ದೇಶದಲ್ಲೇ ಮೊದಲು: ಛತ್ತೀಸ್‌ಗಢದ ಬಲೋದ್ ಕಲೆಕ್ಟರೇಟ್ ಗೆ ಸಗಣಿಯಿಂದ ತಯಾರಾದ ಪೇಂಟ್!

ಸರ್ಕಾರಿ ಕಟ್ಟಡಗಳನ್ನು ಅತ್ಯಾಧುನಿಕ, ಆಕರ್ಷಕವಾಗಿ ಕಾಣುವಂತೆ ಮಾಡಲು ಹೊಸ ಆಯ್ಕೆಗಳನ್ನು ಪರಿಗಣಿಸಲಾಗುತ್ತಿದೆ.
ಪರಿಸರ ಸ್ನೇಹಿ ಪೇಂಟ್ ನ್ನು ಉತ್ತೇಜಿಸುತ್ತಿರುವ ಜಿಲ್ಲಾಧಿಕಾರಿ ಕುಲ್ದೀಪ್ ಶರ್ಮ
ಪರಿಸರ ಸ್ನೇಹಿ ಪೇಂಟ್ ನ್ನು ಉತ್ತೇಜಿಸುತ್ತಿರುವ ಜಿಲ್ಲಾಧಿಕಾರಿ ಕುಲ್ದೀಪ್ ಶರ್ಮ

ರಾಯ್ ಪುರ: ಸರ್ಕಾರಿ ಕಟ್ಟಡಗಳನ್ನು ಅತ್ಯಾಧುನಿಕ, ಆಕರ್ಷಕವಾಗಿ ಕಾಣುವಂತೆ ಮಾಡಲು ಹೊಸ ಆಯ್ಕೆಗಳನ್ನು ಪರಿಗಣಿಸಲಾಗುತ್ತಿದೆ. ಆದರೆ ಛತ್ತೀಸ್ ಗಢದ ಬಲೋದ್ ಜಿಲ್ಲಾಧಿಕಾರಿಗಳ ಕಚೇರಿ, ಹಳೆಯ ಮಾದರಿಯನ್ನು ಹೊಸದಾಗಿ ಅಳವಡಿಸಿಕೊಂಡು ಗಮನ ಸೆಳೆಯುತ್ತಿದೆ.

ಜಿಲ್ಲಾಧಿಕಾರಿಗಳ ಕಚೇರಿಗೆ ಬಣ್ಣ ಹಾಕುವ ವಿಷಯದಲ್ಲಿ ಸಂಪೂರ್ಣ ಸಾವಯವ ಪದ್ಧತಿಯನ್ನು ಅಳವಡಿಸಿಕೊಳ್ಳಲಾಗಿದ್ದು, ರಾಯ್ ಪುರದಿಂದ 110 ಕಿ.ಮೀ ದೂರವಿರುವ ಜಿಲ್ಲಾಧಿಕಾರಿ ಕಚೇರಿಗೆ ಹಸುವಿನ ಸಗಣಿ ಪ್ರಮುಖ ಘಟಕಾಂಶವಾಗಿರುವ ನೈಸರ್ಗಿಕ, ಪರಿಸರ ಸ್ನೇಹಿ ಪೇಂಟ್ ನ್ನು ಹಚ್ಚಲಾಗಿದೆ. 

ಎಲ್ಲಾ ಸರ್ಕಾರಿ ಕಟ್ಟಡಗಳಿಗೆ ಹಾಗೂ ಶಾಲೆಗಳಿಗೆ ನೈಸರ್ಗಿಕ ಎಮಲ್ಷನ್ ಬಣ್ಣ ಹಾಕಬೇಕೆಂಬ ಭೂಪೇಶ್ ಬಘೇಲ್ ನೇತೃತ್ವದ ಸರ್ಕಾರದ ನಿರ್ಧಾರದ ಭಾಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ಈ ಪರಿಸರ ಸ್ನೇಹಿ ಬಣ್ಣ ಹಾಕಲಾಗಿದೆ.

ಬಲೋದ್ ನಲ್ಲಿ ಈಗಾಗಲೇ ಸಗಣಿ ಆಧಾರಿತ ವಿಷಕಾರಿಯಲ್ಲದ, ವಾಸನೆ ರಹಿತ ಬಣ್ಣ (ಪೇಂಟ್) ತಯಾರಿಕೆ ಘಟಕಗಳಿದ್ದು, ಇದು ಬಹುರಾಷ್ಟ್ರೀಯ ಕಂಪನಿಗಳಿಗಿಂತ 30% ಅಗ್ಗವಾಗಿದೆ.

ಈ ಪೇಂಟ್ ತಯಾರಕ ಘಟಕಗಳನ್ನು ಗೋಶಾಲೆಗಳಲ್ಲೇ ಸ್ಥಾಪಿಸಲಾಗಿದ್ದು, ಮಹಿಳಾ ಸ್ವಸಹಾಯ ಗುಂಪುಗಳು ಇದರಲ್ಲಿ ತೊಡಗಿಸಿಕೊಂಡಿವೆ. ಇದೇ ಮಾದರಿಯ ಪೇಂಟ್ ಘಟಕಗಳು ಬೇರೆ ಜಿಲ್ಲೆಗಳಲ್ಲೂ ಸ್ಥಾಪನೆಯಾಗಿವೆ.
 
ಕೇವಲ ಜಿಲ್ಲಾಧಿಕಾರಿ ಕಚೇರಿಯಷ್ಟೇ ಅಲ್ಲ. ನಾವು ಸರ್ಕಾರಿ ಕಚೇರಿಗಳು, ಶಾಲೆಗಳು ಹಾಗೂ ಅಂಗನವಾಡಿ ಕೇಂದ್ರಗಳಲ್ಲೂ ಸಗಣಿಯಿಂದ ತಯಾರಾದ ನೈಸರ್ಗಿಕ ಪೇಂಟ್ ನ್ನು ಬಳಕೆ ಮಾಡುತ್ತಿದ್ದೇವೆ. ಸಗಣಿ ಆಧರಿತ ಪೇಂಟ್ ಗಳು ಕಡಿಮೆ ಖರ್ಚಿನದ್ದಾಗಿದ್ದು, ಗೋಧನ್ ನ್ಯಾಯ ಯೋಜನೆಯಡಿ ಉತ್ತೇಜಿಸಲಾಗುತ್ತಿದೆ. ಇದರಲ್ಲಿ ಆಂಟಿಫಂಗಲ್, ಬ್ಯಾಕ್ಟೀರಿಯಾ ವಿರೋಧಿ, ವಾಸನೆಯಿಲ್ಲದ ಗುಣಗಳು ಇವೆ ಎಂದು ಜಿಲ್ಲಾಧಿಕಾರಿ ಕುಲ್ದೀಪ್ ಶರ್ಮಾ ಹೇಳಿದ್ದಾರೆ.

ಈ ರೀತಿಯ ಪೇಂಟ್ ಗಳನ್ನು ಬಳಕೆ ಮಾಡುವುದರಿಂದ ಗ್ರಾಮೀಣ ಆರ್ಥಿಕತೆಯೂ ವೃದ್ಧಿಯಾಗಲಿದ್ದು, ಮಹಿಳೆಯರ ಆದಾಯವೂ ಹೆಚ್ಚಳವಾಗಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com