ಪ್ಲಾಸ್ಟಿಕ್ ಪಿಡುಗು ಗುಣಪಡಿಸಿದ 'ವೈದ್ಯೆ'; ಪ್ಲಾಸ್ಟಿಕ್ ಮುಕ್ತ ಮಾದರಿಗೇ ಮಾದರಿ ಈ ಗ್ರಾಮ!

ನೀವು ಕವಲಕ್ಕಿಯವರೇ? ಎಂಬ ತಹಶೀಲ್ದಾರ್ ಅವರ ಪ್ರಶ್ನೆಗೆ ಮಹಿಳೆಯರ ಉತ್ತರ ಹೌದು ಎಂಬುದಾಗಿತ್ತು. ಪ್ಲಾಸ್ಟಿಕ್ ಮುಕ್ತ ಪ್ರದೇಶ ಎಂದರೆ ಅದು ಕವಲಕ್ಕಿ ಎಂಬ ಎಂಬ ಖ್ಯಾತಿಯನ್ನು ಈ ಪುಟ್ಟ ಗ್ರಾಮ ಪಡೆದಿದೆ.
ಉತ್ತರ ಕನ್ನಡದಲ್ಲಿ ಪ್ಲಾಸ್ಟಿಕ್ ವಿರುದ್ಧ ಅಭಿಯಾನ ಮೂಡಿಸುತ್ತಿರುವ ಮಹಿಳೆಯರು
ಉತ್ತರ ಕನ್ನಡದಲ್ಲಿ ಪ್ಲಾಸ್ಟಿಕ್ ವಿರುದ್ಧ ಅಭಿಯಾನ ಮೂಡಿಸುತ್ತಿರುವ ಮಹಿಳೆಯರು

ಅಂದು ನಾಗರ ಪಂಚಮಿ. ಹೊನ್ನಾವರ ತಾಲೂಕಿನ ಹುಲಿಯಪ್ಪನ ಕಟ್ಟೆಯ ಸುಬ್ರಹ್ಮಣ್ಯ ದೇವಾಲಯದಲ್ಲಿ ಬೃಹತ್ ಪ್ರಮಾಣದಲ್ಲಿ ಜನ ನೆರೆದಿದ್ದರು. ರಸ್ತೆಯಲ್ಲಿ ಹಾದು ಹೋಗುತ್ತಿದ್ದ ಕಾರನ್ನು ಈ ಗುಂಪಿನ ಒಂದಷ್ಟು ಮಹಿಳೆಯರು ತಡೆದು ನಿಲ್ಲಿಸಿದರು.  ಆ ಕಾರಿನಲ್ಲಿದ್ದ ಹೊನ್ನಾವರದ ತಹಶೀಲ್ದಾರ್ ಪೂಜಾ ಸಾಮಗ್ರಿಗಳನ್ನು ಇಟ್ಟಿದ್ದ ಪ್ಲಾಸ್ಟಿಕ್ ಬ್ಯಾಗ್ ನ್ನು ನೀಡುವಂತೆ ಓರ್ವ ಮಹಿಳೆ ಮನವಿ ಮಾಡಿದರು, ಗೊಂದಲಕ್ಕಿಡಾದ ತಹಶೀಲ್ದಾರ್ ಅವರಿಗೆ ಕಂಡಿದ್ದು ಆ ಪ್ಲಾಸ್ಟಿಕ್ ಬ್ಯಾಗ್ ಬದಲಿಗೆ ಬಟ್ಟೆಯ ಬ್ಯಾಗ್ ನ್ನು ನೀಡಲು ಮುಂದಾದ ಮತ್ತೋರ್ವ ಮಹಿಳೆ. 

ನೀವು ಕವಲಕ್ಕಿಯವರೇ? ಎಂಬ ತಹಶೀಲ್ದಾರ್ ಅವರ ಪ್ರಶ್ನೆಗೆ ಮಹಿಳೆಯರ ಉತ್ತರ ಹೌದು ಎಂಬುದಾಗಿತ್ತು. ಪ್ಲಾಸ್ಟಿಕ್ ಮುಕ್ತ ಪ್ರದೇಶ ಎಂದರೆ ಅದು ಕವಲಕ್ಕಿ ಎಂಬ ಎಂಬ ಖ್ಯಾತಿಯನ್ನು ಈ ಪುಟ್ಟ ಗ್ರಾಮ ಪಡೆದಿದೆ.

ಇಡೀ ಗ್ರಾಮಕ್ಕೆ ಪ್ಲಾಸ್ಟಿಕ್ ಬಳಕೆಯಿಂದಾಗುವ ಅಪಾಯಗಳ ಬಗ್ಗೆ ಸ್ಪಷ್ಟ ಅರಿವಿದ್ದು ಹಾಗೂ ಸಂಪೂರ್ಣ ಪ್ಲಾಸ್ಟಿಕ್ ಮುಕ್ತ ಗ್ರಾಮವಾಗುವ ಹಾದಿಯಲ್ಲಿದೆ. "ಪ್ಲಾಸ್ಟಿಕ್ ಪರಿಸರಕ್ಕೆ ಮಾರಕವಾಗಿದ್ದು, ನಮ್ಮ ದನಗಳು, ಮನುಷ್ಯರಿಗೂ ಮಾರಕ ಆದ್ದರಿಂದ ಅದರ ಬಳಕೆಯನ್ನು ಬಿಟ್ಟಿದ್ದೇವೆ ಎನ್ನುತ್ತಾರೆ ಕವಲಕ್ಕಿ ನಾಗರಿಕ ವೇದಿಕೆ ಹಾಗೂ ಕವಲಕ್ಕಿ ಮಹಿಳಾ ಸಂಘಟನೆಯ ಸದಸ್ಯೆ ಲಲಿತ. 

ಗ್ರಾಮಸ್ಥರು ನಡೆಸುತ್ತಿರುವ ಸಂಘಟನೆಗಳು ಮಹಿಳಾ ಕಲ್ಯಾಣ ಹಾಗೂ ಪರಿಸರಕ್ಕೆ ಅನ್ವರ್ಥವಾಗಿ ಕೆಲಸ ಮಾಡುತ್ತಿದ್ದು, ಪ್ಲಾಸ್ಟಿಕ್ ಮುಕ್ತ ಅಭಿಯಾನಕ್ಕೂ ಶ್ರಮಿಸುತ್ತಿವೆ. ಇಷ್ಟೆಲ್ಲಾ ಆಗುತ್ತಿರುವುದರ ಕೀರ್ತಿ ಸಲ್ಲಬೇಕಾಗಿರುವುದು ವೈದ್ಯರಾಗಿರುವ, ಪ್ರಗತಿಪರ ಚಿಂತಕರು ಹಾಗೂ ಕಾರ್ಯಕರ್ತರಾದ ಡಾ. ಹೆಬ್ಬಾಗಿಲು ಸತ್ಯನಾರಾಯಣ ಅನುಪಮ ಅವರಿಗೆ. 

ಓರ್ವ ವೈದ್ಯೆಯಾಗಿ ಪ್ಲಾಸ್ಟಿಕ್ ಒಳ್ಳೆಯದಲ್ಲ ಎಂಬುದು ತಿಳಿದಿದೆ. ಇಡೀ ಜಗತ್ತನ್ನು ನನ್ನಿಂದ ಬದಲಿಸಲು ಸಾಧ್ಯವಾಗದೇ ಇರಬಹುದು ಆದರೆ ಬದಲಾವಣೆಯನ್ನು ನನ್ನ ಸುತ್ತಲ ಪರಿಸರದಿಂದ ಸಾಧ್ಯವಾಗಿಸಬಹುದು. ಪ್ಲಾಸ್ಟಿಕ್ ಪಿಡುಗನ್ನು ತೊಲಗಿಸುವುದು ನನ್ನ ಉದ್ದೇಶವಾಗಿತ್ತು ಅದಕ್ಕಾಗಿ ಈ ಅಭಿಯಾನವನ್ನು ಪ್ರಾರಂಭಿಸಿದೆ. ನನ್ನ ಚಾಲಕ ಸುಬ್ಬರಾಯ ಗೌಡ, ನಿವೃತ್ತ ಪೋಸ್ಟ್ ಮಾಸ್ಟರ್, ಜನಾರ್ದನ್ ಶೆಟ್ಟಿ, ನಿವೃತ್ತ ಶಾಲಾ ಶಿಕ್ಷಕ ಚಂದ್ರಹಾಸ್ ನಾಯ್ಕ್ ಹಾಗೂ ಓರ್ವ ದಿನಗೂಲಿ ಕಾರ್ಮಿಕ ಗಿರೀಶ್ ಮಡಿವಾಲ್ ಇವರನ್ನೊಳಗೊಂಡ ತಂಡ ಪ್ರತಿ ಭಾನುವಾರ ಕವಲಕ್ಕಿಯನ್ನು ಸ್ವಚ್ಛಗೊಳಿಸಲಾಗುತ್ತದೆ ಎಂದು ಅನುಪಮ ತಿಳಿಸಿದ್ದಾರೆ. 

ಶಿವಮೊಗ್ಗದ ತೀರ್ಥಹಳ್ಳಿಯ ಮೂಲದವರಾಗಿರುವ ಡಾ. ಅನುಪಮ ತಮ್ಮ ಜೀವನದ ಬಹುತೇಕ ಸಮಯವನ್ನು ಗ್ರಾಮೀಣ ಭಾಗಗಳಲ್ಲೇ ಕಳೆದಿದ್ದಾರೆ. ಬಳ್ಳಾರಿಯ ವೈದ್ಯಕೀಯ ಕಾಲೇಜಿನಿಂದ ಪದವಿ ಪಡೆದಿದ್ದು, ಸಾಹಿತ್ಯದೆಡೆಗೆ ಒಲವು ಹೊಂದಿದ್ದಾರೆ. 1993 ರಲ್ಲಿ ಕವಲಕ್ಕಿಯಲ್ಲಿ ನರ್ಸಿಂಗ್ ಹೋಮ್ ನ್ನು ಪ್ರಾರಂಭಿಸಿದ ಅನುಪಮ, 2000 ರಿಂದ ಸಾಮಾಜಿಕ ಚಟುವಟಿಕೆಗಳು ಹಾಗೂ ಸಾಹಿತ್ಯದಲ್ಲಿ ಹೆಚ್ಚು ತೊಡಗಿಸಿಕೊಂಡರು.


 
ಕಾಲೇಜು ದಿನಗಳಿಂದ ಪಿ ಲಂಕೇಶರ ಲಂಕೇಶ್ ಪತ್ರಿಕೆಯ ಅಭಿಮಾನಿಯೂ ಆಗಿದ್ದ ಅನುಪಮ, ತಮ್ಮ 37 ನೇ ವಯಸ್ಸಿನಲ್ಲಿ ಕಾಡು ಹಕ್ಕಿಯ ಹಾಡು ಎಂಬ ತಮ್ಮ ಮೊದಲ ಕವನ ಸಂಕಲನವನ್ನು ಬರೆದು ಪ್ರಕಟಿಸಿದರು. ಈ ವರೆಗೂ 53 ಪುಸ್ತಕಗಳನ್ನು ಆಕೆ ಬರೆದಿದ್ದು, ಕವಲಕ್ಕಿಯಲ್ಲಿ ಅನಾಥ ಮಹಿಳೆಯರಿಗೆ ಮನೆ ನಿರ್ಮಿಸಿಕೊಡುವುದು ಸೇರಿದಂತೆ ಹಲವು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. 

ರಸ್ತೆಗಳಿಗಾಗಿ ಅನುಪಮಾ ಅವರು ಪ್ರತಿಭಟನೆಗಳನ್ನೂ ಮಾಡಿದ್ದು, ಗ್ರಾಮಸ್ಥರಿಗೆ ಮೂಲಸೌಕರ್ಯಗಳನ್ನು ಕಲ್ಪಿಸುವುದಕ್ಕೂ ಶ್ರಮಿಸಿದ್ದಾರೆ.

ಒಮ್ಮೆ ದನ ಪ್ಲಾಸ್ಟಿಕ್ ನ್ನು ತಿನ್ನುತ್ತಿದ್ದಾಗ ಪ್ಲಾಸ್ಟಿಕ್ ವಿರೋಧಿ ನಿಲುವು ಅಭಿಯಾನದ ಸ್ವರೂಪ ಪಡೆದುಕೊಂಡಿತ್ತು. ಉಳಿದದ್ದೆಲ್ಲವೂ ಈಗ ಇತಿಹಾಸ. ಈಗ ತಮ್ಮ ಅಭಿಯಾನವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಉದ್ದೇಶಿಸಿರುವ ಅನುಪಮ, ನೀರಿನ ಬಾಟಲಿಗಳು ಮತ್ತು ತಂಪು ಪಾನೀಯಗಳನ್ನು ತಯಾರಿಸುವ ಸಂಸ್ಥೆಗಳಿಗೆ ಪತ್ರ ಬರೆದು ತಮ್ಮ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಜೈವಿಕ ವಿಘಟನೀಯ ಪ್ಲಾಸ್ಟಿಕ್ ಬಳಕೆ ಮಾಡಲು ಅಥವಾ ತಮ್ಮ ಉತ್ಪನ್ನಗಳನ್ನು ಹಿಂಪಡೆಯಲು ಮನವಿ ಮಾಡಿ ಪತ್ರ ಬರೆಯಲು ಮುಂದಾಗಿದ್ದಾರೆ.

ಅನುಪಮ ಅವರ ನರ್ಸಿಂಗ್ ಹೋಮ್ ನ ಒಂದು ಭಾಗ "ಭಗತ್ ಸಿಂಗ್ ಓದು ಮನೆ" ಗ್ರಂಥಾಲಯವಾಗಿ ಮಾರ್ಪಾಡಾಗಿದ್ದು, ರೋಗಿಗಳು ಕಾಯುವ ಅವಧಿಯಲ್ಲಿ ಪುಸ್ತಕಗಳನ್ನು ಓದಬಹುದಾಗಿದೆ. ಅನುಪಮ ಅವರ ಬರಹಗಳಲ್ಲೂ ಛಾಪು ಮೂಡಿಸಿರುವ ಗಣ್ಯ ವ್ಯಕ್ತಿಗಳ ಉಲ್ಲೇಖವಿದ್ದು, ಸೂಫಿ ಸಂತರಿಂದ ಮೊದಲುಗೊಂಡು ಸಾವಿತ್ರಿ ಬಾಯಿ ಫುಲೆ, ಚೇ ಗುವಾರ, ಭಗತ್ ಸಿಂಗ್ ಮುಂತಾದ ವ್ಯಕ್ತಿಗಳಿಂದ ಅನುಪಮಾ ಸ್ಪೂರ್ತಿ ಪಡೆದಿದ್ದಾರೆ. 

ಅನುಪಮಾ ಅವರ ಬಗ್ಗೆ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಪ್ರೊಫೆಸರ್ ರೆಹಮತ್ ತರಿಕೆರೆ ಮಾತನಾಡಿದ್ದು, ಅನುಪಮ ಅವರ ಕೆಲಸಗಳು ಸ್ಥಳೀಯ ಮಂದಿಯನ್ನು ಸ್ಥಳೀಯ ಭಾಷೆಯಲ್ಲಿ ತಲುಪುತ್ತವೆ ಎಂದು ಹೇಳಿದರೆ ಸಿನಿಮಾ ನಿರ್ದೇಶಕ, ಪತ್ರಕರ್ತ ಎನ್ ಎಸ್ ಶಂಕರ್ ಮಾತನಾಡಿ ಅನುಪಮಾ ಅವರ ಕೆಲಸಗಳಲ್ಲಿ ದಮನಿರತರ ಬಗ್ಗೆ ಕಾಳಜಿಯನ್ನು ಪ್ರತಿಫಲನವಾಗುತ್ತದೆ ಹಾಗೂ ಅವರ ಹೋರಾಟಗಳಿಗೆ ಧ್ವನಿಯಾಗುತ್ತದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com