ಕುರಿಗಾಹಿಯೊಬ್ಬ ನಿರ್ಮಿಸಿದ 14 ಕೆರೆಗಳು ಬರಡು ಗ್ರಾಮವನ್ನು ಹಸಿರಿನ ನಂದನವನ ಮಾಡಿತು!

ಹನ್ನೆರಡು-ಹದಿಮೂರನೇ ಶತಮಾನದಲ್ಲಿ ಬದುಕಿದ್ದ ಕಾಯಕಯೋಗಿ ಸೊನ್ನಲಿಗೆ ಸಿದ್ದರಾಮನ ಕಥೆಯನ್ನು ನಾವೆಲ್ಲಾ ಕೇಳಿದ್ದೇವೆ. ಆತ ಸೊನ್ನಲಿಗೆಯಲ್ಲಿ ಕೆರೆಯನ್ನು ಕಟ್ಟಿಸಿ ಕಾಯಕ.....
ಕುರಿಗಾಹಿಯೊಬ್ಬ ನಿರ್ಮಿಸಿದ 14 ಕೆರೆಗಳು ಬರಡು ಗ್ರಾಮವನ್ನು ಹಸಿರಿನ ನಂದನವನ ಮಾಡಿತು!
ಕುರಿಗಾಹಿಯೊಬ್ಬ ನಿರ್ಮಿಸಿದ 14 ಕೆರೆಗಳು ಬರಡು ಗ್ರಾಮವನ್ನು ಹಸಿರಿನ ನಂದನವನ ಮಾಡಿತು!
Updated on
ಮಳವಳ್ಳಿ: ಹನ್ನೆರಡು-ಹದಿಮೂರನೇ ಶತಮಾನದಲ್ಲಿ ಬದುಕಿದ್ದ ಕಾಯಕಯೋಗಿ ಸೊನ್ನಲಿಗೆ ಸಿದ್ದರಾಮನ ಕಥೆಯನ್ನು ನಾವೆಲ್ಲಾ ಕೇಳಿದ್ದೇವೆ. ಆತ ಸೊನ್ನಲಿಗೆಯಲ್ಲಿ ಕೆರೆಯನ್ನು ಕಟ್ಟಿಸಿ ಕಾಯಕ ನಿಷ್ಠೆಗೆ ಹೆಸರಾದ ಶರಣ, ಮಹಾಸಂತ. ಐದೇ ರೀತಿಯಲ್ಲಿ ಈ ಶತಮಾನದಲ್ಲಿ ನಮ್ಮ ನಡುವೆಯೂ ಓರ್ವ ಕಾಯಕಯೋಗಿ ಇದ್ದಾರೆ. ಅವರಿಗೀಗ 82 ವರ್ಷ, ಕುರಿಗಾಹಿ, ಅನಕ್ಷರಸ್ಥ ಆದರೆ ವಿದ್ಯಾವಂತರಲ್ಲಿಯೂ ಕಾಣಿಸದ ಪರಿಸರ ಪ್ರಜ್ಞೆಯನ್ನು ನಾವು ಅವರಲ್ಲಿ ಕಾಣಬಹುದು. ತಮ್ಮ ಗ್ರಾಮದಲ್ಲಿ ಅವರಿದುವರೆಗೆ ನಿರ್ಮಾಣ ಮಾಡಿರುವ 14 ಕೆರೆಗಳಿಂದಾಗಿ ಬರಡಾಗಿದ್ದ ಭೂಮಿ ಹಸಿರಿನಿಂದ ಕಂಗೊಳಿಸುತ್ತಿದೆ!
ಅವರೇ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದಾಸರದೊಡ್ಡಿ ಗ್ರಾಮದ ಕಾಮೇಗೌಡ. 
ದಾಸರದೊಡ್ಡಿಯ ನೀಲಿ ವೆಂಕಟಗೌಡ ಹಾಗೂ ರಾಜಮ್ಮ ದಂಪತಿಗಳ ಹತ್ತನೇ ಪುತ್ರರಾದ ಕಾಮೇಗೌಡ ಶಾಲೆಯ ಮೆಟ್ಟಿಲು ಹತ್ತಿದವರಲ್ಲ.ಚಿಕ್ಕ ಮನೆ, ಒಂದುದಿನದ ಬಿತ್ತನೆಗಾಗುವಷ್ಟು ಭೂಮಿ, ಒಂದಷ್ಟು ಕುರಿಗಳು ಇದಷ್ಟೇ ಅವರ ಆಸ್ತಿ. 
ಸುಮಾರು 40 ವರ್ಷದ ಹಿಂದೆ ತಮ್ಮ ಮನೆ ಸಮೀಪವಿದ್ದ ಕುಂದೂರು ಬೆಟ್ಟ ಬಹುತೇಕ ಬಂಜರಾಗಿ ಅಲ್ಲಲ್ಲಿ ಒಣ ಪೊದೆಗಳನ್ನು ಬಿಟ್ಟರೆ ಬೇರೇನೂ ಇಲ್ಲದ ಜಾಗವೊಂದು ಇವರ ಗಮನ ಸೆಳೆದಿತ್ತು. ಬೆಟ್ಟ್ದ ಮೇಲೆ ಕುರಿ ಮೇಯಿಸಹೋದಾಗಲೂ ಅಲ್ಲಿ ಕುರಿಗಳು ನೀರಿನ ಸೆಲೆ ಇಲ್ಲದ ಕಾರಣ ಕಷ್ಟಪಡುವುದನ್ನು ಅರಿತರು. ಬೆಟ್ಟದಲ್ಲಿ ವಾಸಿಸುತ್ತಿದ್ದ ಹಕ್ಕಿಗಳಿಗಾಗಲಿ, ಇತರೆ  ಜೀವಿಗಳಿಗಾಗಲಿ ಸರಿಯಾದ ನೀರಿನ ಒರತೆ ಇರಲಿಲ್ಲ. ಮಳೆಗಾಲದಲ್ಲಿ ಸಾಕಷ್ಟು ನೀರು ಹರಿದರೂ ಬೆಟ್ಟದ ಇಳಿಜಾರಿನ ಪ್ರದೇಶಗಳಲಿ ಅದೆಲ್ಲ ಹರಿದು ಹೋಗಿ ಬಿಡುತ್ತಿತ್ತು. ಬೆಟ್ಟ್ದ ಮೇಲೆ ಹೆಚ್ಚು ನೀರು ನಿಲ್ಲುತ್ತಿರಲಿಲ್ಲ, ಅಲ್ಲಿನ ನೆಲ ಹೆಚ್ಚು ನೀರನ್ನು ಇಂಗಿಸಿಕೊಳ್ಳುತ್ತಿರಲಿಲ್ಲ.
ಇದನ್ನು ಗಮನಿಸಿದ ಕಾಮೇಗೌಡರಿಗೆ ತಾವೇ ಏಕೆ ಈ ಬೆಟ್ಟದಲ್ಲಿ ಕೆರೆಗಳನ್ನು ನಿರ್ಮಿಸಬಾರದೆನ್ನುವ ಆಲೋಚನೆ ಹೊಳೆದಿದೆ. ಸುಮಾರು 35 ವರ್ಷಗಳ ಹಿಂದೆ (ಸರಿಯಾದ ದಿನಾಂಕ ನೆನಪಿಲ್ಲ) ತಮ ಯೋಚನೆಯನ್ನು ಕಾರ್ಯರೂಪಕ್ಕಿಳಿಸಲು ತೊಡಗಿದ ಕಾಮೇಗೌಡರು ಇದುವರೆಗೆ ಸುಮಾರು 14-15 ಕೆರೆಗಳನ್ನು ನಿರ್ಮಿಸಿದ್ದಾರೆ. ಇದಕ್ಕಾಗಿ ಅವರು ಯಾವ ಸರ್ಕಾರಿ ಯೋಜನೆಯ ನೆರವು ಬಯಸಲಿಲ್ಲ. ಅಲ್ಲದೆ ಇದಕ್ಕಾಗಿ 10-15 ಲಕ್ಷಕ್ಕಿಂತ ಕಡಿಮೆ ವೆಚ್ಚ ಮಾಡಿದ್ದಾರೆ.ಇದೀಗ 14 ಕೆರೆಗಳನ್ನು ನಿರ್ವಹಿಸುತ್ತಿರುಅವ್ ಕಾಮೇಗೌಡರು ಕೆಲ ಕೆರೆಗಳಿಗೆ ತಮ್ಮ ಮೊಮ್ಮಕ್ಕಳ ಹೆಸರನ್ನು ಇರಿಸಿದ್ದಾರೆ. ಕಾಮೇಗೌಡರ ಈ ಕಾಯಕನಿಷ್ಠೆ ಯಾವ ಪ್ರಮಾಣದ್ದೆಂದರೆ ತಮಗೆ ಸಂದ ಅನೇಕ ಬಹುಮಾನ ರೂಪದ ಹಣವನ್ನು ಸಹ ಅವರು ಈ ಕೆರೆಗಳ ನಿರ್ಮಾಣ, ನಿರ್ವಹಣೆಗಾಗಿಯೇ ಬಳಸಿದ್ದಾರೆ, ಬಳಸುತ್ತಿದ್ದಾರೆ.
ಎಕ್ಸ್ ಪ್ರೆಸ್ ತಂಡವು ಇವರ ಮನೆಗೆ ಭೇಟಿ ಕೊಟ್ಟಾಗ ಕಂಡುಬಂದ ದೃಶ್ಯ ಅತ್ಯಂತ ಅದ್ಭುತವಾಗಿತ್ತು, ಎರಡೆಕರೆ ಭೂಮಿಯಲ್ಲಿ ಅರ್ಧ ನಿರ್ಮಾಣವಾಗಿರುವ ಮನೆ, ಬೆಟ್ಟ್ದ ಮೇಲೆ ಹಾಸಿದಂತಿರುವ ಕೆರೆಗಳು ಅದರ ಮೂಲಕ  ವರ್ಷಪೂರ್ತಿ ಹರಿಯುವ ನಿರಿನ ಒರತೆಯನ್ನು ಕಂಡು ಉಂಟಾದ ಆನಂದ ಶಬ್ದಾತೀತವಾಗಿತ್ತು.
ಕೆಲವು ವಾರಗಳ ಹಿಂದೆ ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಕಾಮೇಗೌಡರಿಗೆ ಮನೆಯಿಂದ ಹೊರಗೆ ಬಿಸಿಲಿಗೆ ಹೋಗದಂತೆ ವೈದ್ಯರು ಎಚ್ಚರಿಸಿದ್ದಾರೆ. ಆದರೆ ಅವರು ಮಾತ್ರ ಇದಕ್ಕೆ ಸೊಪ್ಪು ಹಾಕುವವರಲ್ಲ "ಕುಡುಕನಿಗೆ ಯಾರಾದರೂ ಕುಡಿಯಬೇಡ ಎಂದರೆ ಅವನದನ್ನು ಬಿಟ್ಟಾನೆಯೆ? ನಾನೂ ಹಾಗೆಯೇ, ನನಗೆ ಹೊರಗೆ ಹೋಗಬೇಡವೆನ್ನಲು ಅವರಾರು? ಇಷ್ಟಕ್ಕೂ ನಾನು ಕಣ್ಣುಗಳನ್ನು ಮುಚ್ಚಿಕೊಂಡೇ ಇಲ್ಲೆಲ್ಲಾ ತಿರುಗಬಲ್ಲೆ, ನನಗೆ ಈ ಊರು, ಬೆಟ್ಟ್ದ ಇಂಚಿಂಚೂ ಪರಿಚಯವಿದೆ" ಅವರು ಹೇಳಿದರು.
’ಹುಚ್ಚ’ನೆಂಬ ಹಣೆಪಟ್ಟಿ 
ಕೆರೆ ನಿರ್ಮಾಣ ಮಾಡಿ ಬಂಜರು ಭೂಮಿಯಲ್ಲಿ ನೀರಿನ ಒರತೆ ಚಿಮ್ಮಿಸಿದ ಕಾಮೇಗೌಡರನ್ನು ಆ ಊರಿನ ಜನ, ಅವರ ಸಂಬಂಧಿಗಳೆಲ್ಲ  "ಹುಚ್ಚ" ಎಂದು ಕರೆದರು.ಕಳೆದ 40 ವರ್ಷಗಳಿಂದ, ಸುಮಾರು 5 ರಿಂದ 9 ಗಂಟೆಯವರೆಗೆ, ಅವರು ಕೆರೆಗಳನ್ನು ಅಗೆಯುವ ಕಾಯಕದಲ್ಲಿ ನಿರತರಾಗುತ್ತಾರೆ. ಬೆಳಗ್ಗೆ 9 ರಿಂದ ರಾತ್ರಿ 7 ರವರೆಗೆ ಕುರಿಗಳನ್ನು ಮೇಯಿಸುತ್ತಾ ಕಾಲ ಕಳೆಯುತ್ತಾರೆ. "ಕೆಲವೊಮ್ಮೆ ನಾನು ರಾತ್ರಿ ಸಮಯದಲ್ಲಿ ಸಹ ಬೆಟ್ಟದ ಮೇಲೇರಿ ಕೆರೆಗಳನ್ನು ನಿರ್ಮಿಸಲು ನೆಲ ಅಗೆಯುತ್ತಿದ್ದದ್ದು ಇದೆ. ದೀಪದ ಬೆಳಕಿನಲ್ಲಿ ಇಲ್ಲವೇ ಹುಣ್ಣಿಮೆ ಚಂದ್ರನ ಬೆಳಕಿನಲ್ಲಿ ನಾನು ಈ ಕಾಯಕ ಮಾಡುತ್ತಿದ್ದೆ" ಎಕ್ಸ್ ಪ್ರೆಸ್ ಪ್ರತಿನಿಧಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.
ಜನರೆಲ್ಲಾ ಅವರನ್ನು ’ಹುಚ್ಚ’ ಎಂದರೂ ಕಾಮೇಗೌಡ ಮಾತ್ರ ತಾವು ಹಿಡಿದ ಮಾರ್ಗ ಬಿಡಲಿಲ್ಲ. ಕುಂದೂರು ಬೆಟ್ಟದ ಮೇಲೆ ಕೆರೆ ನಿರ್ಮಾಣ ಕಾರ್ಯದಲ್ಲಿ ನಿರಂತರವಾಗಿ ತೊಡಗಿಕೊಂಡರು. ಅವರ ಈ ವಿಚಿತ್ರ ಜೀವನ ಶೈಲಿ ಅವರನ್ನು ಅವರ ಸಂಬಂಧಿಅಗ್ಳು, ಸ್ನೇಹಿತರಿಂದ ದೂರ ಮಾಡಿತು."ನಾನು ಕೆರೆ ನಿರ್ಮಾಣಕ್ಕೆ ಕೈ ಹಾಕಿ ನನ್ನ ದುಡಿಮೆ, ಉಳಿತಾಯವನ್ನೂ ಅದಕ್ಕೆ ವಿನಿಯೋಜಿಸತೊಡಗಿದಾಗ ನನ್ನ ಸಂಬಂಧಿಗಳು ನನ್ನಿಂದ ದೂರಾದರು. ಆದರೆ ಬೆಟ್ಟ ಹಾಗೂ ಸುತ್ತಲಿನ ಮರಗಳು, ಮೃಗ ಪಕ್ಷಿಗಳು ನನ್ನ ಸಂಬಂಧಿಗಳಾದವು. ಕೆಲವರು ನನ್ನ ಕಾಯಕ ನೋಡಿ ಹಾಸ್ಯ ಮಾಡಿದರು, ಇನ್ನು ಕೆಲವರು ಸರ್ಕಾರಿ ಜಾಗವನ್ನು ತನ್ನ ಕೆಲಸಕ್ಕೆ ಬಳಸಿದ್ದನ್ನು ವಿರೋಧಿಸಿದರು. ಆದರೆ ನಾನು ಮಾತ್ರ ಕೆರೆ ನಿರ್ಮಾಣವನ್ನು ನಿಲ್ಲಿಸಲಿಲ್ಲ. ಈಗ ನಾನು ಯಾರಿಗೇ ಬೇಕಾದರೆ ಸವಾಲು ಹಾಕುವೆ! ನಾನು ನಿರ್ಮಿಸಿದ ಕೆರೆಗಳಲ್ಲಿ ಕಡು ಬೇಸಿಗೆಯಲ್ಲಿ ಸಹ ನೀರು ಬತ್ತುವುದಿಲ್ಲ, ಕಾಮೇಗೌಡರು ವಿವರಿಸಿದ್ದಾರೆ.
ನಲವತ್ತು ವರ್ಷಗಳ ಹಿಂದೆ ಅವರು ಮೊದಲ ಕೆರೆ ನಿರ್ಮಾಣ ಮಾಡಲು ಆರು ತಿಂಗಳ ಕಾಲ ತೆಗೆದುಕೊಂಡಿದ್ದರು. ದಾಸರದೊಡ್ಡಿಯಲ್ಲಿ ಅವರ ನಿರ್ಮಾಣದ ಮೊದಲ ಕೆರೆಯನ್ನು ನಾವಿಂದು ಕಾಣಬಹುದು. ಅಲ್ಲಿಂದೀಚೆಗೆ ತಮ್ಮ ಅತ್ಯಲ್ಪ ಉಳಿತಾಯದ ಹಣವನ್ನು ವಿನಿಯೋಜಿಸಿ ಕೆರೆ ನಿರ್ಮಾಣ, ಅಗೆಯುವ ಕಾಯಕಕ್ಕಾಗಿ ಕೆಲವು ಸಹಾಯಕರನ್ನು ನೇಮಿಸಿಕೊಂಡರು.ಇವರು ನಿರ್ಮಿಸಿದ 14 ಕೆರೆಗಳೂ ಸಹ ಪರಸ್ಪರ ಸಂಬಂಧ ಹೊಂದಿವೆ."ಮೇಲ್ಭಾಗದ ಕ್ರೆ ತುಂಬಿದ ಬಳಿಕ ಕೆಳಗಿನ ಕೆರೆಗೆ ನೀರು ಹರಿಯುತ್ತದೆ" ಕಾಮೇಗೌಡರು ತಾವು ಕೆರೆ ನಿರ್ಮಾಣಕ್ಕೆ ಕೈ ಹಾಕುವ ಮುನ್ನ ಅಲ್ಲಿನ ಮಣ್ಣಿನ ಗುಣಮಟ್ಟವನ್ನು ಪರೀಕ್ಷಿಸುತ್ತಾರೆ.
ಕಾಮೇಗೌಡರು ತಾವು ನಿರ್ಮಿಸಿದ ಪ್ರತಿಯೊಂದು ಕೆರೆಗೆಳ ಬಳಿ ಹೋಗಲು ಕಿರಿದಾದ ದಾರಿಯನ್ನೂ ಮಾಡಿದ್ದಾರೆ.ನಡು ನಡುವೆ ಕಲ್ಲುಗಳನ್ನು ಇಟ್ಟು ಮಾಡಿರುವ ಈ ಮಾರ್ಗ ಅವರ ಪ್ರಕೃತಿ ಪ್ರೇಮವನ್ನು ಸೂಚಿಸುತ್ತದೆ. ಕಾಮೇಗೌಡರು ಪ್ರತಿದಿನವೂ ಈ 14  ಕೆರೆಗಳಿಗಳಿಗೆ ತಪ್ಪದೆ ಭೇಟಿ ನೀಡುತ್ತಾರೆ. "ನೀವು ಒಂದು ದಿನ ಊಟ ಮಾಡಿ ಮತ್ತೆಲ್ಲಾ ದಿನ ಉಪವಾಸವಿರಲು ಸಾಧ್ಯವಿಲ್ಲವಷ್ಟೆ? ಇದೂ ಹಾಗೆಯೇ ನಾನು ಒಂದು ದಿನ ಕೆರೆ ನಿರ್ಮಾಣ ಮಾಡುವುದಿಲ್ಲ, ವರ್ಷದ ಎಲ್ಲಾ ಸಮಯವನ್ನೂ ಇದಕ್ಕೆ ಮೀಸಲಿರಿಸುತ್ತೇನೆ" 
ಕಾಮೇಗೌಡರ ಈ ಕಾಯಕದಿಂದಾಗಿ ಇಂದು ಬೆಟ್ಟ್ದ ಮೇಲೆ ಹಾಗೂ ಸುತ್ತಲಿನ ಪ್ರದೇಶದಲ್ಲಿ ಮಣ್ಣಿನ ತೇವಾಂಶ ಉಳಿದುಕೊಂಡಿದ್ದು ಹಸಿರು ನಳನಳಿಸುತ್ತಿದೆ.ಅವರು ಬೆಟ್ಟ್ದ ಮೇಲೆ ಇನ್ನಷ್ಟು ಹಸಿರು ಹುಲ್ಲನ್ನು ಸಹ ಬೆಳೆಸಿದ್ದು ಪಕ್ಷಿಗಳು, ಕುರಿಗಳಿಗೆ ಉತ್ತಮ ಮೇವು ದೊರೆಯುವುದಕ್ಕೆ ಇದು ಸಹಾಯವಾಗಲಿದೆ. "ನಾನು ಇಷ್ಟೆಲ್ಲಾ ಕೆರೆ ಕುಂಟೆಗಳನ್ನು ನಿರ್ಮಾಣ ಮಾಡಿದ್ದೇನೆ. ಆದರೆ ಅದಕ್ಕಾಗಿ ಎಂದಿಗೂ ಸಾಲ ತೆಗೆದುಕೊಂಡಿಲ್ಲ. ಇದುವರೆಗೆ ನಾನು 10 ರಿಂದ 15 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಖರ್ಚು ಮಾಡಿದ್ದೇನೆ, ಬಸವಶ್ರೀ ಪುರಸ್ಕಾರ ಸೇರಿ ಅನೇಕ ಬಹುಮಾನಗಳಿಂದ ಬಂದ ಹಣವನ್ನು ನಾನು ಈ ಕೆರೆ ನಿರ್ಮಾಣಕ್ಕೆ ಉಪಯೋಗಿಸಿದ್ದೇನೆ.
"ನಾನು ಎರಡು ಎಕರೆ ಭೂಮಿ ಹೊಂದಿದ್ದೇನೆ, ನಾನೇನಾದರೂ ಈ ಕೆರೆಗಳ ನಿರ್ಮಾಣಕ್ಕಾಗಿ ನನ್ನ ಉಳಿತಾಯವನ್ನು ವಿನಿಯೋಜಿಸದೆ ಹೋಗಿದ್ದಲ್ಲಿ ಇನ್ನಷ್ಟು ಎಕರೆ ಭೂಮಿ ಖರೀದಿಸಿಅಬಹುದಿತ್ತು, ಇನ್ನಷ್ಟು ದೊಡ್ಡ ಮನೆ ಕಟ್ಟಬಹುದಾಗಿತ್ತು.ಆದರೆ ಇಂದು ನಾನು ಮಾಡಿದ ಕೆಲಸದಿಂದ ಸುತಲಿನ ಅನೇಕ ಹಳ್ಳಿಗಳ ನೀರಿನ ಬವಣೆ ನೀಗಿದೆ. ನಾನು ನಿರ್ಮಾಣ ಮಾಡಿದ 14 ಕೆರೆಗಳಲ್ಲಿ ಒಂಭತ್ತು ನನ್ನ ಗ್ರಾಮದಲ್ಲಿದ್ದರೆ ಇನ್ನು ಐದು ಪನತಳ್ಳಿ ಎನ್ನುವ ಪಕ್ಕದ ಗ್ರಾಮಕ್ಕೆ ಸೇರಿದೆ
"ನಾನು ನನ್ನ ಹಣವನ್ನು ಮಕ್ಕಳು, ಮೊಮ್ಮಕ್ಕಳಿಗೆ ನೀಡಿದ್ದರೆ ಅವರದನ್ನು ಖರ್ಚು ಮಾಡಿ ದಿವಾಳಿಯಾಗುತ್ತಿದ್ದರು. ಆದರೆ ಈ ಕೆರೆಗಳಿಗೆ ಹಾಕಿದ ಹಣದಿಂದ ಕೆರೆಗಳಲ್ಲಿ ವರ್ಷಪೂರ್ತಿ ನೀರಿದ್ದು ಅವರು ಶ್ರೀಮಂತ ಪರಿಸರಕ್ಕೆ ಕಾಅಣವಾಗಿದೆ. ನನಗೆ ಕೆಲವರು ಕೆಲವೊಮ್ಮೆ ಸ್ವಂತ ಖರ್ಚಿಗೆಂದು ಹಣ ನಿಡುತ್ತಾರೆ, ನಾನದನ್ನು ಬೇಡವೆನ್ನಲಾರೆ, ಹೇಗೆ ಕುಡುಕನಿಗೆ ಮದ್ಯಕ್ಕಾಗಿ ಹಣ ಖರ್ಚು ಮಾಡುವುದು ಇಷ್ಟವೋ ಹಾಗೆ ನಾನು ನನಗೆ ಸಿಕ್ಕ ಹಣವನ್ನೆಲ್ಲಾ ಈ ಕೆರೆಗಳಿಗಾಗಿ ಬಳಸುತ್ತೇನೆ" ಅವರು ನುಡಿದರು.
ಕಾಮೇಗೌಡರ ಕಿರು ಪರಿಚಯ
ಹೆಸರು: ಕಾಮೇಗೌಡ
ವಯಸ್ಸು: 82
ಊರು: ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದಾಸರದೊಡ್ಡಿ
ಪೋಷಕರು: ನೀಲಿ ವೆಂಕಟಗೌಡ ಹಾಗೂ ರಾಜಮ್ಮ
ನಿರ್ಮಿಸಿದ ಕೆರೆಗಳ ಸಂಖ್ಯೆ: 14
ಸಂದ ಪ್ರಶಸ್ತಿಗಳು: ಬಸವಶ್ರೀ ಪ್ರಶಸ್ತಿ (2017), ರಮಾಗೋವಿಂದ ಪ್ರಶಸ್ತಿ (2017) ಇನ್ನೂ ಮುಂತಾದವು

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com