ಮೈಸೂರು: ಶಿಥಿಲ ದೇವಾಲಯಗಳು, ಕೆರೆಗಳ ಪುನಶ್ಚೇತನ ಕಾರ್ಯವೇ ಈ ಸ್ವಯಂ ಸೇವಕರ ಧ್ಯೇಯ!

ಮೈಸೂರಿನ ಯುವ ಸ್ವಯಂ ಸೇವಕರ ಗುಂಪೊಂದು ಮುಂದಿನ ಪೀಳಿಗೆಗೆ ಇತಿಹಾಸವನ್ನು ಪರಿಚಯಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದೆ.
ಜಕ್ಕನಹಳ್ಳಿ ಕೆರೆ ಪುನಶ್ಚೇತನ ಕಾರ್ಯದಲ್ಲಿ ಸ್ವಯಂ ಸೇವಕರು
ಜಕ್ಕನಹಳ್ಳಿ ಕೆರೆ ಪುನಶ್ಚೇತನ ಕಾರ್ಯದಲ್ಲಿ ಸ್ವಯಂ ಸೇವಕರು

ಮೈಸೂರು: ಮೈಸೂರಿನ ಯುವ ಸ್ವಯಂ ಸೇವಕರ ಗುಂಪೊಂದು ಮುಂದಿನ ಪೀಳಿಗೆಗೆ ಇತಿಹಾಸವನ್ನು ಪರಿಚಯಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದೆ. ನೂರಾರು ರಾಷ್ಟ್ರೀಯ ಸೇವಾ ಯೋಜನೆ -ಎನ್ ಎಸ್ ಎಸ್ ಸ್ವಯಂ ಸೇವಕರು, ವಿದ್ಯಾರ್ಥಿಗಳು, ನಾಗರಿಕ ಸೇವಾ ಮತ್ತು ಸ್ಪರ್ಧಾತ್ಮಕ ಪರೀಕ್ಷೆ ಆಕಾಂಕ್ಷಿಗಳು ಮೈಸೂರು ಹಾಗೂ ಮಂಡ್ಯ ಸುತ್ತಮುತ್ತ ನಿರ್ಲಕ್ಷ್ಯಕ್ಕೊಳಗಾಗಿ ಶಿಥಿಲಗೊಂಡಿರುವ ಕೆರೆಗಳು, ಕಲ್ಯಾಣಿಗಳು, ಪುರಾತನ ದೇವಾಲಯಗಳು ಮತ್ತಿತರ ಮಂಟಪಗಳನ್ನು ಪುನಶ್ಚೇತನಗೊಳಿಸುವ ಕಾರ್ಯವನ್ನು ಮಾಡುತ್ತಿದೆ.

ಮೈಸೂರಿನ ಶೇಷಾದ್ರಿಪುರಂ ಡಿಗ್ರಿ ಕಾಲೇಜ್ ಮತ್ತು ಶ್ರೀರಂಗಪಟ್ಟಣದ ಅಚಿವರ್ಸ್ ಅಕಾಡೆಮಿಯ ಸ್ವಯಂ ಸೇವಕರು ಗುಂಪು( ಉಚಿತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ)  ಕಳೆದ ನಾಲ್ಕು ವರ್ಷಗಳಲ್ಲಿ ಶಿಥಿಲಗೊಂಡಿದ್ದ ಕನಿಷ್ಠ 10 ಕಲ್ಯಾಣಿಗಳು, ನಾಲ್ಕು ಕೆರೆ ಮತ್ತು ಅನೇಕ ದೇವಾಲಯಗಳನ್ನು  ಪುನರುಜ್ಜೀವನಗೊಳಿಸಿದೆ.

ಶ್ರೇಷಾದ್ರಿಪುರಂ ಡಿಗ್ರಿ ಕಾಲೇಜ್ ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿ ಡಾ. ರಾಘವೇಂದ್ರ ಅವರ ನಾಯಕತ್ವದಡಿ ಎನ್ ಎಸ್ ಎಸ್ ಕಾರ್ಯಕ್ರಮದ ಭಾಗವಾಗಿ ಆರಂಭವಾದ ಈ ಕಾರ್ಯಕ್ರಮದಲ್ಲಿ ಇದೀಗ ಸುಮಾರು 300 ಯುವ ಸ್ವಯಂ ಸೇವಕರಿದ್ದು, ಪುರಾತನ ಕಾಲದ ಸ್ಮಾರಕಗಳನ್ನು ಸಂರಕ್ಷಿಸಲು ಬೆವರು ಹರಿಸುತ್ತಿದ್ದಾರೆ. 

ಶಿಥಿಲಗೊಂಡಿರುವ ದೇವಾಲಯಗಳ ಮಾಹಿತಿ ದೊರತೆ ತಕ್ಷಣ ರಾಘವೇಂದ್ರ ಸ್ಥಳಕ್ಕೆ ಭೇಟಿ ನೀಡಿ, ಮೊದಲಿಗೆ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸುತ್ತಾರೆ. ನಂತರ ಸಂಬಂಧಿತ ಅಧಿಕಾರಿಗಳಿಗೆ ಅನುಮತಿ ಪಡೆಯುತ್ತಾರೆ. ಅಕಾಡೆಮಿ ಹಾಗೂ ಅಚಿವರ್ಸ್ ಅಕಾಡೆಮಿ ಸದಸ್ಯರು ಮತ್ತು ವಿದ್ಯಾರ್ಥಿಗಳೊಂದಿಗೆ ಪುನಶ್ಚೇತ ಯೋಜನೆ ಕುರಿತು ಯೋಜನೆ ರೂಪಿಸುತ್ತಾರೆ. ನಂತರ ಅಗತ್ಯವಾದ ಸಲಕರಣೆಗಳೊಂದಿಗೆ ಕೆಲಸಕ್ಕಿಳಿಯುತ್ತಾರೆ. ಹಾವು, ಚೇಳುಗಳ ಅವಾಸ ಸ್ಥಾನವಾಗಿರುವ ಪಾಳು ಬಿದ್ದ ಜಾಗಗಳಲ್ಲಿಯೂ  ಯಾವುದೇ ಭಯದಿಂದ ಧೈರ್ಯದಿಂದ ಸ್ವಯಂ ಸೇವಕರು ಶ್ರಮದಾನ ಮಾಡುತ್ತಾರೆ. ಸ್ವಚ್ಛತೆ ಕಾರ್ಯ ಮುಗಿದ ನಂತರ ಸ್ವಯಂ ಸೇವಕರು ಹೊಸ ನೀರಿನಿಂದ ಕಲ್ಯಾಣಿಯನ್ನು ಭರ್ತಿ ಮಾಡುತ್ತಾರೆ ಮತ್ತು ಆಗಾಗ್ಗೆ ಭೇಟಿ ನೀಡುವ ಮೂಲಕ ಸೂಕ್ತ ನಿರ್ವಹಣೆ ಮಾಡುತ್ತಾರೆ.

ಸಮುದಾಯ ಸೇವೆ ಮೂಲಕ ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಾಸನಗೊಳಿಸುವುದು ಎನ್ ಎಸ್ ಎಸ್ ಉದ್ದೇಶವಾಗಿದೆ. ಆದ್ದರಿಂದಾಗಿ ನಮ್ಮ ಕಾಲೇಜಿನ ಎನ್ ಎಸ್ ಎಸ್ ಸ್ವಯಂಸೇವಕರನ್ನು ಕಲ್ಯಾಣಿಗಳನ್ನು ಸ್ವಚ್ಛಗೊಳಿಸಲು ನಿರ್ಧರಿಸಲಾಯಿತು. ನಮ್ಮ ಅಕಾಡೆಮಿಯ ವಿದ್ಯಾರ್ಥಿಗಳು ಇದರಲ್ಲಿ ಉತ್ಸಾಹದಿಂದ ಸ್ವಯಂ ಪ್ರೇರಿತರಾಗಿ ಪಾಲ್ಗೊಂಡಿರುವುದಾಗಿ ರಾಘವೇಂದ್ರ ಹೇಳಿದರು.

ಮೈಸೂರು ರಾಜರು ಹಾಗೂ ಟಿಪ್ಪು ಸುಲ್ತಾನ್ ಆಳ್ವಿಕೆಯಲ್ಲಿ ನಿರ್ಮಿಸಲಾಗಿದ್ದ ಬಹುತೇಕ ಕೆರೆಗಳು, ಟ್ಯಾಂಕ್ ಗಳು ಹಾಗೂ ದೇವಾಲಯಗಳ ಪುನಶ್ಚೇತನ ಕಾರ್ಯ ಕೈಗೊಳ್ಳಲಾಗಿದ್ದು, ಕಟ್ಟಡಗಳ ಅವಶೇಷಗಳು, ತ್ಯಾಜ್ಯವನ್ನು ವಿಲೇವಾರಿ ಮಾಡಲಾಗಿದೆ. ಈ ಕಲ್ಯಾಣಿಗಳಿಂದ ದೇವಾಲಯಕ್ಕೆ ನೀರನ್ನು ಆರ್ಚಕರು ಬಳಸಬಹುದಾಗಿದೆ. ಕಲ್ಯಾಣಿಗಳು ಪುನಶ್ಚೇತನ ಮಾತ್ರವಲ್ಲದೇ, ಐತಿಹಾಸಿಕ ಪ್ರಾಮುಖ್ಯತೆ ಬಗ್ಗೆಯೂ ಜನರಲ್ಲಿ ಅರಿವು ಮೂಡಿಸುತ್ತಿರುವುದಾಗಿ ಅವರು ತಿಳಿಸಿದರು.

ನದಿಯ ಮಧ್ಯದಲ್ಲಿದ್ದ ದೇವಾಲಯವೊಂದರ ಸ್ವಚ್ಛತೆ ಕಾರ್ಯ ಕಷ್ಟಕರವಾಗಿತ್ತು. ಆದರೆ, ಸ್ವಚ್ಛತಾ ಕಾರ್ಯ ಮುಗಿದ ಬಳಿಕ ಧನ್ಯತಾ ಭಾವ ಮೂಡಿತು. ಇದನ್ನು ಮುಂದಿನ ಪೀಳಿಗೆಗೆ ಪರಿಚಿಸುವುದಕ್ಕಾಗಿ ದೇವಾಲಯ ಪುನಶ್ಚೇತನಗೊಳಿಸದ ಆತ್ಮ ತೃಪ್ತಿಯಿದೆ. ಇಂತಹ ಅನೇಕ ಚಟುವಟಿಕೆಗಳನ್ನು ಮುಂದುವರೆಸುತ್ತೇನೆ ಎಂದು ಎನ್ ಎಸ್ ಎಸ್ ಕೆಡೆಟ್ ಯಶವಂತ್ ಹೇಳಿದರು.

ರಾಘವೇಂದ್ರ ಹಾಗೂ ಅವರ ಗುಂಪಿನ ಎನ್ ಎಸ್ ಎಸ್ ವಿದ್ಯಾರ್ಥಿಗಳ ಕೆಲಸ ನೋಡಿ ನಾನು ಕೂಡಾ ಅದರಲ್ಲಿ ತೊಡಗಿಸಿಕೊಂಡಿದ್ದೇನೆ. ಕೋವಿಡ್-19 ಸಾಂಕ್ರಾಮಿಕ ಸಂದರ್ಭದಲ್ಲಿಯೂ ಅವರೊಂದಿಗೆ ಕೆಲಸ ಮಾಡಿದ್ದೇನೆ, ಜನರ ಮನೆ ಬಾಗಿಲಿಗೆ ಹೋಗಿ ಸ್ವಚ್ಛತೆ ಕುರಿತಂತೆ ಅರಿವು ಮೂಡಿಸಲಾಗಿದೆ. ಕೋವಿಡ್ ಮಾರ್ಗಸೂಚಿ ಪಾಲಿಸುವಂತೆ ಜನರಿಗೆ ಶಿಕ್ಷಣ ನೀಡುವ ಮೂಲಕ ಕೋವಿಡ್ ಬಗ್ಗೆ ಅರಿವು ಮೂಡಿಸಲಾಯಿತು ಎಂದು ಪಿಎಸ್ ಐ ಆಕಾಂಕ್ಷಿ ನಿಸರ್ಗ ತಿಳಿಸಿದರು.

ಈ ತಂಡ ಪುನಶ್ಚೇತನಗೊಳಿಸಿರುವ ಕೆರೆಗಳು ಹಾಗೂ ಕಲ್ಯಾಣಿಗಳ ಪಟ್ಟಿ ಇಂತಿದೆ: ಜಕ್ಕನಹಳ್ಳಿ ಕೆರೆ, ದರಸನಗುಪ್ಪೆ ಶ್ರಿ ರಾಮಾಂಜು ಕಲ್ಯಾಣಿ, ಕಿರಂಗೂರಿನ ದಸರಾ ಬನ್ನಿಮಂಟಪ್ಪ ಕಲ್ಯಾಣಿ, ಕರಿಗಟ್ಟದ ಶ್ರೀನಿವಾಸ ಕಲ್ಯಾಣಿ, ಜಕ್ಕನಹಳ್ಳಿಯಲ್ಲಿ 400 ವರ್ಷದ ಹಳೆಯದಾದ ಕಲ್ಯಾಣಿ, ಬೊಮ್ಮನಹಳ್ಳಿ ಬಳಿಯ ಸಿದ್ದಾಪುರ ಕೆರೆ

ದೇವಾಲಯಗಳು ಹಾಗೂ ಮಂಟಪಗಳ ಪುನಶ್ಚೇತನ: ಗಂಜಮ್ ನ 800 ವರ್ಷ ಹಳೆಯದಾದ ಜಗನ್ನಾಥ ದೇವಾಲಯ, ಸಂಗಮ್ ನಲ್ಲಿರುವ ಶ್ರೀನಿವಾಸ ಪದ್ಮಾವತಿ ದೇವಾಲಯ, ಕಾವೇರಿ ನದಿ ಮಧ್ಯದಲ್ಲಿರುವ ಕಾಶಿ ವಿಶ್ವನಾಥ ದೇವಾಲಯ, ಕರಿಘಟ್ಟ ಬಳಿಯ ಈಶ್ವರ ದೇವಾಲಯ, ನೆರಳೆಕೆರೆ ಬಳಿ ಗಂಗರ ಆಳ್ವಿಕೆಯಲ್ಲಿ ನಿರ್ಮಿಸಲಾದ ದೇವಾಲಯವನ್ನು ಪುನಶ್ಚೇತನಗೊಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com