ನಿರ್ಭಯಾ ಹಂತಕರಿಗೆ ನೇಣು ಶಿಕ್ಷೆ: ಈವರೆಗೂ ನಡೆದ ಬಂದ ಪ್ರಮುಖ ಘಟನಾವಳಿಗಳು!

ನಿರ್ಭಯಾ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೂ ನಡೆದು ಬಂದ ಪ್ರಮುಖ ಘಟನಾವಳಿಗಳು ಇಲ್ಲಿವೆ
ಅತ್ಯಾಚಾರಿಗಳು, ಆಶಾ ದೇವಿ
ಅತ್ಯಾಚಾರಿಗಳು, ಆಶಾ ದೇವಿ

ನವದೆಹಲಿ: 2012 ಡಿಸೆಂಬರ್ 16ರಂದು ಇಡೀ ದೇಶವನ್ನೆ ಬೆಚ್ಚಿ ಬಿದ್ದಿತ್ತು. ಅಂದು ರಾತ್ರಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ   ಚಲಿಸುವ ಬಸ್ ನಲ್ಲಿ 23 ವರ್ಷದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ,  ಬರ್ಬರ ರೀತಿಯಲ್ಲಿ ಹಲ್ಲೆ ನಡೆಸಿ  ಬಸ್ ನಿಂದ ದುಷ್ಕರ್ಮಿಗಳು ಎಸೆದಿದ್ದರು. 2012 ಡಿಸೆಂಬರ್ 29 ರಂದು ಸಾವು- ಬದುಕಿನ ಸ್ಥಿತಿಯಲ್ಲಿದ್ದ ನಿರ್ಭಯಾ ಸಿಂಗಾಪುರದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಈ ಘಟನೆ ನಡೆದಾಗ ನಿರ್ಭಯಾ ಹಾಗೂ ಆಕೆಯ ಸ್ನೇಹಿತ ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು.ಬಸ್ ಮಹಿಪಾಲ್ ಪುರ ದಾಟುತ್ತಿದ್ದಂತೆ ಐದಾರು ಮಂದಿ ಲೈಂಗಿಕ ಕಿರುಕುಳ ನೀಡಲು ಆರಂಭಿಸಿದ್ದರು. ಆಕೆಯ ಸ್ನೇಹಿತ ಆಕ್ಷೇಪಿಸಿದಾಗ ಆತನ ಮೇಲೆ ಹಲ್ಲೆ ನಡೆಸಿ ನಿರ್ಭಯಾ ಮೇಲೆ ಅತ್ಯಾಚಾರ ನಡೆಸಲಾಗಿತ್ತು

ಬಸ್ ಚಾಲಕ ಹಾಗೂ ನಿರ್ವಾಹಕ ಕೂಡಾ ಈ ಅಪರಾಧದಲ್ಲಿ ಭಾಗಿಯಾಗಿದ್ದರು. ನಂತರ ಆ ಮಹಿಳೆ ಹಾಗೂ ಆಕೆಯ ಸ್ನೇಹಿತನನ್ನು ಬಸ್ ನಿಂದ ಎಸೆಯಲಾಗಿತ್ತು. ನಂತರ ಬಂದ ಪೊಲೀಸರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಸಪ್ದರ್ ಜಂಗ್ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ನಿರ್ಭಯಾಗೆ  ಜೀವ ರಕ್ಷಕ ಸಾಧನವನ್ನು ಅಳವಡಿಸಲಾಗಿತ್ತು.ಮಾರನೇ ದಿನ ಆಕೆಯ ಸ್ನೇಹಿತ ಆಸ್ಪತ್ರೆಯಿಂದ  ಬಿಡುಗಡೆಯಾಗಿದ್ದ. ಉತ್ತರ ಪ್ರದೇಶದ ಬಾಲ್ಲಿಯಾ ಮೂಲದ  ಮಹಿಳೆ ನಗರದ ಆಸ್ಪತ್ರೆಯೊಂದಲ್ಲಿ ಇಂಟರ್ ಶಿಫ್ ಮಾಡುತ್ತಿದ್ದಳು. 

ನಂತರ ನೊಯ್ಡಾದ ಶಾಲೆಯ ಕ್ಯಾಂಪಸ್ ವೊದರಲ್ಲಿ ಬಸ್ ನ್ನು ಪೊಲೀಸರು ಪತ್ತೆ ಮಾಡಿದ್ದರು. ಈ ಘಟನೆಗೆ ಸಂಬಂಧಿಸಿದ ಬಸ್ ಚಾಲಕನನ್ನು ಬಂಧಿಸಿರುವುದಾಗಿ ಪೊಲೀಸರು ಹೇಳಿದ್ದರು. ನಾಲ್ವರು ಆರೋಪಿಗಳಿಗೆ 2017 ಮೇ 5 ರಂದು ಸುಪ್ರೀಂಕೋರ್ಟ್ ಗಲ್ಲುಶಿಕ್ಷೆಯನ್ನು ಖಚಿತ ಪಡಿಸಿತ್ತು.ಅಕ್ಷಯ್ , ವಿನಯ್ ಶರ್ಮಾ, ಪವನ್ ಗುಪ್ತಾ ಮತ್ತು ಮುಕೇಶ್ ಸಿಂಗ್ ಗೆ ವಿಧಿಸಿದ್ದ ಮರಣದಂಡನೆ ಶಿಕ್ಷೆಯನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿತ್ತು.  

ಈವರೆಗೂ ನಡೆದ ಬಂದ ಪ್ರಮುಖ ಘಟನಾವಳಿಗಳು

2020 ಮಾರ್ಚ್ 19:  ದೆಹಲಿ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿ ಮುಖೇಶ್ ಸಿಂಗ್ ಸಲ್ಲಿಕೆ ಮಾಡಿದ್ದ ಅರ್ಜಿಯನ್ನೂ ಸುಪ್ರೀಂಕೋರ್ಟ್ ವಜಾಮಾಡುವ ಮೂಲಕ ದೋಷಿಗಳಿದ್ದ ಎಲ್ಲಾ ಮಾರ್ಗಗಳನ್ನು ಬಂದ್ ಮಾಡಿತು.

2020 ಮಾರ್ಚ್ 5:  ನಿರ್ಭಯಾ ಗ್ಯಾಂಗ್ ರೇಪಿನ ನಾಲ್ವರು ಆರೋಪಿಗಳಿಗೆ ಮಾರ್ಚ್ 20 ಬೆಳಗ್ಗೆ 5-30ಕ್ಕೆ ಗಲ್ಲಿಗೇರಿಸಲಾಗುವುದು ಎಂದು ದೆಹಲಿ ಕೋರ್ಟ್ ಹೊಸದಾಗಿ ಡೆತ್ ವಾರೆಂಟ್ ಹೊರಡಿಸಿತ್ತು. ಆರೋಪಿಗಳು ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಮುಗಿಸಿದ್ದಾರೆ ಎಂದು ದೆಹಲಿ ಸರ್ಕಾರ ಹೇಳಿದ ನಂತರ ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶ ಧರ್ಮೇಂದ್ರ ರಾಣಾ ಮಾರ್ಚ್ 20 ರಂದು ಹೊಸ ದಿನಾಂಕವನ್ನು ನಿಗದಿಪಡಿಸಿದರು. 

2020 ಮಾರ್ಚ್ 4: ನಿರ್ಭಯಾ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳಲ್ಲಿ ಒಬ್ಬನಾದ ಪವನ್ ಗುಪ್ತಾ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಿರಸ್ಕರಿಸಿದರು. ಇತರ ಆರೋಪಿಗಳಾದ ವಿನಯ್ ಕುಮಾರ್, ಅಕ್ಷಯ್ ಠಾಕೂರ್ ಮತ್ತು ಮುಕೇಶ್ ಸಿಂಗ್ ಸಲ್ಲಿಸಿದ್ದ ಕ್ಷಮಾದಾನದ ಅರ್ಜಿಯನ್ನು ಆದಾಗಲೇ ರಾಷ್ಟ್ರಗಳು ವಜಾ ಮಾಡಿದ್ದರು. 

2020 ಫೆಬ್ರವರಿ 17: ನಿರ್ಭಯಾ ಅತ್ಯಾಚಾರಿಗಳಿಗೆ ಮಾರ್ಚ್ 3 ರಂದು ಗಲ್ಲಿಗೇರಿಸುವುದಾಗಿ ದೆಹಲಿ ನ್ಯಾಯಾಲಯ ಹೊಸ ಡೆತ್ ವಾರೆಂಟ್ ಹೊರಡಿಸಿತು.

2020 ಫೆಬ್ರವರಿ 14: ನಿರ್ಭಯಾ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಮುಂದೆ ಸದ್ಯ ಯಾವುದೇ ಅಪರಾಧಿಯ ಮೇಲ್ಮನವಿ ಬಾಕಿ ಇಲ್ಲ. ವಿಚಾರಣಾ ನ್ಯಾಯಾಲಯವು ಗಲ್ಲುಶಿಕ್ಷೆಗೆ ಹೊಸ ದಿನಾಂಕ ನಿಗದಿಪಡಿಸಬಹುದು ಎಂದು ಸುಪ್ರೀಂಕೋರ್ಟ್ ಸೂಚನೆ 

2020 ಜನವರಿ 17: ಅತ್ಯಾಚಾರಿಗಳನ್ನು ಫೆಬ್ರವರಿ 1 ರಂದು  ಬೆಳಗ್ಗೆ 6 ಗಂಟೆಗೆ ಗಲ್ಲಿಗೇರಿಸಲಾಗುವುದು ಎಂದು ದೆಹಲಿ ಕೋರ್ಟ್ ನಿಂದ ಹೊಸ ಡೆತ್ ವಾರೆಂಟ್ ಜಾರಿ

2020 ಜನವರಿ 7:  ನಿರ್ಭಯಾ ಅತ್ಯಾಚಾರಿಗಳಾದ ಅಕ್ಷಯ್ ಠಾಕೂರ್, ಪವನ್ ಗುಪ್ತಾ, ವಿನಯ್ ಶರ್ಮಾ ಮತ್ತು ಮುಕೇಶ್ ಸಿಂಗ್ ಅವರನ್ನು ಜನವರಿ 22ಕ್ಕೆ  ಗಲ್ಲಿಗೇರಿಸಲಾಗುವುದು ಎಂದು  ದೆಹಲಿ ನ್ಯಾಯಾಲಯ ವಾರೆಂಟ್. 

2019 ಡಿಸೆಂಬರ್24 : ನಿರ್ಭಯಾ ಪ್ರಕರಣದ ಅತ್ಯಾಚಾರಿಗಳ ಪೈಕಿ ಮೂವರು ರಾಷ್ಟ್ರಪತಿಗಳ ಮುಂದೆ ಕ್ಷಮದಾನದ  ಅರ್ಜಿ ಸಲ್ಲಿಸುವ ಮೊದಲು ಕ್ಯೂರೆಟಿವ್ ಅರ್ಜಿ ಸಲ್ಲಿಸಲು ಬಯಸಿದ್ದಾರೆ ಎಂದು ತಿಹಾರ್ ಜೈಲಿನ ಅಧಿಕಾರಿಗಳಿ ತಿಳಿಸಿದ್ದಾಗಿ ಅಧಿಕಾರಿಗಳು ಹೇಳಿದ್ದರು.

2019 ಡಿಸೆಂಬರ್ 18: ಅಪರಾಧಿ ಅಕ್ಷಯ್ ಸಿಂಗ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತು.ಎಲ್ಲಾ  ನಾಲ್ವರು ಅಪರಾಧಿಗಳಿಗೂ ಕೊನೆಯದಾಗಿ ಕ್ಯೂರೆಟಿವ್ ಅರ್ಜಿ  ಸಲ್ಲಿಸುವ ಅವಕಾಶವಿತ್ತು.

2019 ಡಿಸೆಂಬರ್ 10:  ಅಕ್ಷಯ್ ಕುಮಾರ್ ಗಲ್ಲು ಶಿಕ್ಷೆ ವಿರುದ್ಧ ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಕೆ. 

2019 ಡಿಸೆಂಬರ್ 6:  ನಾಲ್ವರು ಅಪರಾಧಿಗಳು ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಕಳುಹಿಸಿದ ಕೇಂದ್ರ ಗೃಹ ಸಚಿವಾಲಯ

2019 ಡಿಸೆಂಬರ್ 1: ಅಪರಾಧಿಗಳ ಪೈಕಿ ಒಬ್ಬನಾದ ವಿನಯ್ ಶರ್ಮಾ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ವಜಾಗೊಳಿಸಲು ದೆಹಲಿ ಸರ್ಕಾರ ಶಿಫಾರಸು

2019 ಡಿಸೆಂಬರ್ 25: ಸಂತ್ರಸ್ಥೆಯ ಕುಟುಂಬದವರು ಅರ್ಜಿ ಸಲ್ಲಿಸಿದ ನಂತರ ಮತ್ತೊಬ್ಬ ನ್ಯಾಯಾಧೀಶರ ಬಳಿಗೆ ನಿರ್ಭಯಾ ಪ್ರಕರಣವನ್ನು ಸ್ಥಳಾಂತರಿಸಿದ ದೆಹಲಿ ನ್ಯಾಯಾಲಯ

2019 ನವೆಂಬರ್ 8: ಅಪರಾಧಿ ವಿನಯ್ ಶರ್ಮಾನಿಂದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಕ್ಷಮಾದಾನ ಅರ್ಜಿ ಸಲ್ಲಿಕೆ

2019 ಅಕ್ಟೋಬರ್ 30: ರಾಷ್ಟ್ರಪತಿಗಳಿಗೆ ಕ್ಷಮಾದಾನದ ಅರ್ಜಿ ಸಲ್ಲಿಸಲು ನಾಲ್ವರು ಅಪರಾಧಿಗಳಿಗೆ ತಿಳಿಸಿದ ತಿಹಾರ್ ಜೈಲಿನ ಆಡಳಿತ ಮಂಡಳಿ

2019 ಫೆಬ್ರವರಿ 14: ನಾಲ್ವರು ಅಪರಾಧಿಗಳ ಗಲ್ಲಿಗೇರಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ದೆಹಲಿ ನ್ಯಾಯಾಲಯಕ್ಕೆ ಸಂತ್ರಸ್ಥೆಯ ಕುಟುಂಬಸ್ಥರಿಂದ ಅರ್ಜಿ ಸಲ್ಲಿಕೆ

2018 ಡಿಸೆಂಬರ್ 13: ಅಪರಾಧಿಗಳಿಗೆ ಕೂಡಲೇ ಗಲ್ಲಿಗೇರಿಸಲು ನಿರ್ದೇಶನ ಕೋರುವಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂಕೋರ್ಟ್ 

2018 ಜುಲೈ 9: ಮೇ 2017ರಲ್ಲಿ  ನೀಡಲಾಗಿರುವ  ಗಲ್ಲುಶಿಕ್ಷೆಯನ್ನು ಪುನರ್ ಪರಿಶೀಲಿಸುವಂತೆ ಮೂವರು ಅಪರಾಧಿಗಳು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂಕೋರ್ಟ್ 

2018 ಮೇ 4: ಅಪರಾಧವನ್ನು ಅಭ್ಯಾಸವಾಗಿ ಮಾಡಿಕೊಂಡಿಲ್ಲ, ಬದಲಾಗಲು ಅವಕಾಶ ನೀಡುವಂತೆ  ಸುಪ್ರೀಂ ಮೊರೆ ಇಟ್ಟ ನಾಲ್ವರು ಅತ್ಯಾಚಾರಿಗಳು.

2018 ಮಾರ್ಚ್ 9:  ಬೆಂಗಳೂರಿನಲ್ಲಿ ಮಹಿಳಾ ಸಾಧಕಿಯರಿಗೆ ನಿರ್ಭಯಾ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದ ನಿರ್ಭಯಾ ತಾಯಿ ಆಶಾ ದೇವಿ, ಮಹಿಳೆಯರ ಸುರಕ್ಷತೆಗಾಗಿ ಏನನ್ನೂ ಮಾಡುತ್ತಿಲ್ಲ ಎಂಬ ಹೇಳಿಕೆ.

2017 ಡಿಸೆಂಬರ್ 15: ಅಪರಾಧಿಗಳಾದ ವಿನಯ್ ಶರ್ಮಾ ಮತ್ತು ಪವನ್ ಕುಮಾರ್ ಗುಪ್ತಾ ಅವರಿಂದ ಸುಪ್ರೀಂಕೋರ್ಟ್ ಪುನರ್ ಪರಿಶೀಲನಾ ಅರ್ಜಿ 

2017 ಅಕ್ಟೋಬರ್ 31:  ಗಲ್ಲು ಶಿಕ್ಷೆ ಜಾರಿಯಲ್ಲಿ ವಿಳಂಬದ ಹಿನ್ನೆಲೆಯಲ್ಲಿ ತಿಹಾರ್ ಜೈಲು ಆಡಳಿತ ಮಂಡಳಿ, ಪೊಲೀಸರಿಗೆ ನೋಟಿಸ್ ಹೊರಡಿಸಿದ ದೆಹಲಿ ಮಹಿಳಾ ಆಯೋಗ. 

2017 ಮೇ 5: 23 ವರ್ಷದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ದೌರ್ಜನ್ಯವೆಸಗಿದ ನಾಲ್ವರು ಅಪರಾಧಿಗಳಿಗೂ ಗಲ್ಲು ಶಿಕ್ಷೆ ಪ್ರಕಟಿಸಿದ ಸುಪ್ರೀಂಕೋರ್ಟ್ .

2017 ಮಾರ್ಚ್ 27: ದೆಹಲಿ ಗ್ಯಾಂಗ್ ರೇಪ್ ಗೆ ಸಂಬಂಧಿಸಿದ ತೀರ್ಪನ್ನು ಕಾಯ್ದಿರಿಸಿದ ಸುಪ್ರೀಂಕೋರ್ಟ್ 

2017 ಫೆಬ್ರವರಿ 3:  ನಾಲ್ವರು ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸುವಲ್ಲಿ ಸರಿಯಾದ ಕಾರ್ಯವಿಧಾನವನ್ನು ಅನುಸರಿಸಲಾಗಿಲ್ಲ ಎಂದು ಒಪ್ಪಿಕೊಂಡ ಸುಪ್ರೀಂ ಕೋರ್ಟ್. ಅಪರಾಧಿಗಳಿಗೆ ಅಫಿಡವಿಟ್ ಸಲ್ಲಿಸುವಂತೆ ಸೂಚಿಸಿದ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ

2016 ನವೆಂಬರ್ 7: ಹಿರಿಯ ವಕೀಲ ಮತ್ತು ಅಮಿಕಸ್ ಕ್ಯೂರಿ ರಾಜು ರಾಮಚಂದ್ರನ್ ಅವರಿಂದ ವಾದ ಮಂಡನೆ: ಶಿಕ್ಷೆಯ ಆದೇಶವನ್ನು ಬದಿಗಿರಿಸಬೇಕೆಂದು ವಾದ

2016 ಏಪ್ರಿಲ್ 8:  ನಿರ್ಭಯಾ ಪ್ರಕರಣದ ಅಮಿಕಸ್ ಕ್ಯೂರಿಗಳಾಗಿ ಹಿರಿಯ ವಕೀಲರಾದ ರಾಜು ರಾಮಚಂದ್ರನ್ ಹಾಗೂ ಸಂಜಯ್ ಹೆಗ್ಡೆ ನೇಮಕ

2016 ಏಪ್ರಿಲ್ 3:  19 ತಿಂಗಳ ಕಾಲ ಶೈತ್ಯಗಾರದಲ್ಲಿದ್ದ ಈ ಪ್ರಕರಣದ ವಿಚಾರಣೆ ಆರಂಭಿಸಿದ ನ್ಯಾಯಾಮೂರ್ತಿಗಳಾದ ದೀಪಕ್ ಮಿಶ್ರಾ, ವಿ. ಗೋಪಾಲ್ ಗೌಡ ಮತ್ತು ಕುರಿಯನ್ ಜೋಶೆಫ್.

2015 ಡಿಸೆಂಬರ್ 21: ಬಾಲಾಪರಾಧಿ ಬಿಡುಗಡೆಯನ್ನು ವಿರೋಧಿಸಿ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ್  ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್. ಬಾಲಾಪರಾಧಿ ಬಿಡುಗಡೆಗೆ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದ ಬಳಿಕ ಸಂತ್ರಸ್ಥೆ ತಾಯಿ ಆಶಾ ಸಿಂಗ್ ಮತ್ತು ಬದ್ರಿನಾಥ್ ಸಿಂಗ್ ಅವರಿಂದ ಪ್ರತಿಭಟನೆಗೆ ನಿರ್ಧಾರ

2015 ಡಿಸೆಂಬರ್ 20: ಸಂತ್ರಸ್ಥೆಯ ಪೋಷಕರ  ತ್ರೀವ ಪ್ರತಿಭಟನೆಯ ನಡುವೆಯೂ ಸಂಜೆ 5-45ರಲ್ಲಿ ಬಾಲಾಪರಾಧಿ ವಿಶೇಷ ಗೃಹದಿಂದ ಬಿಡುಗಡೆ. ಬಾಲಾಪರಾಧಿ ಕ್ರೌರ್ಯತೆ ಮೆರೆದಿದ್ದು ಆತನನ್ನು ಬಿಡುಗಡೆಗೆ ತಡೆ ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ದೆಹಲಿ ಮಹಿಳಾ ಆಯೋಗ. 

2015 ಡಿಸೆಂಬರ್ 18:  ನಾಲ್ವರು ಅಪರಾಧಿಗಳ ಪೈಕಿ ಅತ್ಯಂತ ಕ್ರೂರವಾಗಿ ವರ್ತಿಸಿದ ಬಾಲಾಪರಾಧಿ ಮೂರು ವರ್ಷ ಜೈಲು ಶಿಕ್ಷೆ ಪೂರೈಸಿದ ಬಳಿಕ ಬಿಡುಗಡೆಗೆ ಕೋರ್ಟ್ ನಿಂದ ಗ್ರೀನ್ ಸಿಗ್ನಲ್. ಡಿಸೆಂಬರ್ 20ರ ನಂತರ ಆತನನ್ನು ವಿಶೇಷ ಗೃಹದಲ್ಲಿ ಇರಿಸಲು ಯಾವುದೇ ನಿರ್ದೇಶನ ನೀಡಲು ಆಗಲ್ಲ ಎಂದು  ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರಿಂದ ಸ್ಪಷ್ಟನೆ.

2015 ಮಾರ್ಚ್ 8: ‘ನಿರ್ಭಯಾ’ ಸಾಮೂಹಿಕ ಅತ್ಯಾಚಾರ ಪ್ರಕರಣದ ದೋಷಿ ಮುಖೇಶ್ ಸಿಂಗ್‌ನ ಸಂದರ್ಶನವನ್ನೊಳಗೊಂಡ ‘ಇಂಡಿಯಾಸ್ ಡಾಟರ್’ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡಲು ಉದ್ದೇಶಿಸಿದ್ದ ಬಿಬಿಸಿಯು ಸಂಸತ್ತಿನ ಒಳಗೂ, ಹೊರಗೂ ಸೇರಿದಂತೆ ದೇಶಾದ್ಯಂತ ವ್ಯಾಪಕ ಪ್ರತಿಭಟನೆ ವ್ಯಕ್ತವಾದ ಬೆನ್ನಿಗೇ ಏಕಾಏಕಿ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿಕೊಂಡು ಮಾರನೇ ದಿನ ನಸುಕಿನ 3.30ರ (ಭಾರತೀಯ ಕಾಲಮಾನ) ಸುಮಾರಿಗೆ ಪ್ರಸಾರ ಮಾಡುತ್ತದೆ.

2015 ಮಾರ್ಚ್ 6:  ಮಹಿಳೆಯರ ಸ್ವಾತಂತ್ರ್ಯ, ಘನತೆ ಮತ್ತು ಸುರಕ್ಷತೆಯನ್ನು ಪ್ರತಿಬಿಂಬಿಸುವ  ಸಾಕ್ಷ್ಯಚಿತ್ರವನ್ನು ವೀಕ್ಷಿಸಲು  ಜನರಿಗೆ  ಅನುವು ಮಾಡಿಕೊಡುವ ಸಲುವಾಗಿ ಇಂಡಿಯಾಸ್ ಡಾಟರ್  ಸಾಕ್ಷ್ಯಚಿತ್ರ ಮೇಲಿನ ನಿಷೇಧವನ್ನು ಹಿಂತೆಗೆದುಕೊಳ್ಳುವಂತೆ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಸರ್ಕಾರವನ್ನು ಒತ್ತಾಯಿಸಿತು

2015 ಮಾರ್ಚ್ 4:  ಇಂಡಿಯಸ್ ಡಾಟರ್ ಸಾಕ್ಷ್ಯಚಿತ್ರ ನಿರ್ಮಾಪಕರಿಗೆ ದೆಹಲಿ ಪೊಲೀಸರಿಂದ ನೋಟಿಸ್ ನೀಡಿಕೆ. ಬ್ರಿಟಿಷ್ ಚಲನಚಿತ್ರ ನಿರ್ಮಾಪಕ ಲೆಸ್ಲೀ ಉಡ್ವಿನ್ ನಿರ್ದೇಶನದ ಇಂಡಿಯಸ್ ಡಾಟರ್ ಸಾಕ್ಷ್ಯಚಿತ್ರ

2014 ಜುಲೈ 14: ನಿರ್ಭಯಾ ಅತ್ಯಾಚಾರದ ನಾಲ್ವರು ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆಗೆ ಮುಂದಿನ ಆದೇಶ ನೀಡುವವರೆಗೆ ತಡೆ ನೀಡಿದ ಸುಪ್ರೀಂ ಕೋರ್ಟ್ 

2014 ಮಾರ್ಚ್ 13: ನಾಲ್ವರು ಅಪರಾಧಿಗಳಿಗೆ ವಿಧಿಸಲಾಗಿರುವ ಮರಣದಂಡನೆ ಶಿಕ್ಷೆಯನ್ನು ಎತ್ತಿಹಿಡಿದ ದೆಹಲಿ ಹೈಕೋರ್ಟ್ 

2013 ನವೆಂಬರ್ 11: ಮರಣದಂಡನೆಯು ಸಮಾಜದಲ್ಲಿ ಅಪರಾಧವನ್ನು ನಿಲ್ಲಿಸುವುದಿಲ್ಲ ಈ ಪ್ರಕರಣದಲ್ಲಿ ವಿನಯ್ ಶರ್ಮಾ ಮತ್ತು ಅಕ್ಷಯ್ ಠಾಕೂರ್ ಶಿಕ್ಷೆಗೆ ಅರ್ಹರಲ್ಲ ಎಂದು ವಾದಿಸಿದ ವಕೀಲ ಎಪಿ ಸಿಂಗ್ 

2013 ಅಕ್ಟೋಬರ್ 27: ಶಿಕ್ಷೆಯ ಆದೇಶ ಹಾಗೂ ಪ್ರಮಾಣ ಸೇರಿದಂತೆ ಹಿಂದಿ ಅನುವಾದದಲ್ಲಿ ದಾಖಲೆಗಳನ್ನು ಕೋರಿ  ಇಬ್ಬರು ಅಪರಾಧಿಗಳು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್ 

2013 ಸೆಪ್ಟೆಂಬರ್ 13:  ವಿಶೇಷ ತ್ವರಿತಗತಿಯ ನ್ಯಾಯಾಲಯದಿಂದ ನಿರ್ಭಯಾ ಅತ್ಯಾಚಾರಿಗಳಿಗೆ ಮಹತ್ವಪೂರ್ಣ ಮರಣದಂಡನೆ ಶಿಕ್ಷೆ ಪ್ರಕಟ. 

2013 ಸೆಪ್ಟೆಂಬರ್ 10:  ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಅಕ್ಷಯ್ ಕುಮಾರ್ ಠಾಕೂರ್, ವಿನಯ್ ಶರ್ಮಾ, ಪವನ್ ಗುಪ್ತಾ ಮತ್ತು ಮುಕೇಶ್ ಆರೋಪಿಗಳೆಂದು ದೆಹಲಿ ನ್ಯಾಯಾಲಯವೊಂದರ ಹೆಚ್ಚುವರಿ ಸೆಷನ್ ನ್ಯಾಯಾಧೀಶ ಯೋಗೇಶ್ ಕನ್ಹಾ ಅವರಿಂದ ಘೋಘಣೆ. 

2013 ಆಗಸ್ಟ್ 31: ನಿರ್ಭಯಾ ಅತ್ಯಾಚಾರ ಪ್ರಕರಣದ ಆರೋಪಿಯಾದ ಬಾಲಾಪರಾಧಿಗೆ ಬಾಲಾಪರಾಧಿ ಮಂಡಳಿಯಿಂದ ಮೂರು ವರ್ಷ ಜೈಲು ಶಿಕ್ಷೆ ಪ್ರಕಟ. ಬಾಲಾಪರಾಧಿಗೆ 18 ವರ್ಷ ಆಗಲು ಇನ್ನೂ 6 ತಿಂಗಳ ಕೊರತೆ ಇತ್ತು. ಆದಾಗ್ಯೂ, ದೇಶವನ್ನು ಬೆಚ್ಚಿ ಬೀಳಿಸಿದ ಪ್ರಕರಣದಲ್ಲಿ ಅತ್ಯಂತ ಕ್ರೂರವಾಗಿ ವರ್ತಿಸಿದ ಬಾಲಾಪರಾಧಿಯನ್ನು ಬಾಲಾಪರಾಧಿ ಮಂಡಳಿ ರಕ್ಷಿಸಿತು.

2013 ಮಾರ್ಚ್ 11: ನಿಭರ್ಯಾ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ರಾಮ್ ಸಿಂಗ್ ತಿಹಾರ್ ಜೈಲಿನಲ್ಲಿ ಆತ್ಮಹತ್ಯೆ.  3ನೇ ನಂಬರ್ ಜೈಲಿನೊಳಗೆ ತನ್ನ ಬಟ್ಟೆಯಿಂದ ರಾಮ್ ಸಿಂಗ್ ನೇಣುಬಿಗಿದುಕೊಂಡಿದ್ದ ಎಂದು ಜೈಲಿನ ಹಿರಿಯ ಅಧಿಕಾರಿಗಳು ತಿಳಿಸಿದರು.

2013 ಫೆಬ್ರವರಿ 28: ಪ್ರಕರಣದ ಆರನೇ ಆರೋಪಿ ಅಪ್ತಾಪ್ತ ಎಂದು ಘೋಷಿಸಿದ ಬಾಲ ನ್ಯಾಯಮಂಡಳಿಯಿಂದ ಪ್ರಕರಣ ದಾಖಲು 

2013 ಫೆಬ್ರವರಿ 2: ಐವರು ಆರೋಪಿಗಳ ವಿರುದ್ಧ ಕೊಲೆಯೂ ಸೇರಿ  ವಿವಿಧ ಪ್ರಕರಣಗಳನ್ನು ದಾಖಲಿಸಿದ ತ್ವರಿತಗತಿಯ ನ್ಯಾಯಾಲಯ. ಗರಿಷ್ಠ ಶಿಕ್ಷೆ ಎಂದರೆ ಆರೋಪಿಗಳಿಗೆ ಮರಣದಂಡನೆ ಆಗಬಹುದು.

2013 ಜನವರಿ 17: ತ್ವರಿತಗತಿಯ ನ್ಯಾಯಾಲಯಕ್ಕೆ ದೆಹಲಿ ಗ್ಯಾಂಗ್ ರೇಪ್ ಪ್ರಕರಣ ವರ್ಗಾವಣೆ

2013 ಜನವರಿ 3: ಸಿಂಗಾಪುರದಲ್ಲಿನ ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ಸಾವು- ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಸಂತ್ರಸ್ಥೆಯ ಹೇಳಿಕೆ ಪಡೆದು  ಬಾಲಾಪರಾಧಿ ಹೊರತುಪಡಿಸಿ  ಐವರು ಆರೋಪಿಗಳ ವಿರುದ್ಧ ಮರಣದಂಡನೆ ಕೋರಿ ವಿವಿಧ ಸೆಕ್ಷನ್ ಗಳಡಿಯಲ್ಲಿ ಚಾರ್ಚ್ ಶೀಟ್ ದಾಖಲಿಸಿದ ದೆಹಲಿ ಪೊಲೀಸರು 

2013 ಡಿಸೆಂಬರ್ 29:  ಸಾಮೂಹಿಕ ಅತ್ಯಾಚಾರ ಹಾಗೂ ಕ್ರೂರ ಹಲ್ಲೆಯಿಂದಾಗಿ ಸಿಂಗಾಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ಸಾವು- ಬದುಕಿನ ನಡುವೆ ಹೋರಾಡುತ್ತಿದ್ದ  23 ವರ್ಷದ ಸಂತ್ರಸ್ಥೆ ಸಾವು.  ಇದಕ್ಕೂ ಮುನ್ನ ದೆಹಲಿಯ ಸಪ್ದರ್ ಜಂಗ್ ಆಸ್ಪತ್ರೆಯಲ್ಲಿ ಜೀವರಕ್ಷಕ ಸಾಧನಗಳೊಂದಿಗೆ ಆಕೆಗೆ  ಚಿಕಿತ್ಸೆ ನೀಡಲಾಗಿತ್ತು. 

2012 ಡಿಸೆಂಬರ್ 26:  11 ದಿನಗಳಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಸಂತ್ರಸ್ಥೆಯ ಆರೋಗ್ಯ ಪರಿಸ್ಥಿತಿ ಗಂಭೀರವಾದ ಬಳಿಕ ಏರ್ ಅಂಬ್ಯುಲೆನ್ಸ್ ಮೂಲಕ ಸಿಂಗಾಪುರಕ್ಕೆ ಕರೆದೊಯ್ದು ಅಲ್ಲಿನ ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ದಾಖಲಿಸಲಾಗುತ್ತದೆ.

2012 ಡಿಸೆಂಬರ್ 22:  ಸಪ್ಧರ್ ಜಂಗ್ ಆಸ್ಪತ್ರೆಯಲ್ಲಿ ಸಂತ್ರಸ್ಥೆಯ ಹೇಳಿಕೆ ಪಡೆದ ನಂತರ ಬಿಹಾರದಲ್ಲಿ ಪ್ರಕರಣದ ಆರನೇ ಆರೋಪಿ ಅಕ್ಷಯ್ ಠಾಕೂರ್  ಬಂಧನ. 

2012 ಡಿಸೆಂಬರ್ 21:  ಸಪ್ದರ್ ಜಂಗ್ ಆಸ್ಪತ್ರೆಯಲ್ಲಿ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಅವರಿಂದ ಸಂತ್ರಸ್ತೆಯ ಹೇಳಿಕೆ ದಾಖಲು. ಆಕೆ ನಿರ್ಭಿತಿ ಹಾಗೂ ಧೈರ್ಯವಾಗಿ ಹೇಳಿಕೆ ನೀಡಿದ್ದಾಗಿ ಡಿಸಿಪಿ ಚಾಹ್ಯಾ ಶರ್ಮಾ ಹೇಳಿಕೆ 
ಸಂತ್ರಸ್ತೆಯ ಹೇಳಿಕೆ ಹಾಗೂ ಆಕೆಯ ಸ್ನೇಹಿತ ಸಾಪ್ಟ್ ವೇರ್ ಎಂಜಿನಿಯರ್ ಹೇಳಿಕೆಯಲ್ಲಿ ಸಾಮ್ಯತೆ.

2012 ಡಿಸೆಂಬರ್ 21:  ಎಲ್ಲಾ ಅಪರಾಧಿಗಳನ್ನು ಬಂಧಿಸಿರುವುದಾಗಿ ದೆಹಲಿ ಪೊಲೀಸರ ಹೇಳಿಕೆ.  ಆನಂದ್ ವಿಹಾರ್ ಬಸ್ ನಿಲ್ದಾಣದಲ್ಲಿ ಬಾಲಾಪರಾಧಿ ಬಂಧನ. ಮುಕೇಶ್ ನನ್ನು ಆತನ ಸ್ನೇಹಿತೆ ಗುರುತಿಸಿದ್ದಾಗಿ ಪೊಲೀಸರ ಹೇಳಿಕೆ

2012 ಡಿಸೆಂಬರ್ 19: ಐದನೇ ಬಾರಿಗೆ ಸಂತ್ರಸ್ಥೆಗೆ ಶಸ್ತ್ರ ಚಿಕಿತ್ಸೆ 

2012 ಡಿಸೆಂಬರ್ 18:  ಗ್ಯಾಂಗ್ ರೇಪ್ ನಡೆದ ಎರಡು ದಿನಗಳ ಬಳಿಕ ಘಟನೆಗೆ ಸಂಬಂಧಿಸಿದಂತೆ  ನಾಲ್ವರನ್ನು ಬಂಧಿಸಿದ ಪೊಲೀಸರು. ಬಸ್ ಚಾಲಕ ರಾಮ್ ಸಿಂಗ್ ಬಂಧಿಸಿ ವಿಚಾರಣೆ ನಡೆಸಿದ ಬಳಿಕ ಪ್ರಕರಣವನ್ನು ಇತ್ಯರ್ಥಪಡಿಸುವುದಾಗಿ ದೆಹಲಿ ಪೊಲೀಸರ ಹೇಳಿಕೆ. 
 

2012 ಡಿಸೆಂಬರ್ 17:  ನಿರ್ಭಯಾ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣ ಸಂಬಂಧ ಬಸ್ ಚಾಲಕ ರಾಮ್ ಸಿಂಗ್, ಆತನ ಸಹೋದರ ಮುಕೇಶ್, ವಿನಯ್ ಶರ್ಮಾ ಮತ್ತು ಪವನ್ ಗುಪ್ತಾ ಅವರನ್ನು ಪತ್ತೆ ಹಚ್ಚಿದ ದೆಹಲಿ ಪೊಲೀಸರು.

2012 ಡಿಸೆಂಬರ್ 16:  ಸಿನಿಮಾ ವೀಕ್ಷಿಸಿ ತನ್ನ ಗೆಳೆಯನೊಂದಿಗೆ ಖಾಸಗಿ ಬಸ್ ನಲ್ಲಿ ಮನೆಗೆ ವಾಪಾಸ್ ಆಗುತ್ತಿದ್ದ 23 ವರ್ಷದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ಮೇಲೆ ಬಸ್ ನಲ್ಲಿ ಮುಗಿಬಿದ್ದ ಆರು ಮಂದಿ ಕಾಮುಕರು ಅತ್ಯಾಚಾರವೆಸಗಿ ಕ್ರೌರ್ಯ ಮೆರೆದಿದ್ದರು. ನಂತರ ಆಕೆ ಹಾಗೂ ಆಕೆಯ ಸ್ನೇಹಿತನನ್ನು ಮಹಿಪಾಲ್ ಪುರ ಬಳಿ ಬಸ್ ನಿಂದ ಎಸೆದಿದ್ದರು. ನಂತರ ಅವರನ್ನು ಸಪ್ದರ್ ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com