ಭಾರತೀಯ ವ್ಯಕ್ತಿಯನ್ನು ಪೋಷಕರೊಂದಿಗೆ ಸೇರಿಸಲು ಯತ್ನಿಸುತ್ತಿದ್ದಾರೆ ಬಾಂಗ್ಲಾ 'ಭಜರಂಗಿ ಭಾಯ್ ಜಾನ್'

ಇದು ರೀಲ್ ಅಲ್ಲ ರಿಯಲ್ ಭಜರಂಗಿ ಭಾಯ್ ಜಾನ್ ಕಥೆ. ವೀಸಾ ಮೇಲೆ ಎರಡು ದಿನಗಳ ಭಾರತ ಭೇಟಿಗಾಗಿ ಆಗಮಿಸಿದ್ದ ಬಾಂಗ್ಲಾದೇಶದ ವ್ಯಕ್ತಿಯೊಬ್ಬರು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಕೃಷ್ಣನಗರ: ಇದು ರೀಲ್ ಅಲ್ಲ ರಿಯಲ್ ಭಜರಂಗಿ ಭಾಯ್ ಜಾನ್ ಕಥೆ. ವೀಸಾ ಮೇಲೆ ಎರಡು ದಿನಗಳ ಭಾರತ ಭೇಟಿಗಾಗಿ ಆಗಮಿಸಿದ್ದ ಬಾಂಗ್ಲಾದೇಶದ ವ್ಯಕ್ತಿಯೊಬ್ಬರು, 14 ವರ್ಷಗಳ ಹಿಂದೆ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಿಂದ ಓಡಿ ಹೋಗಿ ಭಾರತ - ಬಾಂಗ್ಲಾದೇಶ ಅಂತರಾಷ್ಟ್ರೀಯ ಗಡಿಯಲ್ಲಿ ರಕ್ಷಿಸಲ್ಪಟಿದ್ದ ವ್ಯಕ್ತಿಯನ್ನು ಮತ್ತೆ ಆತನ ಕುಟುಂಬ ಸೇರಿಸಲು ಯತ್ನಿಸುತ್ತಿದ್ದಾರೆ.

ಭಜರಂಗಿ ಭಾಯ್ ಜಾನ್ ಚಿತ್ರದಲ್ಲಿ ನಾಯಕ ನಟ ಸಲ್ಮಾನ್ ಖಾನ್ ಅವರು ಮಾತು ಬಾರದ ಪುಟ್ಟ ಬಾಲಕಿಯನ್ನು ಮತ್ತೆ ಪಾಕಿಸ್ತಾನದ ಆಕೆಯ ಪೋಷಕರೊಂದಿಗೆ ಸೇರಿಸುವ ಕಥೆ ಇದೆ. ಇಲ್ಲಿ ಸಹ ಎರಡು ದಿನಗಳ ಹಿಂದಷ್ಟೇ ಬಾಂಗ್ಲಾದೇಶದ ವ್ಯಕ್ತಿಯೊಬ್ಬರು, ಭಾರತೀಯ ಮೂಲದ ವ್ಯಕ್ತಿಯ ಪೋಷಕರನ್ನು ಹುಡುಕಿಕೊಂಡು ಭಾರತಕ್ಕೆ ಬಂದಿದ್ದಾರೆ. ಆದರೆ ವೀಸಾ ಅವಧಿ ಮುಗಿದ ಹಿನ್ನೆಲೆಯಲ್ಲಿ ಎರಡೇ ದಿನದಲ್ಲಿ ಪೋಷಕರನ್ನು ಪತ್ತೆಹಚ್ಚಲು ಸಾಧ್ಯವಾಗದೇ ವಾಪಸ್ ಆಗಿದ್ದಾರೆ.

ಬಾಂಗ್ಲಾದೇಶದ ಚುವಾಡಂಗಾ ಜಿಲ್ಲೆಯ ಚೈಗರಿಯಾ ಗ್ರಾಮದ ನಿವಾಸಿ ಎಂಡಿ ಆರಿಫುಲ್ ಇಸ್ಲಾಂ ಅವರು ತಮ್ಮ ಬಳಿ ಇರುವ 28 ವರ್ಷದ ಮಾತು ಬಾರದ ವ್ಯಕ್ತಿಯ ಫೋಟೋ ಹಿಡಿದು ನಾಡಿಯಾದ ಬೀದಿಗಳಲ್ಲಿ ಹಾಗೂ ಇತರೆ ಪ್ರದೇಶಗಳಲ್ಲಿ ಸುತ್ತಾಡಿದ್ದಾರೆ. 

ಕೊನೆಗೆ ಜನವರಿ 24ರಂದು ವಾಪಸ್ ಬಾಂಗ್ಲಾದೇಶಕ್ಕೆ ತೆರಳುವ ದಿನ, ನಾಡಿಯಾದ ಕೆಲವು ಜನ 14 ವರ್ಷಗಳ ಹಿಂದೆ ನಾಡಿಯಾದ ಗೆಡೆಯಿಂದ 14 ವರ್ಷದ ಬಾಲಕ ನಾಪತ್ತೆಯಾಗಿದ್ದ ಎಂದು ಇಸ್ಲಾಮ್ ಗೆ ಹೇಳಿದ್ದಾರೆ. ಆದರೆ ಆತನ ಬಳಿ ಇದ್ದ ಫೋಟೋದಲ್ಲಿನ ವ್ಯಕ್ತಿ ತಮ್ಮ ಮಗ ಎಂದು ಗುರುತಿಸಲು ಪೋಷಕರು ವಿಫಲವಾಗಿದ್ದು, ಅಂತಿಮವಾಗಿ ತಮ್ಮ ಮಗ ಅಲ್ಲ ಎಂದಿದ್ದಾರೆ.

ಆದಾಗ್ಯೂ ಇಸ್ಲಾಮ್ ಅವರು, ಅಲ್ಲಿನ ಜನರಿಗೆ ತಮ್ಮ ಫೋನ್ ನಂಬರ್ ಮತ್ತು ವಿಳಾಸ ನೀಡಿ ಹೋಗಿದ್ದಾರೆ.

14 ವರ್ಷಗಳ ಹಿಂದೆ ನಾನು ಒಂದು ದಿನ ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ, ಭಾರತದ ಗಡಿಯಲ್ಲಿ 14 ವರ್ಷದ ಬಾಲಕನೊಬ್ಬ ಒಬ್ಬನೇ ನಿಂತು ಅಳುತ್ತಿರುವುದನ್ನು ನೋಡಿದೆ. ಆಗ ಇನ್ನೂ ಗಡಿಯಲ್ಲಿ ಬೇಲಿ ಹಾಕಿರಲಿಲ್ಲ. ಹೀಗಾಗಿ ನಾನು ಹೋಗಿ ಆತನನ್ನು ಕರೆದುಕೊಂಡು ಬಂದೆ. ಆತನಿಗೆ ಮಾತು ಬರುತ್ತಿರಲಿಲ್ಲ. ಆದರೂ ಯಾವುದೇ ವಿಚಾರ ಮಾಡದೇ ಆತನನ್ನು ನನ್ನ ಮನೆಗೆ ಕರೆದುಕೊಂಡು ಬಂದೆ. ಬಳಿಕ ಆತ ಒಬ್ಬ ಹಿಂದೂ ಬಾಲಕ ಎಂಬುದು ತಿಳಿಯಿತು. ಅಂದಿನಿಂದ ಆ ಬಾಲಕ ನನ್ನ ಮಕ್ಕಳಲ್ಲಿ ಒಬ್ಬನಾಗಿ ಬೆಳೆದ ಎಂದ ಇಸ್ಲಾಮ್ ಅವರು ಬಾಂಗ್ಲಾಗೆ ಮರಳುವ ಮುನ್ನ ಹೇಳಿದ್ದಾರೆ.

ಇಷ್ಟು ದಿನ ನನಗೆ ಭಾರತಕ್ಕೆ ಬರಲು ಸಾಧ್ಯವಾಗಲಿಲ್ಲ. ಏಕೆಂದರೆ ಇಲ್ಲಿಗೆ ಬರಲು ನನ್ನ ಬಳಿ ಹಣ ಇರಲಿಲ್ಲ. ಆ ಬಾಲಕ ಈಗ ನನ್ನ ಕುಟುಂಬಕ್ಕೆ ಒಂದು ಸ್ಪೂರ್ತಿಯಾಗಿದ್ದಾನೆ. ಆತನನ್ನು ಬಿಟ್ಟು ಇರುವುದು ನಮಗೂ ಕಷ್ಟ. ಆದರೆ ಆತನನ್ನು ಆತನ ಪೋಷಕರಿಗೆ ಒಪ್ಪಿಸುವುದು ನನ್ನ ಜವಾಬ್ದಾರಿ ಎಂದು ಇಸ್ಲಾಮ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com