನು ಹೊಂದಿದ್ದಾರೆ. ಇದುವರೆಗೆ ಸುಮಾರು 52 ಚಿನ್ನದ ಪದಕಗಳನ್ನು ಗೆದ್ದಿರುವ ವರ್ಷಾ ಯುವ ಸ್ಕೇಟರ್ ಗಳಿಗೆ ಆದರ್ಶಪ್ರಾಯವಾಗಿದ್ದಾರೆ.
ವರ್ಷಾ ಅವರ ಸಾಧನೆಗಳು
  • ವರ್ಷಾ ಅವರು 2017 ರ ವರೆಗೆ 21 ರಾಷ್ಟ್ರೀಯ ಚಾಂಪಿಯನ್ ಶಿಪ್ ಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ ಮತ್ತು ರೋಲರ್ ಸ್ಕೇಟಿಂಗ್ ಫೆಡರೇಶನ್ ಆಫ್ ಇಂಡಿಯಾ (ಆರ್ಎಸ್ಎಫ್ಐ) ಆಯೋಜಿಸಿದ್ದ ಸ್ಪೀಡ್ ಸ್ಕೇಟಿಂಗ್
  • ರಾಷ್ಟ್ರೀಯ ಚಾಂಪಿಯನ್ ಶಿಪ್ ಗಳಲ್ಲಿ ಒಟ್ಟು 44 ಚಿನ್ನದ ಪದಕ, 17 ಬೆಳ್ಳಿ ಹಾಗೂ  ಆರು ಕಂಚಿನ ಪದಕಗಳನ್ನು ಗೆದ್ದಿದ್ದಾರೆ.
  • ವರ್ಷಾ ನಾಲ್ಕು ರಾಷ್ಟ್ರೀಯ ಐಸ್ ಸ್ಕೇಟಿಂಗ್ ಚಾಂಪಿಯನ್ ಶಿಪ್ ಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದು ಇದಕ್ಕಾಗಿ ಅವರು ಜಮ್ಮು ಕಾಶ್ಮೀರದಲ್ಲಿ ತರಬೇತಿ ಪಡೆದಿದ್ದರು. 
  • ನಾಲ್ಕು ಚಿನ್ನದ ಮತ್ತು ಒಂದು ಕಂಚಿನ ಪದಕ ಗಳಿಸಿರುವ ವರ್ಷಾ ಇತ್ತೀಚೆಗೆ, ಜಪಾನ್ ನಲ್ಲಿ ನಡೆದ ಎಂಟನೇ ಏಷ್ಯನ್ ವಿಂಟರ್ ಗೇಮ್ಸ್ ನಲ್ಲಿ  ಐಸ್ ಸ್ಕೇಟಿಂಗ್ ವಿಭಾಗದಲ್ಲಿ 13ನೇ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ
  • ವರ್ಷಾ ಇದುವರೆಗೆ ಮೂರು ವಿಶ್ವ ಚಾಂಪಿಯನ್ ಶಿಪ್,  ಐದು ಏಷ್ಯನ್ ಚಾಂಪಿಯನ್ ಶಿಪ್, ಎರಡು ಏಷ್ಯನ್ ಗೇಮ್ಸ್ (ಬೇಸಿಗೆ ಮತ್ತು  ಚಳಿಗಾಲ)2003 ರಲ್ಲಿ ವೆನಿಜುವೆಲಾದ ಒಂದು ವಿಶ್ವ ಗೇಮ್ಸ್ ಮತ್ತು ಸ್ಕೇಟಿಂಗ್ ಚಾಂಪಿಯನ್ ಶಿಪ್ ಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.
  •  2010 ರಲ್ಲಿ ಕೊಲಂಬಿಯಾದ ಕ್ಯಾಲಿನಲ್ಲಿ ನಡೆದ ವರ್ಲ್ಡ್ ಗೇಮ್ಸ್ ನಲ್ಲಿ ಸಹ ವರ್ಷಾ ಭಾರತವನ್ನು ಪ್ರತಿನಿಧಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com