ಬದುಕು ಕಟ್ಟಿಕೊಳ್ಳುವ ಮಹಿಳೆಯರಿಗೆ ಸ್ಫೂರ್ತಿ: ಶೂನ್ಯದಿಂದ ಸ್ವಾವಲಂಬನೆಯ ಕಡೆ ಸಾಗಿದ ಕೊಡಗು ಮಹಿಳೆಯರ ಯಶೋಗಾಥೆ!

ಅದು 2018ರ ಆಗಸ್ಟ್ ತಿಂಗಳು, ಬಾನಿನಲ್ಲಿ ಮೋಡ ಹೆಪ್ಪುಗಟ್ಟಿತ್ತು. ಇದ್ದಕ್ಕಿದ್ದಂತೆ ಧಾರಾಕಾರ ಮಳೆ, ಪ್ರವಾಹ, ಭೂಕುಸಿತ. ರಸ್ತೆಗಳೆಲ್ಲ ಹಾಳಾದವು. ಪ್ರವಾಹಕ್ಕೆ ಹಾನಿಗೀಡಾದ ಪ್ರದೇಶಗಳಲ್ಲಿ ಕೊಡಗು ಜಿಲ್ಲೆಯ ಕಾಲೂರು ಗ್ರಾಮ ಕೂಡ ಒಂದು. 
ಕಾಲೂರಿನ ಫಾರೆಸ್ಟ್ ಕೆಫೆ
ಕಾಲೂರಿನ ಫಾರೆಸ್ಟ್ ಕೆಫೆ

ಮಡಿಕೇರಿ: ಅದು 2018ರ ಆಗಸ್ಟ್ ತಿಂಗಳು, ಬಾನಿನಲ್ಲಿ ಮೋಡ ಹೆಪ್ಪುಗಟ್ಟಿತ್ತು. ಇದ್ದಕ್ಕಿದ್ದಂತೆ ಧಾರಾಕಾರ ಮಳೆ, ಪ್ರವಾಹ, ಭೂಕುಸಿತ. ರಸ್ತೆಗಳೆಲ್ಲ ಹಾಳಾದವು. ಪ್ರವಾಹಕ್ಕೆ ಹಾನಿಗೀಡಾದ ಪ್ರದೇಶಗಳಲ್ಲಿ ಕೊಡಗು ಜಿಲ್ಲೆಯ ಕಾಲೂರು ಗ್ರಾಮ ಕೂಡ ಒಂದು. ಅನೇಕ ಜನರ ಬದುಕು ಬೀದಿಗೆ ಬಂತು, ಮನೆ ಮಠಗಳನ್ನು ಕಳೆದುಕೊಂಡರು, ಕೃಷಿ ಭೂಮಿ, ಎಸ್ಟೇಟ್ ಗಳು ರಾತ್ರಿ ಕಳೆದು ಹಗಲಾಗುವುದರೊಳಗೆ ನಾಶವಾಗಿ ಹೋಯಿತು.

ಆ ಸಮಯದಲ್ಲಿ ಜಿಲ್ಲಾಡಳಿತ 200ಕ್ಕೂ ಹೆಚ್ಚು ಕುಟುಂಬಗಳನ್ನು ನಿರಾಶ್ರಿತ ಕೇಂದ್ರಗಳಿಗೆ ಕಳುಹಿಸಿತು. ನಿರಾಶ್ರಿತ ಕೇಂದ್ರಕ್ಕೆ ಹೋದ ಗ್ರಾಮಸ್ಥರು ಮತ್ತೆ ತಮ್ಮ ಊರಿಗೆ ಹಿಂತಿರುಗಿದ್ದು ಎರಡು ತಿಂಗಳು ಕಳೆದ ಮೇಲೆ ಅಕ್ಟೋಬರ್ ನಲ್ಲಿ. ಎಸ್ಟೇಟ್, ರೈತರ ಕೃಷಿ ಭೂಮಿ ಮತ್ತು ಜಾನುವಾರುಗಳು ಎಲ್ಲವೂ ನಾಶವಾಗಿ ಹೋಯಿತು ಎಂದು ದೇಚವ್ವ ಎಂಬ ಮಹಿಳೆ ಮೂರು ವರ್ಷಗಳ ಹಿಂದಿನ ಘಟನೆಯನ್ನು ನೆನಪು ಮಾಡಿಕೊಳ್ಳುತ್ತಾರೆ.

ಕಾಲೂರು ಗ್ರಾಮಸ್ಥರು ಬಹುತೇಕರು ಕೃಷಿಕರು, ಭೂಕುಸಿತದಿಂದ ಅವರ ಜಮೀನುಗಳು ಮತ್ತು ಎಸ್ಟೇಟ್ ಗಳು ಅವಶೇಷಗಳಡಿಯಲ್ಲಿ ಕೊಚ್ಚಿಹೋಗಿದ್ದರಿಂದ ಭವಿಷ್ಯ ಮಂಕುಕವಿದಿತ್ತು. ಆಗ ಇಲ್ಲಿನ ಮಹಿಳೆಯರು ತಮ್ಮೆಲ್ಲಾ ಕಷ್ಟಗಳನ್ನು ಮೆಟ್ಟಿನಿಂತು ಮತ್ತೆ ಬದುಕು ಕಟ್ಟಿಕೊಳ್ಳಬೇಕೆಂದು ಟೊಂಕಕಟ್ಟಿ ನಿಂತರು. ಅವರ ಧೈರ್ಯ ಮತ್ತು ದೃಢ ನಿರ್ಧಾರ ಅವರಿಗೆ 'ಕಾಲೂರು ಮಹಿಳೆಯರು' ಎಂಬ ಬಿರುದನ್ನು ತಂದುಕೊಟ್ಟಿತು.ಈಗ ಉದ್ಯಮಿಗಳಾಗಿರುವುದಲ್ಲದೆ ಕುಟುಂಬದ ಆಧಾರ ಸ್ತಂಭವಾಗಿದ್ದಾರೆ, ಅದಕ್ಕೆ ಕಾರಣ ಪ್ರಾಜೆಕ್ಟ್ ಕೂರ್ಗ್ ಎಂಬ ಪುನರ್ವಸತಿ ಉಪಕ್ರಮ.

ಮತ್ತೆ ಬದುಕು ಕಟ್ಟಿಕೊಂಡಿದ್ದು ಹೇಗೆ?: ಕೊಚ್ಚಿ ಹೋಗಿದ್ದ ಬದುಕನ್ನು ಮತ್ತೆ ಕಟ್ಟಿಕೊಂಡ ಬಗೆಯನ್ನು 65 ವರ್ಷದ ದೇಚವ್ವ ವಿವರಿಸುತ್ತಾರೆ. ಇಳಿವಯಸ್ಸಿನಲ್ಲಿ ಟೈಲರಿಂಗ್ ಕಲಿತರು. ಗ್ರಾಮದ ಅರ್ಚಕ ನಾಗೇಶ್ ಕಾಲೂರು ಭಾರತೀಯ ವಿದ್ಯಾ ಭವನವನ್ನು ಸಂಪರ್ಕಿಸಿ ಗ್ರಾಮಸ್ಥರ ಬದುಕಿಗೆ ಆಸರೆಯಾಗಬೇಕೆಂದು ಕೇಳಿಕೊಂಡರು.

ಪ್ರಾಜೆಕ್ಟ್ ಕೂರ್ಗ್ (ಕೊಡಗು ಯೋಜನೆ): ಈ ಯೋಜನೆಯಡಿ ಟ್ರಸ್ಟ್ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮವನ್ನು ಗ್ರಾಮದ ಮಹಿಳೆಯರಿಗೆ ನೀಡಲಾರಂಭಿಸಿತು. ಪ್ರವಾಹ, ಭೂಕುಸಿತಕ್ಕೆ ಸಿಲುಕಿದ್ದ ಪಕ್ಕದ ದೇವಸ್ತೂರು ಗ್ರಾಮದ ಮಹಿಳೆಯರನ್ನು ಕೂಡ ಸೇರಿಸಲಾಯಿತು. ಕೂಡಲೇ ಅಲ್ಲಿ ಹೊಲಿಗೆ ತರಬೇತಿ ಮತ್ತು ಆಹಾರ ಸಂಸ್ಕರಣೆ ತರಬೇತಿ ಕಾರ್ಯಕ್ರಮ ಆರಂಭವಾಯಿತು.

ಹೊಲಿಗೆ ತರಬೇತಿ ನೇತೃತ್ವವನ್ನು ಅಶ್ರಫುನಿಸ್ಸಾ ವಹಿಸಿದ್ದರು. ಪ್ರಕೃತಿ ವಿಕೋಪ ಬರುವವರೆಗೆ ಕಾಲೂರು ಗ್ರಾಮದ ಬಗ್ಗೆ ಹೆಚ್ಚು ತಿಳಿದಿರಲಿಲ್ಲ. ಮಡಿಕೇರಿಯಲ್ಲಿ ವಾಸಿಸುತ್ತಿರುವ ನಮ್ಮ ಮನೆ ಕೂಡ ಭೂಕುಸಿತಕ್ಕೆ ಹಾನಿಯಾಗಿತ್ತು. ಈ ಸಮಯದಲ್ಲಿ ಬಾಲಾಜಿ ಕಶ್ಯಪ್ ಅವರನ್ನು ಸಂಪರ್ಕಿಸಿದೆ, ಅವರು ಪ್ರಾಜೆಕ್ಟ್ ಕೂರ್ಗ್ ನ ಮುಖ್ಯಸ್ಥರಾಗಿದ್ದರು. ಹೊಲಿಗೆಯಲ್ಲಿ ಮಹಿಳೆಯರಿಗೆ ತರಬೇತಿ ನೀಡುವಂತೆ ನನ್ನನ್ನು ಕೇಳಿಕೊಂಡರು. 6 ತಿಂಗಳ ಕಾಲ 30 ಮಹಿಳೆಯರಿಗೆ ತರಬೇತಿ ನೀಡುವುದಾಗಿತ್ತು.

ದೇಚವ್ವ
ದೇಚವ್ವ

ಆದರೆ ಎಲ್ಲಾ ಮಹಿಳೆಯರಿಗೆ ಟೈಲರಿಂಗ್ ತರಬೇತಿ ಹೊಂದಿಕೆಯಾಗಲಿಲ್ಲ. ಅವರು ಆಹಾರ ಸಂಸ್ಕರಣೆಯಲ್ಲಿ ತರಬೇತಿ ಪಡೆಯಲು ಮುಂದಾದರು. 30 ಮಹಿಳೆಯರಿಗೆ ಮಸಾಲೆ ಪದಾರ್ಥ, ಉಪ್ಪಿನಕಾಯಿ, ಚಾಕಲೇಟ್, ಚಿಪ್ಸ್, ಅಕ್ಕಿ ಹುಡಿ ಮತ್ತು ಇತರ ಆಹಾರ ಉತ್ಪನ್ನಗಳನ್ನು ತಯಾರಿಸುವ ತರಬೇತಿ ನೀಡಲಾಯಿತು ಎಂದು ಉಡುಪಿಯ ಪ್ರಶಸ್ತಿ ಪುರಸ್ಕೃತ ಶೆಫ್ ನೀನಾ ಶೆಟ್ಟಿ ತಿಳಿಸಿದ್ದಾರೆ.

ಮಹಿಳೆಯರಿಗೆ ನಿರಂತರ ಆದಾಯ ತರುವ ತರಬೇತಿ ನೀಡುವುದು ನಮಗೆ ಮುಖ್ಯವಾಗಿತ್ತು. ಕಂಪೆನಿಯ ಸಿಎಸ್ ಆರ್ ನಡಿ ನಾವು ಈ ತರಬೇತಿಯನ್ನು ನೀಡಲಿಲ್ಲ. ನಮ್ಮ ಯೋಜನೆಗೆ ಪ್ರಾಯೋಜಕರು ಮತ್ತು ಸಹಭಾಗಿಗಳು ಸಹಾಯಹಸ್ತ ಚಾಚಿದರು ಎಂದು ಕಶ್ಯಪ್ ಹೇಳುತ್ತಾರೆ.

ಗ್ರಾಮದ ಮಹಿಳೆಯರಿಗೆ ಮಹಿಳೆಯರಿಗೆ ಕೌಶಲ್ಯ ಮತ್ತು ಇತರ ವ್ಯವಹಾರ ಜ್ಞಾನವನ್ನು ಕಲಿಸಲಾಯಿತು. ಯಶಸ್ವಿನಿ ಯೋಜನೆಯನ್ನು ಮಹಿಳೆಯರಿಗೆ ಆರಂಭಿಸಲಾಯಿತು. ಸ್ವಸಹಾಯ ಗುಂಪು ಆಗಿದ್ದು ಕಾಲೂರು ಮಹಿಳೆಯರ ಸಶಕ್ತೀಕರಣಕ್ಕೆ ಕಾರ್ಯಕ್ರಮವಾಗಿತ್ತು. ಗ್ರಾಮದ ಮಹಿಳೆಯರ ಹೋರಾಟ ಫಲ ಕೊಟ್ಟಿತು. ಹಲವು ಪ್ರಾಯೋಜಕರು ಸ್ವಸಹಾಯ ಗುಂಪಿಗೆ, ಪ್ರಾಜೆಕ್ಟ್ ಕೂರ್ಗ್ ಗೆ ಸಹಾಯ ಮಾಡಲು ಆರಂಭಿಸಿದರು. ಗ್ರಾಮದ ಕರೇರ ಕುಟುಂಬ ಯಶಸ್ವಿನಿ ಫ್ಯಾಕ್ಟರಿಗೆ ಭೂಮಿ ದಾನ ನೀಡಿತು. ಫ್ಯಾಕ್ಟರಿ ಕಟ್ಟಡವನ್ನು ಉತ್ತರ ಅಮೆರಿಕಾದ ಕೊಡವ ಕೂಟ ಪ್ರಾಯೋಜಕತ್ವ ನೀಡಿತು. ಬಾಸ್ಚ್ ಇಂಡಿಯಾ ಸೇರಿದಂತೆ ಹಲವು ಕಂಪೆನಿಗಳು ಉಪಕರಣಗಳನ್ನು ದಾನ ಮಾಡಿದವು. ಕಾಲೂರು ಗ್ರಾಮದ ಮಹಿಳೆಯರು ಉದ್ಯಮಶೀಲರಾದರು.

ನಾನು ಅಲ್ಲಿಯವರೆಗೆ ಭೂಮಿಯಲ್ಲಿಯೇ ಕೆಲಸ ಮಾಡುತ್ತಿದ್ದೆ. ನನಗೆ ಹೊಲಿಗೆ ಯಂತ್ರಕ್ಕೆ ಸೂಜಿ ಹಾಕುವುದು ಹೇಗೆ ಎಂದು ಸಹ ಗೊತ್ತಿರಲಿಲ್ಲ. ನಮ್ಮ ತರಬೇತುದಾರೆ ಅಶ್ರಫುನಿಸ್ಸ ನನಗೆ ಚಿಕ್ಕ ಮಕ್ಕಳಿಗೆ ಹೇಳಿಕೊಡುವ ರೀತಿ ಹೇಳಿಕೊಟ್ಟರು. ಇಂದು ನಾನು ಹಲವು ಕಂಪೆನಿಗಳಿಗೆ ಬ್ಯಾಗ್ ಹೊಲಿದುಕೊಡುತ್ತೇನೆ. ಇಂದು ನನ್ನ ಜೀವನಕ್ಕೆ ಬೇಕಾಗುವಷ್ಟು ದುಡಿಯುತ್ತೇನೆ ಎಂದು ದೇಚವ್ವ ಹೇಳುತ್ತಾರೆ.

ಹಲವು ಶಾಲೆಗಳಿಂದ ಸಮವಸ್ತ್ರ ಮತ್ತು ಇತರ ಉತ್ಪನ್ನಗಳಿಗೆ ಬೇಡಿಕೆ ಬರುತ್ತಿದೆಯಂತೆ. ಕೊಡಗಿನಿಂದ ಹೊರಗೆ ಕಾಲೇಜುಗಳಿಂದ ಸಹ ನಮಗೆ ಬೇಡಿಕೆ ಬರುತ್ತಿದೆ ಎನ್ನುತ್ತಾರೆ. ಇಂದು ಗ್ರಾಮದ ಇತರ ಮಹಿಳೆಯರು ಫ್ಯಾಕ್ಟರಿಯಲ್ಲಿ ಜಾಕ್ ಯಂತ್ರದಲ್ಲಿ ಕೆಲಸ ಮಾಡುವ ಕೌಶಲ್ಯ ಹೊಂದಿದ್ದಾರೆ.

ಯಶಸ್ವಿ ಗುಂಪಿನ ಉದ್ಯಮಿ ಮುತ್ತಮ್ಮ ಅವರಿಗೆ ದೃಷ್ಟಿದೋಷವಿರುವುದರಿಂದ ಆಹಾರ ಸಂಸ್ಕರಣೆಯಲ್ಲಿ ಕೆಲಸ ಮಾಡಲು ಇಚ್ಛಿಸಿದರು. ಇತಹ ಹಿರಿಯ ಮಹಿಳೆಯರೊಂದಿಗೆ ಅವರು ಅಕ್ಕಿ ಮತ್ತು ಇತರ ಬೇಳೆಗಳನ್ನು ಕಡೆಯುವುದು, ಮಸಾಲೆ ಹುಡಿಗಳನ್ನು ತಯಾರಿಸುವುದು ಮತ್ತು ಚಾಕಲೇಟ್ ತಯಾರಿಯಲ್ಲಿ ಕೆಲಸ ಮಾಡುತ್ತಾರೆ. ನಿಗದಿತ ವೇತನ ಜೊತೆಗೆ ಮಾರಾಟ ಹೆಚ್ಚಾದಾಗ ಪ್ರೋತ್ಸಾಹಕ ವೇತನ ಕೂಡ ನೀಡುತ್ತಾರೆ ಎಂದು ಖುಷಿಯಿಂದ ಹೇಳುತ್ತಾರೆ.

ಫ್ಯಾಕ್ಟರಿ ಪಕ್ಕ ರಸ್ಟಿಕ್ ಈಟರಿ ಎಂಬ ಕೆಫೆ ಸ್ಥಾಪಿಸಲಾಗಿದ್ದು ಇಲ್ಲಿಗೆ ಪ್ರವಾಸಿಗರು ಭೇಟಿ ನೀಡುತ್ತಾರೆ. ಸ್ಥಳೀಯ ವಿಶೇಷ ಖಾದ್ಯಗಳು ಮತ್ತು ಮತ್ತು ಆಹಾರ ಉತ್ಪನ್ನಗಳನ್ನು ಇಲ್ಲಿ ಮಾರಾಟ ಮಾಡುತ್ತೇವೆ ಎಂದು ಜಮುನಾ ಎನ್ನುವ ಮಹಿಳೆ ಹೇಳುತ್ತಾರೆ.

ಗ್ರಾಮದ ಮಹಿಳೆಯರು ಈಗ ಹಲವರಿಗೆ ಮಾದರಿ, ಸ್ಪೂರ್ತಿಯಾಗಿದ್ದಾರೆ. ಜಿಲ್ಲೆಯ ಬೇರೆ ಗ್ರಾಮಗಳಿಗೂ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ವಿಸ್ತರಿಸಲಾಗಿದೆ. ಕೋವಿಡ್ ಸಾಂಕ್ರಾಮಿಕ ನಂತರ ಪ್ರಾಜೆಕ್ಟ್ ಕೂರ್ಗ್ ಅಭಿಯಾನವನ್ನು ಪುನರ್ವಸತಿ ಅಭಿಯಾನದಿಂದ ಮಹಿಳೆಯರ ಸಬಲೀಕರಣ ಅಭಿಯಾನಕ್ಕೆ ವಿಸ್ತರಿಸಲಾಗಿದೆ ಎಂದು ಬಾಲಾಜಿ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com