ಮೈಸೂರು ದಸರಾ: ಜಂಬೂ ಸವಾರಿಯ ಪರಂಪರೆ; ಗಜಪಡೆಯ ವೈಭವ

ವಿಶ್ವವಿಖ್ಯಾತ ಮೈಸೂರು ದಸರಾ ಅಂದರೆ ಹತ್ತಾರು ವಿಷಯಗಳು ನಮ್ಮ ಕಣ್ಣಮುಂದೆ ಬರುತ್ತವೆ. 10 ದಿನಗಳ ಕಾಲ ಝಗಮಗಿಸುವ ಮೈಸೂರು ಅರಮನೆ, ಸಂಪ್ರದಾಯ-ಆಚರಣೆಗಳು, ಸಾಂಸ್ಕೃತಿಕ ವೈಭವ.... ಹೀಗೆ ವರ್ಣಿಸಲು ಪದಗಳೇ ಇಲ್ಲ.
ಮೈಸೂರು ಅರಮನೆ ಮುಂದೆ ಜಯಮಾರ್ತಾಂಡ ದ್ವಾರದಲ್ಲಿ ಆನೆಗಳಿಗೆ ಅದ್ದೂರಿ ಸಾಂಪ್ರದಾಯಿಕ ಸ್ವಾಗತ
ಮೈಸೂರು ಅರಮನೆ ಮುಂದೆ ಜಯಮಾರ್ತಾಂಡ ದ್ವಾರದಲ್ಲಿ ಆನೆಗಳಿಗೆ ಅದ್ದೂರಿ ಸಾಂಪ್ರದಾಯಿಕ ಸ್ವಾಗತ

ವಿಶ್ವವಿಖ್ಯಾತ ಮೈಸೂರು ದಸರಾ ಅಂದರೆ ಹತ್ತಾರು ವಿಷಯಗಳು ನಮ್ಮ ಕಣ್ಣಮುಂದೆ ಬರುತ್ತವೆ. 10 ದಿನಗಳ ಕಾಲ ಝಗಮಗಿಸುವ ಮೈಸೂರು ಅರಮನೆ, ಸಂಪ್ರದಾಯ-ಆಚರಣೆಗಳು, ಸಾಂಸ್ಕೃತಿಕ ವೈಭವ....ಹೀಗೆ ವರ್ಣಿಸಲು ಪದಗಳೇ ಇಲ್ಲ.

ಅವೆಲ್ಲಕ್ಕಿಂತ ಮುಖ್ಯವಾದದ್ದು ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿಯನ್ನು ಹೊತ್ತು ಸಾಗುವ ಅಭಿಮನ್ಯು ಆನೆ, ಗಾಂಭೀರ್ಯದಿಂದ ನಡಿಗೆ ಹಾಕಿ ರೋಮಾಂಚನಗೊಳಿಸುತ್ತದೆ. ಮೈಸೂರು ದಸರಾಕ್ಕೆ ವಿಶೇಷ ಸಂಭ್ರಮ-ಕಳೆ ನೀಡುವುದು ಐತಿಹಾಸಿಕ ಮೈಸೂರು ದಸರಾ ಜಂಬೂ ಸವಾರಿ.

ಚಾಮುಂಡೇಶ್ವರಿ ದೇವಿಯನ್ನು ಹೊತ್ತು ಸಾಗುವ ಅಭಿಮನ್ಯು, ಅವನ ಅಕ್ಕಪಕ್ಕದಲ್ಲಿ ನಿಲ್ಲುವ ಕುಮ್ಕಿ ಆನೆಗಳಾದ ಕಾವೇರಿ ಮತ್ತು ಚೈತ್ರ ಹಾಗೂ ಇತರ ಒಟ್ಟು 8 ಆನೆಗಳು ದಸರಾಕ್ಕೆ ಮೊದಲೇ ಕಾಡಿನಿಂದ ಮೈಸೂರು ಪುರ ಪ್ರವೇಶಿಸಿ ಅವಕ್ಕೆ ತಾಲೀಮು ನಡೆಯುತ್ತವೆ. ಹೀಗಾಗಿ ಈಗಾಗಲೇ ಆನೆಗಳು ಅರಣ್ಯದಿಂದ ಮಾವುತರ ಜೊತೆ ಪುರ ಪ್ರವೇಶಿಸಿಯಾಗಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ವೀರನಹೊಸಹಳ್ಳಿ ಗ್ರಾಮದ ಬಳಿ ಅರಣ್ಯ ಇಲಾಖೆ ಕಳೆದ ಸೋಮವಾರ ಆಯೋಜಿಸಿದ್ದ ಗಜಪಯಣ ಕಾರ್ಯಕ್ರಮ ಸರಳವಾಗಿ ನೆರವೇರಿ ಲಾರಿಯಲ್ಲಿ ಮೈಸೂರಿಗೆ ಕರೆತರಲಾಗಿದೆ.

ಶ್ರೀರಂಗಪಟ್ಟಣದ ಕಾವೇರಿ ನದಿಯ ಉತ್ತರ ದಿಕ್ಕಿನ ಗೌರಿಕಡುವೆ ಎಂಬಲ್ಲಿ ದಸರಾ ಆರಂಭವಾಗಿದ್ದು 1610ರಲ್ಲಿ. ಆಗಿನಿಂದಲೇ ಅಂಬಾರಿ ಹೊರುವ ಪದ್ಧತಿ ಕೂಡ ಆರಂಭವಾಗಿತ್ತು. ಅರಣ್ಯ ಇಲಾಖೆಯವರು ಪಳಗಿದ ಆನೆಗಳನ್ನು ದಸರಾ ಅಂಬಾರಿ ಹೊರಲು ಆಯ್ಕೆ ಮಾಡಿ ತರಬೇತಿ ನೀಡುತ್ತಾರೆ. ಬ್ರಿಟಿಷರ ಕಾಲದಿಂದಲೂ ಅರಣ್ಯ ಇಲಾಖೆಯೇ ಆನೆಗಳನ್ನು ಕರೆತರುವ ಉಸ್ತುವಾರಿ ಮತ್ತು ಜವಾಬ್ದಾರಿ ವಹಿಸಿಕೊಂಡಿತ್ತು.

ಕಾಡಿನಿಂದ ಪೂಜೆ ನೆರವೇರಿಸಿ ಮೈಸೂರು ಅರಮನೆಯ ಕೋಟೆಯ ಆವರಣದೊಳಗೆ ಕರೆದುಕೊಂಡು ಬಂದ ನಂತರ ಆನೆಗಳಿಗೆ ತರಬೇತಿ ನೀಡಲಾಗುತ್ತದೆ. ದಸರಾ ಆರಂಭವಾಗುವವರೆಗೆ ಆನೆಗಳ ಆಹಾರ-ವಿಹಾರಗಳನ್ನು ನೋಡಿಕೊಳ್ಳಲಾಗುತ್ತದೆ. ಆನೆಗಳಿಗೆ ದಸರಾ ಸಮಯದಲ್ಲಿ ಸಿಡಿಮದ್ದುಗಳನ್ನು ಸಿಡಿಸುವಾಗ ವಿಚಲಿತರಾಗದೆ ನಿಲ್ಲುವ ಶಕ್ತಿಯನ್ನು ಕಲಿಸಿಕೊಡುತ್ತಾರೆ, ಆನೆಗಳು ಓಡಿಹೋಗದ ಹಾಗೆ, ಬೆದರದ ಹಾಗೆ ನೋಡಿಕೊಳ್ಳುತ್ತಾರೆ, ಇಷ್ಟೂ ದಿನ ಆನೆಗಳ ಆರೋಗ್ಯ ಕಾಪಾಡಲು ವೈದ್ಯರನ್ನು ಕೂಡ ನೇಮಿಸಲಾಗುತ್ತದೆ. ತಾಳ್ಮೆಯಿಂದ ಪರೀಕ್ಷೆ ಮಾಡಿಸುತ್ತಾರೆ. ಇವೆಲ್ಲವನ್ನೂ ದಸರಾ ಪ್ರಯುಕ್ತ ಅರಣ್ಯ ಇಲಾಖೆಯೇ ಮಾಡುತ್ತದೆ.

ಒಟ್ಟು 8 ಆನೆಗಳು: ಮೈಸೂರು ದಸರಾಕ್ಕೆ 8 ಆನೆಗಳ ಪುರ ಪ್ರವೇಶವಾಗಿದ್ದು ಅವುಗಳಲ್ಲಿ ಅಂಬಾರಿ ಹೊರುವ ಆನೆ ಅಭಿಮನ್ಯು, ಅಭಿಮನ್ಯು ತಂಡದಲ್ಲಿ ಮೂರು ಹೆಣ್ಣಾನೆಗಳಾದ ಚೈತ್ರ, ಕಾವೇರಿ, ಲಕ್ಷ್ಮೀ ಆನೆಗಳು ಅರಮನೆ ಪ್ರವೇಶಿಸಿದೆ. ಇದರ ಜೊತೆಗೆ ಅರಮನೆಯ ಸಂಪ್ರದಾಯದಲ್ಲಿ ನೆರವಾಗಲಿರುವ ವಿಕ್ರಮನೂ ಇದ್ದಾನೆ. ಮೊದಲ ಬಾರಿಗೆ ಅಶ್ವತ್ಥಾಮ ಆನೆ, ಗೋಪಾಲಸ್ವಾಮಿ, ಧನಂಜಯ ಆನೆಗಳೂ ಇವೆ. ಅಂಬಾರಿ ಆನೆಯ ಪಕ್ಕದಲ್ಲಿ ಸಾಗುವ ಆನೆಗಳಿಗೆ ಕುಮ್ಕಿ ಆನೆ ಎಂದು ಕರೆಯಲಾಗುತ್ತದೆ.

ಬ್ರಿಟಿಷರ ಕಾಲದಿಂದಲೂ ವೀರನಹೊಸಹಳ್ಳಿಯಲ್ಲಿ ಆನೆಗಳನ್ನು ಕರೆಸಿಕೊಳ್ಳುತ್ತಿದ್ದು, ಒಂದರ ಹಿಂದೆ ಒಂದು ಆನೆ ಸಾಗುವ ಪದ್ಧತಿಯೇ ಹಿಂದಿನಿಂದಲೂ ಇದ್ದಿದ್ದು, ಆಗ ಮಹಾರಾಜರು ಆನೆ ಮೇಲೆ ಕುಳಿತುಕೊಳ್ಳುತ್ತಿದ್ದರೆ ಈಗ ಚಾಮುಂಡಿದೇವಿಯನ್ನು ಕೂರಿಸುತ್ತಾರೆ. ದಸರಾ ಹೊರುವ ಆನೆಗಳನ್ನು ಆರಿಸಲು ಮಾವುತರನ್ನು ಸಂಪರ್ಕಿಸಿ ಅರಣ್ಯ ಇಲಾಖೆಯವರು ನಿರ್ಧಾರ ಮಾಡುತ್ತಾರೆ. 

ಮೈಸೂರು ದಸರಾ ಪರಂಪರೆ ಹಾಗೆಯೇ ಮುಂದುವರಿದುಕೊಂಡು ಬಂದಿದೆ. ಇಂದು ವ್ಯಕ್ತಿ ಮತ್ತು ಕಾಲ ಬದಲಾಗಿದೆಯಷ್ಟೇ ಹೊರತು ಮೂಲ ನಿಯಮ, ಸಂಪ್ರದಾಯ ಹಾಗೆಯೇ ಮುಂದುವರಿದುಕೊಂಡು ಬಂದಿದೆ ಎನ್ನುತ್ತಾರೆ ಪತ್ರಕರ್ತ ಈಚನೂರು ಕುಮಾರ್.

ತಾಲೀಮು ಹೇಗೆ ನಡೆಯುತ್ತದೆ?: ಮೊನ್ನೆ 13ನೇ ತಾರೀಖು ಗಜಪಯಣ ಆರಂಭಿಸಿ ಮೈಸೂರಿಗೆ ಇಂದು 8 ಆನೆಗಳನ್ನು ತರಲಾಗಿದೆ. ಮೈಸೂರು ಅರಮನೆ ಪ್ರವೇಶಿಸುವ ಮೊದಲು ದಸರಾದಲ್ಲಿ ಪಾಲ್ಗೊಳ್ಳುವ ಎಲ್ಲಾ ಆನೆಗಳ ದೈಹಿಕ ಆರೋಗ್ಯ, ತೂಕವನ್ನು ಪರೀಕ್ಷಿಸಲಾಗುತ್ತದೆ. ಎಲ್ಲಾ ಆನೆಗಳನ್ನು ಪರೀಕ್ಷಿಸಲಾಗಿದ್ದು ಅವುಗಳ ವಯಸ್ಸಿಗೆ ತಕ್ಕಂತೆ ಎಷ್ಟು ತೂಕವಿರಬೇಕೋ ಅಷ್ಟು ತೂಕವನ್ನು ಹೊಂದಿವೆ. ಆನೆಗಳಿಗೆ ತಾಲೀಮು 18 ಅಥವಾ 19ರಂದು ಆರಂಭವಾಗಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 

ರಾಜಮನೆತನ-ಆನೆಗಳಿಗೆ ಬಿಡಿಸಲಾಗದ ನಂಟು: ಅರಮನೆಯನ್ನು ತುಂಬಿಸಿಕೊಳ್ಳುವುದು: ದಸರಾ ಆರಂಭಕ್ಕೆ ಮುನ್ನ ಆನೆಗಳನ್ನು ಅರಮನೆಗೆ ತುಂಬಿಸಿಕೊಳ್ಳುವ ಸಂಪ್ರದಾಯವಿರುತ್ತದೆ. ಮನೆಗಳಿಗೆ ಹೊಸ್ತಿಲು ಇದ್ದ ಹಾಗೆ ಅರಮನೆಗೆ ಆನೆಬಾಗಿಲು ಎಂಬುದಿರುತ್ತದೆ. ಆನೆಗಳನ್ನು ಒಂದು ದಿನ ಅರಮನೆಗೆ ತುಂಬಿಸಿಕೊಳ್ಳುವ ಕಾರ್ಯವಿರುತ್ತದೆ. ಮೈಸೂರು ಅರಮನೆಯ ಆನೆಬಾಗಿಲು 10 ಅಡಿ ಅಗಲವಿದ್ದು ಕಬ್ಬಿಣದ ಬಾಗಿಲನ್ನು ಹೊಂದಿದೆ.

ಒಡೆಯರ್ ಅವರು ಹೆಣ್ಣು ಆನೆ, ಗಂಡು ಆನೆ, ದಂತಗಳಿಗೆ ಬೆಲೆ ನಿಗದಿ, ಮರಿ ಆನೆ ಹೀಗೆ ಆನೆಗಳಿಗೆ ಬೆಲೆ ಕಟ್ಟಿ ಮಾರಾಟಮಾಡುತ್ತಿದ್ದರು. ಮೈಸೂರಿನಲ್ಲಿ ಆನೆ ಕರೋಹಟ್ಟಿ(ಆನೆಯನ್ನು ಪಾಲನೆ ಮಾಡುವ ಸ್ಥಳ) ಆನೆಗಳನ್ನು ಪಳಗಿಸುವ ಸ್ಥಳ ಕೂಡ ಇದೇ. ನಂತರ ದೇವಸ್ಥಾನಗಳಿಗೆ, ಮಠಗಳಿಗೆ ಆನೆಗಳನ್ನು ಕೊಡುವ ಪದ್ಧತಿ ಮೈಸೂರು ರಾಜಮನೆತನದವರಲ್ಲಿ ಇತ್ತು.

ಮೈಸೂರಿನ ಮಹಾರಾಜರು ಆನೆಗಳಿಗೆ ಮೋತಿಲಾಲ್ ಆನೆ, ಬಹದ್ದೂರು ಆನೆ, ತಾರಾ, ಜಯಮಾರ್ತಾಂಡ ಇತ್ಯಾದಿ ಹೆಸರುಗಳನ್ನು ಇಟ್ಟಿದ್ದಾರೆ. ಜಯಮಾರ್ತಾಂಡ ಆನೆ ಅಂಬಾರಿ ಹೊರುತ್ತಿತ್ತು. ಅದರ ಹೆಸರಿನಲ್ಲಿ ಮೈಸೂರು ಅರಮನೆಯಲ್ಲಿ ಜಯಮಾರ್ತಾಂಡ ದ್ವಾರವಿದೆ. ಅರಮನೆಯ ಮಧುರವಾದ ಬಾಂಧವ್ಯದ ದ್ಯೋತಕವಾಗಿ ಮಹಾದ್ವಾರವೇ ಇದೆ.

ಇಂದು ಮೈಸೂರು ಅರಮನೆ ಪ್ರವೇಶ: ದಸರಾ ಮೆರವಣಿಗೆಯಲ್ಲಿ ಭಾಗವಹಿಸುವ ಗಜ ಪಡೆಯು ಇಂದು ಬೆಳಗ್ಗೆ ಅರಣ್ಯ ಭವನದಿಂದ ಹೊರಟು ಮೈಸೂರು ಅರಮನೆ ಪ್ರವೇಶಿಸಿದೆ. ಅರಣ್ಯ ಇಲಾಖೆ ವತಿಯಿಂದ ಬೆಳಗ್ಗೆ ಸುಮಾರು 6:45ರ ವೇಳೆಗೆ ಪೂಜೆ ನೆರವೇರಿದೆ. ಮೈಸೂರು ಅರಮನೆ ಮಂಡಳಿ ವತಿಯಿಂದ ಜಯಮಾರ್ತಾಂಡ ದ್ವಾರದಲ್ಲಿ ಗಜಪಡೆಗೆ ಸಾಂಪ್ರದಾಯಿಕ, ಸಾಂಸ್ಕೃತಿಕ ಪರಂಪರೆ ಮೂಲಕ ಸ್ವಾಗತ ಕೋರಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com