ದಕ್ಷಿಣ ಕನ್ನಡ: ಕೊಳದ ಮೂಲಕ ಜಲ ವಿದ್ಯುತ್ ತಯಾರಿಸುವ ಪುತ್ತೂರಿನ ಪ್ರಗತಿಪರ ಕೃಷಿಕ ಸುರೇಶ್ ಬಲ್ನಾಡ್

ಇವರ ತಂದೆ ಮಗ ಎಂಜಿನಿಯರ್ ಆಗಬೇಕೆಂದು ಬಯಸಿದ್ದರು. ಆದರೆ, ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮವೊಂದರ 61 ವರ್ಷದ ರೈತ ಅದರಾಚೆಗಿನ ಬದುಕಿನ ಬಗ್ಗೆ ಯೋಚನೆ ಮಾಡಿದರು.
ಸುರೇಶ್ ಬಲ್ನಾಡ್ ಅವರ ತೋಟದಲ್ಲಿ ಜಲವಿದ್ಯುತ್  ನಿಂದ ವಿದ್ಯುತ್ ತಯಾರಿಕೆ
ಸುರೇಶ್ ಬಲ್ನಾಡ್ ಅವರ ತೋಟದಲ್ಲಿ ಜಲವಿದ್ಯುತ್ ನಿಂದ ವಿದ್ಯುತ್ ತಯಾರಿಕೆ

ಮಂಗಳೂರು: ಇವರ ತಂದೆ ಮಗ ಎಂಜಿನಿಯರ್ ಆಗಬೇಕೆಂದು ಬಯಸಿದ್ದರು. ಆದರೆ, ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮವೊಂದರ 61 ವರ್ಷದ ರೈತ ಅದರಾಚೆಗಿನ ಬದುಕಿನ ಬಗ್ಗೆ ಯೋಚನೆ ಮಾಡಿದರು. ತಮ್ಮ ಪದವಿ ಪೂರ್ವ ಶಿಕ್ಷಣ ಮುಗಿಸಿ ಪದವಿ ಅಥವಾ ವೃತ್ತಿಪರ ಕೋರ್ಸ್ ಗಳಿಗೆ ಸೇರದೆ ರೈತರಾಗಿ ಉಳಿಯಲು ಬಯಸಿದರು. ಇಂದು ಪ್ರಗತಿಪರ ಕೃಷಿಕರಾಗಿರುವುದು ಮಾತ್ರವಲ್ಲದೆ ತಮ್ಮ ಮನೆಗೆ ತಾವೇ ವಿದ್ಯುತ್ ತಯಾರಿಸುವ ಮೂಲಕ ಊರ-ಪರವೂರ ಜನರಿಗೆ ಮಾದರಿಯಾಗಿದ್ದಾರೆ.

ಇವರ ಹೆಸರು ಸುರೇಶ್ ಬಲ್ನಾಡ್, ಪುತ್ತೂರು ತಾಲ್ಲೂಕಿನ ಬಲ್ನಾಡ್ ಗ್ರಾಮದ ಬಾಯಾರು ನಿವಾಸಿ. ತಮ್ಮ ತೋಟದಲ್ಲಿರುವ 60 ಅಡಿ ಆಳದ ಕೊಳದಿಂದ ಪೈಪ್ ಗೆ ಗಾಳಿ ಟರ್ಬೈನ್ ನ್ನು ಜೋಡಿಸಿ ವಿದ್ಯುತ್ ತಯಾರಿಸುತ್ತಾರೆ. ಹೀಗೆ ಕಳೆದ 17 ವರ್ಷಗಳಿಂದ ಸುರೇಶ್ ಬಲ್ನಾಡ್ ಅವರು, ನೀರು ಹರಿದು ಹೋಗುವ ಕಾಲುವೆ ಮೂಲಕ 2 ಕಿಲೋವ್ಯಾಟ್ ವಿದ್ಯುತ್ ತಯಾರಿಸುತ್ತಾರೆ.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಸುರೇಶ್ ಬಲ್ನಾಡ್, ಹಳ್ಳಿ ಪ್ರದೇಶಗಳಲ್ಲಿ ಆಗಾಗ ಕರೆಂಟ್ ಹೋಗುತ್ತಿರುತ್ತದೆ. ಕೃಷಿಕರಿಗೆ ಬೇಸಾಯಕ್ಕೆ ನೀರುಣಿಸಬೇಕೆಂದರೆ ಬೇಸಿಗೆಯಲ್ಲಿ ವಿದ್ಯುತ್ ಇಲ್ಲದೆ ರೈತರು ಹೈರಾಣಾಗಿ ಹೋಗುತ್ತಾರೆ. ಹಾಗೆಂದು ಕರೆಂಟ್ ಬಿಲ್ ಬರುವುದು ಕಡಿಮೆಯೇನಲ್ಲ. ಈ ಎಲ್ಲಾ ಸಮಸ್ಯೆಗಳಿಂದ ಬೇಸತ್ತು ವಿದ್ಯುತ್ ಗೆ ಅವಲಂಬನೆ ಆಗಬಾರದೆಂದು ಯೋಚಿಸಿ ಗಾಳಿ ಟರ್ಬೇನ್ ಮೂಲಕ ಜಲ ವಿದ್ಯುತ್ ಉತ್ಪಾದನೆಗೆ ಮುಂದಾದೆ. ಇದರಿಂದ ತಯಾರಾಗುವ ವಿದ್ಯುತ್ ನಮ್ಮ ಬಳಕೆಗೆ ಮಾತ್ರವಾಗಿದ್ದು ವರ್ಷದಲ್ಲಿ ಹೆಚ್ಚು ಮಳೆಯಾದರೆ ಜನವರಿಯವರೆಗೆ ಜಲ ವಿದ್ಯುತ್ ಉತ್ಪಾದಿಸಲು ಸಾಧ್ಯವಾಗುತ್ತದೆ. ನಾನು ಚಿಕ್ಕವನಿದ್ದಾಗಲೇ ನೈಸರ್ಗಿಕ ಸಂಪನ್ಮೂಲಗಳನ್ನು ಸದ್ಭಳಕೆ ಮಾಡುವ ಬಗ್ಗೆ ಯೋಚಿಸುತ್ತಿದ್ದೆ ಎನ್ನುತ್ತಾರೆ.

ಖ್ಯಾತ ಎಂಜಿನಿಯರ್ ಕನ್ನಂಬಾಡಿ ಅಣೆಕಟ್ಟಿನ ನಿರ್ಮಾತೃ ಸರ್ ಎಂ ವಿಶ್ವೇಶ್ವರಯ್ಯನವರು ಹುಟ್ಟಿದ ದಿನವೇ ಸುರೇಶ್ ಅವರು ಜನಿಸಿದ್ದರಿಂದ ಅವರ ತಂದೆ ಮಗ ಎಂಜಿನಿಯರ್ ಆಗುತ್ತಾನೆ ಎನ್ನುತ್ತಿದ್ದರಂತೆ. ಆದರೆ ಮಗನಾಗಿದ್ದು ಮಾತ್ರ ಪ್ರಗತಿಪರ ಕೃಷಿಕ. ಹಿಂದೆ ನಮಗೆ ತಿಂಗಳಿಗೆ 1,400 ರೂಪಾಯಿ ಕರೆಂಟ್ ಬಿಲ್ ಬರುತ್ತಿತ್ತು. ಇಂದು ಕನಿಷ್ಠ ಬಿಲ್ ಬರುತ್ತದೆಯಷ್ಟೆ ಎಂದು ಸುರೇಶ್ ಬಲ್ನಾಡ್ ಅವರ ಕುಟುಂಬಸ್ಥರು ಹೇಳುತ್ತಾರೆ.

ಜಲ ವಿದ್ಯುತ್ ತಯಾರಿಕೆ ಬಗ್ಗೆ ನೋಡಲು ಸುರೇಶ್ ಅವರ ಮನೆಗೆ ಹಲವರು ಭೇಟಿ ನೀಡುತ್ತಿರುತ್ತಾರೆ. ಇದರ ಬಗ್ಗೆ ಜ್ಞಾನ ಮೂಡಿಸಲು ಅಕ್ಕಪಕ್ಕದ ಶಾಲೆಯ ಮಕ್ಕಳನ್ನು ಸುರೇಶ್ ಅವರು ತಮ್ಮ ಮನೆಗೆ ಕರೆಯುತ್ತಾರಂತೆ. 

ಶಿವಮೊಗ್ಗದ ಜೋಗ ಜಲಪಾತದಿಂದ ಹೇಗೆ ವಿದ್ಯುತ್ ತಯಾರಿಸುವುದು ಎಂದು ತೋರಿಸಲು ಮಕ್ಕಳನ್ನು ಶಾಲೆಯಿಂದ ಕರೆದುಕೊಂಡು ಹೋಗುತ್ತಾರೆ. ಇಂದು ನಾವು ಸುರೇಶ್ ಅವರ ಜಮೀನಿಗೆ ಕರೆದುಕೊಂಡು ಹೋಗಿ ತೋರಿಸುತ್ತೇವೆ ಎನ್ನುತ್ತಾರೆ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು. ಇತ್ತೀಚೆಗೆ ಕೋವಿಡ್-19 ಸಾಂಕ್ರಾಮಿಕ ಸೋಂಕಿನ ಕಾರಣದಿಂದಾಗಿ ಇವರ ಮನೆಗೆ ಬರುವವರಿಗೆ ನಿರ್ಬಂಧವಿದೆಯಷ್ಟೆ, ಇಲ್ಲದಿದ್ದರೆ ಪ್ರತಿವರ್ಷ ನೂರಾರು ಮಂದಿ ಇವರ ತೋಟಕ್ಕೆ ಬಂದು ಅವರ ಕೃಷಿ, ಜಲ ವಿದ್ಯುತ್ ಉತ್ಪಾದನೆ ಬಗ್ಗೆ ವೀಕ್ಷಿಸಿಕೊಂಡು ಹೋಗುತ್ತಿರುತ್ತಾರೆ. 

ಜಲ ವಿದ್ಯುತ್ ಜೊತೆಗೆ ಸುರೇಶ್ ಅವರು ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಸಂಪೂರ್ಣವಾಗಿ ಮಳೆನೀರು ಕೊಯ್ಲನ್ನು ಅವಲಂಬಿಸಿದ್ದಾರೆ. ತಮ್ಮ ಜಮೀನಿನಲ್ಲಿ ಅಡಿಕೆ ಜೊತೆಗೆ ತೆಂಗು, ಬಾಳೆ, ಕಾಳುಮೆಣಸು, ತರಕಾರಿಗಳನ್ನು ಬೆಳೆಯುತ್ತಾರೆ. ಇವರು ತಮ್ಮ ಜಮೀನಿನಲ್ಲಿ ಕೊಳವೆಬಾವಿಯನ್ನು ಹೊಂದಿಲ್ಲ ಎಂಬುದು ಮತ್ತೊಂದು ವಿಶೇಷತೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com