ಕ್ರಿಸ್ಮಸ್ ಇನ್ ಬ್ಲೂಮ್: ಸಿಂಗಾಪುರದ ಆರ್ಚರ್ಡ್ ರೋಡ್ ಕ್ರಿಸ್ಮಸ್ ಆಚರಣೆಯ ವಿಶೇಷತೆಯ ಬಗ್ಗೆ ನಿಮಗೆಷ್ಟು ಗೊತ್ತು?

ದೀಪಾವಳಿ ಹಬ್ಬಕ್ಕೆ ಸಿಂಗಾಪುರದ ಲಿಟ್ಲ್ ಇಂಡಿಯಾ ತುಂಬಾ ಫೇಮಸ್. ಹಾಗೆಯೇ ಕ್ರಿಸ್ಮಸ್ ಗೆ ಇಲ್ಲಿನ ಆರ್ಚರ್ಡ್ ರೋಡ್. 
ಕ್ರಿಸ್ ಮಸ್ ಆಚರಣೆ
ಕ್ರಿಸ್ ಮಸ್ ಆಚರಣೆ

ದೀಪಾವಳಿ ಹಬ್ಬಕ್ಕೆ ಸಿಂಗಾಪುರದ ಲಿಟ್ಲ್ ಇಂಡಿಯಾ ತುಂಬಾ ಫೇಮಸ್. ಹಾಗೆಯೇ ಕ್ರಿಸ್ಮಸ್ ಗೆ ಇಲ್ಲಿನ ಆರ್ಚರ್ಡ್ ರೋಡ್. 

ಭಾರತೀಯರ ಬೆಳಕಿನ ಹಬ್ಬಕ್ಕೆ ಲಿಟ್ಲ್ ಇಂಡಿಯಾ ಗೋಪುರದ ಥೀಮ್ ನಿಂದ ಕಂಗೊಳಿಸಿತ್ತು. ಇದೀಗ "ಕ್ರಿಸ್ಮಸ್ ಇನ್ ಬ್ಲೂಮ್" ಎಂಬ ಶೀರ್ಷಿಕೆಯೊಂದಿಗೆ ಗಾರ್ಡನ್ ಸಿಟಿ ಮತ್ತೆ ಜಗಮಗಿಸುತ್ತಿದೆ.

ಪ್ರಪಂಚದೆಲ್ಲೆಡೆಯ ಹೈ-ಕ್ಲಾಸ್ ಬ್ರಾಂಡ್‌ಗಳನ್ನು ಹೊಂದಿರುವ ರಸ್ತೆ ಈಗ ಕಲರ್‌ಫುಲ್. ಒಂದಕ್ಕಿಂತ ಒಂದು ಭಿನ್ನವೆಂಬಂತೆ ಪ್ರತೀ ಮಾಲ್‌ಗಳು ವಿಶಿಷ್ಟವಾಗಿ ಅಲಂಕೃತಗೊಂಡಿವೆ. ಬಗೆಬಗೆಯ ಕ್ರಿಸ್ಮಸ್ ಟ್ರೀಗಳು ಹಬ್ಬಕ್ಕೆ ಮತ್ತಷು ಮೆರುಗನ್ನು ನೀಡುತ್ತಿವೆ. ಉಡುಗೊರೆಗಳನ್ನು ಹೊತ್ತು ಜನತೆಯತ್ತ ಮಂದಹಾಸ ಬೀರುವ ಸಾಂತಾಕ್ಲಾಸ್ ಗಳು ಕಿರಿಯ ರನ್ನು ರಂಜಿಸಿದರೆ, ಜೀವನದಲ್ಲಿ ಖುಷಿಯಿದ್ದರೆ ಎಲ್ಲವೂ ಸಾಧ್ಯ ಎಂಬ ಸಂದೇಶ ಹಿರಿಯರಿಗೆ. ಈ ರಸ್ತೆಯುದ್ದಕ್ಕೂ ಒಂದು ನಡಿಗೆ, ನಿಜಕ್ಕೂ ಬೆಳಕಿನಿಂದ ಮಿಂದೆದ್ದಷ್ಟು ಖುಷಿಯ ಅನುಭವ.  

ಇನ್ನೂ ಜನಸಂದಣಿಯ ಕಿರಿಕಿರಿಯೇ ಬೇಡಪ್ಪಾ ಅಂದುಕೊಂಡವರಿಗೆ  ಬಸ್ ಸವಾರಿಯ ವ್ಯವಸ್ಥೆಯೂ ಇಲ್ಲಿದೆ. ಆರ್ಚರ್ಡ್ ರಸ್ತೆಯ ಉದ್ದಕ್ಕೂ ತೆರೆದ ಟಾಪ್ ಡಬಲ್ ಡೆಕ್ಕರ್ ಬಸ್ ನಲ್ಲಿ ಪಯಣ, ಬೆಳಕಿನ ಲೋಕದಲ್ಲಿ ತೇಲಾಡಿದ ಅನುಭವ ನೀಡುವುದಂತೂ ಸುಳ್ಳಲ್ಲ. 3.11 ಕಿಮೀ ದೂರದ ಈ ಪಯಣದಲ್ಲಿ ಕ್ರಿಸ್ಮಸ್ ಹಬ್ಬದ ಸಡಗರವನ್ನು ಕಣ್ತುಂಬಿಕೊಳ್ಳಲು ಮತ್ತೊಂದು ಸುವರ್ಣ ಅವಕಾಶ. 

ಆರ್ಚರ್ಡ್ ರೋಡ್ ಬಳಿಕ ಹಬ್ಬದ ಸಂಭ್ರಮಾಚರಣೆಯನ್ನು ನೋಡಲು ಗಾರ್ಡನ್ಸ್ ಬೈ ದ ಬೇ ಎಂಬ ಸ್ಥಳಕ್ಕೆ ಭೇಟಿ ನೀಡಬೇಕು. ಇಲ್ಲಿನ "ಕ್ರಿಸ್ ಮಸ್  ವಂಡರ್‌ಲ್ಯಾಂಡ್" ಮಿಸ್ ಮಾಡುವ ಹಾಗೆಯೇ ಇಲ್ಲ. ಯುರೋಪ್‌ನ ಗೋಥಿಕ್ ಕ್ಯಾಥೆಡ್ರಲ್‌ಗಳು ಮತ್ತು ಚರ್ಚುಗಳಲ್ಲಿ ಕಂಡುಬರುವ ವೃತ್ತಾಕಾರದ ಗುಲಾಬಿ ಕಿಟಕಿಗಳಿಂದ ಸ್ಫೂರ್ತಿ ಪಡೆದ 20.5 ಮೀಟರ್ ಎತ್ತರದ ಸ್ಪಲಿಯೆರಾ ಸೇರಿದಂತೆ ಒಂಬತ್ತು ಅದ್ಭುತವಾದ ಬೆಳಕಿನ ಪ್ರದರ್ಶನಗಳು ಇಲ್ಲಿವೆ. 44 ಮೀಟರ್ ಉದ್ದದ  ವಾಕ್ ಆಫ್ ಸ್ಟಾರ್ಸ್  ಎಂಬ ಸುರಂಗ ಮಾರ್ಗ ಈ ಬಾರಿಯ ಹೈಲೈಟ್. ಸಾವಿರಾರು ಎಲ್ಇಡಿ ದೀಪಗಳಿಂದ ಇದು ಸುತ್ತುವರಿದಿದ್ದು ನೋಡುಗರ ಆಕರ್ಷಣೆಯ ಕೇಂದ್ರಬಿಂದು. ಸುಮಾರು 1,00,000 ಎಲ್‌ಇಡಿ ದೀಪಗಳಿಂದ ಕಂಗೊಳಿಸುವ 30 ಮೀ ಉದ್ದದ ಸೇತುವೆ  ಹಾಗೂ  7.7 ಮೀ ಎತ್ತರದ ಗೋಡೆ ಗಳ ಸೌಂದರ್ಯ   ನಯನ ಮನೋಹರವಾಗಿದೆ.

ಇನ್ನೂ ಹಬ್ಬದ ಪ್ರಯುಕ್ತ ವಿಶೇಷ ಅಲಂಕಾರಗಳಿಂದ ಕಂಗೊಳಿಸುವಲ್ಲಿ ಚಾಂಗಿ ವಿಮಾನ ನಿಲ್ದಾಣವು ಹೊರತಾಗಿಲ್ಲ. ಕೊರೋನ ಭೀತಿ ನಡುವೆಯೂ ಇಲ್ಲಿ ಹಲವು ಆಕರ್ಷಣೆಗಳನ್ನು ಸಾರ್ವಜನಿಕ ಪ್ರದರ್ಶನಕ್ಕಿಡಲಾಗಿದೆ. ಸಾಮಾನ್ಯವಾಗಿ ಡಿಸೆಂಬರ್ ಶಾಲಾ ರಜಾದಿನಗಳಲ್ಲಿ ಚಾಂಗಿ ಯಾವತ್ತೂ ಪ್ರವಾಸಿ ಕೇಂದ್ರವಾಗಿ ಮಾರ್ಪಾಟುಗೊಂಡಿರುತ್ತದೆ. ಆದರೆ ಕೊರೋನ ಬಳಿಕ ಎಲ್ಲವೂ ಸ್ಥಗಿತಗೊಂಡಿತ್ತು. ಈ ಬಾರಿ ಕೊರೋನ ಲಸಿಕೆ ಪಡೆದವರಿಗೆ ಅವಕಾಶ ಹಾಗೂ ಕೆಲ ನಿಯಮಗಳೊಂದಿಗೆ ಮನೋರಂಜನೆಗಳಿಗೆ ಚಾಲನೆ ನೀಡಲಾಗಿದೆ. 

ಈ ನಡುವೆ, ಸಿಂಗಾಪುರದಿಂದ ಭಾರತಕ್ಕೆ ವಿಮಾನಗಳ ಓಡಾಟ ಆರಂಭವಾಗಿದೆ. ವ್ಯಾಕ್ಸಿನೇಟೆಡ್ ಲೇನ್ ನಲ್ಲಿ ಬಹಳಷ್ಟು ಮಂದಿ ತೆರಳಿದ್ದಾರೆ. ಕೊರೋನ ಆರಂಭವಾದ ಬಳಿಕ ತುರ್ತು ಸಂದರ್ಭ ಹೊರತು ಪಡಿಸಿ ಇದೇ ಮೊದಲ ಬಾರಿಗೆ ಸ್ವದೇಶಕ್ಕೆ ತೆರಳಲು ಅವಕಾಶ ದೊರೆತಿರುವುದು ಸಂತಸದ ವಿಚಾರ. ಸದ್ಯಕ್ಕೆ ಪಯಣವನ್ನು ಮುಂದೂಡಿರುವ ಮಂದಿ ವಿದೇಶದಲ್ಲೇ ಹಬ್ಬವನ್ನು ಆಚರಿಸುತ್ತಾ ಹೊಸವರ್ಷಾಚರಣೆಗೆ ಯೋಜನೆಗಳನ್ನು ರೂಪಿಸುತ್ತಿದ್ದಾರೆ.

ಇನ್ನುಳಿದಂತೆ ನಗರದ ಯೂನಿವರ್ಸಲ್ ಸ್ಟೂಡಿಯೋ, ಸೀ ಅಕ್ವೇರಿಯಂ, ನೈಟ್ ಸಫಾರಿ, ಹಾಗೂ ಸಮುದಾಯ ಭವನಗಳಲ್ಲಿ ಕೊರೋನ ನಿಯಮ ಮೀರ ದೆ ಕಾರ್ಯಕ್ರಮಗಳು ನಡೆಯುತ್ತಿವೆ. ಮಕ್ಕಳು ಹಾಗೂ ಹಿರಿಯರನ್ನು ಹೊಂದಿರುವ ಮಂದಿ ಮನೆಯಲ್ಲೇ ಹಬ್ಬವನ್ನು ಆಚರಿಸಿದರೆ, ಯುವ ಜನರು ಹೊರಗಡೆ ಸುತ್ತಾಡುತ್ತಾ ವಿಶೇಷ ಭೋಜನಗಳನ್ನು ಸವಿಯುತ್ತಾ ಹಬ್ಬದಲ್ಲಿ ನಿರತರಾಗಿದ್ದಾರೆ.

ವಿದೇಶಿ ಪ್ರವಾಸ ಸುರಕ್ಷಿತವಲ್ಲದ ಈ ದಿನಗಳಲ್ಲಿ ಹಲವಾರು ಮಂದಿ ಸಿಂಗಾಪುರದ ಹೋಟೆಲ್ ಗಳಲ್ಲೇ ಒಂದೆರಡು ದಿನಗಳನ್ನು ಕಳೆದರೆ, ಸಮುದ್ರ ನೋಡ ಬಯಸುವವರಿಗೆ ಹಡಗಿನಲ್ಲಿ ಸಂಚರಿಸುವ ಸೌಲಭ್ಯವೂ ಇಲ್ಲಿದೆ. ಸಿಂಗಾಪುರದ ಸುತ್ತ ಒಂದು ಸುತ್ತು ಹಾಕುವ ಈ ಹಡಗು, ಪಯಣಿಗರನ್ನು ವಿಶೇಷ ರೀತಿಯಲ್ಲಿ ಉಪಚರಿಸಲಿದೆ. ಕ್ರಿಸ್ಮಸ್ ಹಬ್ಬ ಹಾಗೂ ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಹಡಗಿನಲ್ಲಿ ವೈವಿಧ್ಯ ಪ್ರದರ್ಶನಗಳನ್ನು ಆಯೋಜಿಸಲಾಗುತ್ತದೆ. ಹೀಗೆ ನಗರದಾದ್ಯಂತ ಡಿಸೆಂಬರ್ ತಿಂಗಳಲ್ಲಿ ಆರಂಭವಾಗುವ ವಿಭಿನ್ನ ಕಾರ್ಯಕ್ರಮಗಳು ಹೊಸ ವರ್ಷದವರೆಗೂ ಮುಂದುವರಿಯಲಿದೆ. 

ಹೊಸ ವರ್ಷಾಚರಣೆಯ ಹಿನ್ನಲೆಯಲ್ಲಿ ಕೊರೋನಾ ಪೂರ್ವದಲ್ಲಿ ನಡೆಯುತ್ತಿದ್ದ ಸಿಡಿಮದ್ದು ಪ್ರದರ್ಶನ ಈ ಬಾರಿ ರದ್ದು ಮಾಡಲಾಗಿದೆ. ಹೆಚ್ಚು ಜನ ಸೇರುವ ಹಿನ್ನಲೆಯಲ್ಲಿ ಇದನ್ನು ಕೈಬಿಡಲಾಗಿದೆ. ಇದರ ಬದಲಾಗಿ ಇಲ್ಲಿನ ಮರೈನ ಬೇ ನಲ್ಲಿ ಎರಡು ವಿಭಿನ್ನ ಮಾದರಿಯ ಲೈಟ್ ಶೋ ಗಳನ್ನು ಏರ್ಪಡಿಸಲಾಗಿದೆ. ಇದಲ್ಲದೆ ಪ್ರಮುಖ ಪ್ರವಾಸಿ ಕೇಂದ್ರಗಳಲ್ಲಿ, ರೆಸ್ಟೋರೆಂಟ್‌ಗಳಲ್ಲಿ ಕೋವಿಡ್ ನಿಯಮದ ಜೊತೆಗೆ ಸಣ್ಣ ಮಟ್ಟದಲ್ಲಿ ನ್ಯೂ ಈಯರ್ ಕೌಂಟ್ ಡೌನ್  ಹಾಗೂ  ಆಚರಣೆಗಳು ನಡೆಯಲಿವೆ. 

ಸಿಂಗಾಪುರದಲ್ಲಿ ಕೊರೋನವನ್ನು ಹತೋಟಿ ತರುವ ನಿಟ್ಟಿನಲ್ಲಿ ಸರ್ಕಾರದ ನಿಯಮಗಳು ಈಗಲೂ ಕಟ್ಟುನಿಟ್ಟಾಗಿ ಜಾರಿಯಾಗುತ್ತಿವೆ. ಮನೆಯಿಂದ ಹೊರಹೋಗುವ ವೇಳೆ ಮಾಸ್ಕ್ ಕಡ್ಡಾಯ. ದಿನವೊಂದಕ್ಕೆ ಮನೆಗೆ ೫ ಮಂದಿಗಷ್ಟೇ ಅವಕಾಶ. ಹೊರಗಡೆ ಗುಂಪು ಸೇರುವುದಾದರೂ ೫ ಮಂದಿ ಹಾಗೂ ಕೋವಿಡ್ ಲಸಿಕೆ ಪಡೆದವರಾಗಿರಬೇಕು. ಸಾರ್ವಜನಿಕ ಸಮಾರಂಭಗಳಲ್ಲಿ ಭಾಗವಹಿಸುವುದಾದರೂ ಮಾಸ್ಕ್, ಲಸಿಕೆ ಪಡೆದ ಪ್ರಮಾಣ ಪತ್ರ ಇದ್ದರಷ್ಟೇ ಪ್ರವೇಶ. ಒಟ್ಟಾರೆ ಕ್ರಿಸ್ಮಸ್ ಹಬ್ಬ ಹಾಗೂ  ಹೊಸವರ್ಷಾಚರಣೆಯು ಇವೆಲ್ಲಾ ನಿಯಮಗಳನ್ನು ಪಾಲಿಸುತ್ತಾ ಸೀಮಿತ ಸಂಖ್ಯೆಯಲ್ಲಿ ಜನ ಸೇರುವ ಮೂಲಕ ನಡೆಯಲಿದೆ.  

- ಕೆಎಸ್ ಶ್ರೀವಿದ್ಯಾ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com