ರಾಮಮಂದಿರಕ್ಕೆ ಅಪರೂಪದ ಕೊಡುಗೆ; ಟೈಪರೇಟರ್‌ ಬಳಸಿ ರಾಮನ ಚಿತ್ರ ಬಿಡಿಸಿದ ಅಪರೂಪದ ಕಲಾವಿದ

ದಶಕಗಳ ನಂತರ ಮೈದಾಳಲು ಸಿದ್ದವಾಗಿರುವ ಅಯೋಧ್ಯಾ ರಾಮಮಂದಿರದ ಭೂಮಿ ಪೂಜೆಯ ಶುಭಸಂದರ್ಭಕ್ಕೆ ಇಲ್ಲೊಬ್ಬ ಅಪರೂಪದ ಕಲಾವಿದರೊಬ್ಬರು ರಾಮನ ಭಾವಚಿತ್ರದ ಕೊಡುಗೆ ನೀಡಿದ್ದಾರೆ.. ಇದರಲ್ಲೇನು ವಿಶೇಷ ಎಂದಿರಾ..ಇದನ್ನು ರಚಿಸಿದ್ದು ಟೈಪರೇಟರ್‌ನಿಂದ..!
ಟೈಪರೇಟರ್‌ ಕಲಾವಿದ ಗುರುಮೂರ್ತಿ
ಟೈಪರೇಟರ್‌ ಕಲಾವಿದ ಗುರುಮೂರ್ತಿ
Updated on

ಬೆಂಗಳೂರು: ದಶಕಗಳ ನಂತರ ಮೈದಾಳಲು ಸಿದ್ದವಾಗಿರುವ ಅಯೋಧ್ಯಾ ರಾಮಮಂದಿರದ ಭೂಮಿ ಪೂಜೆಯ ಶುಭಸಂದರ್ಭಕ್ಕೆ ಇಲ್ಲೊಬ್ಬ ಅಪರೂಪದ ಕಲಾವಿದರೊಬ್ಬರು ರಾಮನ ಭಾವಚಿತ್ರದ ಕೊಡುಗೆ ನೀಡಿದ್ದಾರೆ.. ಇದರಲ್ಲೇನು ವಿಶೇಷ ಎಂದಿರಾ..ಇದನ್ನು ರಚಿಸಿದ್ದು ಟೈಪರೇಟರ್‌ನಿಂದ..!

ಬೆಂಗಳೂರಿನ 'ಟೈಪರೇಟರ್‌ ಕಲಾವಿದ ಗುರುಮೂರ್ತಿ' ಇಂತಹದೊಂದು ಅಪರೂಪದ ಸಾಧನೆ ಮಾಡಿದ್ದಾರೆ. ಇವರು ಟೈಪರೇಟರ್‌ ಕುಟ್ಟುತ್ತಲೇ ಅತ್ಯದ್ಭುತ ಕಲಾಕೃತಿಗಳನ್ನು ಬಿಳಿ ಹಾಳೆಯ ಮೇಲೆ ಮೂಡಿಸುತ್ತಾರೆ. ಈಗಾಗಲೇ ಭಾರತೀಯ ಯೋಧ ಅಭಿನಂದನ್‌, ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂ ಮತ್ತಿತರರ ಗಣ್ಯ ವ್ಯಕ್ತಿಗಳು ಇವರ ಕಲೆಗೆ ಶೋಭೆ ನೀಡಿದ್ದಾರೆ. "ಟೈಪ್‌ ಆರ್ಟಿಸ್ಟ್‌ ಗುರುಮೂರ್ತಿ" ಎಂಬ ಹೆಸರಿನ ಯೂಟ್ಯೂಬ್‌ ಚಾನೆಲ್‌ನಲ್ಲಿ ಇವರ ಕಲೆಯನ್ನು ವೀಕ್ಷಿಸಬಹುದಾಗಿದೆ.

ಈ ಕುರಿತು ಗುರುಮೂರ್ತಿ 'ಯುಎನ್‌ಐ' ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ್ದು ತಮ್ಮ ಕಲಾ ಪಯಣವನ್ನು ಹಂಚಿಕೊಂಡಿದ್ದಾರೆ.

-ಟೈಪರೇಟರ್‌ನಿಂದ ಚಿತ್ರ ಬಿಡಿಸುವ ಉಪಾಯ ಹೊಳೆದಿದ್ದು ಹೇಗೆ?

ನಾನು ಮೊದಲಿನಿಂದ ಪೇಯಿಂಟ್‌ ಮಾಡೋದು, ವಿಭಿನ್ನ ಚಿತ್ರಗಳನ್ನು ಬಿಡಿಸುತ್ತಿದ್ದೆ. ಅಮೆರಿಕ ಅಧ್ಯಕ್ಷ ರಾಬರ್ಟ್ ಕೆನಡಿ ಅವರನ್ನು 1968ರಲ್ಲಿ ಹತ್ಯೆ ಮಾಡಲಾಯಿತು. ನಾನು ಆಗ ತಾನೇ ಟೈಪರೇಟರ್‌ ಸೀನಿಯರ್‌ ಪರೀಕ್ಷೆಯಲ್ಲಿ ರಾಜ್ಯದಲ್ಲಿ ಮೂರನೇ ರ್ಯಾಂಕ್‌ ಪಡೆದಿದ್ದೆ. ಆಗ ಅವರನ್ನು ಟೈಪರೇಟರ್‌ನಲ್ಲಿ ಚಿತ್ರಿಸಬೇಕು ಎಂಬ ಉಪಾಯ ಹೊಳೆಯಿತು. ಮೊದಲ ಬಾರಿಗೆ ಇಡೀ ರಾತ್ರಿ ಕುಳಿತು ರಾಬರ್ಟ್ ಕೆನಡಿಯ ಚಿತ್ರ ಬರೆದಿದ್ದೆ. ಅದು ಒಂದು ಪತ್ರಿಕೆಯಲ್ಲಿ ಪ್ರಕಟವಾಗಿತ್ತು.

-ಇಲ್ಲಿಯವರೆಗೆ ಏನೇನು ಚಿತ್ರ ಬಿಡಿಸಿದ್ದೀರಿ?

ವನ್ಯಜೀವಿ, ನಿಸರ್ಗ, ಹಕ್ಕಿ, ಪ್ರತಿರೂಪಗಳು, ಪ್ರತಿಮೆಗಳು, ಶಿಲಾಬಾಲಿಕೆಗಳು, ಮತ್ತು ಬಹುತೇಕ ಗಣ್ಯ ವ್ಯಕ್ತಿಗಳ ಚಿತ್ರ ಬಿಡಿಸಿದ್ದೇನೆ.

-ನಿಮ್ಮ ಮುಂದಿನ ಗುರಿ ಏನು?

ಎಲ್ಲಾ ಚಿತ್ರಗಳು ಎ3 ಮಾದರಿಯಲ್ಲಿ ಚಿತ್ರ ರಚಿಸಲಾಗಿದ್ದು, ಎಲ್ಲವನ್ನೂ ಸೇರಿಸಿ 350ರಿಂದ 400 ಅಡಿಯ ಚಿತ್ರಗಳನ್ನು ನಿರ್ಮಿಸಿ ವಿಶ್ವ ದಾಖಲೆಯತ್ತ ಹೆಜ್ಜೆ ಹಾಕಬೇಕು ಎಂಬುದು ನನ್ನ ಮುಂದಿನ ಗುರಿಯಾಗಿದೆ. ಈ ನಿಟ್ಟಿನಲ್ಲಿಯೇ ಸಿದ್ದತೆ ನಡೆಯುತ್ತಿದೆ.

-ಬೇರೆ ಚಿತ್ರಗಳಿಗೆ ಈ ಪ್ರಕಾರ ಕಷ್ಟ ಆಗಲ್ವಾ?

ತುಂಬಾ ಕಷ್ಟ. ಅದಕ್ಕೆ ತಂತ್ರಗಾರಿಕೆ ಬೇಕು. ಟೈಪರೇಟರ್‌ ಮೇಲೆ ನಿಯಂತ್ರಣ ಬೇಕು. ಹುಬ್ಬು, ಕಣ್ಣು ಚಿತ್ರ ಬಿಡಿಸಲು ಒಂದರ ಮೇಲೊಂದು ಅಕ್ಷರ ಬರೆದು (ಓವರ್‌ಲ್ಯಾಪ್‌) ದಪ್ಪ ರೇಖೆಗಳನ್ನು ಬಿಡಿಸಬೇಕಾಗುತ್ತದೆ. ಇದೇ ರೀತಿ ಕಪ್ಪು ಕೋಟುಗಳನ್ನು ಕೂಡ ಬಿಡಿಸಿದ್ದೇನೆ. ಇದಕ್ಕೆ ಹೆಚ್ಚಿನ ಸಮಯ ಬೇಕಾಗುತ್ತದೆ.

-ಚಿತ್ರಕಲೆಯ ಪ್ರವೃತ್ತಿಯೊಂದಿಗೆ ನಿಮ್ಮ ವೃತ್ತಿ ಏನು?

ನಾನು ಬ್ಯಾಂಕ್‌ ಆಫ್‌ ಬರೋಡದಲ್ಲಿ ಕಂಪ್ಯೂಟರ್‌ ಆಪರೇಟರ್‌ ಆಗಿದ್ದೆ. 2001ರಲ್ಲಿ ಸ್ವಯಂ ನಿವೃತ್ತಿ ಪಡೆದುಕೊಂಡೆ. ಈಗ ಸಂಪೂರ್ಣ ಚಿತ್ರಕಲೆಗಾಗಿ ಸಮಯವನ್ನು ಮೀಸಲಿಟ್ಟಿದ್ದೇನೆ.

-ಚಿತ್ರಕಲೆಗಳನ್ನು ಮಾರಾಟ ಮಾಡಿದ್ದೀರಾ?

ಇಲ್ಲ, ಚಿತ್ರವನ್ನು ನಾನು ಮಾರಾಟ ಮಾಡೋದಿಲ್ಲ. ಕೇವಲ ಅಭಿರುಚಿಗಾಗಿ ಬಿಡಿಸುತ್ತೇನೆ. ಸದ್ಯ ಎರಡು ಟೈಪರೇಟರ್‌ಗಳನ್ನು ಇಟ್ಟುಕೊಂಡಿದ್ದೇನೆ. ಅವುಗಳನ್ನು ಮಗುವಿನಂತೆ ನೋಡಿಕೊಳ್ಳುತ್ತೇನೆ. ಚಿತ್ರಕಲೆಯ ಕೊಠಡಿಗೆ ಯಾರಿಗೂ ಪ್ರವೇಶ ನೀಡುವುದಿಲ್ಲ.

-ಬೇರೆ ಯಾರಿಗಾದರೂ ಈ ಅಪರೂಪದ ಕಲೆಯನ್ನು ಕಲಿಸುವ ಯೋಜನೆಯಿದೆಯೇ?

ನೇರವಾಗಿ ಯಾರಿಗೂ ಈ ಕಲೆಯನ್ನು ಕಲಿಸಿಲ್ಲ. ಆದರೆ, ಕಲಾ ಚಿತ್ರಣದ ಕುರಿತು ಯೂಟ್ಯೂಬ್‌ ಚಾನೆಲ್‌ ಒಂದನ್ನು ಆರಂಭಿಸಿದ್ದು, ಅದರಲ್ಲಿ ಅನೇಕ ಮಾಹಿತಿಗಳನ್ನು ನೀಡಿದ್ದೇನೆ. ಒಂದು ಸ್ಟುಡಿಯೋದಲ್ಲಿ ಎಲ್ಲಾ ಚಿತ್ರಗಳನ್ನು ಇರಿಸಿ, ವಾರಕ್ಕೆ ಒಂದು ಚಿತ್ರವನ್ನು ಅಪ್‌ಲೋಡ್‌ ಮಾಡುತ್ತೇನೆ. ಬುಧವಾರ ರಾಮನ ಚಿತ್ರ ರಚನೆಯನ್ನು ಕೂಡ ಅಪ್‌ಲೋಡ್‌ ಮಾಡುತ್ತೇನೆ.

-ಚಿತ್ರಗಳನ್ನು ರಚಿಸಿದ್ದಕ್ಕೆ ದೊರೆತಿರುವ ವಿಶೇಷ ನೆನಪುಗಳಿವೆಯೇ ?

ಮಾಜಿ ಪ್ರಧಾನ ಮಂತ್ರಿ ರಾಜೀವ್‌ ಗಾಂಧಿ ಅವರ ಹತ್ಯೆಗೆ ಆರು ತಿಂಗಳ ಮುಂಚೆ ಅವರ ಚಿತ್ರ ಬಿಡಿಸಿ, ಪ್ರಧಾನಿ ಕಚೇರಿಗೆ ಕಳುಹಿಸಿದ್ದೆ. ಅದನ್ನು ಮೆಚ್ಚಿ ಅವರು ಪ್ರಮಾಣಪತ್ರ ನೀಡಿದ್ದಾರೆ.

-ಕುಟುಂಬದ ಸಹಕಾರ ಹೇಗಿದೆ?

ನನ್ನ ಪತ್ನಿ, ಮಗಳು ಮತ್ತು ಮೊಮ್ಮಗ ಇದ್ದಾನೆ. ಅವರೆಲ್ಲರೂ ನನ್ನ ಕಲೆಗೆ ಉತ್ತಮಸಹಕಾರ ನೀಡುತ್ತಾರೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com