ಇವರು ಉತ್ತರ ಕರ್ನಾಟಕದ 'ಹೆಳವರು': ಕುಟುಂಬಗಳ ವಂಶವೃಕ್ಷದ ಕಥೆ ಹೇಳುವವರು...

ಈ ಅರೆ ಅಲೆಮಾರಿ ಬುಡಕಟ್ಟು ಜನಾಂಗದವರು ಮೇ ತಿಂಗಳಿನಿಂದ ಡಿಸೆಂಬರ್ ವರೆಗೆ ಉತ್ತರ ಕರ್ನಾಟಕದ ಪ್ರತಿ ಗ್ರಾಮಗಳಿಗೆ ಭೇಟಿ ನೀಡುತ್ತಾರೆ. ನವಜಾತ ಶಿಶುಗಳ, ವಲಸಿಗರ, ಕಾಣೆಯಾದವರ, ಹಿರಿಯ ನಾಗರಿಕರ, ಮರಣ ಹೊಂದಿದವರ ವಿವರಗಳನ್ನು ಪಡೆಯುತ್ತಾರೆ.
ಬಾಳಪ್ಪ ಹೆಳವರು ನಿರ್ವಹಿಸುತ್ತಿರುವ ದಾಖಲೆ ಪುಸ್ತಕ, ಹೆಳವರ ಗುಂಪು ಗದಗದಲ್ಲಿ
ಬಾಳಪ್ಪ ಹೆಳವರು ನಿರ್ವಹಿಸುತ್ತಿರುವ ದಾಖಲೆ ಪುಸ್ತಕ, ಹೆಳವರ ಗುಂಪು ಗದಗದಲ್ಲಿ
Updated on

ಗದಗ: ಅವರು ದಾಖಲೆಗಳನ್ನು ಭದ್ರವಾಗಿ ಇಟ್ಟುಕೊಳ್ಳುವವರು, ಹಿಂದಿನ ವಂಶಾವಳಿಯವರು, ಪ್ರಾಚೀನ ಕಾಲದ ಗೂಗಲ್ ಎನ್ನಬಹುದು, ಉತ್ತರ ಕರ್ನಾಟಕದ ಹಳ್ಳಿಯೊಂದರ ಪ್ರತಿ ಕುಟುಂಬದ ಪ್ರತಿ ವಂಶಾವಳಿಯ ಬಗ್ಗೆ ಇವರಲ್ಲಿ ಮಾಹಿತಿಯಿದೆ, ದಾಖಲೆಯಿದೆ. ಹೆಳವರು ಎಂಬ ಅರೆ ಅಲೆಮಾರಿ ಬುಡಕಟ್ಟಿನವರಾಗಿದ್ದು ಭವಿಷ್ಯ ಹೇಳುವವರು. 

ಗದಗ: ಈ ಅರೆ ಅಲೆಮಾರಿ ಬುಡಕಟ್ಟು ಜನಾಂಗದವರು ಮೇ ತಿಂಗಳಿನಿಂದ ಡಿಸೆಂಬರ್ ವರೆಗೆ ಉತ್ತರ ಕರ್ನಾಟಕದ ಪ್ರತಿ ಗ್ರಾಮಗಳಿಗೆ ಭೇಟಿ ನೀಡುತ್ತಾರೆ. ನವಜಾತ ಶಿಶುಗಳ, ವಲಸಿಗರ, ಕಾಣೆಯಾದವರ, ಹಿರಿಯ ನಾಗರಿಕರ, ಮರಣ ಹೊಂದಿದವರ ವಿವರಗಳನ್ನು ಪಡೆಯುತ್ತಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ಹೆಳವರು ದಾಖಲೆಗಳನ್ನು ತಾಮ್ರದ ಫಲಕಗಳಲ್ಲಿ ಇಟ್ಟುಕೊಂಡು ತಲೆತಲಾಂತರದವರೆಗೆ ಅದನ್ನು ಕಾಪಾಡಿಕೊಂಡು ಬರುತ್ತಿದ್ದರು. ಇಂದು ದಾಖಲೆಗಳನ್ನು ಇಟ್ಟುಕೊಳ್ಳಲು ದೊಡ್ಡ ಪುಸ್ತಕಗಳನ್ನು ಹೊಂದಿದ್ದಾರೆ. ಸಮಾಜದ ಆಗುಹೋಗುಗಳ ಬಗ್ಗೆ ಕೂಡ ಅವರಿಗೆ ಚೆನ್ನಾಗಿ ಅರಿವಿರುತ್ತದೆ.

ಹೆಳವರು ಎಂದರೆ ಕನ್ನಡದಲ್ಲಿ ವಿವರಣೆಕಾರರು ಎಂಬ ಅರ್ಥವಿದೆ. ಇವರನ್ನು ಪ್ರತಿ ಗ್ರಾಮಗಳಿಗೆ ಜನ ಬರಮಾಡಿಕೊಳ್ಳುತ್ತಾರೆ. ಗೌರವವಾಗಿ ಹಣ ಮತ್ತು ಬೆಳೆಗಳನ್ನು ನೀಡುತ್ತಾರೆ. ಇತ್ತೀಚೆಗೆ ಕೊರೋನಾ ಬಂದ ಮೇಲೆ ಹೆಳವರ ಪ್ರವಾಸ ಮತ್ತು ಆದಾಯ ನಿಂತುಹೋಗಿದೆ. ಇದೀಗ ಕೊರೋನಾ ಕಡಿಮೆಯಾಗಿ ಜನಜೀವನ ಸಹಜ ಸ್ಥಿತಿಗೆ ಬಂದ ನಂತರ ಹೆಳವರು ಮತ್ತೆ ತಮ್ಮ ಕಾಯಕಕ್ಕೆ ಇಳಿದಿದ್ದಾರೆ.

ಹಿಂದಿನ ಕಾಲದಲ್ಲಿ ಈ ಹೆಳವರಿಗೆ ಗೌರವಾರ್ಥವಾಗಿ ಗ್ರಾಮಸ್ಥರು ಹಸು, ಕುರಿ, ಸಣ್ಣ ಜಮೀನುಗಳನ್ನು ನೀಡುತ್ತಿದ್ದರಂತೆ. ಕಾಲ, ಪರಿಸ್ಥಿತಿ ಬದಲಾದಂತೆ ಗೌರವದ ಕಾಣಿಕೆಯಾಗಿ ಏನಾದರೂ ಬೆಳೆದಿರುವ ಬೆಳೆ ಅಥವಾ ಹಣ ನೀಡುತ್ತಾರೆ. ಇತ್ತೀಚೆಗೆ ಯುವ ಜನಾಂಗ ಈ ವೃತ್ತಿಗೆ ಹೋಗುವುದು ಕಡಿಮೆಯಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲ್ಲೂಕಿನ 60 ವರ್ಷದ ಬಾಲಪ್ಪ ಹೆಳವರು, ಗದಗ ಜಿಲ್ಲೆಯ 300ಕ್ಕೂ ಹೆಚ್ಚು ಕುಟುಂಬಗಳ ವಂಶವೃಕ್ಷದ ಬಗ್ಗೆ ಮಾತನಾಡುತ್ತಾರೆ. ಗದಗ ಪಟ್ಟಣಕ್ಕೆ ಮತ್ತು ಕೆಲವು ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡುವ ಬಾಳಪ್ಪನವರಿಗೆ ಬೇರೆ ಯಾವ ಕೆಲಸವೂ ಗೊತ್ತಿಲ್ಲವಂತೆ. ತಮ್ಮ ಬಾಲ್ಯದಿಂದಲೇ ಇದೊಂದೇ ಕೆಲಸವನ್ನು ಅವರು ಮಾಡಿಕೊಂಡು ಬರುತ್ತಿದ್ದಾರೆ. ವರ್ಷದ ಬೇರೆ ತಿಂಗಳಲ್ಲಿ ಬೆಳಗಾವಿ ಜಿಲ್ಲೆಯ ಗ್ರಾಮಗಳಿಗೆ ಸಹ ಹೋಗುತ್ತಾರೆ. 

ನನ್ನದೊಂದು ಸಣ್ಣ ಕುಟುಂಬ, ನನ್ನ ಕೆಲಸಕ್ಕೆ ನನ್ನ ಮಗ ಸಹಾಯ ಮಾಡುತ್ತಾನೆ. ಇದೇ ಉದ್ಯೋಗದಲ್ಲಿ ನಾನು ಮುಂದುವರಿಯುತ್ತೇನೆ. ಕಳೆದ ಒಂದೂವರೆ ವರ್ಷದಿಂದ ನಮಗೆ ಆದಾಯವಿರಲಿಲ್ಲ. ಮನೆಯಲ್ಲಿ ಸುಮ್ಮನೆ ಕುಳಿತಿದ್ದೆ. ಸರ್ಕಾರ ಪಡಿತರ ಚೀಟಿ ಮೂಲಕ ರೇಷನ್ ಕೊಡುತ್ತದೆ, ಅದರಲ್ಲಿ ಬದುಕು ಸಾಗಿಸಿದೆವು. ದಾಖಲೆಗಳ ಸಂಗ್ರಹಕ್ಕೆ ಇನ್ನು ಹಲವು ಮನೆಗಳಿಗೆ ಹೋಗಬೇಕು. ಈ ವರ್ಷ ಕೊರೋನಾ ಲಾಕ್ ಡೌನ್ ನಿಂದಾಗಿ ವಿಳಂಬವಾಯಿತು ಎಂದು ಬಾಳಪ್ಪ ಹೇಳುತ್ತಾರೆ. 

ನಮ್ಮ ಆದಾಯ ಸೀಮಿತವಾದದ್ದು. ತಿಂಗಳಿಗೆ 6ರಿಂದ 8 ಸಾವಿರ ರೂಪಾಯಿ ಆದಾಯವಿದೆ. ಗ್ರಾಮೀಣ ಮತ್ತು ನಗರ ಪ್ರದೇಶ ಎರಡೂ ಕಡೆ ಹೋಗಬೇಕು. ಇಷ್ಟೇ ಕೊಡಿ ಎಂದು ಕೇಳುವುದಿಲ್ಲ. ಜನರಿಗೆ ಅವರ ವಂಶವೃಕ್ಷದ ಬಗ್ಗೆ ಮಾಹಿತಿ ನೀಡುತ್ತೇವೆ. ಗದಗ ಜಿಲ್ಲೆಯೊಂದರಲ್ಲಿಯೇ ನಮಗೆ 300ಕ್ಕೂ ಹೆಚ್ಚು ಕುಟುಂಬಗಳ ವಂಶವೃಕ್ಷ ದಾಖಲೆ ಸಂಗ್ರಹಿಸುವುದಕ್ಕೆ ನಮ್ಮ ಪೂರ್ವಜರು ತಿಳಿಸಿದ್ದಾರೆ. ಒಮ್ಮೆ ಕುಟುಂಬವೊಂದಕ್ಕೆ ಭೇಟಿ ನೀಡಿದ ನಂತರ ಮತ್ತೆ ಹೋಗಲು 3 ವರ್ಷ ಹಿಡಿಯುತ್ತದೆ. ನಾನು 10ನೇ ತರಗತಿ ಪಾಸ್ ಮಾಡಿದ್ದೇನಷ್ಟೆ. ನಂತರ ಶಾಲೆ ತೊರೆದು ಈ ಕೆಲಸಕ್ಕೆ ಇಳಿದೆ ಎನ್ನುತ್ತಾರೆ.

ರಾಜೀವ್ ಗಾಂಧಿ ನಗರದ ಸಾಗರ್ ಭಜಂತ್ರಿ, ಹೆಳವರು ಎರಡು ಅಥವಾ ಮೂರು ವರ್ಷಕ್ಕೊಮ್ಮೆ ನಮ್ಮ ಕುಟುಂಬಕ್ಕೆ ಭೇಟಿ ನೀಡುತ್ತಾರೆ. ಅವರು ನಮ್ಮ ಪೂರ್ವಜರ ಮತ್ತು ಇತರ ಕುಟುಂಬದ ಸದಸ್ಯರ ಹೆಸರನ್ನು ಹೇಳುತ್ತಾರೆ. ಇದು ಬಹಳ ರೋಮಾಂಚಕಾರಿ ಸಮಯ, ಮತ್ತು ನಮ್ಮ ಪೂರ್ವಜರ ಕೆಲಸ, ವೃತ್ತಿ, ಒಳ್ಳೆಯ ಕಾರ್ಯಗಳು ಮತ್ತು ತಮಾಷೆಯ ಘಟನೆಗಳ ಕಥೆಗಳನ್ನು ಕೇಳಲು ನಾವು ಇಷ್ಟಪಡುತ್ತೇವೆ. ಅವರು ತಮ್ಮ ತಲೆಮಾರುಗಳು ಹೇಗೆ ವಾಸಿಸುತ್ತಿದ್ದರು ಎಂಬುದರ ಸಂಪೂರ್ಣ ಚಿತ್ರವನ್ನು ನೀಡುತ್ತವೆ. ಈಗ, ನಮ್ಮ ಅಜ್ಜ, ಮುತ್ತಜ್ಜ, ಮುತ್ತಜ್ಜರ ಹೆಸರುಗಳು ಮತ್ತು ಅವರ ವಿವರಗಳನ್ನು ನಾವು ತಿಳಿದಿದ್ದೇವೆ ಎನ್ನುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com