

ಬೆಂಗಳೂರು: ಅದು 1981ರ ಸಮಯ, ಮದ್ರಾಸ್ ನಲ್ಲಿ ಎಸ್ ಪಿಬಿಯವರನ್ನು ಭೇಟಿ ಮಾಡಿದ್ದೆ, ನಮ್ಮ ನಡುವಿನ ಬಾಂಧವ್ಯ ಕಂಡು ಅವರ ತಂದೆ ನನ್ನನ್ನು ಅಣ್ಣಾ ಎಂದು ಸಂಬೋಧಿಸು ಎಂದು ಎಸ್ ಪಿಬಿಯವರಿಗೆ ಹೇಳಿದರು. ಎಸ್ ಪಿಬಿಯವರು ತಮ್ಮ ಹಿರಿಯ ಸೋದರನನ್ನು ಕಳೆದುಕೊಂಡಿದ್ದರು,ಅವರ ಸ್ಥಾನವನ್ನು ನಾನು ತುಂಬಿದೆ ಎಂದು ಎಸ್ ಪಿಬಿ ತಂದೆ ಭಾವಿಸಿದರು.
ಪ್ರತಿ ಬಾರಿ ನಾವು ಭೇಟಿಯಾದಾಗ ಎಸ್ ಪಿಬಿ ನನ್ನ ಕಾಲಿಗೆ ಬಿದ್ದು ಆಶೀರ್ವಾದ ಕೇಳುತ್ತಿದ್ದರು. ನನ್ನ ಕಾಲಿಗೆ ಬಿದ್ದಾಗ ನನಗೆ ಸಂಕೋಚವಾಗುತ್ತಿತ್ತು, ನಾನು ಬೇಡ ಎನ್ನುತ್ತಿದೆ, ನಮ್ಮ ಸ್ನೇಹ ಆರಂಭವಾಗಿದ್ದು 1975ರ ಹೊತ್ತಿಗೆ. ಬೆಂಗಳೂರು ಗಣೇಶ ಉತ್ಸವದ ಸಹ ಸ್ಥಾಪಕನಾಗಿ ನಾನು ಬಾಲು ಅವರ ಕಾರ್ಯಕ್ರಮಗಳನ್ನು ಸಂಘಟನೆ ಮಾಡಲು ನೆರವಾಗುತ್ತಿದ್ದೆ ಎಂದು ನೆನಪು ಮಾಡಿಕೊಳ್ಳುತ್ತಾರೆ ಜಿ ಕೆ ಓಬಯ್ಯ.
ಎಸ್ ಪಿಬಿಯವರ ಜೊತೆಗಿನ ಒಡನಾಟದ ಬಗ್ಗೆ ಅವರು ನೆನಪು ಮಾಡಿಕೊಂಡಿದ್ದು ಹೀಗೆ: ಮದ್ರಾಸ್ ಗೆ ಹೋದಾಗಲೆಲ್ಲಾ ನಾನು ಕರೆ ಮಾಡುತ್ತಿದ್ದೆ. ಅವರು ಬೆಂಗಳೂರಿಗೆ ಬಂದಾಗಲೆಲ್ಲಾ ನನ್ನನ್ನು ಕರೆಯುತ್ತಿದ್ದರು. ಕಾರ್ಯಕ್ರಮಗಳಿಗೆಲ್ಲ ಅವರನ್ನು ಕರೆದೊಯ್ಯಲು ಸಂಘಟಕರು ಕಾರನ್ನು ಗೊತ್ತು ಮಾಡಿದ್ದರೂ ಕೂಡ ನಾನೇ ಹೋಗಿ ಕರೆದುಕೊಂಡು ಬರಬೇಕು ಎಂದು ಬಯಸುತ್ತಿದ್ದರು, ನಾನು ಹೋಗಿ ಕರೆದುಕೊಂಡು ಬಂದರೇ ಅವರಿಗೆ ಸಮಾಧಾನ. ನಂತರ ನಾವು ಬಹಳ ತಮಾಷೆಯಾಗಿ ಮಾತನಾಡುತ್ತಿದ್ದೆವು. ನನ್ನಿಂದ ಕನ್ನಡ ಕಲಿತರು, ಕನ್ನಡದಲ್ಲಿ ಜೋಕ್ ಮಾಡುತ್ತಿದ್ದರು.
ವರ್ಷಗಳು ಕಳೆಯುತ್ತಾ ಹೋದಂತೆ ನಮ್ಮಿಬ್ಬರ ನಡುವಿನ ಬಾಂಧವ್ಯ ಬೆಳೆಯುತ್ತಾ ಹೋಯಿತು. 1981ರಲ್ಲಿ ನನ್ನ ಪತ್ನಿಗೆ ಹುಷಾರಿರಲಿಲ್ಲ. ಚೆನ್ನೈಗೆ ಎರಡು ವರ್ಷದ ಚಿಕಿತ್ಸೆಗೆ ಹೋದೆವು. ಆಗ ಅಲ್ಲಿ ಪದೇ ಪದೇ ಭೇಟಿ ಮಾಡುತ್ತಿದ್ದೆವು. ಆ ಸ್ನೇಹ,ಬಾಂಧವ್ಯ ತೀರಾ ಇತ್ತೀಚೆಗೆ ಲಾಕ್ ಡೌನ್ ವರೆಗೆ ಮುಂದುವರಿಯಿತು. ಲಾಕ್ ಡೌನ್ ಗೆ ಮೊದಲು ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕಾರ್ಯಕ್ರಮವೊಂದಕ್ಕೆ ಬಂದಿದ್ದರು. ಬೆಂಗಳೂರಿಗೆ ಅವರು ಬಂದಾಗಲೆಲ್ಲಾ ಗಾಂಧಿನಗರದಲ್ಲಿರುವ ನನ್ನ ಕಾಂತಿ ಕಂಫರ್ಟ್ಸ್ ಹೊಟೇಲ್ ನ ಕೆಲಸಗಳನ್ನೆಲ್ಲಾ ಮುಗಿಸಿ ಬಾಗಿಲು ಹಾಕಿ ಜೊತೆಗೆ ನಾವೆಲ್ಲಾ ಸೇರಿ ರಾತ್ರಿ ಊಟ ಮಾಡುತ್ತಿದ್ದೆವು.
ಕಳೆದ ತಿಂಗಳು ಕೋವಿಡ್-19 ಬಂದು ಅವರು ಆಸ್ಪತ್ರೆಗೆ ಸೇರಿದ ಮೇಲೆ ಅವರ ಕುಟುಂಬದವರಿಂದ ಆರೋಗ್ಯ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದೆವು. ಅವರ ಕುಟುಂಬಸ್ಥರಿಗೆ ತೊಂದರೆ ಕೊಡಬಾರದು ಎಂದು ಹೋಗಲಿಲ್ಲ. ಮೊನ್ನೆ ಗುರುವಾರ ಅವರಿಗೆ ತುಂಬಾ ಹುಷಾರಿಲ್ಲ ಎಂದು ಗೊತ್ತಾಯಿತು, ನಿನ್ನೆ ತೀರಿಕೊಂಡುಬಿಟ್ಟರು, ನಾನು ಒಬ್ಬ ಕಿರಿಯ ಸೋದರನನ್ನು ಕಳೆದುಕೊಂಡಿದ್ದೇನೆ ಎನ್ನುತ್ತಾರೆ 81 ವರ್ಷದ ಹಿರಿಜೀವ ನಗರದ ಹೊಟೇಲ್ ಉದ್ಯಮಿ ಓಬಯ್ಯ.
Advertisement