ಕೊಡವರ ವಂಶವೃಕ್ಷ ಜಾಲಾಡುವ ವೆಬ್ ಪೋರ್ಟಲ್ ಗೆ ಬುಕ್ ಆಫ್ ಇಂಡಿಯಾ ದಾಖಲೆಯ ಗರಿ

ಈ ಪೋರ್ಟಲ್ ಮುಖಾಂತರ ಕೊಡವರು ತಾವು ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅಥವ ಯಾವುದೇ ಕೊಡಗಿನ ಮಹನೀಯರಿಗೆ, ಸೆಲಬ್ರಿಟಿಗಳಿಗೆ ಹೇಗೆ ಸಂಬಂಧಿಗಳು ಎಂದು ತಿಳಿದುಕೊಳ್ಳುವ ಪ್ರಯತ್ನವನ್ನೂ ಮಾಡಬಹುದು.
ಕಿಶೂ ಉತ್ತಪ್ಪ
ಕಿಶೂ ಉತ್ತಪ್ಪ

ಮಡಿಕೇರಿ: ಕೊಡವರ ಮನೆತನಗಳ ಮೂಲಗಳನ್ನು ದಾಖಲಿಸಿ ಅವುಗಳನ್ನು ಒಂದುಗೂಡಿಸುವ ಉದ್ದೇಶದಿಂದ ಶುರುಮಾಡಿದ್ದ ವಂಶವೃಕ್ಷ (ಫ್ಯಾಮಿಲಿ ಟ್ರೀ) ರೂಪಿಸುವ ಜಾಲತಾಣ 'KodavaClan.co' ಇಂದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ದಾಖಲೆಗೆ ಪಾತ್ರವಾಗಿದೆ. ಈ ಸುಂದರ ಪರಿಕಲ್ಪನೆ ಕೊಡಗಿನವರಾದ ಕಿಶೂ ಉತ್ತಪ್ಪ ಅವರದು. 5 ವರ್ಷಗಳ ಹಿಂದೆ ಅವರು ಈ ಜಾಲತಾಣವನ್ನು ಶುರುಮಾಡಿದ್ದರು. ಇಂದು 16,000 ಮಂದಿ ಕೊಡವರ ಕುಟುಂಬ ಮೂಲಗಳ ದಾಖಲೆ, ವಂಶವೃಕ್ಷ ಈ ತಾಣದಲ್ಲಿ ಸಂಗ್ರಹವಾಗಿದೆ. 

'ಎಲ್ಲಾ ಕೊಡವರೂ ಸಂಬಂಧಿಕರೇ. ಹೀಗಾಗಿ ಎಲ್ಲರ ಕುಟುಂಬಗಳು, ಮನೆತನಗಳ ಮೂಲವನ್ನು ಶೋಧಿಸುತ್ತಾ ಪ್ರತಿ ಕೊಡವ ಕುಟುಂಬಗಳನ್ನು ಒಂದುಗೂಡಿಸುವ ಉದ್ದೇಶದಿಂದ ಈ ಪೋರ್ಟಲ್ ಶುರುಮಾಡಿದೆ. ಕುಟುಂಬಗಳ ಹಿರಿಯರನ್ನು ಮಾತನಾಡಿಸಿ ಮಾಹಿತಿ ಸಂಗ್ರಹಿಸಿದೆ' ಎನ್ನುತ್ತಾರೆ ಕಿಶೂ ಉತ್ತಪ್ಪ. 

ಯಾವುದೇ ಇಬ್ಬರು ಕೊಡವರು ಮೊದಲು ಭೇಟಿಯಾದಾಗ ಮೊದಲು ಕೇಳುವ ಪ್ರಶ್ನೆ 'ನೀವು ಯಾವ ಕುಟುಂಬದವರು ಎಂದು'. ಕುಟುಂಬದ ಹೆಸರು ತಿಳಿದುಕೊಂಡ ನಂತರ ಅವರು ಒಬ್ಬರಿಗೊಬ್ಬರು ಯಾವ ರೀತಿ ಹತ್ತಿರದವರು ಎಂಡು ಲೆಕ್ಕಾಚಾರ ಮಾಡುವುದು ಮುಂದಿನ ಹಂತ. ಈ ಕೆಲಸವನ್ನು ಕಿಶೂ ಉತ್ತಪ್ಪ ಅವರ ಪೋರ್ಟಲ್ ಸಮರ್ಥವಾಗಿ ಮತ್ತು ಸುಲಭವಾಗಿ ಮಾಡುತ್ತದೆ. 

ಕೆಲವೊಂದು ಕುಟುಂಬಗಳ ನಡುವೆ 14 ತಲೆಮಾರುಗಳ ಅಂದರೆ 16ನೇ ಶತಮಾನದಷ್ಟು ಹಿಂದಿನ ಸಂಬಂಧವನ್ನು ಪತ್ತೆಮಾಡಿ ಒಂದುಗೂಡಿಸಿರುವ ನಿದರ್ಶನವೂ ಇದೆ ಎಂದು ಕಿಶೂ ಉತ್ತಪ್ಪ ಮಾಹಿತಿ ನೀಡಿದ್ದಾರೆ. ಈ ಪೋರ್ಟಲ್ ಮುಖಾಂತರ ಕೊಡವರು ತಾವು ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅಥವ ಯಾವುದೇ ಕೊಡಗಿನ ಮಹನೀಯರಿಗೆ, ಸೆಲಬ್ರಿಟಿಗಳಿಗೆ ಹೇಗೆ ಸಂಬಂಧಿಗಳು ಎನ್ನುವುದನ್ನೂ ತಿಳಿದುಕೊಳ್ಳಬಹುದು.  

ಇಂದಿನ ಯುವ ಕೊಡವ ಪೀಳಿಗೆಯವರು ತಮ್ಮ ಕುಟುಂಬದ ಹಿನ್ನೆಲೆಯನ್ನು, ಹಿರಿಮೆಯನ್ನು ತಿಳಿದುಕೊಳ್ಳುವ ಸಲುವಾಗಿ ಪೋರ್ಟಲ್ ಚಂದಾದಾರರಾಗುತ್ತಿದ್ದಾರೆ ಎನ್ನುವ ಸಂಗತಿಯನ್ನು ಸಂತಸದಿಂದ ಕಿಶೂ ಹೇಳಿಕೊಳ್ಳುತ್ತಾರೆ. ಭಾರತದಲ್ಲೇ ಅತಿ ಹೆಚ್ಚು ಮಂದಿಯ ವಂಶವೃಕ್ಷ ಪಟ್ಟಿಯನ್ನು ಹೊಂದಿರುವ ಜಾಲತಾಣ ಎನ್ನುವ ಶ್ರೇಯಕ್ಕೆ ಈ ತಾಣ ಪಾತ್ರವಾಗಿದೆ. ಸದ್ಯ 15,976 ಮಂದಿ ಕೊಡವರ ವಂಶವೃಕ್ಷವನ್ನು ಈ ಜಾಲತಾಣ ಶೋಧಿಸಿದೆ.

ಕಿಶೂ ಅವರ ಪೂರ್ಣ ಹೆಸರು ಗುಮ್ಮತ್ತಿರ ಕಿಶೂ ಉತ್ತಪ್ಪ. ವೃತ್ತಿಯಲ್ಲಿ ಸಿವಿಲ್ ಎಂಜಿನಿಯರ್ ಆಗಿರುವ ಅವರು ಉದ್ಯಮಿಯೂ ಹೌದು. ಮಂಗಳೂರು ಯೂನಿವರ್ಸಿಟಿಯಿಂದ ಅವರು ಪದವಿ ಪಡೆದಿರುವ ಕಿಶೂ ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com