ಬೆಂಗಳೂರು: ವೀಕೆಂಡ್ ಬಂದರೆ ಸಾಕು, ಕೆಫೆಗಳು ಮತ್ತು ಬಾರ್, ಕ್ಲಬ್ ಪಬ್ ಗಳಿಗೆ ಯುವಕ- ಯುವತಿಯರು ಲಗ್ಗೆ ಇಡುತ್ತಾರೆ, ಆದರೆ ಇಲ್ಲೊಂದು ಯುವ ಜೋಡಿ ಜನರಲ್ಲಿ ಪುಸ್ತಕ ಓದುವ ಪ್ರೇಮ ಹೆಚ್ಚಿಸುವ ಕೆಲಸ ಮಾಡುತ್ತಿದೆ.
ಎಲ್ಲೆಂದರ ಪ್ರೇಮಿಗಳಿಂದ ತುಂಬಿರುತ್ತಿದ್ದ ಕಬ್ಬನ್ ಪಾರ್ಕ್‌ನಲ್ಲಿ ಪ್ರತಿ ಶನಿವಾರ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಹಚ್ಚಹಸಿರಿನ ಹುಲ್ಲಿನ ಹಾಸಿಗೆ, ಮರಗಳ ಬುಡಗಳಲ್ಲಿ ಕೂತು ತನ್ನಿಚ್ಛೆಯ ಪುಸ್ತಕಗಳನ್ನು ಓದುತ್ತಿರುವ ನೂರಾರು ಪುಸ್ತಕ ಪ್ರಿಯರನ್ನು, ಗಿಡ-ಮರಗಳನ್ನು ಬಿಡಿಸಿ ಬಣ್ಣ ಹಚ್ಚುವವರನ್ನು ಕಾಣಬಹುದಾಗಿದೆ. ಇಲ್ಲಿ ಯಾವುದೇ ವಯೋಮಿತಿ ಇಲ್ಲದಿದ್ದರೂ, ಹೆಚ್ಚಿನ ಓದುಗರು ಯುವಜನತೆಯೇ ಆಗಿದ್ದಾರೆ. ಇದಕ್ಕೆಲ್ಲಾ ಕಾರಣ ಕಬ್ಬನ್ ರೀಡ್ಸ್.
'ಕಬ್ಬನ್ ರೀಡ್ಸ್' ಎಂಬ ಪುಸ್ತಕ ಪ್ರೇಮಿಗಳ ತಂಡ ಪ್ರತಿ ಶನಿವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ರ ನಡುವೆ ಕಬ್ಬನ್ ಪಾರ್ಕ್ ನಲ್ಲಿ ಸುಮಾರು ಐದು ಗಂಟೆಗಳ ಕಾಲ ಓದಲು ಭೇಟಿಯಾಗುತ್ತದೆ. ಇತ್ತೀಚಿನ ಮೀಟ್‌ನಲ್ಲಿ 300 ಕ್ಕೂ ಹೆಚ್ಚುಮಂದಿ ಭಾಗವಹಿಸಿದ್ದರು. ವಿಶೇಷವೆಂದರೆ ಪುರುಷರಿಗೆ ಹೋಲಿಸಿದರೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಸ್ವ ಉದ್ಯೋಗಿ ಹರ್ಷ ಸ್ನೇಹಾಂಶು ಮತ್ತು ಶ್ರುತಿ ಷಾ ಎಂಬುವವರು ಪ್ರತಿ ವಾರಾಂತ್ಯದಲ್ಲಿ ಸೈಕ್ಲಿಂಗ್ ಮಾಡಲು ಇಂದಿರಾನಗರದಿಂದ ಕಬ್ಬನ್ ಪಾರ್ಕ್‌ಗೆ ಬರುತ್ತಿದ್ದ ಅವರಿಗೆ ಪುಸ್ತಕ ಓದುವ ಹವ್ಯಾಸವಿದ್ದು, ಇದು ವೀಕೆಂಡ್ ಪ್ಲ್ರಾನ್ ಆಗಿ ಮುಂದುವರಿಯಿತು. ಒಂದು ದಿನ ಕಬ್ಬನ್ ಪಾರ್ಕ್‌ನಲ್ಲಿ ಕುಳಿತು ಪುಸ್ತಕ ಓದುವುದರ ಬಗ್ಗೆ ತಮ್ಮ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಪೋಸ್ಟ್ ಮಾಡಿದರು.
ಮುಂದಿನ ವಾರಕ್ಕೆ ಅವರ ಸ್ನೇಹಿತರಿಬ್ಬರು ಸೇರ್ಪಡೆಯಾದರು. ಇದು ಹೀಗೆ ಬೆಳೆಯುತ್ತಾ ಪ್ರತಿ ವಾರ ಮೂರ್ನಾಲ್ಕು ಜನ ಹೆಚ್ಚಾಗುತ್ತಿದ್ದರು. ಆಗ ಕಬ್ಬನ್ ರೀಡ್ಸ್ ಎಂಬ ಇನ್‌ಸ್ಟಾಗ್ರಾಂ ಪೇಜ್ ಹುಟ್ಟಿಕೊಂಡಿತು.ಇದು ಹವ್ಯಾಸಿ ಓದುಗರಿಗೆ ಒಂದು ಉತ್ತಮ ವೇದಿಕೆಯಾಗಿ ಬೆಳೆಯಿತು. ಈ ವರ್ಷದ ಜನವರಿ 7ರಂದು ಪ್ರಾರಂಭವಾದ ಕಬ್ಬನ್ ರೀಡ್ಸ್ ದಿನ ಕಳೆದಂತೆ ಹೆಚ್ಚು ಹೆಚ್ಚು ಓದುಗರನ್ನು ಸೆಳೆಯಲು ಪ್ರಾರಂಭಿಸಿತು.
ಆರಂಭದಲ್ಲಿ ನಾಲ್ಕೈದು ಮಂದಿಯೊಂದಿಗೆ ಕಬ್ಬನ್ ರೀಡ್ಸ್ ಆರಂಭವಾಯಿತು. ತದ ನಂತರ ಭಾರೀ ಸಂಖ್ಯೆಯಲ್ಲಿ ಬೆಳೆಯಿತು. ಕೆಲವರಿಗೆ ಕಬ್ಬನ್ ಪಾರ್ಕಾ ವೀಕೆಂಡ್ ಕಳೆಯುವ ಸ್ಥಳವಾಗಿದೆ. ಕಬ್ಬನ್ ರೀಡ್ಸ್ ಒಂದು ಉತ್ತಮ ಅನುಭವ ಪಡೆಯುವ ಮಾರ್ಗವಾಗಿದೆ.
ಕಬ್ಬನ್ ರೀಡ್ಸ್ ಬಗ್ಗೆ ಹಲವು ಮಂದಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ...
ನಾನು ಇದೇ ಬೆಂಗಳೂರು ನಗರದಲ್ಲಿ ಹುಟ್ಟಿ ಬೆಳೆದಿದ್ದೇನೆ, ಮೊದಲ ಬಾರಿಗೆ ಇದರಲ್ಲಿ ಭಾಗವಹಿಸಿದೆ, ಇಂಥ ಸಾರ್ವಜನಿಕ ಸ್ಥಳಗಳನ್ನು ಹೇಗೆ ಸದುಪಯೋಗ ಪಡಿಸಿಕೊಳ್ಳಬಹುದು ಎಂಬುದಕ್ಕೆ ಇದೊಂದು ಹೊಸ ಐಡಿಯಾ ಆಗಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಅದಿರಾ ಮೆನನ್ ಹೇಳಿದರು. ನನ್ನಸುತ್ತ ಅನೇಕ ಯುವಕರು ಸುತ್ತುವರಿದಿದ್ದರು, ಯಾರೊಬ್ಬರು ನನ್ನನ್ನು ದಿಟ್ಟಿಸಿ ನೋಡುತ್ತಿರಲಿಲ್ಲ, ಎಂದು ತಿಳಿದಾಗ ನನಗೆ ರಿಲ್ಯಾಕ್ಸ್ ಆಯಿತು. ನಾನು ಆರಾಮಾವಾಗಿ ಕುಳಿತು ಓದಬಹುದು, ಇಲ್ಲ ಹುಲ್ಲು ಹಾಸಿನ ಮೇಲೆ ಮಲಗಬಹುದು, ಇಲ್ಲಿ ನನ್ನನ್ನು ಯಾರು ಪ್ರಶ್ನಿಸುವುದಿಲ್ಲ, ಸ್ವಲ್ಪ ಸಮಯ ಓದಿ ರೆಸ್ಟ್ ಮಾಡಬಹುದು ಮತ್ತೆ ಓದಬಹುದು ಎಂದು ಹೇಳಿದ್ದಾರೆ.
ಸೋಷಿಯಲ್ ಮೀಡಿಯಾದ ಮೂಲಕ ಕಬ್ಬನ್ ರೀಡ್ಸ್ ಬಗ್ಗೆ ತಿಳಿದ ಡಾ ರಾಜೇಶ್ವರಿ ಪಿ, ಹತ್ತಿರದ ಆಸ್ಪತ್ರೆಯಲ್ಲಿ ತನ್ನ ಶಿಫ್ಟ್ ಮುಗಿಸಿ ಉದ್ಯಾನವನದಲ್ಲಿ ಸ್ವಲ್ಪ ಸಮಯ ಓದಲು ನಿರ್ಧರಿಸಿದರು. ಸಾಮಾನ್ಯವಾಗಿ, ನೀವು ಸಾರ್ವಜನಿಕವಾಗಿ ಓದುತ್ತಿದ್ದರೆ, ಜನರು 'ನೀವು ಮನೆಯಲ್ಲಿ ಏಕೆ ಓದಬಾರದು?' ಅಥವಾ ಉದ್ದೇಶಪೂರ್ವಕವಾಗಿ ನಿಮ್ಮೊಂದಿಗೆ ಸಂಭಾಷಣೆ ನಡೆಸಲು ಪ್ರಯತ್ನಿಸುತ್ತಾರೆ, ಆದರೆ ಇಲ್ಲಿ ಅದು ಹಾಗೆ ಅನಿಸಲಿಲ್ಲ. ದೊಡ್ಡ ಮರಗಳ ಕೆಳಗೆ ಮತ್ತು ತಂಪಾದ ಗಾಳಿಯಲ್ಲಿ ಓದುವುದು ಬೋನಸ್ ಎಂದು ಅವರು ಹೇಳಿದರು.
ಇಂತಹ ಚಟುವಟಿಕೆಗಳು ನಗರವನ್ನು ಹೆಚ್ಚು ಅಂತರ್ಗತ ಮತ್ತು ಆರಾಮದಾಯಕವಾಗಿಸುತ್ತದೆ" ಎಂದು ದಿಲ್ಬರ್ ಪಂಧರ್ ಹೇಳಿದರು. ಪುರುಷರು ಎಲ್ಲಿ ಬೇಕಾದರೂ ಕುಳಿತುಕೊಳ್ಳುವ ಸವಲತ್ತು ಇದೆ ಮತ್ತು ಯಾರೂ ಏನನ್ನೂ ಹೇಳುವುದಿಲ್ಲ, ಆದರೆ ಒಬ್ಬ ಮಹಿಳೆ ಆ ರೀತಿ ಮಾಡಿದ್ದನ್ನು ನೋಡಿದ ಕ್ಷಣದಲ್ಲಿ ಎಲ್ಲರೂ ದಿಟ್ಟಿಸಲು ಪ್ರಾರಂಭಿಸುತ್ತಾರೆ. ಈ ಜಾಗವು ಯುವತಿಯರಿಗೆ ಸುರಕ್ಷಿತವಾಗಿಸಲು ಸಹಾಯ ಮಾಡುತ್ತದೆ ಎಂದು ಶ್ರುತಿ ಹೇಳಿದರು. ಒಂದು ರೀತಿಯಲ್ಲಿ, ತಮ್ಮ ಜಾಗವನ್ನು ಹೊಂದಲು ಹಿಂಜರಿಯದ ಹುಡುಗಿಯರಿಗೆ ಇದು ಸಬಲೀಕರಣವಾಗಿದೆ.
ಶ್ರುತಿ ಮತ್ತು ಹರ್ಷ ಪುಸ್ತಕದ ಪ್ರೀತಿಗಾಗಿ ಕಬ್ಬನ್ ರೀಡ್ಸ್ ಕಮ್ಯುನಿಟಿ ಪ್ರಾರಂಭಿಸಿದರು, ಆದರೆ ಇದ ವ್ಯಾಪ್ತಿ ವಿಸ್ತಾರವಾಗುತ್ತಲೇ ಇದೆ. ಹೀಗಾಗಿ ಇದೇ ರೀತಿ ಲಾಲ್‌ಬಾಗ್ ರೀಡ್ಸ್, ಎಚ್‌ಎಸ್ ಆರ್ ರೀಡ್ಸ್, ವೈಟ್ ಫೀಲ್ಡ್ ರೀಡ್ಸ್, ಯಲಹಂಕ ರೀಡ್ಸ್, ಭಾರತೀಯ ಸಿಟಿ ರೀಡ್ಸ್ ಆರಂಭಿಸಲು ಉತ್ಸುಕವಾಗಿದೆ. ಸಾವಿರಾರು ಸಂಖ್ಯೆಯ ಓದುಗರನ್ನು ಒಗ್ಗೂಡಿಸಿರುವುದು ಸಂತೋಷ ಕೊಟ್ಟಿದೆ ಎಂದು ಹೇಳುತ್ತಾ, ಮುಂದಿನ ವಾರದಿಂದ ಬೆಂಗಳೂರಿನ ಸ್ಯಾಂಕಿಟ್ಯಾಂಕಿ ಯಲ್ಲಿಯೂ ಓದುಗರನ್ನು ಒಗ್ಗೂಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಕಬ್ಬನ್ ರೀಡ್ಸ್ ನಲ್ಲಿ ಕಲಾವಿದರಿಗೂ ಅವಕಾಶವಿದೆ. ಇಲ್ಲಿಗೆ ಬರುವ ಪ್ರತಿಯೊಬ್ಬರು, ತಾಜಾ ಗಾಳಿ ಪಡೆದು ಓದುತ್ತಾರೆ, ಬರೆಯುತ್ತಾರೆ, ಮತ್ತು ಚಿತ್ರ ಬಿಡಿಸುತ್ತಾರೆ.
“ನಾವು ಭಾನುವಾರದಂದು 'ಲಾಲ್‌ಬಾಗ್ ರೀಡ್ಸ್' ಪ್ರಾರಂಭಿಸಲು ಯೋಜಿಸಿದ್ದೇವೆ. ಅನೇಕ ಜನರು ಶನಿವಾರದಂದು ಕೆಲಸ ಮಾಡುತ್ತಾರೆ. ಆದ್ದರಿಂದ ಇದೇ ವಿಧಾನದಲ್ಲಿ ಅಲ್ಲಿಯೂ ಏಕೆ ಆರಂಭಿಸಬಾರದು? ಎಂದು ಹರ್ಷ ಹೇಳಿದರು. ಎಲ್ಲಿಯೂ ಯಾವುದೇ ತೊಂದರೆಯಾಗದೆ ನೆಮ್ಮದಿಯಿಂದ, ಆರಾಮಾದಾಯಕವಾಗಿ ಪುಸ್ತಕ ಓದುವ ಸ್ಥಳ ಬೇಕೆಂಬುದೇ ಕಬ್ಬನ್ ರೀಡ್ಸ್ ಉದ್ದೇಶವಾಗಿದೆ. ಪ್ರಚಾರಕ್ಕಾಗಿ ಅನೇಕ ಬ್ರಾಂಡ್ ಗಳು ನಮ್ಮನ್ನಪ ಸಂಪರ್ಕಿಸಿವೆ, ಆದರೆ ನಾವು ಅದನ್ನು ಕಮರ್ಷಿಯಲ್ ಗೊಳಿಸಲು ಬಯಸುವುದಿಲ್ಲ, ಒಂದು ವೇಳೆ ಹಾಗಾದರೆ ಈ ಕಮ್ಯೂನಿಟಿ ಓದು ತನ್ನ ಸತ್ವ ಕಳೆದು ಕೊಳ್ಳುತ್ತದೆ. ಶೀಘ್ರದಲ್ಲೇ ನಗರಕ್ಕೆ ಮುಂಗಾರು ಆಗಮಿಸಲಿದೆ, ಹೀಗಾಗಿ ಕಬ್ಬನ್ ರೀಡ್ಸ್ ಸ್ವಲ್ಪ ಸಮಯದವರೆಗೆ ಆನ್‌ಲೈನ್‌ನಲ್ಲಿ ಸಾಗುತ್ತಿದೆ. ಭಾಗವಹಿಸುವವರಿಗೆ ತಾವು ಓದಿದ ಕಥೆಯನ್ನು ಪೋಸ್ಟ್ ಮಾಡಲು ಹೇಳುತ್ತೇವೆ ಎಂದು ವಿವರಿಸಿದ್ದಾರೆ.
Advertisement