ಸ್ಮಾರ್ಟ್ ತರಗತಿಯಲ್ಲಿ ವಿದ್ಯಾರ್ಥಿಗಳು
ಸ್ಮಾರ್ಟ್ ತರಗತಿಯಲ್ಲಿ ವಿದ್ಯಾರ್ಥಿಗಳು

ವಿಜಯಪುರ ಜಿಲ್ಲಾ ಪಂಚಾಯತ್ ನಿಂದ 'ಮಿಷನ್ ವಿದ್ಯಾಪುರ': ಹಾಸ್ಟೆಲ್‌ ವಿದ್ಯಾರ್ಥಿಗಳಿಗೆ ಆನ್‌ಲೈನ್ ಟ್ಯೂಷನ್ ತರಗತಿ

ಜಗತ್ತಿನ ಚಟುವಟಿಕೆಗಳು, ಮನುಷ್ಯನ ದಿನನಿತ್ಯದ ಚಟುವಟಿಕೆಗಳು ನಿಗದಿತವಾಗಿ ನಡೆಯುತ್ತಿರುವಾಗಲೇ 2020ರಲ್ಲಿ ಕಂಡು ಕೇಳರಿಯದ ಕೊರೋನಾ ಎಂಬ ಹೆಸರಿನ ಸಾಂಕ್ರಾಮಿಕ ಕಾಲಿಟ್ಟಿತು. ಇದ್ದಕ್ಕಿದ್ದಂತೆ ಎಲ್ಲವೂ ಸ್ಥಬ್ಧವಾಯಿತು.ಕೊರೋನಾ ಸಾಂಕ್ರಾಮಿಕ ಹಲವರ ಜೀವನದಲ್ಲಿ ಹಲವು ಪಾಠ ಕಲಿಸಿತು.

ವಿಜಯಪುರ: ಜಗತ್ತಿನ ಚಟುವಟಿಕೆಗಳು, ಮನುಷ್ಯನ ದಿನನಿತ್ಯದ ಚಟುವಟಿಕೆಗಳು ನಿಗದಿತವಾಗಿ ನಡೆಯುತ್ತಿರುವಾಗಲೇ 2020ರಲ್ಲಿ ಕಂಡು ಕೇಳರಿಯದ ಕೊರೋನಾ ಎಂಬ ಹೆಸರಿನ ಸಾಂಕ್ರಾಮಿಕ ಕಾಲಿಟ್ಟಿತು. ಇದ್ದಕ್ಕಿದ್ದಂತೆ ಎಲ್ಲವೂ ಸ್ಥಬ್ಧವಾಯಿತು.
ಕೊರೋನಾ ಸಾಂಕ್ರಾಮಿಕ ಹಲವರ ಜೀವನದಲ್ಲಿ ಹಲವು ಪಾಠ ಕಲಿಸಿತು.

ಸಣ್ಣ ಸಣ್ಣ ವಿಷಯಗಳನ್ನೂ ಅನುಭವಿಸಬೇಕು, ಸಣ್ಣಪುಟ್ಟ ವಿಷಯಗಳಿಗೆ ಬೆಲೆ ನೀಡಬೇಕು ಎಂಬುದನ್ನು ಹಲವರು ಕಲಿತರು. ಕೊರೋನಾ ಹಲವರ ಜೀವನದಲ್ಲಿ ಕೆಟ್ಟ ಪರಿಣಾಮ ತಂದೊಡ್ಡಿತು. ಅದರಲ್ಲೂ ವಿದ್ಯಾರ್ಥಿಗಳ ಜೀವನದಲ್ಲಂತೂ ಹೇಳಲಾಗದಷ್ಟು ದುಷ್ಪರಿಣಾಮ ಉಂಟುಮಾಡಿತು.

ಮಕ್ಕಳ ಆಟಪಾಠಗಳು, ವಿನೋದ, ಕಲಿಕೆ, ಅಧ್ಯಯನ ಎಲ್ಲವೂ ತಿಂಗಳುಗಟ್ಟಲೆ ನಾಲ್ಕು ಗೋಡೆಯ ಮಧ್ಯೆ ಸೀಮಿತವಾದವು. ಮಕ್ಕಳ ಕೈಯಲ್ಲಿ ಪುಸ್ತಕ ಪೆನ್ನು, ಪೇಪರ್, ನೋಟ್ ಬುಕ್ ಬದಲು ಸ್ಮಾರ್ಟ್ ಫೋನ್, ತೊಡೆಮೇಲೆ ಲ್ಯಾಪ್ ಟಾಪ್ ಬಂದವು. ಶಾಲೆಗೆ ಹೋಗಿ ಪಾಠ ಕಲಿಯುವ ಜಾಗದಲ್ಲಿ ಆನ್ ಲೈನ್ ಶಿಕ್ಷಣ ಬಂತು.

ಇದೇ ಹಾದಿಯಲ್ಲಿ ವಿಜಯಪುರದಲ್ಲಿ ವಿಶಿಷ್ಟ ಅಭಿಯಾನವಾಗಿ ಜಿಲ್ಲಾ ಪಂಚಾಯತ್ ಸರ್ಕಾರಿ ಪೂರ್ವ ಮೆಟ್ರಿಕ್ ಹಾಸ್ಟೆಲ್ ಗಳಲ್ಲಿ ವಿದ್ಯಾರ್ಥಿಗಳಿಗೆ ಆನ್ ಲೈನ್ ಟ್ಯೂಷನ್ ತರಗತಿಗಳನ್ನು ನೀಡುತ್ತಿದೆ. ಈ ಆನ್ ಲೈನ್ ತರಗತಿಗಳು ವಿದ್ಯಾರ್ಥಿಗಳ ನಿಗದಿತ ಎಂದಿನ ತರಗತಿಗಳಿಗೆ ಹೊರತಾಗಿ ಪರೀಕ್ಷೆಗಳನ್ನು ಆತ್ಮವಿಶ್ವಾಸದಿಂದ ಎದುರಿಸಲು ಸಹಾಯಕವಾಗಿದೆ.

<strong>ಜಿಲ್ಲಾ ಪಂಚಾಯತ್ ಸಿಇಒ​ ರಾಹುಲ್ ಶಿಂಧೆ</strong>
ಜಿಲ್ಲಾ ಪಂಚಾಯತ್ ಸಿಇಒ​ ರಾಹುಲ್ ಶಿಂಧೆ

ಮಿಷನ್ ವಿದ್ಯಾಪುರ: ‘ಮಿಷನ್ ವಿದ್ಯಾಪುರ’ ಎಂಬ ಕಾರ್ಯಕ್ರಮವನ್ನು ಕಳೆದ ಶೈಕ್ಷಣಿಕ ವರ್ಷ ಜಿಲ್ಲಾ ಪಂಚಾಯತ್ ನಿಂದ ಪ್ರಾಯೋಗಿಕವಾಗಿ ಪ್ರಾರಂಭಿಸಲಾಯಿತು. ಈ ನವೀನ ಉಪಕ್ರಮದ ಹಿಂದಿನ ವ್ಯಕ್ತಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ. ಉತ್ತಮ ಮಾಹಿತಿಯೊಂದಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಉದ್ದೇಶದಿಂದ ಇದನ್ನು ಜಾರಿಗೆ ತಂದಿದ್ದಾರೆ. ಶಿಂಧೆ ದಿ ನ್ಯೂ ಸಂಡೆ ಎಕ್ಸ್‌ಪ್ರೆಸ್‌ ಜೊತೆ ಮಾತನಾಡಿ, "ಮಿಷನ್ ವಿದ್ಯಾಪುರವು ಕೇಂದ್ರೀಕೃತ ಆನ್‌ಲೈನ್ ವ್ಯವಸ್ಥೆಯನ್ನು ಅನುಸರಿಸುತ್ತದೆ. ಕೇಂದ್ರೀಕೃತ ಸ್ಮಾರ್ಟ್ ಕ್ಲಾಸ್ ಆಗಿ ಜಿಲ್ಲಾ ಪಂಚಾಯತ್ ನ ಪಂಚಾಯತ್ ಸಂಪನ್ಮೂಲ ಕೇಂದ್ರದಿಂದ ಕಲಿಸಲಾಗುತ್ತಿದೆ ಎಂದು ಹೇಳಿದರು.

ಮೆಟ್ರಿಕ್ ಪೂರ್ವ ಸರ್ಕಾರಿ ಹಾಸ್ಟೆಲ್‌ಗಳ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಸಾಧನೆಯನ್ನು ಸುಧಾರಿಸಿಕೊಳ್ಳಲು ಟ್ಯೂಷನ್ ಗೆ ಹೋಗಲು ಸಾಧ್ಯವಾಗುವುದಿಲ್ಲ. ವಿದ್ಯಾರ್ಥಿಗಳಿಗೆ ಆನ್‌ಲೈನ್ ಬೋಧನೆಗೆ ಲಭ್ಯವಿರುವ ತಂತ್ರಜ್ಞಾನ ಮತ್ತು ಸಂಪನ್ಮೂಲಗಳನ್ನು ಬಳಸಿಕೊಳ್ಳಲು ಯೋಚಿಸಿದೆ. ಕಾರ್ಯಕ್ರಮಕ್ಕೆ ಸ್ವಯಂಸೇವಕರಾಗಿ ಸೇವೆ ಸಲ್ಲಿಸುವ ಶಿಕ್ಷಕರಿಗೆ ಗೌರವಧನ ನೀಡಲು ನಿರ್ಧರಿಸಿದೆವು ಎನ್ನುತ್ತಾರೆ. 

ಆನ್ ಲೈನ್ ಟ್ಯೂಷನ್ ಗೆ 16 ಹಾಸ್ಟೆಲ್‌ಗಳನ್ನು ಆಯ್ಕೆ ಮಾಡಲಾಗಿದ್ದು, ಸಮಾಜ ಕಲ್ಯಾಣ, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ತಮ್ಮ ಲಭ್ಯವಿರುವ ಹಣವನ್ನು ಆನ್‌ಲೈನ್ ತರಗತಿಗಳನ್ನು ನಡೆಸಲು ಮೂಲ ಉಪಕರಣಗಳನ್ನು ಖರೀದಿಸಲು ಬಳಸಬೇಕೆಂದು ಕೇಳಲಾಯಿತು. ನಂತರ ಪರಿಣಿತ ಸರ್ಕಾರಿ ಶಿಕ್ಷಕರನ್ನು ಆಯ್ಕೆ ಮಾಡಿ ಸಭೆಗೆ ಕರೆದೆವು. ಅವರು ತಮ್ಮ ನಿಯಮಿತ ಸಮಯವನ್ನು ಮೀರಿ ಕೆಲಸ ಮಾಡಬೇಕಾಗಿರುವುದರಿಂದ ಸ್ವಯಂಸೇವಕರಾಗಿ ಬರುವಂತೆ ವಿನಂತಿಸಿಕೊಂಡೆವು ಎಂದರು. 

10 ನೇ ತರಗತಿಯ ವಿದ್ಯಾರ್ಥಿನಿ ರುಕ್ಮಿಣಿ ನಿಮಾಂಗ್ರಿ ಆನ್ ಲೈನ್ ತರಗತಿ ಬಗ್ಗೆ ಸಂತಸ ವ್ಯಕ್ತಪಡಿಸುತ್ತಾರೆ. ಈ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಉತ್ತಮವಾಗಿ ತಯಾರಿ ನಡೆಸಲು ಟ್ಯೂಷನ್ ಸಹಾಯ ಮಾಡಬಹುದು ಎನ್ನುತ್ತಾರೆ. 

<strong>ಆನ್‌ಲೈನ್ ಟ್ಯೂಷನ್ ತರಗತಿ</strong>
ಆನ್‌ಲೈನ್ ಟ್ಯೂಷನ್ ತರಗತಿ

ತರಗತಿಗಳನ್ನು ಪ್ರತಿದಿನ ಸಂಜೆ 6 ರಿಂದ 8 ಗಂಟೆಯವರೆಗೆ ನಡೆಸಲಾಗುತ್ತದೆ. 5,000 ವಿದ್ಯಾರ್ಥಿಗಳ ಒಟ್ಟು ಸಾಮರ್ಥ್ಯ ಹೊಂದಿರುವ ಎಲ್ಲಾ 100 ಹಾಸ್ಟೆಲ್‌ಗಳಿಗೆ ನಾವು ಅದನ್ನು ವಿಸ್ತರಿಸಿದ್ದೇವೆ ಎಂದು ಶಿಂಧೆ ಹೇಳಿದರು. ಅದನ್ನು ಈಗ ರಾಜ್ಯಾದ್ಯಂತ ವಿಸ್ತರಿಸಲು ಸರ್ಕಾರ ಮುಂದಾಗಿದೆ. 

ನಿಯಮಿತ ವಿಷಯಗಳನ್ನು ಬೋಧಿಸುವುದರ ಜೊತೆಗೆ ವಿಜಯಪುರದ ಸೈನಿಕ ಶಾಲೆ ಶಿಕ್ಷಕರಿಂದ ಸೇನಾ ನೇಮಕಾತಿ ಪ್ರಕ್ರಿಯೆಯಂತಹ ವಿವಿಧ ಅಂಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುತ್ತದೆ. ಅಗಸ್ತ್ಯ ಫೌಂಡೇಶನ್ ಎಂಬ ಎನ್‌ಜಿಒ ವಿದ್ಯಾರ್ಥಿಗಳಿಗೆ ಮೂಲಭೂತ ಪ್ರಯೋಗಗಳನ್ನು ಕಲಿಸಲು ಜಿಲ್ಲಾ ಪಂಚಾಯತ್ ಜೊತೆ ಕೈಜೋಡಿಸಿದೆ.

ಆನ್‌ಲೈನ್ ತರಗತಿಗಳು ವಾರ್ಡನ್‌ಗಳ ಹಾಜರಾತಿಯ ಮೇಲೆ ನಿಗಾ ಇಡಲು ಮತ್ತು ಅವರಿಗೆ ನೀಡಲಾದ ಸೌಲಭ್ಯಗಳ ಬಗ್ಗೆ ವಿದ್ಯಾರ್ಥಿಗಳಿಂದ ನಿಯಮಿತ ಪ್ರತಿಕ್ರಿಯೆಯನ್ನು ಪಡೆಯಲು ನಮಗೆ ಸಹಾಯ ಮಾಡಿದೆ ಎನ್ನುತ್ತಾರೆ ಶಿಂಧೆ.

10ನೇ ತರಗತಿ ವಿದ್ಯಾರ್ಥಿ ಚನ್ನಬಸಪ್ಪ ಇಂಗಳೇಶ್ವರ, ‘ಕೆಲವೊಮ್ಮೆ ಶಾಲೆಯಲ್ಲಿ ಪಾಠ ಸರಿಯಾಗಿ ಅರ್ಥವಾಗುವುದಿಲ್ಲ, ಇಲ್ಲವೇ ಕಾರಣಾಂತರಗಳಿಂದ ಶಾಲೆ ತಪ್ಪಿಸಿಕೊಳ್ಳುತ್ತೇವೆ. ಈ ಅಂತರವನ್ನು ಸರಿದೂಗಿಸಲು ಆನ್‌ಲೈನ್ ಟ್ಯೂಷನ್ ನಮಗೆ ಸಹಾಯ ಮಾಡುತ್ತದೆ. ಪಾಠದ ಬಗ್ಗೆ ನಮ್ಮ ಅನುಮಾನಗಳನ್ನು ಬಗೆಹರಿಸಿಕೊಳ್ಳುತ್ತೇವೆ ಎಂದರು. 

ಸ್ವಯಂಸೇವಕರಾಗಿ ಸೇವೆ ಸಲ್ಲಿಸಿರುವ ವಿಜ್ಞಾನ ಶಿಕ್ಷಕಿ ಅಶ್ವಿನಿ ಕುಲಕರ್ಣಿ, ಇದೊಂದು ಹೊಸ ಹಾಗೂ ಒಳ್ಳೆಯ ಅನುಭವ ಎನ್ನುತ್ತಾರೆ. ಅರಕೇರಿಯ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ವಸತಿ ಶಾಲೆಯ ಶಿಕ್ಷಕಿಯಾಗಿರುವ ಅವರು, ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಬಯಸಿದ್ದರಿಂದ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸುತ್ತೇನೆ ಎಂದರು. ತಂತ್ರಜ್ಞಾನ ಬಳಸುವುದನ್ನು ಕಲಿತುಕೊಂಡೆ ಎನ್ನುತ್ತಾರೆ.

Related Stories

No stories found.

Advertisement

X
Kannada Prabha
www.kannadaprabha.com