25 ಅಡಿ ಉದ್ದದ ಕಬ್ಬು
25 ಅಡಿ ಉದ್ದದ ಕಬ್ಬು

ವಿಜಯಪುರ: ಇಸ್ರೇಲ್ ತಂತ್ರಜ್ಞಾನ ಬಳಸಿ ಕೃಷಿ; ನಿಡಗುಂದಿ ಸಹೋದರರು ಬೆಳೆದ 25 ಅಡಿ ಉದ್ದ ಕಬ್ಬು; ನೋಡುಗರು ನಿಬ್ಬೆರಗು!

ನಿಡಗುಂದಿ ತಾಲ್ಲೂಕಿನ ಗೊಳಸಂಗಿ ಗ್ರಾಮದ ನಾರಾಯಣ ಸಾಳುಂಕೆ ಹಾಗೂ ಅವರ ಸಹೋದರ ಸಿದ್ದುಬಾ ಅವರು 25 ಅಡಿ ಎತ್ತರದ ಕಬ್ಬು ಬೆಳೆದು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
Published on

ವಿಜಯಪುರ: ನಿಡಗುಂದಿ ತಾಲ್ಲೂಕಿನ ಗೊಳಸಂಗಿ ಗ್ರಾಮದ ನಾರಾಯಣ ಸಾಳುಂಕೆ ಹಾಗೂ ಅವರ ಸಹೋದರ ಸಿದ್ದುಬಾ ಅವರು 25 ಅಡಿ ಎತ್ತರದ ಕಬ್ಬು ಬೆಳೆದು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ಕಬ್ಬು ಬೆಳೆ ಬೆಳೆಯಲು ಇಸ್ರೇಲಿ ತಂತ್ರಜ್ಞಾನವನ್ನು ಅಳವಡಿಸಿಕೊಂಡ ಸಹೋದರರು 5 ಎಕರೆ ತೋಟದಲ್ಲಿ 686 ಟನ್ ಗಳಷ್ಟು ಕಬ್ಬು ಕಟಾವು ಮಾಡಿದ್ದಾರೆ. ಅತಿ ಎತ್ತರದ ಕಬ್ಬಿನ ಬೆಳೆ ಈ ಭಾಗಗಳಲ್ಲಿ ಅಪರೂಪದ ದೃಶ್ಯವಾಗಿದೆ.

ರೈತರ ಪ್ರಕಾರ, ಸಾಮಾನ್ಯ ಕಬ್ಬಿನ ಕಾಂಡವು ಸುಮಾರು 2 ಕೆಜಿ ತೂಗುತ್ತದೆ, ಆದರೆ ಸಾಳುಂಕೆ ಬೆಳೆದ ಕಬ್ಬು 3.5-4 ಕೆಜಿ ತೂಗುತ್ತದೆ. ಸಾಮಾನ್ಯ ಕಬ್ಬು ಸುಮಾರು 8-10 ಅಡಿ ಉದ್ದಕ್ಕೆ ಬೆಳೆದರೆ, ಈ ತಳಿಯು 25 ಅಡಿಗಳವರೆಗೆ ಬೆಳೆಯುತ್ತದೆ.

ತಜ್ಞರು ಸೂಚಿಸಿದ ಸಲಹೆಯ ಆಧಾರದ ಮೇಲೆ ನಾವು SNK 13374 ವಿಧದ ಕಬ್ಬು ಬೆಳೆ ಬೆಳೆಸಿದ್ದೇವೆ. ಹನಿ ನೀರಾವರಿ ಪದ್ಧತಿಯನ್ನು ಅನುಸರಿಸಿ ಸಾವಯವ ಗೊಬ್ಬರವನ್ನು ಮಾತ್ರ ಹಾಕಿದ್ದೇವೆ ಇದರಿಂದ ಹೆಚ್ಚಿನ ಇಳುವರಿ ಪಡೆಯಲು ಸಹಕಾರಿಯಾಗಿದೆ ಎಂದರು.

ಈ ಕಬ್ಬು ನೋಡಲು ಉತ್ತರ ಪ್ರದೇಶದಿಂದ ರೈತರಾದ ರವಿಂದರ್‌ಸಿಂಗ್, ಮಹಾರಾಜಸಿಂಗ್, ಮುನೇಂದ್ರಸಿಂಗ್, ಮುಖೇಶಸಿಂಗ್, ಅಮ್ರೋಹಾ ಅವರು ಗ್ರಾಮಕ್ಕೆ ಭೇಟಿ ನೀಡಿದರು. ಈ ಕಬ್ಬು ಬೆಳೆಯ ಸಮಗ್ರ ಮಾಹಿತಿ ಕಲೆ ಹಾಕಿದ ಅವರು ಇಲ್ಲಿಯ ಮಾದರಿಯನ್ನು ತಮ್ಮ ಊರಿನಲ್ಲೂ ಅಳವಡಿಸಿಕೊಳ್ಳುವುದಾಗಿ ತಿಳಿಸಿದರು. ನಾವು ಈ ತಳಿಯನ್ನು ಹೇಗೆ ಬೆಳೆಸಿದ್ದೇವೆ ಮತ್ತು ಅದರ ಬಗ್ಗೆ ನಾವು ಎಲ್ಲಿ ಮಾಹಿತಿಯನ್ನು ಪಡೆದುಕೊಂಡಿದ್ದೇವೆ ಎಂಬುದನ್ನು ಅವರು ತಿಳಿದುಕೊಳ್ಳಲು ಬಯಸಿದ್ದರು. ಉತ್ತರ ಪ್ರದೇಶದಿಂದ ಬಂದಿದ್ದ ಅವರಿಗೆ ಅಗತ್ಯ ಮಾಹಿತಿ ನೀಡಿದ್ದೇನೆ’ ಎಂದು ನಾರಾಯಣ ಸಾಳುಂಕೆ ಹೇಳಿದರು.

ಬೆಳೆ ಬೆಳೆಯುವ ಮುನ್ನ ಸಹೋದರರು ಕೃಷಿ ವಿಜ್ಞಾನಿಗಳ ಬಳಿ ಸೂಕ್ತ ತಳಿಯ ಬಗ್ಗೆ ಮಾರ್ಗದರ್ಶನ ಪಡೆದು ತಮ್ಮ ಜಮೀನಿನಲ್ಲಿ ಬೆಳೆಯುತ್ತಿದ್ದರು ಎಂದರು. ಹೆಚ್ಚಿನ ಇಳುವರಿ ಮತ್ತು ಉತ್ತಮ ಆದಾಯವನ್ನು ಪಡೆಯಲು ಕಬ್ಬಿನ ಬೆಳೆಯನ್ನು ಬೆಳೆಯಲು ಆಸಕ್ತಿ ತೋರುವ ಯಾವುದೇ ರೈತರಿಗೆ ಮಾಹಿತಿ ನೀಡಲು ಸಿದ್ಧರಿದ್ದೇವೆ ಎಂದು ಸಹೋದರರು ತಿಳಿಸಿದ್ದಾರೆ. "ಕನಿಷ್ಠ ಹೂಡಿಕೆಯೊಂದಿಗೆ ಲಾಭ ಗಳಿಸಲು ಹೆಚ್ಚಿನ ರೈತರು ಹೊಸ ಕೃಷಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕೆಂದು ನಾವು ಬಯಸುತ್ತೇವೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com