ಮಕ್ಕಳ ಆರೈಕೆ ಆಸ್ಪತ್ರೆಗೆ ಜೀವಮಾನದ ಗಳಿಕೆ 20 ಕೋಟಿ ರೂ ದೇಣಿಗೆ ನೀಡಿದ ಅಮೇರಿಕಾ ವೈದ್ಯೆ!

ಡಾ. ಉಮಾ, ಸುಮಾರು 20 ಕೋಟಿ ರೂಪಾಯಿ ಮೌಲ್ಯದ ತಮ್ಮ ಜೀವಮಾನದ ಗಳಿಕೆ, ಉಳಿಕೆ ಹಾಗೂ ಆಸ್ತಿಯನ್ನು ಗುಂಟೂರಿನಲ್ಲಿ ಸರ್ಕಾರಿ ಆಸ್ಪತ್ರೆಗೆ ನಿರ್ಮಾಣಕ್ಕಾಗಿ ದೇಣಿಗೆ ನೀಡಿದ್ದಾರೆ.
ಡಾ. ಉಮಾ
ಡಾ. ಉಮಾ

ಗುಂಟೂರು: ಆಂಧ್ರ ಪ್ರದೇಶದ ಆರೋಗ್ಯ ಮಂತ್ರಿ ವಿಡದಲ ರಜಿನಿ ಗುಂಟೂರು ಸರ್ಕಾರಿ ಜನರಲ್ ಆಸ್ಪತ್ರೆ (ಜಿಜಿಹೆಚ್) ನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದಾರೆ. ಆದರೆ ಈ ಆಸ್ಪತ್ರೆಯ ನಿರ್ಮಾಣ ಕಾಮಗಾರಿಯ ಸಂದರ್ಭದಲ್ಲಿ ವೈದ್ಯೆ ಉಮಾ ದೇವಿ ಗವಿನಿ ಎಲ್ಲರ ಕೇಂದ್ರಬಿಂದುವಾಗಿದ್ದಾರೆ. ಆಕೆ ಈ ಆಸ್ಪತ್ರೆಗಾಗಿ ತನ್ನ ಜೀವಮಾನದ ಗಳಿಕೆಯನ್ನೇ ಧಾರೆ ಎರೆದಿರುವುದು ಇದಕ್ಕೆ ಕಾರಣ

ಗುಂಟೂರಿನ ಮೂಲದವರಾದ ಡಾ. ಉಮಾ, 1965 ರಲ್ಲಿ ಗುಂಟೂರು ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡಿದ್ದರು. ವೈದ್ಯಕೀಯ ಪದವಿ ಪಡೆದ ಬಳಿಕ ಅಮೇರಿಕಾಗೆ ತೆರಳಿದ್ದ ಆಕೆ ಈಗ ಅಲ್ಲಿ  ರೋಗನಿರೋಧಕ ಮತ್ತು ಅಲರ್ಜಿ ತಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಆಕೆ ಗುಂಟೂರು ವೈದ್ಯಕೀಯ ಕಾಲೇಜು ಹಳೆಯ ವಿದ್ಯಾರ್ಥಿಗಳ ಸಂಘ, ಉತ್ತರ ಅಮೇರಿಕಾ (GMCANA)ದಲ್ಲಿಯೂ ಸಕ್ರಿಯರಾಗಿದ್ದು 2008 ರಲ್ಲಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. 

ಆಕೆಯ ಪತಿ ಡಾ. ಕನೂರಿ ರಾಮಚಂದ್ರ ಅವರೂ ವೈದ್ಯರಾಗಿದ್ದರು, ದುರದೃಷ್ಟವಶಾತ್ 3 ವರ್ಷಗಳ ಹಿಂದೆ ಇಹಲೋಕ ತ್ಯಜಿಸಿದ್ದರು. ರಾಮಚಂದ್ರ ದಂಪತಿಗೆ ಮಕ್ಕಳಿರದ ಕಾರಣ, ಡಾ. ಉಮಾ, ಸುಮಾರು 20 ಕೋಟಿ ರೂಪಾಯಿ ಮೌಲ್ಯದ ತಮ್ಮ ಜೀವಮಾನದ ಗಳಿಕೆ, ಉಳಿಕೆ ಹಾಗೂ ಆಸ್ತಿಯನ್ನು ಗುಂಟೂರಿನಲ್ಲಿ ಸರ್ಕಾರಿ ಆಸ್ಪತ್ರೆಗೆ ನಿರ್ಮಾಣಕ್ಕಾಗಿ ದೇಣಿಗೆ ನೀಡುವುದಾಗಿ ಜಿಎಂ ಸಿಎಎನ್ಎ ಯ 17 ನೇ ರೀ ಯೂನಿಯನ್ ಕಾರ್ಯಕ್ರಮದಲ್ಲಿ ಘೋಷಿಸಿದ್ದರು. 

ಜಿಎಂಸಿಎಎನ್ಎ ಮುಖ್ಯ ಸಂಯೋಜಕರಾದ ಡಾ. ಬಾಲಾ ಭಾಸ್ಕರ್, ಡಾ. ಉಮಾದೇವಿ ಅವರು ನಾನು ಕಂಡ ಅತ್ಯಂತ ಸರಳ ಜೀವಿ. ಸಂಘದ ಕೆಲಸಗಳಲ್ಲಿ, ಪ್ರಮುಖವಾಗಿ ವಿವಿಧ ಆರೋಗ್ಯ ಸೌಲಭ್ಯಗಳನ್ನು ನಿರ್ಮಿಸಿ ಅಭಿವೃದ್ಧಿಪಡಿಸುವಲ್ಲಿ ಎಂದಿಗೂ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ. 

ಗುಂಟೂರಿನ ಜಿಜಿಹೆಚ್ ನ ಆವರಣದಲ್ಲಿ ಈ ಆಸ್ಪತ್ರೆ 2.69 ಲಕ್ಷ ಚದರ ಅಡಿಯ ವಿಸ್ತೀರ್ಣದಲ್ಲಿ ನಿರ್ಮಾಣವಾಗಲಿದ್ದು ಸುಮಾರು 86.80 ಕೋಟಿ ರೂಪಾಯಿ ವೆಚ್ಚ ಅಂದಾಜಿಸಲಾಗಿದೆ.

ಜಿ+5 ಅಂತಸ್ತು ಹೊಂದಿರಲಿರುವ ಮಕ್ಕಳ ಆಸ್ಪತ್ರೆಯಲ್ಲಿ 597 ಬೆಡ್ ಗಳಿರಲಿದೆ. ಈ ಆಸ್ಪತ್ರೆಗೆ ದೇಣಿಗೆ ನೀಡಿದವರ ಹೆಸರನ್ನು ನಾಮಕರಣ ಮಾಡಬೇಕೆಂದಾಗಲೂ ಡಾ. ಉಮಾ ಆ ಬೇಡಿಕೆಯನ್ನು ವಿನಮ್ರವಾಗಿ ನಿರಾಕರಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com