ಲಾಕ್ ಡೌನ್ ಸಮಯದಲ್ಲಿ ವಿನೂತನವಾಗಿ ಧ್ವನಿವರ್ಧಕದಲ್ಲಿ ಪಾಠ ಮಾಡಿದ ಮೇಷ್ಟ್ರು: MX Player ನಲ್ಲಿ ಸಾಕ್ಷ್ಯಚಿತ್ರ
ರಾಜಕೀಯ ಸಮಾವೇಶ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸೀಮಿತವಾಗಿದ್ದ ಧ್ವನಿವರ್ಧಕವನ್ನು ಮಕ್ಕಳಿಗೆ ಪಾಠ ಮಾಡಲು ಬಳಸಿದ ಶ್ಯಾಂ ಕಿಶೋರ್ ಉಪಾಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
Published: 04th September 2021 05:55 PM | Last Updated: 04th September 2021 08:21 PM | A+A A-

ಸಾಂದರ್ಭಿಕ ಚಿತ್ರ
ರಾಂಚಿ: ಜಾರ್ಖಂಡ್ ನ ದುಮ್ಕಾ ಗ್ರಾಮ ಲಾಲೂ ಪ್ರಸಾದ್ ಯಾದವ್ ಅವರ ದುಮ್ಕಾ ಖಜಾನೆ ಹಗರಣದಿಂದ ಜನಪ್ರಿಯವಾಗಿತ್ತು. ಅದೇ ಊರಿನ ಶಾಲಾ ಮುಖ್ಯೋಪಾಧ್ಯಾಯರೊಬ್ಬರು ಮಕ್ಕಳಿಗೆ ವಿನೂತನವಾಗಿ ಪಾಠ ಮಾಡುವುದರ ಮುಖಾಂತರ ಸುದ್ದಿಯಾಗಿದ್ದಾರೆ.
ಬಂಕತಿ ವಿದ್ಯಾಲಯದ ಮುಖ್ಯೋಪಾಧ್ಯಾಯರಾದ ಶ್ಯಾಂ ಕಿಶೋರ್ ಸಿಂಗ್ ಲಾಕ್ ಡೌನ್ ಸಮಯದಲ್ಲಿ ಮಕ್ಕಳಿಗೆ ಪಾಠ ಮಾಡಲಾಗುತ್ತಿಲ್ಲವೆಂದು ಕೈಕಟ್ಟಿ ಕುಳಿತುಕೊಳ್ಳಲಿಲ್ಲ. ಕೆಲ ಮಕ್ಕಳ ಬಳಿ ಮೊಬೈಲ್ ಫೋನ್ ಇಲ್ಲದುದರಿಂದ ಆನ್ ಲೈನ್ ತರಗತಿಗಳನ್ನೂ ಹಮ್ಮಿಕೊಳ್ಳಲಿಲ್ಲ. ಬದಲಾಗಿ ಮಕ್ಕಳನ್ನು ಬಯಲಲ್ಲಿ ದೂರ ದೂರ ಕೂರಿಸಿ ಧ್ವನಿವರ್ಧಕದಲ್ಲಿ ಪಾಥ ಮಾಡಿದರು.
ರಾಜಕೀಯ ಸಮಾವೇಶ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸೀಮಿತವಾಗಿದ್ದ ಧ್ವನಿವರ್ಧಕವನ್ನು ಮಕ್ಕಳಿಗೆ ಪಾಠ ಮಾಡಲು ಬಳಸಿದ ಶ್ಯಾಂ ಕಿಶೋರ್ ಉಪಾಯಕ್ಕೆ ಇದೀಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇದೇ ಘಟನೆಯನ್ನಾಧರಿಸಿ ನಿರ್ಮಿಸಲಾಗಿದ್ದ ಸಾಕ್ಷ್ಯಚಿತ್ರ ಒಟಿಟಿ ಸೇವೆಯಾದ ಎಂ ಎಕ್ಸ್ ಪ್ಲೇಯರ್ ನಲ್ಲಿ ಪ್ರದರ್ಶನಗೊಳ್ಳುತ್ತಿದೆ. ಎಂ ಎಕ್ಸ್ ಪ್ಲೇಯರ್ ಗೆ ಜಗತ್ತಿನಾದ್ಯಂತ ೨೮ ಕೋಟಿ ಮಂದಿ ಚಂದಾದಾರರಿದ್ದಾರೆ.