ಕನ್ನಡದ ಎಕನಾಮಿಕಿಪಿಡಿಯಾ ಝಣ ಝಣ ಹಣ!

ರಂಗಸ್ವಾಮಿ ಮೂಕನಹಳ್ಳಿಯವರು ಬರೆಯುತ್ತಾರೆ. ಅದನ್ನು ಕನ್ನಡದ ಎಕನಾಮಿಕಿಪಿಡಿಯಾ ಎನ್ನಬಹುದು.
ಝಣ ಝಣ ಹಣ ಪುಸ್ತಕ
ಝಣ ಝಣ ಹಣ ಪುಸ್ತಕ
ಎಕನಾಮಿಕ್ಸ್ ಬಗ್ಗೆ ಓದುವುದು ಅಂದರೆ ಬೇಸರ ಅನಿಸುತ್ತದೆ. ಬೇಡವೆಂದರೂ ನಿದ್ರಾ ದೇವಿ ಬಂದು ಮುತ್ತಿಡುತ್ತಾಳೆ. ಉದಾಹರಣೆಗೆ ಡಾಲರ್ ಬೆಲೆ ಇವತ್ತಿದ್ದಿದ್ದು ನಾಳೆ ಅದೇ ಇರುವುದಿಲ್ಲ, ಅಮೇರಿಕಾದಲ್ಲಿ ಏನೋ ಬದಲಾವಣೆಯಾದರೆ ಇಲ್ಲಿ ಭಾರತದ ಸೆನ್ಸೆಕ್ಸ್ ಸೂಚ್ಯಂಕದಲ್ಲಿ ಏರು ಪೇರಾಗುತ್ತದೆ. ಯಾವುದಕ್ಕೂ ತಲೆಬುಡ ಎಲ್ಲಿದೆ ಎನ್ನುವುದೇ ಅರ್ಥ ಆಗುವುದಿಲ್ಲ. ಅದೇನೋ ಕ್ರಿಪ್ಟ್ ಕರೆನ್ಸಿ ಅಂತೆ, ಗೋಲ್ಡ್ ಬಾಂಡ್ ಅಂತೆ, ಕಪ್ಪು ಹಣ ಕಡಿಮೆ ಆಯಿತು, ಡಿಮಾನಿಟೈಜೇಷನ್ ಪರ್ವ ಮುಗಿಯಿತು, ಜಿಎಸ್‌ಟಿ ಬಂತು, ಎಷ್ಟು ತೆರಿಗೆ ಪಾವತಿ ಆಯ್ತು ಇದೆಲ್ಲ ಜನ ಸಾಮಾನ್ಯರಿಗೆ ಅರ್ಥ ಆಗುವಂತದ್ದೇ ಅಲ್ಲ. ಪತ್ರಿಕೆಗಳಲ್ಲಿ ಬಂದಿದ್ದೇ ನಿಜ. ಅದನ್ನು ಕೂಲಂಕಷವಾಗಿ ಅರ್ಥ ಮಾಡಿಕೊಳ್ಳಲು ಅರ್ಥಶಾಸ್ತ್ರದ ಪಠ್ಯಪುಸ್ತಕಗಳ ಮೋರೆ ಹೋಗಬೇಕು. ಕೆಲವರು ಜಿಡಿಪಿ 7.7% ಹೆಚ್ಚಳ ಆಗಿದೆ ಎನ್ನುತ್ತಾರೆ, ಇನ್ನು ಕೆಲವರು ಅದು ಹೊಸ ವಿಧಾನ, ಹಳೆಯ ವಿಧಾನದ ಪ್ರಕಾರ ಕೇವಲ 5.6% ಎನ್ನುತ್ತಾರೆ. 
ಹಳೆಯ ವಿಧಾನ, ಹೊಸ ವಿಧಾನ ಇದರ ಬಗ್ಗೆ ತಿಳಿಸುವವರು ಯಾರು. ಅದೂ ಕನ್ನಡದಲ್ಲಿ ಸಿಗಬೇಕು, ಓದಬೇಕು, ಮಿದುಳಿನಲ್ಲಿ ಜಗಿಯಬೇಕು ಅಂದರೆ ಸ್ವಲ್ಪಮಟ್ಟಿಗೆ ಕಬ್ಬಿಣದ ಕಡಲೆಯೇ.  ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಬಗ್ಗೆ ಪತ್ರಿಕೆಗಳು ಪುಟ ತುಂಬ ಬರೆದು,‌ ಮುದ್ರಿಸಿದವು. ಆದರೆ ಎಲ್ಲ ಕಡೆಯೂ ಬರೀ ರಾಜಕೀಯವೇ ಹೆಚ್ಚು. ಬ್ಯಾಂಕು ಮಾಡಿದ ತಪ್ಪು, ಹಣಕಾಸಿನ ವಿಷಯ ಏನು ಎನ್ನುವುದರ ಕುರಿತು ಹೇಳಿದವರು ಬಹಳ ಕಡಿಮೆ. ಕನ್ನಡ ಪ್ರಭ ಡಾಟ್ ಕಾಮ್ ನಲ್ಲಿ ಹಣಕ್ಲಾಸು ಎನ್ನುವ ಅಂಕಣ ಬರುತ್ತದೆ. ಪ್ರತಿ ಗುರುವಾರ ನಾನು ಕಾಯುವ ಅಂಕಣ ಅದು. ರಂಗಸ್ವಾಮಿ ಮೂಕನಹಳ್ಳಿಯವರು ಬರೆಯುತ್ತಾರೆ. ಅದನ್ನು ಕನ್ನಡದ ಎಕನಾಮಿಕಿಪಿಡಿಯಾ ಎನ್ನಬಹುದು. 
ಹಣಕಾಸಿನ ಕುರಿತು ಅರಿಯುಲು ಹೋಗಿ, ಮರಳುಗಾಡಿನಲ್ಲಿ ಸಿಕ್ಕಿ ದಾರಿ ತಪ್ಪಿದಾಗ ಸಿಗುವ ಓಯಾಸ್ಸಿಸ್ ಇದೆಯಲ್ಲ ಅದೇ ರಂಗಸ್ವಾಮಿಯವರ ಅಂಕಣಗಳನ್ನು ಸೇರಿಸಿ ಮುದ್ರಿಸಿದ ಪುಸ್ತಕ 'ಝಣ ಝಣ ಹಣ'. ಆ ಪುಸ್ತಕದಲ್ಲಿರುವ ಬರಹಗಳು ಎಷ್ಟು ಸೊಗಸಾಗಿವೆಯಲ್ಲ ಪ್ರತಿಯೊಂದು ಲೇಖನಕ್ಕೂ ಅಷ್ಟೇ ಆಕರ್ಷಕ ತಲೆಬರಹ ಕೊಟ್ಟಿದ್ದಾರೆ. "ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣ, ಏನಿದು ಹೊಸ ಪುರಾಣ?", "ಹಣವನ್ನ(ನಗದು) ಹೆಣವಾಗಿಸಲು ನೆಡೆದಿದೆ ಹುನ್ನಾರ!", "ಹೋಟೆಲ್ ಉದ್ಯಮದ ಮೇಲಿನ ಇಳಿದ ಜಿಎಸ್ಟಿ ದರ: ಭಾರತಕ್ಕೆ ಗರ!" ಹೀಗೆ ಬಹಳಷ್ಟು ಲೇಖನಗಳು ಕೇವಲ‌ ತಲೆಬರಹದಿಂದಲೇ ಓದುಗನ ಚಿತ್ತವನ್ನು ಸೆಳೆಯುತ್ತವೆ.
ಕ್ರೈಂ ಥ್ರಿಲ್ಲರ್ ಕಾದಂಬರಿಗಳು, ಸಸ್ಪೆನ್ ಕಥೆಗಳು ಇವೆಲ್ಲ ಓದುಗನನ್ನು ಕೂತಲ್ಲಿಂದ ಏಳಲು ಬಿಡದೆ ಪುಟಗಳನ್ನು ಬದಲಿಸುತ್ತಾ ಹೋಗುತ್ತವೆ. ಆದರೆ ಇದೇ ಮೊದಲ ಬಾರಿಗೆ ಹಣಕಾಸಿನ ಕುರಿತಾಗಿ ಬರೆದ ಪುಸ್ತಕ ನನ್ನನ್ನು ಕೂತಲ್ಲಿ, ನಿಂತಲ್ಲಿ ಕಾಡಿಸಿದ್ದು ಆಶ್ಚರ್ಯ. ವಿಶೇಷವಾಗಿ ಒಂದೊಂದು ಲೇಖನದ ಹಿಂದೆಯೂ ಆ ಸಮಯದಲ್ಲಿ ನಡೆದ ಘಟನೆಗಳ ನೆನಪಿದೆ, ಆವಾಗ ಪುಟಿದೆದ್ದ ಪ್ರಶ್ನೆಗಳಿಗೆ ಉತ್ತರ ಸಿಗುತ್ತಾ ಹೋಗುತ್ತವೆ. ಬಿಟ್ ಕಾಯಿನ್ ವಿಷಯ ಕೆಲವು ದಿನ ಎಲ್ಲಾ ಮಾಧ್ಯಮಗಳಲ್ಲೂ ಬಂದಿತ್ತು. ಅಮಿತಾಭ್ ಬಚ್ಚನ್ ಬಿಟ್ ಕಾಯಿನ್ ನಲ್ಲಿ ಹೂಡಿಕೆ ಮಾಡಿದ ಹಣ ಇಷ್ಟು ಹೆಚ್ಚಾಯಿತು ಎಂದು ಒಂದು ದಿನ ವರದಿ ಬಂದರೆ ಇನ್ನೊಂದು ದಿನ ಅಷ್ಟೇ ಕಡಿಮೆಯಾಗಿತ್ತು. ಇದೆಲ್ಲ ಹೇಗಾಗುತ್ತದೆ ಎಂದು ಹಲವಾರು ಪ್ರಶ್ನೆಗಳು ಮೂಡಿತ್ತು.
ವಾರೆನ್‌ ಬಫೆಟ್‌‌‌ ಕ್ರಿಪ್ಟ್ ಕರೆನ್ಸಿ ಬಗ್ಗೆ ಏನು ಹೇಳಿದರು ಎನ್ನುವ ಕುತೂಹಲ. 'ಝಣ ಝಣ ಹಣ' ಪುಸ್ತಕದಲ್ಲಿ 'ಬಿಟ್ ಕಾಯಿನ್ ಬಗ್ಗೆ ನಿಮಗೆಷ್ಟು ಗೊತ್ತು ? ಹೂಡಿಕೆಗೆ ನೀಡಬಹುದೇ ಒತ್ತು' ಎನ್ನುವ ಬರಹವಿದೆ. ತುಂಬಾ ಸೊಗಸಾಗಿದೆ. ಬಿಟ್ ಕಾಯಿನ್ ಹಾಗೆಂದರೇನು?, ನಮ್ಮ ಟ್ರಡಿಷನಲ್ ಕರೆನ್ಸಿ ಚಿನ್ನದ ಮೇಲೆ ಆಧಾರವಾಗಿತ್ತು. ಬಿಟ್ ಕಾಯಿನ್ ಕಥೆಯೇನು?, ಎಷ್ಟು ಬಿಟ್ ಕಾಯಿನ್ ಬೇಕಾದರೂ ಸೃಷ್ಟಿಸಬಹುದೇ?,‌ ಬಿಟ್ ಕಾಯಿನ್ ಹೇಗೆ ಕೊಳ್ಳುವುದು? , ಬಿಟ್ ಕಾಯಿನ್ ಕೊಳ್ಳುವುದರಿಂದ ಆಗುವ ಲಾಭ ನಷ್ಟಗಳೇನು ? ಹೀಗೆ ಜನಸಾಮಾನ್ಯರಿಗೆ ಬರುವ ಪ್ರಶ್ನೆಗಳನ್ನು ಹುಟ್ಟಿಸಿ ಅದಕ್ಕೆ ವಿವರವಾಗಿ, ಪದ್ಧತಿಯಲ್ಲಿ ಉತ್ತರ ಕೊಡುತ್ತಾರೆ ರಂಗಸ್ವಾಮಿಯವರು. 
ಉತ್ತರಗಳು ಹೇಗಿವೆ ಅಂದರೆ ಅವು ನಮ್ಮನ್ನು ಭೂತ, ವರ್ತಮಾನ ಹಾಗೂ ಭವಿಷ್ಯದ ಸುತ್ತಮುತ್ತ ಅಲೆದಾಡಿಸುತ್ತವೆ. ಹಣಕಾಸಿನ ವಿಷಯಗಳು ಧಾರಾಕಾರವಾಗಿ ಸುರಿಯುವ ಮಳೆಯ ಹಾಗಿಲ್ಲ, ಕಲ್ಲುಗಳ ನಡುವೆ ಹರಿಯುವ ಇಂಪಾದ ಹಳ್ಳದ ದನಿಯ ಹಾಗಿದೆ, ಜ್ಞಾನದ ಗುಡ್ಡದಿಂದ ಜನರ ಮಿದುಳಿಗೆ ಧುಮುಕುವ ಝರಿಯಾಗಿದೆ. ಹಣಕಾಸನ್ನು ಇಷ್ಟು ಸುಲಭವಾಗಿ ಬರೆಯಬಹುದು ಎಂದು ನಾನು ಅರಿತಿದ್ದು ಇಲ್ಲಿಂದಲೇ ಎನ್ನಲು ನನಗೆ ಹೆಮ್ಮೆ ಎನಿಸುತ್ತದೆ. 
ಇವತ್ತು ಬರಹಗಾರ, ಅದೂ ಅರ್ಥವ್ಯವಸ್ಥೆಯ ಆಸುಪಾಸಿನಲ್ಲಿ ಬರಯುವವರು ರಾಜಕೀಯದ ವಿಷದ ನೆರಳಿನ ಸಮೀಪ ಬರದೇ ಇರುವುದಿಲ್ಲ. ವಾಸ್ತವವನ್ನು ಬರೆದರೂ ಅದು ಒಬ್ಬರಿಗಲ್ಲದೇ ಹೋದರೂ ಮತ್ತೊಬ್ಬರಿಗೆ ಕೆರಳಿಸುತ್ತದೆ. ಕಪ್ಪು ಹಣದ ವಿಷಯವಂತೂ ಬಹಳ ಸೂಕ್ಷ್ಮವಾದದ್ದು. 'ಕಪ್ಪುಹಣ: ನಾವೇ ಹಾಕಬೇಕಿದೆ ಕಡಿವಾಣ' ಎನ್ನುವ ಲೇಖನವಿದೆ. ಅದರಲ್ಲಿ ಕಪ್ಪು ಹಣ ಹೇಗೆ ಹುಟ್ಟಿಕೊಳ್ಳುತ್ತದೆ ಎನ್ನುವುದರ ವಿವರಣೆ ಇದೆ. 
ಲೇಖನದಲ್ಲಿ ಬಂದ ಸಾಲುಗಳು ಹೀಗಿವೆ "ಹಣ ಹುಟ್ಟುವ ಮುಂಚೆ, ಸಾಲವನ್ನ ಸಾಲ ಎನ್ನುವುದಕ್ಕೆ ಮುಂಚೆ ಕೂಡ ಶೇಖರಣೆ ನೆಡೆಯುತಿತ್ತು. ಇದೊಂದು ಮನುಷ್ಯನ ಹುಟ್ಟು ಗುಣ. ಬಹು ದೊಡ್ಡ ಸಂಸ್ಥೆಯ ಮುಖ್ಯಸ್ಥನಿರಬಹುದು ಅದೇ ಸಂಸ್ಥೆಯಲ್ಲಿ ಕೆಲಸ ಮಾಡುವ ಕಸ ಗುಡಿಸುವನಿರಬಹದು ಎಲ್ಲರಿಗೂ ನಾಳಿನ ಬದುಕಿಗೆ ಒಂದಷ್ಟು ಶೇಖರಿಸಿಡಬೇಕು ಎನ್ನುವ ಹಪಾಹಪಿ ಮಾತ್ರ ಇದ್ದದ್ದೇ!" ಇದನ್ನು ನೀವು ಎಷ್ಟು ಆಳವಾಗಿ ಬೇಕಾದರೂ ನೋಡಬಹುದು. ಕಪ್ಪು ಹಣ ಬಹುಕಾಲದಿಂದ ಇತ್ತು, ಹಾಗಿದ್ದರೆ ಇಂದು ಯಾಕೆ ಅದರ ಬಗ್ಗೆ ಮೋದಿಜಿ ಮಾತನಾಡುತ್ತಿದ್ದಾರೆ ಎನ್ನುವ ಪ್ರಶ್ನೆಗಳು ಬರುತ್ತವೆ. ಅಮೇರಿಕಾ, ಜರ್ಮನಿ, ಜಪಾನ ಇಂತಹ ಮುಂದುವರೆದ ದೇಶಗಳಲ್ಲಿ ಕಪ್ಪು ಹಣ ಶೇಖರಣೆ ಆಗುವುದಿಲ್ಲವೇ? ಕಪ್ಪು ಹಣ ಶುರುವಾಗಿದ್ದು ಯಾವಾಗ? ಇಷ್ಟು ವರ್ಷ ಕಾಂಗ್ರೆಸ್ ನಾಯಕರು ಯಾಕೆ ವಿಫಲರಾದರು. ಹೀಗೆ ಹಣಕಾಸಿನ ವಿಷಯ ಮೀರಿ ರಾಜಕೀಯ ವಿಚಾರಗಳು ಹುಟ್ಟುತ್ತವೆ. 
ಆದರೆ ರಂಗಸ್ವಾಮಿಯವರು ಹೇಗೆ ಬರೆದಿದ್ದಾರೆ ಅಂದರೆ ಅಲ್ಲಿ ರಾಜಕೀಯಕ್ಕೆ ಯಾವುದೇ ಆಸ್ಪದವೇ ಸಿಗುವುದಿಲ್ಲ. ಓದಿ ಮುಗಿಸುವುದರೊಳಗೆ ವಿಷಯ ಸಂಗ್ರಹವಾಗುತ್ತದೆ, ಖಾಲಿಯಾಗಿದ್ದ ಮನಸ್ಸು ತುಂಬುತ್ತದೆ. "ಬ್ಯಾಂಕಿಂಗ್‌ ಬೇಕೆ ಬೇಕು, ಆದರೆ ಬ್ಯಾಂಕುಗಳು ಬೇಕಾ?" "ನಮ್ಮ ದೇಶದ ಬ್ಯಾಂಕುಗಳು ಎಷ್ಟು ಸುರಕ್ಷಿತ" ಇಂತಹ ಲೇಖನಗಳು ದಿನನಿತ್ಯದ ನಮ್ಮ ಒಡನಾಟದ ಬ್ಯಾಂಕಿನ ಒಳಗಡೆ ಕೊಂಡೊಯ್ಯುತ್ತದೆ. 
ಝಣ ಝಣ ಹಣವನ್ನು ಓದಿದ ನಂತರ ನನಗೆ ಹಣಕಾಸಿನ ವಿಷಯಗಳನ್ನು ಪತ್ರಿಕೆಯಲ್ಲಿ ಕಂಡಾಗ ಗೊಂದಲವಾಗುವುದು ಕಡಿಮೆಯಾಗಿದೆ. ಎಲ್ಲದಕ್ಕೂ ಅದರದ್ದೇ ಹಿನ್ನಲೆ ಇರುತ್ತದೆ, ಅದನ್ನು ಅರ್ಥಮಾಡಿಕೊಳ್ಳದೆ ಪ್ರತಿಕ್ರಿಯೆ ನೀಡುವುದು ತಪ್ಪು ಎನ್ನುವುದರ ಮನವರಿಕೆಯಾಗಿದೆ. 'ಮನುಷ್ಯ ದುಡಿಯುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ' ಇದು ಹಳೆಯ ಮಾತು. ಇಂದು ಹೇಗಾಗಿದೆ ಅಂದರೆ 'ಹೊಟ್ಟೆಗೂ ಸಾಕಷ್ಟು ಇದೆ, ಬಟ್ಟೆಗೂ ಸಾಕಷ್ಟು ಇದೆ. ಇವೆರಡು ಬಿಟ್ಟು ಉಳಿದಿದ್ದಕ್ಕೆ ದುಡಿಯುತ್ತಿದ್ದಾನೆ ಮನುಷ್ಯ'. ಮನೆ, ಕಾರು, ಮೊಬೈಲ್, ವಿದೇಶ ಪ್ರವಾಸ, ಐಶಾರಾಮಿ ಜೀವನ, ಹೀಗೆ ಇಂದು ಬದುಕಿಗೆ ಹಲವಾರು ಕಾರಣಗಳಿವೆ. ಇದಕ್ಕೆಲ್ಲ ಹಣಕಾಸಿನ ಬಗ್ಗೆ ಸ್ವಲ್ಪಮಟ್ಟಿಗೆ ಆದರೂ ಮಾಹಿತಿ ಇರಲೇಬೇಕು. ಇಂಜಿನಿಯರ್ ಆಗಿರಲಿ, ಮ್ಯಾನೇಜರ್ ಆಗಿರಲಿ. ಡಾಕ್ಟರ್ ಇರಲಿ, ಲಾಯರ್ ಇರಲಿ ಹಣದ ನಿರ್ವಹಣೆ ಬಹಳ ಮುಖ್ಯ. ಹಣಕ್ಲಾಸು ಓದಲೇ ಬೇಕಾದ ಅಂಕಣ ಹಾಗೂ ಅದನ್ನು ಒಂದೇ ಕಡೆ ಕೂಡಿಸಿದ 'ಝಣ ಝಣ ಹಣ' ಒಂದೊಳ್ಳೆ ಸಂಗ್ರಹಕ್ಕೆ ಯೋಗ್ಯವಾದ ಪುಸ್ತಕ. 
- ವಿಕ್ರಮ ಜೋಶಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com