ಹಿಂದೂ ಮಹಿಳಾ ಪ್ರೊಫೆಸರ್ ಅಂತಿಮ ಕ್ರಿಯೆ ನೆರವೇರಿಸಿದ ಸಂಸದ ಸೈಯ್ಯದ್ ನಾಸೀರ್ ಹುಸೇನ್!

ಕೊರೋನಾದಿಂದ ಮೃತಪಟ್ಟ ಬ್ರಾಹ್ಮಣ ಮಹಿಳೆಯ ಅಂತಿಮ ವಿಧಿವಿಧಾನವನ್ನು ಮುಸ್ಲಿಂ ಸಂಸದರೊಬ್ಬರು ನೆರವೇರಿಸಿದ್ದಾರೆ.
ಅಸ್ಥಿ ವಿಸರ್ಜನೆ ಮಾಡುತ್ತಿರುವ ಸಂಸದ
ಅಸ್ಥಿ ವಿಸರ್ಜನೆ ಮಾಡುತ್ತಿರುವ ಸಂಸದ

ಬೆಂಗಳೂರು: ಕೊರೋನಾದಿಂದ ಮೃತಪಟ್ಟ ಬ್ರಾಹ್ಮಣ ಮಹಿಳೆಯ ಅಂತಿಮ ವಿಧಿವಿಧಾನವನ್ನು ಮುಸ್ಲಿಂ ಸಂಸದರೊಬ್ಬರು ನೆರವೇರಿಸಿದ್ದಾರೆ. ವಿಧಿ ವಿಧಾನ ನಡೆಸಲು ಯಾರು ಇಲ್ಲದ ಕಾರಣಕ್ಕೆ ಸಂಸದ ನಾಸೀರ್ ಹುಸೇನ್ ಜವಾಬ್ದಾರಿಯನ್ನು ತಾವೇ ಹೊತ್ತುಕೊಂಡಿದ್ದಾರೆ.

ಕೊರೊನಾ ಅಲೆಯ ವೇಳೆ ಹಿಂದೂ-ಮುಸ್ಲಿಂ ಸಾಮರಸ್ಯದ ಬಗ್ಗೆ ಹಲವಾರು ಸುದ್ದಿಗಳನ್ನು ಕೇಳಿರುತ್ತೇವೆ. ಅದರಲ್ಲೂ, ಎರಡನೇ ಅಲೆಯ ಸಂದರ್ಭದಲ್ಲಿ ಅದೆಷ್ಟೋ ಹಿಂದೂ ಶವಗಳ ಅಂತಿಮಕ್ರಿಯೆಯನ್ನು ಮುಸ್ಲಿಮರು ಮಾಡಿರುವುದನ್ನು ಓದಿದ್ದೇವೆ. ಅಂತದ್ದೇ ಒಂದು ಮಾನವೀಯತೆಯ ಕೆಲಸವನ್ನು ರಾಜ್ಯಸಭಾ ಸದಸ್ಯ ಡಾ. ಸಯ್ಯದ್ ನಾಸೀರ್ ಹುಸೇನ್ ಮಾಡಿದ್ದಾರೆ. 

ಅಸ್ಥಿ ವಿಸರ್ಜನೆ ಸೇರಿದಂತೆ ಹಿಂದೂ ಸಂಪ್ರದಾಯದ ಪ್ರಕಾರ ಪ್ರೊ. ಸಾವಿತ್ರಿ ವಿಶ್ವನಾಥನ್ ಅವರ ಅಂತಿಮ ಕ್ರಿಯೆಯನ್ನು ನಾಸಿರ್ ಹುಸೇನ್ ನೆರವೇರಿಸಿದ್ದಾರೆ. ಸಾವಿತ್ರಿ ವಿಶ್ವನಾಥನ್ ಅವರು ದೆಹಲಿ ವಿಶ್ವವಿದ್ಯಾಲಯದ  ಜಪಾನಿ ಅಧ್ಯಯನ ಪೀಠದ ನಿವೃತ್ತ ಪ್ರಾಧ್ಯಾಪಕಿಯಾಗಿದ್ದರು. ನಿವೃತ್ತಿಯ ಬಳಿಕ ಬೆಂಗಳೂರಿನ ತನ್ನ ಸಹೋದರಿ ಅತ್ರೇಯ ಜೊತೆಗೆ ಸಾವಿತ್ರಿ ವಾಸವಾಗಿದ್ದರು. 

ಅಕ್ಕ, ತಂಗಿ ಇಬ್ಬರಿಗೂ ಕೊರೋನಾ ಸೋಂಕು ತಗುಲಿದ್ದರಿಂದ ಆಸ್ಪತ್ರೆಗೆ ಇಬ್ಬರೂ ದಾಖಲಾಗಿದ್ದರು. ಆದರೆ, ಸಾವಿತ್ರಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು. ಅತ್ರೇಯ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸಂಬಂಧಿಕರೆಲ್ಲರೂ ದೂರದ ಊರಿನಲ್ಲಿ ಇದ್ದಿದ್ದರಿಂದ, ಯಾರಿಗೂ ಬೆಂಗಳೂರಿಗೆ ಬರಲು ಸಾಧ್ಯವಾಗಿರಲಿಲ್ಲ. ಹಾಗಾಗಿ, ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಅವರ ಎಲ್ಲಾ ಕ್ರಿಯೆಗಳನ್ನು ನಡೆಸಿ, ಕಾವೇರಿ ನದಿಯಲ್ಲಿ ಅಸ್ಥಿ ವಿಸರ್ಜನೆಯನ್ನೂ ಮಾಡಿದ್ದಾರೆ. ನಾಸೀರ್ ಹುಸೇನ್ ಅವರ ಈ ಕೆಲಸಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಮೇ 18 ರಂದು ಮೈಸೂರಿನಲ್ಲಿ ಕಾವೇರಿ ನದಿಯಲ್ಲಿ ಅಸ್ಥಿ ವಿಸರ್ಜನೆ ಮಾಡಿದ್ದಾರೆ. ಅಂತಿಮ ಕಾರ್ಯ ಮಾಡಲೇಬೇಕಾದ ಕಾರಣಕ್ಕೆ ಧರ್ಮ ಸಹಿಷ್ಣುತೆಯ ಪರಿಕಲ್ಪನೆಯಲ್ಲಿ ಅಸ್ಥಿ ವಿಸರ್ಜನೆ ಮಾಡಿದ್ದೇನೆ..ಬ್ರಾಹ್ಮಣ ಸಂಪ್ರದಾಯದ ಪ್ರಕಾರ ವಿಧಿ ವಿಧಾನಗಳನ್ನು ಮಾಡಿದ ತೃಪ್ತಿ ನನಗಿದೆ. ಅರ್ಚಕರು ಹೇಳಿದ ಹಾಗೆ ಪೂಜಾ ವಿಧಿ ವಿಧಾನ ಪೂರೈಸಿದ್ದೇನೆ, ತಮ್ಮ ಸ್ನೇಹಿತೆಗಾಗಿ ಈ ಕೆಲಸ ಮಾಡಿರುವುದು ನನಗೆ ಸಮಾಧಾನ ತಂದಿದೆ ಎಂದು ತಿಳಿಸಿದ್ದಾರೆ.

ಸಾವಿತ್ರಿ ವಿಶ್ವನಾಥನ್ ಚೈನೀಸ್ ಮತ್ತು ಜಪಾನೀಸ್ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿದ್ದರು. ಜಪಾನೀಸ್ ಭಾಷೆ ಮತ್ತು ಅಧ್ಯಯನಗಳಿಗೆ ಅಪಾರ ಕೊಡುಗೆ ನೀಡಿದ್ದ ಅವರು ಜಪಾನ್-ಇಂಡಿಯಾ ಎಮಿನೆಂಟ್ ಪರ್ಸನ್ಸ್ ಗ್ರೂಪ್‌ನ ಸದಸ್ಯರಾಗಿದ್ದರು. ತಮಿಳುನಾಡು ಮೂಲದ ಅವರು 25 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಬಂದು ನೆಲೆಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com